ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಗೋಪಿಯೊಬ್ಬಳು ಕೃಷ್ಣನನ್ನು ಮೂದಲಿಸಿ ಹೇಳುತ್ತಿದ್ದಾಳೆ. ಮೂದಲಿಕೆಯೇಕೆ? ಮತ್ತೇಕೆ? ಕೃಷ್ಣನ ಮೇಲೆ ಕೋಪ, ಅವಳಿಗೆ. ಅವಳಿಗೆ ಕೋಪ ಬರುವಂತೆ ಕೃಷ್ಣನದೇನು ಮಾಡಿದ್ದಾನೆ? ಎಷ್ಟಾದರೂ ಗೋಪಿಕೆಯರೆಂದರೆ ಕೃಷ್ಣನಿಗೂ ಅಚ್ಚುಮೆಚ್ಚೇ ಅಲ್ಲವೇ?
ಹೌದು, ಅದುವೇ ಕಾರಣ, ಇಲ್ಲಿ ಆಗಿರುವ ಕಲಹಕ್ಕೂ. ಏಕೆ, ಪ್ರೀತಿಯಿದ್ದಲ್ಲಿ ಕಲಹವಿರಲಾಗದೇ, ಕಲಹವಿರಬಾರದೇ? ಕಲಹದಿಂದಲೇ ಪ್ರೀತಿಯು ವರ್ಧಿಸುವುದೂ ಉಂಟಲ್ಲವೇ?
ಇರಲಿ. ಪ್ರಕೃತ ಆಗಿರುವುದಿಷ್ಟು. ಗೋಪಿಕೆಯೊಬ್ಬಳಿಂದ ದೂರ ಸರಿಯುತ್ತಿದ್ದಾನೆ ಕೃಷ್ಣ. ಕೃಷ್ಣನು ಹೊರಟರೆ ಅವಳಿಗೆ ತಿಳಿಯದೇ? ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ. ಆತನ ಮನಸ್ಸನ್ನು ಮತ್ತೊಬ್ಬ ಗೋಪಿಕೆಯೇನಾದರೂ ಸೆಳೆದುಬಿಟ್ಟರೆ? ಎಂಬ ಆತಂಕವಿರುವುದಲ್ಲವೇ, ಇವಳಿಗೆ?
ಅವಳದೆಷ್ಟು ಬಿಗಿಯಾಗಿ ಹಿಡಿದುಕೊಂಡರೇನು? ಅವಳ ಕೈಕೊಸರಿ ಹೋಗುತ್ತಿದ್ದಾನೆ, ಕೃಷ್ಣ. ಎಷ್ಟಾದರೂ ಗಂಡಸಲ್ಲವೆ? ಹೆಣ್ಣು ಎಷ್ಟೇ ಬಲಪ್ರಯೋಗವನ್ನೇ ಮಾಡಿದರೂ ಎಷ್ಟಾದರೂ ಅಬಲೆಯಲ್ಲವೇ ಅವಳು? ಪುರುಷನ ಪೌರುಷದ ಮುಂದೆ ಅಬಲೆಯ ಬಲವೆಲ್ಲಿಯದು?
"ಕೈಲಾಗದವರಿಗೆ ಬಾಯಿ ಜೋರು" ಎಂದೊಂದು ಗಾದೆಯಿದೆಯಲ್ಲವೇ? ಈ ಗೋಪಿಕೆಯೂ ಅಷ್ಟೇ. ಮಾತಿನಲ್ಲಿ ಚತುರೆಯೇ. ಎಂದೇ ಮೂದಲಿಕೆಯ ಮಾತು. ಕೃಷ್ಣನನ್ನೇ ಕೆರಳಿಸುವ ಮಾತು. ದೇಹ-ಬಲವು ಮಿತವಾದರೂ ವಾಗ್-ಬಲವೇನು ಮಿತವೇ?
