Thursday, July 3, 2025

ವ್ಯಾಸ ವೀಕ್ಷಿತ 142 ಭೀಮಾರ್ಜುನರಿಗೆ ಉಡುಗೊರೆ; ಅದ್ಭುತ ಸಭಾನಿರ್ಮಾಣ (Vyaasa Vikshita 142)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಾನದೆಂತಹ ಸಭೆಯನ್ನು ನಿರ್ಮಿಸಿಕೊಡುವೆನೆಂದು ಮಯನು ಹೇಳುತ್ತಾನೆ: "ಆ ಸಭೆಯು ಆಶ್ಚರ್ಯಕರವಾಗಿರುವುದು; ಸರ್ವರತ್ನಗಳಿಂದಲೂ ವಿಭೂಷಿತವಾಗಿರುವುದು; ಮನಸ್ಸಿಗೆ ಪ್ರಹ್ಲಾದವನ್ನು, ಎಂದರೆ ವಿಶೇಷವಾದ ಸಂತೋಷವನ್ನು, ಉಂಟುಮಾಡುವಂತಹುದಾಗಿರುವುದು.

ಅರ್ಜುನಾ, ಬಿಂದುಸರಸ್ಸಿನಲ್ಲಿ ಉಗ್ರವಾದ ಗದೆಯೊಂದಿರುವುದು. ವೃಷಪರ್ವ-ರಾಜನು ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸಿ ಆ ಗದೆಯನ್ನು ಅಲ್ಲಿ ಇಟ್ಟಿರುವನೆಂದು ಭಾವಿಸುತ್ತೇನೆ. ಅ ಗದೆಯು ಬಹಳ ದೊಡ್ಡದಾದುದ್ದು, ಭಾರವಾಗಿರುವುದು; ಭಾರಿ ಹೊಡೆತಗಳನ್ನೂ ಅದು ಸಹಿಸಿಕೊಳ್ಳಬಲ್ಲುದು. ಅಲ್ಲದೆ, ಚಿನ್ನದ ಬಿಂದುಗಳಿಂದ ಚಿತ್ರಿತವೂ ಆಗಿರುವುದು. ಶತ್ರುಸಂಹಾರಿಣಿಯಾದ ಆ ಗದೆಯು ಒಂದು ಲಕ್ಷ ಗದೆಗಳಿಗೆ ಸಮನಾದುದು. ತಮಗೆ (ಅಂದರೆ ಅರ್ಜುನನಿಗೆ) ಗಾಂಡೀವವು ಹೇಗೆ ಅನುರೂಪವಾಗಿರುವುದೋ, ಅದೇ ರೀತಿಯಲ್ಲಿ ಆ ಗದೆಯು ಭೀಮನಿಗೆ ಅನುರೂಪವಾಗಿರುವಂತಹುದು.

ಹಾಗೆಯೇ ವರುಣದೇವನ ಮಹಾಶಂಖವೊಂದಿದೆ. ಬಹಳ ಒಳ್ಳೆಯ ಘೋಷವನ್ನು ಹೊಂದಿರುವುದದು. ಅದರ ಹೆಸರು ದೇವದತ್ತ. ಈ ಎಲ್ಲ ವಸ್ತುಗಳನ್ನೂ ತಮಗೆ ಒಪ್ಪಿಸುವೆ. ಇದರಲ್ಲಿ ಸಂಶಯವಿಲ್ಲ" - ಎಂದು.

ಆಮೇಲೆ ಪೂರ್ವೋತ್ತರದಿಕ್ಕಿಗೆ - ಎಂದರೆ ಈಶಾನ್ಯದಿಕ್ಕಿಗೆ - ಹೊರಟು, ಕೈಲಾಸದ ಉತ್ತರಕ್ಕಿರುವ ಮೈನಾಕಪರ್ವತದ ಬಳಿಗೆ ಮಯನು ಸಾಗಿದನು. ಅಲ್ಲಿಯೇ ಹಿರಣ್ಯಶೃಂಗವೆಂಬ ಗಿರಿಯು ಇರುವುದು. ಮಹಾಮಣಿಮಯವಾದ ವಿಶಾಲವಾದ ಗಿರಿಯದು. ಅದರ ಸಮೀಪದಲ್ಲಿಯೇ ರಮಣೀಯವಾದ ಬಿಂದುಸರವಿರುವುದು. ಭಾಗೀರಥಿಯನ್ನು, ಎಂದರೆ ಗಂಗಾನದಿಯನ್ನು, ಕಾಣಲೆಂದು ಅಲ್ಲಿಯೇ ಭಗೀರಥನು ಅನೇಕವರ್ಷಗಳ ಕಾಲ ತಪಸ್ಸು ಮಾಡುತ್ತಾ ಉಳಿದದ್ದು.  ಸರ್ವಭೂತಗಳಿಗೂ ಪ್ರಭುವೆನಿಸುವ ಬ್ರಹ್ಮನೇ ಅಲ್ಲಿ ಮುಖ್ಯವೆನಿಸುವ ನೂರು ಯಜ್ಞಗಳನ್ನು ಮಾಡಿರುವನು. ಅಲ್ಲಿಯ ಯೂಪಗಳು, ಎಂದರೆ ಯಜ್ಞಸ್ತಂಭಗಳು, ಮಣಿಮಯವಾದಂಥವು. ಚೈತ್ಯಗಳು, ಎಂದರೆ ವೇದಿಗಳು, ಸುವರ್ಣಮಯವಾದಂಥವು. ಇವೆಲ್ಲವನ್ನೂ ಅಲ್ಲಿ ಶೋಭೆಗಾಗಿ ಮಾಡಲಾಗಿತ್ತು. ಶಾಸ್ತ್ರಾನುಸಾರಿಯಾಗಿರಬೇಕೆಂದಲ್ಲ. 

