ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೨೧. ಜೀವಿತ ಯಾವುದು?
ಉತ್ತರ - ನಿಂದ್ಯವಲ್ಲದ್ದು
ಈ ಮುಂದಿನ ಪ್ರಶ್ನೆ ಹೇಗಿದೆ- "ಜೀವಿತ ಯಾವುದು?" ಎಂಬುದಾಗಿ. ಅದಕ್ಕೆ ಉತ್ತರ- 'ನಿಂದ್ಯವಲ್ಲದ್ದು' ಎಂದು. ಜೀವಿತ ಎಂದರೇನು? ಅದು ನಿಂದ್ಯವಲ್ಲದ್ದು ಅಥವಾ ಸ್ತುತ್ಯವಾದದ್ದು ಹೇಗೆ ಆಗುತ್ತದೆ? ನಿಜವಾದ ಜೀವನ ಹೇಗಿರಬೇಕು? ಎಲ್ಲರೂ ಹೊಗಳುವಂತಿರಬೇಕು; ನಿಂದೆ ಮಾಡುವಂತೆ ಇರಬಾರದು. ಹಾಗೆ ಜೀವನವನ್ನು ಮಾಡಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ. ಹಾಗಾದರೆ ಜೀವನ ಎಂದರೆ ಏನು? ನಿಂದ್ಯವಲ್ಲದ ಜೀವನವನ್ನು ಮಾಡುವ ವಿಧಾನ ಹೇಗೆ ಎಂಬ ವಿಷಯವನ್ನು ನಾವು ಈಗ ಚಿಂತಿಸಬೇಕಾಗಿದೆ.
ಹುಟ್ಟು ಸಾವುಗಳ ನಡುವಿನ ಒಂದು ಕಾಲದ ಪ್ರಮಾಣ ಏನಿದೆಯೋ ಅದನ್ನು ಜೀವನ ಎಂಬುದಾಗಿ ಕರೆಯುವ ಅಭ್ಯಾಸ ಸಾಮಾನ್ಯವಾಗಿ ಬಂದಿದೆ. ಜೀವದ ವ್ಯಾಪಾರ ಏನಿದೆಯೋ ಅದನ್ನು ಜೀವನ ಎಂಬುದಾಗಿ ಕರೆಯಬೇಕು ಎಂದು ಶ್ರೀರಂಗ ಮಹಾಗುರುಗಳು ಈ ಜೀವನದ ಬಗ್ಗೆ ಒಂದು ಸುಂದರವಾದ ವಿವರಣೆಯನ್ನು ಕೊಟ್ಟಿದ್ದುಂಟು. "ಒಂದು ವಸ್ತು ಯಾವ ಮೂಲದಿಂದ ಹೊರಟಿತು, ಅಲ್ಲಿಂದ ವಿಕಾಸವಾಗಿ ಕ್ರಮಕ್ರಮವಾಗಿ ಅದರ ವಿಕಾಸವು ಮುಂದುವರಿದು ನೆಲೆ ಸೇರಿದಾಗ ಅಂದರೆ ತಾನು ಹೊರಟ ಮೂಲವನ್ನೇ ಮತ್ತೆ ಸೇರಿದಾಗ ಅದರ ವಿಕಾಸವು ಪೂರ್ಣವಾಗುವುದು; ಇಲ್ಲದಿದ್ದರೆ ವಿಕಾಸ ಅರೆಯಾಗುವುದು" ಎಂಬ ಮಾತು. ಈ ಮಾತನ್ನು ನಾವು ಈ ಜೀವಿತಕ್ಕೂ ಅಂದರೆ ಜೀವನಕ್ಕೂ ಅರ್ಥೈಸಿಕೊಳ್ಳಬಹುದು. ಈ ಜೀವವು ಯಾವ ಮೂಲದಿಂದ ಬಂದಿತೋ, ಆ ಮೂಲಕ್ಕೆ ಮತ್ತೆ ಹೋಗಿ ಸೇರಬೇಕಾದದ್ದು ಅತ್ಯಂತ ಅನಿವಾರ್ಯ. ಈ ಜೀವವು ಜೀವಭಾವವನ್ನು ಪಡೆದಾಗನಿಂದ ಜೀವಭಾವವನ್ನು ಬಿಡುವ ತನಕ ಯಾವ ಅವಧಿ ಉಂಟೋ, ಅದನ್ನು 'ಜೀವನ' ಎಂಬುದಾಗಿ ಕರೆಯಬೇಕು ಎಂದು ಶ್ರೀರಂಗ ಮಹಾಗುರುಗಳೇ ಅಪ್ಪಣೆ ಕೊಡಿಸಿದ್ದನ್ನು ಸ್ಮರಿಸಬಹುದು. ಭಗವಂತನ ಮಡಿಲಲ್ಲಿ ಆಡುತ್ತಿರುವಂತಹ ನಾವೆಲ್ಲರೂ ಯಾವುದೋ ಕಾರಣಕ್ಕೆ ಅಲ್ಲಿಂದ ಹೊರಗೆ ಬಂದು, ಮತ್ತೆ ಅಲ್ಲಿಗೆ ಹೋಗಲಾಗದೆ ಇತ್ತ ಸಂಚರಿಸುತ್ತಾ ಇದ್ದೇವೆ. ಎಲ್ಲಿಗೆ ಹೋಗಬೇಕೆಂಬ ನಿರ್ದಿಷ್ಟವಾದ ಗುರಿಯನ್ನು ಮರೆತಿದ್ದೇವೆ. ಹಾಗಾಗಿ ಈ ಜೀವಿತವು ನಮಗೆ ನಿಂದ್ಯವಾಗಿ ಇರುವಂತೆ ಕಾಣುತ್ತದೆ.
ಉದಾಹರಣೆಗೆ ಒಂದು ಬೀಜವನ್ನು ನೆಟ್ಟು, ಅದಕ್ಕೆ ಬೇಕಾದ ನೀರು ಗೊಬ್ಬರ ಮುಂತಾದ ಸಹಕಾರ ಸಾಮಗ್ರಿಗಳನ್ನು ಕೊಟ್ಟು ಬೆಳೆಸಿದರೆ ಅದು ಮತ್ತೆ ಉತ್ತಮವಾದ ಬೀಜದಲ್ಲೇ ಕೊನೆಗೊಳ್ಳಬೇಕು. ಅಂದರೆ ಕಾಂಡ, ಶಾಖೆ, ಪುಷ್ಪ, ಫಲ ಹೀಗೆ ಎಲ್ಲೂ ವಿಕಾರವಾಗದೇ ಇದ್ದರೆ ತಾನೆ ಆ ಬೀಜವು ಮತ್ತೆ ಉತ್ಕೃಷ್ಟವಾದ ಬೀಜ ರೂಪವನ್ನು ಪಡೆಯಲು ಸಾಧ್ಯ! ವಿಕಾರವೇ ನಿಂದೆಗೆ ವಿಷಯವಾಗಿರುತ್ತದೆಯಷ್ಟೇ!. ಹಾಗೆಯೇ ಈ ಜೀವವು ಕೂಡ ತನ್ನ ಮೂಲದಿಂದ ಜಾರಿ ಮತ್ತೆ ಮೂಲ ನೆಲೆಯಾದ ಭಗವಂತನಲ್ಲಿಗೆ ಸೇರಬೇಕಾದರೆ ಅಂತಹ ಉತ್ಕೃಷ್ಟವಾದ ಪೂರ್ಣವಾದ ಜೀವನವನ್ನು ನಡೆಸಬೇಕಾಗುತ್ತದೆ. ಉಪನಿಷತ್ತು ಕೂಡ ಇದನ್ನೇ ಸಾರುತ್ತದೆ- 'ಪೂರ್ಣವಾದ ಪೂರ್ಣಮಿದಂ' ಎಂಬುದಾಗಿ. ಅಂದರೆ ಪೂರ್ಣತೆಯೇ ಸ್ತುತ್ಯವಾದ ಜೀವನ, ಅಪೂರ್ಣತೆಯೇ ನಿಂದ್ಯವಾದ ಜೀವನ. ಹಾಗಾಗಿ ಅಂತಹ ಪೂರ್ಣತೆಯ ಎಡೆಗೆ - ಭಗವಂತನ ಕಡೆಗೆ ನಮ್ಮ ನಡೆ ಇರುವಂತಾದರೆ ಅದು ತಾನೇ ಅನಿಂದ್ಯವಾದ ಜೀವಿತ.
ಸೂಚನೆ : 22/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.