ಅದಕ್ಕೇ ಹೇಳುತ್ತಿದ್ದಾಳೆ. ಓ ಕೃಷ್ಣಾ! ಬಲವಂತವಾಗಿ ನನ್ನ ಕೈಕೊಸರಿ ಹೋಗುತ್ತಿರುವೆಯಲ್ಲಾ, ಇದೇನೋ ಅದ್ಭುತವೆಂದುಕೊಳ್ಳಬೇಡ. ಮೈಬಲದಲ್ಲಿ ನಿನ್ನದೇ ಮೇಲುಗೈಯೆಂದು ಜಂಭಪಡಬೇಕಿಲ್ಲ, ನೀನು.
ಏಕೆ ಎನ್ನುವೆಯೋ? ನನ್ನ ಹೃದಯದಿಂದ ಹೊರಟುಹೋಗು, ನೋಡುವಾ! ಹೋಗಬಲ್ಲೆಯಾದರೆ ಇದೋ ನಿನ್ನಲ್ಲಿ ಪೌರುಷವಿದೆಯೆಂದು ನಾ ಪರಿಗಣಿಸುವೆ. ಇಲ್ಲವೋ, ನೀನು ಆಟಕ್ಕೆ ಗಂಡಸು, ಲೆಕ್ಕಕ್ಕಲ್ಲ. ನಿನ್ನನ್ನು ಪುರುಷನೆಂದು ನಾ ಗಣಿಸೆ. ನಿನ್ನ ಪೌರುಷವು ಹೆಚ್ಚೇನೂ ಅಲ್ಲ, ಅದನ್ನು ನಾ ಮೆಚ್ಚಿಬಿಡುವವಳೂ ಅಲ್ಲ!
ಮೇಲ್ನೋಟಕ್ಕೆ ಸೆಣಸಿನ ಮಾತಾದರೂ ಗೋಪಿಕೆಯ ಮಾತಿನಲ್ಲಿ ಅದೆಷ್ಟು ಅರ್ಥವಡಗಿದೆ! ತನ್ನ ಹೃದಯದಲ್ಲಿ ಕೃಷ್ಣನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾಳೆ, ಈಕೆ. ತನ್ನ ಹೃದಯಸ್ಥನಾದ ಕೃಷ್ಣ ಅವಳಿಂದೆಂದೂ ದೂರವಾಗಲಾರ. ಅವನು ಬಾಹ್ಯವಾಗಿ ದೂರ ಸರಿದರೂ ಹೃದಯಕ್ಕೆ ಎಂದೂ ಹತ್ತಿರವೇ, ಎಂದೆಂದೂ ಹತ್ತಿರವೇ.
ಕೃಷ್ಣನ ವಿಷಯದಲ್ಲಿ ಆಕೆಗೆ ಸಲಿಗೆಯೇ. ಏಕೆ? ಮುಖ್ಯವಾಗಿ ಅವಳ ಹೃದಯದಲ್ಲಿ ಆತನನ್ನು ಕುರಿತಾದ ಭಾವಬಂಧ ಅಷ್ಟು ಗಾಢವಾಗಿದೆ.
ಪ್ರೀತಿಯೆಂಬುದು ಭೌತಿಕಪದಾರ್ಥವಲ್ಲ, ತೆಗೆದು ತೋರಿಸಲು. ನಿಜವಾದ ಪ್ರೇಮವು ಗೂಢವೂ ಗಾಢವೂ ಆದದ್ದು. ತನ್ನ ಹೃದಯಾಂತರಾಳದಲ್ಲಿ ತನ್ನ ನೆಚ್ಚಿನ ನಲ್ಮೆಯ ಕೃಷ್ಣನನ್ನು ಹುದುಗಿಸಿಟ್ಟುಕೊಂಡಿದ್ದಾಳೆ, ಆಕೆ. ಪ್ರೀತಿಯ ಪಾಶದಿಂದ ಕಟ್ಟಿಹಾಕಿಕೊಂಡಿದ್ದಾಳೆ. ಅದರಿಂದ ಆತ ಬಿಡಿಸಿಕೊಳ್ಳಲಾರ. ಆತನು ತನ್ನ ಉಸಿರು, ಅಥವಾ ಉಸಿರಿಗೂ ಉಸಿರು.
