Monday, November 9, 2026

ಪ್ರಶ್ನೋತ್ತರ ರತ್ನಮಾಲಿಕೆ 92 (Prasnottara Ratnamalike 92)

.

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - 92. ಯಾವುದು ಅಭಯ

ಉತ್ತರ -  ವೈರಾಗ್ಯ.


ಈ ಪ್ರಶ್ನೋತ್ತರವು ಅಭಯ ಮತ್ತು ವೈರಾಗ್ಯಕ್ಕೆ ಇರುವ ಸಂಬಂಧವನ್ನು ತಿಳಿಸುತ್ತದೆ. ಅಭಯವೆಂಬುದು ಮಾನಸಿಕವಾದ ಒಂದು ಸ್ಥಿತಿ. ಭಯ ಇಲ್ಲದಿರುವಿಕೆ ಎಂದರ್ಥ. ರಾಗ ಎಂದರೆ ಅಂಟು, ವಿರಾಗ ಎಂದರೆ ಅಂಟು ಇಲ್ಲದಿರುವಿಕೆ. ಪದಾರ್ಥ ಅಥವಾ ವಿಷಯದ ಮೇಲೆ ನನ್ನದು ಎಂಬ ಮಮತ್ವ ಇಲ್ಲದಿರುವಿಕೆಯೇ ವಿರಾಗ. ಇದನ್ನೇ ಇನ್ನೊಂದು ಅರ್ಥದಲ್ಲಿ ‘ವೈರಾಗ್ಯ’ ಎಂಬುದಾಗಿ ಕರೆಯಲಾಗುತ್ತದೆ. ರಾಗವು ಬಂಧನಕ್ಕೆ ಕಾರಣವಾದರೆ, ವಿರಾಗವು ಮೋಕ್ಷಕ್ಕೆ ಕಾರಣ ಎಂಬುದಾಗಿ ನಮ್ಮ ಭಾರತೀಯ ಎಲ್ಲಾ ಸಾಹಿತ್ಯಗಳು ಒಕ್ಕೊರಳಿನಿಂದ ಸಾರುತ್ತವೆ. ರಾಗವು ಭಯಕ್ಕೆ ಕಾರಣ, ವಿರಾಗವು ಅಭಯಕ್ಕೆ ಕಾರಣ ಎಂದು ಹೇಳಿದಂತೆ ಆಯಿತು. ಹಾಗಾದರೆ ಅದು ಹೇಗೆ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯ.

ಈ ಪ್ರಪಂಚಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಗೂ ಪದಾರ್ಥಗಳ ಸಂಬಂಧ ಅತ್ಯಂತ ಅನಿವಾರ್ಯ. ಅದಿಲ್ಲವಾದರೆ ಈ ಪ್ರಪಂಚದಲ್ಲಿ ಬದುಕು ಅಸಾಧ್ಯ. ಬದುಕಿಗಾಗಿ ನಾನಾ ಪದಾರ್ಥದ ಜೊತೆ ನಿಕಟವಾದ ಸಂಬಂಧವು ಬೇಕೇಬೇಕು. ಈ ಎಲ್ಲಾ ಪದಾರ್ಥಗಳನ್ನು ಒಟ್ಟಾಗಿಸಿ ‘ಸಂಸಾರ’ ಎಂಬುದಾಗಿ ಕರೆಯಲಾಗುತ್ತದೆ. ಇದನ್ನೇ ವೇದ ಶಾಸ್ತ್ರಗಳು ಎಚ್ಚರಿಸಿವೆ. ಹೇಗೆಂದರೆ ನಮ್ಮ ಭೌತಿಕ ಬದುಕಿಗೆ ಇವು ಬೇಕಾದರೂ, ಬದುಕಿನ ಆಚೆಗೆ ಬೇಡವಾಗಿ ಇರುತ್ತವೆ ಎಂದು. ಈ ಸಂಸಾರವನ್ನು ಬಿಡಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಪದಾರ್ಥಗಳ ಜೊತೆ ಸಂಬಂಧವನ್ನು ಇಟ್ಟುಕೊಳ್ಳಬೇಕು.


ಆ ಸಂಬಂಧ ಅತಿಯಾಗಿ ಆ ಪದಾರ್ಥ ನಮ್ಮಿಂದ ದೂರವಾದಾಗ ಭಯ, ಆತಂಕ ಇವೆಲ್ಲಕ್ಕೂ ಕಾರಣವಾಗುತ್ತದೆ. ಇನ್ನೊಂದೆಡೆ “ದ್ವಿತಿಯಾದ್ಧಿ ಭಯಂ ಭವತಿ” ಎಂದೂ, “ಯದ್ ಅಂತರಂ ಕುರುತೇ ಅಥ ತಸ್ಯ ಭಯಂ ಭವತಿ” ಎಂದು ಉಪನಿಷತ್ತು ಸಾರುತ್ತದೆ. ಅಂದರೆ ತಾತ್ಪರ್ಯವಿಷ್ಟೇ, ಈ ಪ್ರಪಂಚದಲ್ಲಿ ಉಳಿಯಬೇಕಾದದ್ದು ಅಥವಾ ಉಳಿಯುವಂತಹದ್ದು ಅಥವಾ ನಿತ್ಯವಾದ ಶಾಶ್ವತವಾದ ಬದುಕು ಯಾವುದುಂಟೋ ಅದನ್ನು ಮಾತ್ರ ಆಶ್ರಯಿಸಬೇಕು. ಅದು ಮಾತ್ರವೇ ನಮಗೆ ಸುಖ ಶಾಂತಿ ನೆಮ್ಮದಿಯನ್ನು ಕೊಡುವಂತಹದ್ದು ಎಂಬುದಾಗಿ. ಅದನ್ನು ಶಾಶ್ವತ ಸುಖ ಎಂಬುದಾಗಿ ಹೇಳಿ, ಅದುವೇ ಬ್ರಹ್ಮಾನಂದ ಪರಮಾನಂದ ಇತ್ಯಾದಿ ಪದಗಳಿಂದ ಹೇಳಲಾಗಿದೆ. ಪ್ರತಿಯೊಬ್ಬ ಜೀವಿಯೂ ಬಯಸುವುದು ಇದನ್ನೇ. ಇದಕ್ಕೆ ಹೊರತಾದ ಬಯಕೆಯು ಭಯಕ್ಕೆ ಕಾರಣವೇ ಹೊರತು ಅಭಯ ಅಲ್ಲಿ ಸಾಧ್ಯವಿಲ್ಲ ಎಂದು ಉಪನಿಷತ್ತು ಸ್ಪಷ್ಟಪಡಿಸುತ್ತದೆ. ಆದ್ದರಿಂದ ಈ ಸಂಸಾರದಲ್ಲಿ ಹೇಗೆ ಬದುಕಿದಾಗ ನಾವು ಅಭಯವಾಗಿ ