ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮನ್ಮಥನು ಕೃಷ್ಣನ ಪುತ್ರನೆಂಬುದು ಸುವಿದಿತ. ಆತನು ಪರಮಸುಂದರ ಎಂಬುದೂ ಸುವಿದಿತವೇ. ಆದರೆ ಆ ಸೌಂದರ್ಯದ ಮೂಲವಾವುದು? - ಎಂಬ ಅವಿದಿತವಾದ ಅಂಶವೊಂದಿದೆ - ಎಂದು ಈ ಶ್ಲೋಕವು ಪ್ರತಿಪಾದಿಸುತ್ತದೆ.
ಕೃಷ್ಣನು ತನ್ನ ಅವತಂಸವನ್ನಾಗಿ, ಎಂದರೆ ಶಿರೋಲಂಕಾರವನ್ನಾಗಿ, ಮಾಡಿಕೊಂಡಿರುವುದು ಶಿಖಿ-ಶಿಖಂಡವನ್ನು. ಶಿಖಿ ಎಂದರೆ ನವಿಲು. ಅದರ ಶಿಖಂಡವೆಂದರೆ ಪಿಂಛ, ಗರಿ. ನವಿಲಿನ ಗರಿಯ ಮುಂದೆ ಮತ್ತಾವ ಗರಿ? ಇದರಿಂದಾಗಿ ಕೃಷ್ಣನು ಚೆನ್ನಾಗಿ ಕಾಣುತ್ತಾನೆ, ನಿಜವೇ.
ಆದರೆ ಇಲ್ಲಿ ಮತ್ತೊಂದಂಶವನ್ನೂ ಗಮನಿಸಬೇಕು. ಅದು ಮುಖ್ಯವಾದ ಅಂಶ. ಏನದು? ಕೃಷ್ಣನಲ್ಲಿರುವ ಕಾಂತಿ ಸರಸವಾದದ್ದು. ಅದನ್ನು ಸುಧೆಯೆಂದೇ ಕರೆಯಬಹುದು. ಸುಧೆಯೆಂದರೆ ಅಮೃತ. ರಸಗಳಲ್ಲಿ ಸುಧೆಯೇ ಉತ್ತಮವಷ್ಟೆ. ಅಮೃತದ ಸಮೃದ್ಧಿಯೇ ಅದು.
ಮತ್ತೂ ಮುಖ್ಯವಾದುದೆಂದರೆ ಅದು ಸಾಂಸಿದ್ಧಿಕವಾದುದು. ಯಾವುದು ಸ್ವತಃಸಿದ್ಧವೋ ಅದನ್ನೇ 'ಸಾಂಸಿದ್ಧಿಕ' ಎನ್ನುವುದು. ಹೀಗೆ ಸಹಜವೂ ಸರಸವೂ ಆದ ಸುಧೆಯ ಸಮೃದ್ಧಿಯಂತಿದೆ ಕೃಷ್ಣನ ಕಾಂತಿ.
ಸ್ವತಃ ಬಹಳ ಸುಂದರಿಯಾದ ಹೆಣ್ಣಿನ ಕೆನ್ನೆಗೆ ಒಂದು ದೃಷ್ಟಿಬೊಟ್ಟನ್ನಿಟ್ಟರೆ ಅದೂ ಅದರ ಸೌಂದರ್ಯವನ್ನು ವರ್ಧಿಸುತ್ತದೆ. ಹಾಗಿದೆ ಇಲ್ಲಿ ನವಿಲುಗರಿಯ ಪಾತ್ರ. ಸಾಧಾರಣರೂಪ-ಶಾಲಿಯಾದವನೋ(ಳೋ) ಅದನ್ನು ಧರಿಸಿದರೂ ಸೌಂದರ್ಯವು ವರ್ಧಿಸುವುದಲ್ಲವೇ?
ಹಾಗಲ್ಲ. ಅಷ್ಟುಮಾತ್ರವಲ್ಲವೆನ್ನಲು ಮನ್ಮಥನ-ವೃತ್ತಾಂತವನ್ನು ಕವಿಯು ಕಣ್ಮುಂದೆ ಇರಿಸಿದ್ದಾನೆ. ಏನದು? ಶ್ರೀಕೃಷ್ಣನ ಕಾಂತಿಸಮೃದ್ಧಿಯೇನುಂಟೋ ಅದರ ಬಿಂದುವೊಂದನ್ನು ತೆಗೆದುಕೊಳ್ಳಿ. ಆ ಬಿಂದುವಿನ ಲೇಶವಷ್ಟೇ ಸಾಕು. ಲೇಶವೆಂದರೆ ಅಲ್ಪಭಾಗ. ಆ ಲೇಶದ ಕಣಿಕೆಯನ್ನು ಊಹಿಸಿಕೊಳ್ಳಿ. ಏನು ಕಣಿಕೆಯೆಂದರೆ? ಕಣವೆಂದರೇ ಅಲ್ಪ; ಇನ್ನು ಕಣಿಕಾ ಎಂದರೆ ಅಲ್ಪದಲ್ಲಿಯ ಅಲ್ಪ. ಹೀಗಾಗಿ ಲೇಶದ ಕಣಿಕೆಯೆಂದರೆ ಅಣುಭಾಗದ ಅಣುಭಾಗ.
ಅಲ್ಲಿಗೆ ಶ್ರೀಕೃಷ್ಣನ ಕಾಂತಿರಾಶಿಯಲ್ಲಿನ "ಬಿಂದುವಿನ ಲೇಶದ ಸಣ್ಣ ಕಣ" - ಎಂದಂತಾಯಿತು. ಅಷ್ಟರ ಪರಿಣಾಮ-ಭಾಗ್ಯದಿಂದ, ಎಂದರೆ ಪರಿಪಾಕದ ಭಾಗ್ಯದಿಂದಲೇ, ಮನ್ಮಥನು ತನ್ನ ಹಿರಿಮೆಯನ್ನು ಪಡೆದಿರುವುದು. ಇದು ನಮಗೆ ಅವಿದಿತ. ಇದನ್ನು ನಮ್ಮ ಗಮನಕ್ಕೆ ತಂದಿದ್ದಾನೆ, ಕವಿ.
ಸೌಂದರ್ಯವೇ ಮನ್ಮಥನ ಹಿರಿಮೆ, ಆತನ ಸೌಭಾಗ್ಯದ ಸೀಮೆ. ಸೀಮೆಯೆಂದರೆ ಎಲ್ಲೆ, ಪ್ರಾಂತಭೂಮಿ. ಸೌಭಾಗ್ಯದ ಪರಮಾವಧಿಯ ಸ್ಥಾನವು ದೊರೆತಿದೆ, ಆತನಿಗೆ.
ಅಲ್ಲಿಗೆ ಏನೆಂದು ಹೇಳಿದಂತಾಯಿತು? ಶ್ರೀಕೃಷ್ಣನ ಕಾಂತಿಯ ಬಿಂದುವಿನ ಲವಲೇಶದ ಕಿರಿದಾದ ಅಂಶದಿಂದಲೇ ಮನ್ಮಥನು ಸುಂದರತಮನೆನಿಸಿರುವುದು – ಎಂದು! ಅಲ್ಲಿಗೆ ಶ್ರೀಕೃಷ್ಣನ ಸೌಂದರ್ಯವು ಮತ್ತೆಂತಹುದೆಂಬುದನ್ನು ಊಹಿಸಿಕೊಳ್ಳಬಹುದಲ್ಲವೇ?
ಮನ್ಮಥನನ್ನು ಪಂಚಬಾಣನೆಂದಿದೆ. ಏಕೆಂದರೆ ಅವನ ಬಾಣಗಳು ಐದು. ಐದೂ ಹೂಗಳೇ. ಅವೇ ಅರವಿಂದ, ಅಶೋಕ, ಚೂತ, ನವಮಲ್ಲಿಕಾ ಹಾಗೂ ನೀಲೋತ್ಪಲ. ಕೋಮಲವಾದ ಬಾಣಗಳಾದರೂ ಮನಸ್ಸನ್ನು ಮಥನಮಾಡುವಂತಹವು, ಮನ್ಮಥನ ಈ ಬಾಣಗಳು.
ಮನ್ಮಥನ ಸೌಂದರ್ಯ-ಸೌಭಾಗ್ಯವು ಬಂದಿರುವುದೆಲ್ಲಾ ಆತನ ತಂದೆಯಾದ ಶ್ರೀಕೃಷ್ಣನಿಂದ, ಆ ಕೃಷ್ಣನ ಕಾಂತಿಯ ಅಂಶಾಂಶಾಂಶದಿಂದ. ಮನ್ಮಥನ ಸೌಂದರ್ಯದ ಅಪ್ಪ, ಕೃಷ್ಣನ ಸೌಂದರ್ಯ! ಸರ್ವಾಧಿಕ-ಸೌಂದರ್ಯದ ಮೂಲವೇ ನಮ್ಮ ಕೃಷ್ಣ!
ಶ್ಲೋಕ ಹೀಗಿದೆ:
ಜೀಯಾದ್ ಅಸೌ ಶಿಖಿ-ಶಿಖಂಡ-ಕೃತಾವತಂಸಾ/
ಸಾಂಸಿದ್ಧಿಕೀ ಸರಸ-ಕಾಂತಿ-ಸುಧಾ-ಸಮೃದ್ಧಿಃ |
ಯದ್-ಬಿಂದು-ಲೇಶ-ಕಣಿಕಾ-ಪರಿಮಾಣ-ಭಾಗ್ಯಾತ್ /
ಸೌಭಾಗ್ಯ-ಸೀಮ-ಪದಂ ಅಂಚತಿ ಪಂಚಬಾಣಃ ||
ಶ್ಲೋಕದಲ್ಲಿ ಅನುಪ್ರಾಸವೂ ಹಿತಮಿತವಾಗಿ ಬಂದಿದೆ. ಎರಡನೆಯ ಪಾದದಲ್ಲಿ ಆರು ಸಕಾರಗಳಿವೆ. ಶ್ಲೋಕಾದಿಯಲ್ಲಿ ಶಿಖಿ-ಶಿಖಂಡ ಎನ್ನುವಲ್ಲಿ, ಶ್ಲೋಕಾಂತದಲ್ಲಿ ಅಂಚತಿ ಪಂಚಬಾಣಃ ಎನ್ನುವಲ್ಲಿಯ ಅನುಪ್ರಾಸಗಳು ಹೃದ್ಯವಾಗಿವೆ.
****
ಒಬ್ಬ ಮಹಾರಾಜನೆಂದರೆ ಹೇಗಿರುತ್ತಾನೆ? ಕೊನೆಯ ಪಕ್ಷ, ಒಬ್ಬ ಸಾಧಾರಣರಾಜನೆಂದಾದರೂ ಹೇಗಿರಬೇಕು? ವಿಹಾರಕ್ಕಾಗಲಿ, ಯುದ್ಧಕ್ಕಾಗಲಿ ಹೊರಗೆಲ್ಲಿಯಾದರೂ ಹೋದಾಗ, ಅಲ್ಲಿ ಆತನು ಹೂಡುವ ಸ್ಕಂಧಾವಾರವು ಸಹ ಆತನ ಸ್ಥಾನಮಾನಗಳಿಗೆ ಒಪ್ಪುವಂತಿರಬೇಕು. ಸ್ಕಂಧಾವಾರವೆಂದರೆ ಡೇರೆ. ಅದು ವೈಭವಪೂರ್ಣವಾಗಿರಬೇಕು.
ಅಷ್ಟು ಮಾತ್ರವೇ? ಇತ್ತ ಆತನ ಪ್ರಜೆಗಳೆಲ್ಲರೂ ಕಾಲಕಾಲಕ್ಕೆ ಕಂದಾಯವನ್ನು ಕಟ್ಟುವವರಾಗಿರಬೇಕು. ರಾಜನ ಅಂತಃಪುರವೂ ಭವ್ಯವಾಗಿರಬೇಕು. ಆತನ ಪಟ್ಟಮಹಿಷಿಯೇನು, ಉಳಿದ ಭಾರ್ಯೆಯರೇನು - ಎಲ್ಲವೂ ವೈಭವಯುತವಾಗಿ ರಬೇಕು. ರಾಜನೆಂದರೆ ಆತನನ್ನು ಕಾಯುವ ಆಯುಧಧಾರಿ ಭಟರಿರುವರಲ್ಲವೇ? ಮಂತ್ರಿ ಮುಂತಾದವರೂ ಇರಲೇಬೇಕಷ್ಟೆ? ಅದೂ, ಧೀಮಂತರಾದ ಮಂತ್ರಿಗಳೇ ಇರಬೇಕು. ಇನ್ನು ರಾಜನನ್ನು ನಾವು ಗುರುತಿಸುವುದೇ ಆತನ ವೇಷಭೂಷಣಗಳಿಂದ. ಅವುಗಳಿಂದಲೇ ಆತನು ವಿಜೃಂಭಿಸುವುದು.ಆದ್ದರಿಂದ ಅದೂ ಶೋಭಿಸಬೇಕು.
ಇವೆಲ್ಲಾ ಸಾಧಾರಣವಾದ ಅಂಶಗಳಷ್ಟೇ? ಹಾಗಿದ್ದರೆ ಇವನ್ನೇ ಒಮ್ಮೆ ನಮ್ಮ ಕೃಷ್ಣ-"ರಾಜ"ನಿಗೆ ಅನ್ವಯಿಸಿ ನೋಡೋಣವೇ? ಈತನ ಸ್ಕಂಧಾವಾರದ ಅಥವಾ ಶಿಬಿರಸ್ಥಾನವೆಂಬುದು ಕೇವಲ ಒಂದು ವ್ರಜ. ವ್ರಜವೆಂದರೆ ದನಗಳ ಬೀಡು! ಈತನಿಗೆ ಮಂತ್ರಿ ಮುಂತಾದ ಜೊತೆಗಾರರೋ ಗೋಪರು, ಎಂದರೆ ಗೊಲ್ಲರು! ಅವರಲ್ಲಾವ ಧೀಮಂತಿಕೆಯನ್ನು ಕಾಣೋಣ?
ಇನ್ನು ಇವನಿಗೆ ಕಂದಾಯದ ಕಾಣಿಕೆಯನ್ನು ಸಲ್ಲಿಸುವವರೋ? ತಮ್ಮ ಸ್ಕಂಧದ ಮೇಲೆ, ಎಂದರೆ ಹೆಗಲ ಮೇಲೆ, ಕರುಗಳ ಹಗ್ಗವನ್ನಿಟ್ಟುಕೊಳ್ಳುವ ಗೋಪರು! ಅವರಲ್ಲೂ ಏನನ್ನಾದರೂ ಕಾಣಿಕೆಯನ್ನಾಗಿ ತೆರುವವರು ಕೆಲವೇ ಕೆಲವರು, ಎಲ್ಲರೂ ಸಹ ಅಲ್ಲ! ಅಲ್ಲಿಗದೇನು ಕಂದಾಯ ಹುಟ್ಟೀತೋ?
ಇನ್ನು ತನ್ನ ಅಂಗನೆಯರೆಂದರೆ ಮತ್ತೆ ಅದೇ, ಆ ಗೋಪಸ್ತ್ರೀಯರು. ಒಬ್ಬಳು ರಾಣಿಯೆಂಬುದಿಲ್ಲ, ಯಥಾವತ್ತಾಗಿ ವಿವಾಹವಾದವಳೊಬ್ಬಳಿಲ್ಲ – ಹೆಸರಿಗೂ! ಇನ್ನು ಈತನ ಶೃಂಗಾರಗಳೋ, ಗಿರಿ-ಗೈರಿಕಗಳು ಎಂದರೆ ಪರ್ವತದಲ್ಲಿ ಹುಟ್ಟುವ ಕೆಲವು ಧಾತುಗಳು. ಇಲ್ಲವೇ, ಹೊಳೆಯುವ (ನವಿಲು)ಗರಿಗಳು. ಇವೂ ಒಂದು ರಾಜಾಲಂಕಾರವೇ?
ಹೀಗೆಲ್ಲ ಇರುವುದರಿಂದ ಈ ಕೃಷ್ಣನನ್ನು ಒಬ್ಬ ಸಾಧಾರಣರಾಜನೆಂದು ಸಹ ಗುರುತಿಸಲಾಗದು. ಹಾಗಿರಲು ಈತನನ್ನೇ ಬೊಟ್ಟುಮಾಡಿ ತೋರಿಸುವರಲ್ಲಾ "ತ್ರಿಲೋಕಪ್ರಭು"ವೆಂದು! - ಎಂದು ಆಶ್ಚರ್ಯಪಡುತ್ತಾನೆ, ಕವಿ.