ಆ ತೆರನಾಗಿ ಆತನನ್ನು ತನ್ನ ದಹರಕುಹರದಲ್ಲಿ ಕಾಪಿಟ್ಟುಕೊಂಡಿರುವ ಆ ಗೋಪಿಗೆ ಹೃದಿಸ್ಥನಾದ ಅಂತರಂಗಪ್ರಭುವೇ ಗಟ್ಟಿ. ಹೊರಗಡೆಯ ಕೃಷ್ಣನಿಗೆ ಒಂದೇ ಎಡೆಯೇ? ಆತ ದೂರ ಹೋದಾನಾದರೂ, ಇಷ್ಟು ಗಾಢವಾಗಿ ಪ್ರೀತಿಸುವವಳನ್ನದೆಂತು ತೊರೆದಾನು? ಪ್ರೀತಿಯು ಊರುವುದು ಬಹುತೇಕವಾಗಿ ಜೊತೆಯಲ್ಲಿರುವಾಗಲೇ - ಎಂಬ ನಿಯಮವೇನೂ ಇಲ್ಲ. ಭೌತಿಕವಾದ ಒಂದಿಷ್ಟು ವಿರಹವೂ ಪ್ರೇಮವನ್ನು ಬಲಪಡಿಸುವಂತಹುದೇ ಸರಿ.
ಅಂತೂ ತನ್ನ ಹೃದಯರಂಗದಿಂದ ಆತನನ್ನು ಎಂದಿಗೂ ಬಿಟ್ಟುಕೊಡೆನೆಂಬ ಗಟ್ಟಿಯಿರುವುದರಿಂದಲೇ ದಿಟ್ಟತನದ ತಕ್ಕ ಮಾತನ್ನಾಡತಕ್ಕವಳು, ಇವಳು. ಅಂತರಂಗದಿಂದಲೇ ಹೊಮ್ಮಿದ ಸತ್ಯವೇ ಆದ ಅವಳ ಈ ನುಡಿಯು ಶ್ರೀರಂಗಮಹಾಗುರುಗಳ ಹಾರ್ದವಾದ ಮೆಚ್ಚುಗೆಗೆ ಪಾತ್ರವಾಗಿತ್ತು; ಇಷ್ಟರಿಂದಲೇ ಸ್ಪಷ್ಟವಾಗುತ್ತದೆ, ಅವಳ ಭಗವತ್ಪ್ರೇಮದ ಉತ್ತುಂಗತೆ.
ವಾಚ್ಯಾರ್ಥದಲ್ಲಿ ಭರ್ತ್ಸನವು ತೋರಿದರೂ, ಧ್ವನ್ಯರ್ಥದಲ್ಲಿ ತನ್ನ ಪ್ರಾಣಪ್ರಭುವನ್ನು ಕುರಿತಾದ ಪ್ರೇಮಭರತೆಯು ತುಂಬಿ ತುಳುಕುತ್ತಿರುವುದು ಸ್ಫುಟವಾಗುತ್ತದೆ, ಬಿರುನುಡಿಯಾದರೂ ಅವಳ ಹಾರ್ದವಾದೀ ಸರಿ(ವಿ)ನುಡಿಗಳಲ್ಲಿ.