ಸಹಸ್ರನೇತ್ರನಾದ ಇಂದ್ರನೂ ಸಹ ಯಜ್ಞವನ್ನು ಅಲ್ಲಿ ಮಾಡಿಯೇ ತಪಸ್ಸಿದ್ಧಿಯನ್ನು ಪಡೆದನು. ಆ ಎಡೆಯಲ್ಲಿಯೇ ಸನಾತನನಾದ ಭೂತಪತಿಯು ಲೋಕಗಳೆಲ್ಲವನ್ನೂ ಸೃಷ್ಟಿಸಿದುದು, ಮತ್ತು ಸಹಸ್ರಾರು ಭೂತಗಣಗಳಿಂದ ಉಪಾಸಿಸಲ್ಪಟ್ಟು ನೆಲೆನಿಂತಿರುವುದು.

ನರ-ನಾರಾಯಣರಿಬ್ಬರು, ಬ್ರಹ್ಮ-ಯಮರು ಹಾಗೂ ಸ್ಥಾಣುವೆನಿಸುವ ಶಿವ - ಈ ಐವರೂ ಸಹಸ್ರಯುಗಗಳಿಗೊಮ್ಮೆ ಸತ್ರವನ್ನು, ಎಂದರೆ ಯಜ್ಞವನ್ನು, ಇಲ್ಲಿಯೇ ನೆರವೇರಿಸುವರು. ಧರ್ಮ-ಸಂಪ್ರಾಪ್ತಿಗೋಸ್ಕರವಾಗಿ ವರ್ಷಗಟ್ಟಲೆ ಯಜ್ಞಗಳನ್ನು ವಾಸುದೇವನೇ ಶ್ರದ್ಧಾ-ಪೂರ್ವಕವಾಗಿ ಎಡೆಬಿಡದೆ ಇಲ್ಲಿಯೇ ನೆರವೇರಿಸಿರುವನು. ಸುವರ್ಣ-ಮಾಲೆಗಳಿಂದ ಕೂಡಿರುವ ಯಜ್ಞ-ಸ್ತಂಭಗಳನ್ನು, ಹಾಗೂ ಅತ್ಯಂತವಾಗಿ ಹೊಳೆಯತಕ್ಕ ಚೈತ್ಯಗಳನ್ನು ಇಲ್ಲಿಯೇ ನಿರ್ಮಿಸಲಾಗಿತ್ತು. ಸಹಸ್ರವೋ ಲಕ್ಷವೋ ಎನಿಸುವಷ್ಟು ವಸ್ತುಗಳನ್ನು ಕೇಶವನು ದಾನವಿತ್ತದ್ದು ಇಲ್ಲಿಯೇ.

ಆ ಜಾಗಕ್ಕೆ ಹೋಗಿಯೇ ಗದೆಯನ್ನು ಶಂಖವನ್ನೂ, ಸಭಾ-ನಿರ್ಮಾಣಕ್ಕಾಗಿ ಉಪಯೋಗಕ್ಕೆ ಬರುವಂತಹ ಸ್ಫಟಿಕ-ರಾಶಿಯನ್ನೂ ಮಯನು ಪಡೆದುಕೊಂಡನು. ಅವುಗಳೆಲ್ಲವೂ ಮೊದಲು ವೃಷಪರ್ವಮಹಾರಾಜನಿಗೆ ಸೇರಿದ ವಸ್ತುಗಳೇ ಆಗಿದ್ದವು.  ಕಿಂಕರರಾದ ರಾಕ್ಷಸರ ಕಾವಲಿನಲ್ಲಿ ಯಾವ ಮಹಾಧನವನ್ನು ಆ ವೃಷಪರ್ವನು ರಕ್ಷಿಸಿಕೊಂಡಿದ್ದನೋ, ಅದೆಲ್ಲವನ್ನೂ ಅಲ್ಲಿಗೇ ಹೋಗಿ ಈ ಮಯಾಸುರನು ತೆಗೆದುಕೊಂಡುಬಂದನು.

ಅದನ್ನು ತಂದವನಾಗಿ, ಆ ಅಸುರನು ಅಪ್ರತಿಮವಾದ ಮಣಿಮಯಸಭೆಯನ್ನು ಪಾಂಡವರಿಗಾಗಿ ನಿರ್ಮಿಸಿಕೊಟ್ಟನು. ಅದಾದರೂ ಮೂರೂ ಲೋಕಗಳಲ್ಲಿಯೂ ವಿಶ್ರುತವಾಯಿತು.

ಆ ಶ್ರೇಷ್ಠವಾದ ಗದೆಯನ್ನು ಭೀಮನಿಗಿತ್ತನು. ಉತ್ತಮಶಂಖವಾದ ದೇವದತ್ತವನ್ನು ಅರ್ಜುನನಿಗೆ ಕೊಟ್ಟನು; ಆ ಶಂಖದ ನಾದದಿಂದಲೇ ಪ್ರಾಣಿಗಳು ನಡುಗಿಹೋಗುತ್ತಿದ್ದವು. ಮತ್ತು ಸುವರ್ಣಮಯ-ವೃಕ್ಷದಿಂದಾಗಿ ಆ ಸಭೆಯೂ ಶೋಭಿಸಿತು.

ಸೂಚನೆ : 22/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.