ಶೃಂಗ-ಗ್ರಾಹಿಕೆಯೆಂದರೆ ಕೊಂಬು ಹಿಡಿಯುವುದು. "ಶೃಂಗಗ್ರಾಹಿಕೆಯಿಂದ ಹೇಳುವುದು" ಎಂದರೆ, "ಇದೋ ಇದು" ಎಂದು ಬೊಟ್ಟುಮಾಡಿ ನಿರ್ದಿಷ್ಟವಾಗಿ ತೋರಿಸುವುದು. ಹಾಗೆ ತೋರಿಸಿಕೊಟ್ಟಾದ ಮೇಲೆ "ಇದು ಗೊತ್ತಾಗಲಿಲ್ಲ" ಎಂದು ಯಾರೂ ಹೇಳುವಂತಿರಲಾರದು. ಅಷ್ಟೊಂದು ಸ್ಪಷ್ಟವದಷ್ಟೆ?
ಅಂತೂ ಪರಿಸ್ಥಿತಿ ಹೀಗಿರಲು, ಶ್ರೀಕೃಷ್ಣನನ್ನೇ ಬೊಟ್ಟುಮಾಡಿ ತೋರಿಸಿ, "ಈತನೇ ತ್ರಿಲೋಕಾಧಿಪತಿ"ಯೆನ್ನುವುದೇ? ಒಬ್ಬ ಪಾಳೆಯಗಾರನಿಗೆ ದಕ್ಕಬಹುದಾದ ಸ್ಥಾನಮಾನಗಳೂ ಈತನಲ್ಲಿ ತೋರುತ್ತಿಲ್ಲವಲ್ಲಾ?
ಈ ಆಶ್ಚರ್ಯಕ್ಕೇ ಕವಿಯು "ಶಿವ! ಶಿವ!" ಎನ್ನುವುದು.
ಮೇಲ್ನೋಟಕ್ಕೆ ಕೃಷ್ಣನನ್ನೇ ಲೇವಡಿಮಾಡುವಂತಿದೆ, ಈ ಪದ್ಯ. ಶ್ರೀಕೃಷ್ಣನು ಹೀಗೆಲ್ಲ ಸಾಧಾರಣನಾಗಿಯೇ ತೋರಿದರೂ, ವಾಸ್ತವವಾಗಿ ಮಹಾಮಹಿಮನೇ – ಎಂಬ ಮುಖ್ಯ-ತತ್ತ್ವವನ್ನು ಕವಿಯು ಪರ್ಯಾಯವಾಗಿ ಹೇಳುತ್ತಿದ್ದಾನೆ.
ಪ್ರೀತಿಯುಕ್ಕಿದಾಗ ಸಲಿಗೆ ಹೆಚ್ಚು. ಸಲಿಗೆಯಿರುವಲ್ಲಿ ಒಮ್ಮೊಮ್ಮೆ ಲಘೂಕರಿಸಿ ನುಡಿಯುವುದೂ ಆಶ್ಚರ್ಯವೇನಲ್ಲವಲ್ಲವೇ?
ಸ್ಕಂಧಾವಾರ-ಪದಂ ವ್ರಜಃ, ಕತಿಪಯೇ ಗೋಪಾಃ ಸಹಾಯಾದಯಃ,/
ಸ್ಕಂಧಾಲಂಬಿನಿ ವತ್ಸ-ದಾಮ್ನಿ ಧನದಾಃ, ಗೋಪಾಂಗನಾಃ ಸ್ವಾಂಗನಾಃ |
ಶೃಂಗಾರಾಃ ಗಿರಿ-ಗೈರಿಕಂ, ಶಿವ! ಶಿವ! ಶ್ರೀಮಂತಿ ಬರ್ಹಾಣಿ ವಾ,/
ಶೃಂಗ-ಗ್ರಾಹಿಕಯಾ ತಥಾಪಿ ತದಿದಂ ಪ್ರಾಹುಃ ತ್ರಿಲೋಕೇಶ್ವರಮ್!! ||