ಹಸ್ತಮಾಕ್ಷಿಪ್ಯ ಯಾತೋಽಸಿ/
ಬಲಾತ್ ಕೃಷ್ಣ! ಕಿಮದ್ಭುತಮ್?|
ಹೃದಯಾದ್ ಯದಿ ನಿರ್ಯಾಸಿ /
ಪೌರುಷಂ ಗಣಯಾಮಿ ತೇ! ||
***
ಮತ್ತೊಂದು ಪದ್ಯ:
ನಮಗೆ ಏನೋ ವಿಶಿಷ್ಟವಾದ ಅನುಭವವಾದಾಗ ನಮ್ಮ ಬಾಯಿಂದ ಏನೋ ಒಂದು ಉದ್ಗಾರವು ಬರುವುದುಂಟು. ಆಕಾಶದತ್ತ ಮುಖಮಾಡಿ "ಅಮ್ಮ!" ಎಂದೋ "ಅಪ್ಪ!" ಎಂದೋ ಸಂಬೋಧಿಸಿ ನಮಗಾದ ಆಶ್ಚರ್ಯಾನುಭವವನ್ನು ಹೇಳಿಕೊಳ್ಳುವುದುಂಟು. ಈ ಶ್ಲೋಕದಲ್ಲಿ ಒಂದಿಷ್ಟು ನೋವೂ ಜೊತೆಗೇ ಆಶ್ಚರ್ಯವೂ ಆಗಿರುವುದನ್ನು ಅಂಬ! ಹಾ! ಹಂತ! ಅಹೋ! - ಎಂಬ ಪದಗಳಿಂದ ಹೇಳಿದೆ. ಇದೇನು ಹೀಗೆ? - ಎಂದೂ ಕೇಳಿದೆ.
ಯಾವ ಅನುಭವದ ಹಿನ್ನೆಲೆಯಲ್ಲಿ ಲೀಲಾಶುಕನ ಬಾಯಲ್ಲಿ ಈ ಮಾತುಗಳು ಬಂದಿವೆ? - ಎಂಬುದನ್ನು ತಿಳಿಯಬೇಕಲ್ಲವೆ?
ಕೃಷ್ಣನು ಉಂಟುಮಾಡಿರುವ ಅನುಭವವದು. ಅದು ವಿಶಿಷ್ಟವಾದದ್ದೇ. ಎದುರಿಗೇ ಸಂಪೂರ್ಣವಾಗಿ ತೋರಿಕೊಡುತ್ತಿದ್ದಾನೆ, ಕೃಷ್ಣ. ಏನನ್ನು? ತನ್ನ ಕ್ರೀಡಾ-ಸಂಪತ್ತನ್ನು. ಅದಕ್ಕಾಗಿ ಕವಿ ಬಳಸುವ ಪದವೂ ವಿಶಿಷ್ಟವಾದದ್ದೇ - ಕೇಲಿ-ಲಕ್ಷ್ಮೀ ಎಂಬುದಾಗಿ. ಎಂತಹುದು ಆ ಕ್ರೀಡಾಶ್ರೀ? ಅಯ್ಯೋ, ಅದನ್ನು ಹೀಗೆಂದು ಹೇಳಲೇ ಆಗದು. ಯಾವುದನ್ನು ಬಣ್ಣಿಸಲಾಗದೋ, ಬಿಡಿಸಿ ಹೇಳಲಾಗದೋ, ಅದನ್ನು ಕಿಮಪಿ, ಕೋಽಪಿ, ಕಾಽಪಿ - ಎಂದು ಮುಂತಾಗಿ ಹೇಳುವರು. ಅವರ್ಣನೀಯವಾದ ಏನೋ ಒಂದದು. ಎದುರಿಗೇ ನಡೆಯುವುದನ್ನೂ ಅದು ಹೀಗೆಂದು ವಿವರಿಸಿ ಹೇಳಲಾಗುತ್ತಿಲ್ಲ.
ಬರೀ ಎದುರಿಗೇ - ಎಂದು ಕೂಡ ಹೇಳುವಂತಿಲ್ಲ. ಏಕೆ? ಅದೂ ಬೇರೆ ಬೇರೆ ದಿಕ್ಕುಗಳಲ್ಲಿಯೂ ತೋರುತ್ತಿದೆ. ತೋರುತ್ತಿದೆಯೆಂದರೆ, ಕಲ್ಪನೆಯಲ್ಲಿ ಸಹ ಹಾಗೆ ತೋರುವುದುಂಟಲ್ಲವೆ, ಹಾಗೆಯೇ? ಹಾಗಲ್ಲ, ಅದನ್ನೆಲ್ಲಾ ಕಣ್ಣಾರ ಕಂಡದ್ದುಂಟು. ಅದಕ್ಕೆ ನನ್ನ ಕಣ್ಣೇ ಸಾಕ್ಷಿ - ಎನ್ನುತ್ತಾನೆ, ಕವಿ.
ಆದರೆ ಹಾಗಿದ್ದದ್ದು ಮತ್ತೊಂದು ಕ್ಷಣದಲ್ಲಿ ಬೇರೆಯೇ ಆಗಿಬಿಟ್ಟಿದೆ! ಈಗ ಕೈಗೆಟುಕದಂತಾಗಿಬಿಟ್ಟಿದೆ. ಅದನ್ನೇ ಹಸ್ತಪಥ-ದೂರವೆಂದಿರುವುದು.
ಹಾಗಿದ್ದರೂ ನನಗಿದೇನಾಗುತ್ತಿದೆ? ತ್ರಿಲೋಕವೂ ಆಶಾ-ಕಿಶೋರಮಯವಾಗಿದೆ! ಆಶಾ-ಮೋದಕವೆಂದರೆ ನಮ್ಮ ಆಸೆಯೇ ನಿರ್ಮಿಸಿಕೊಂಡಿರುವ ಲಡ್ಡು; ಆದರಿಲ್ಲಿ ಆಶಾ-ಕಿಶೋರವೆಂದರೆ ನಾ ಹಂಬಲಿಸುವ ಕಿಶೋರ. ಅದಾದರೂ ಶ್ರೀಕೃಷ್ಣನೇ ಸರಿ; ಬಾಲಕೃಷ್ಣನೇ ಅದು.
ಮೂಜಗವೂ ಕೃಷ್ಣಮಯವಾಗಿ ಎನಗೆ ತೋರುತ್ತಿದೆಯೆಲ್ಲಾ! - ಎನ್ನುತ್ತಿದ್ದಾನೆ, ಕವಿ. ಈ ಕ್ಷಣದಲ್ಲಿ ಎದುರಿಗೂ ಅನ್ಯದಿಕ್ಕುಗಳಲ್ಲೂ ತೋರಿಕೊಳ್ಳುತ್ತಿರುವ ಕೃಷ್ಣನಿವನು. ಆದರೆ ಹಿಡಿಯಹೋದರೆ ಕೈಗೆಟುಕನು! ಜೊತೆಜೊತೆಗೇ ಜಗವೆಲ್ಲವೂ ಅವನೇ ಆಗಿರುವನು! ಇದೆಲ್ಲವೂ ಹೇಗೆ ಸಾಧ್ಯ? ಇನ್ನೇನು ದೊರೆತನೆಂದುಕೊಂಡರೆ ಕೈಗವನು ಸಿಗನು. ತ್ರಿಲೋಕವೂ ಆತನ ಆಟವೇ - ಎನಿಸುವವನು. ಈತನ ಲೀಲಾಸಂಪತ್ತು ಎಂತಹುದೆಂಬುದೇ ಅನೂಹ್ಯ!
ಶ್ಲೋಕ ಹೀಗಿದೆ:
ಅಗ್ರೇ ಸಮಗ್ರಯತಿ ಕಾಮಪಿ ಕೇಲಿ-ಲಕ್ಷ್ಮೀಂ /
ಅನ್ಯಾಸು ದಿಕ್ಷ್ವಪಿ ವಿಲೋಚನಮೇವ ಸಾಕ್ಷಿ |
ಹಾ ಹಂತ, ಹಸ್ತ-ಪಥ-ದೂರಂ ಅಹೋ ಕಿಮೇತದ್ /
ಆಶಾ-ಕಿಶೋರಮಯಂ ಅಂಬ! ಜಗತ್-ತ್ರಯಂ ಮೇ ||
ಸೂಚನೆ : 12/07/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.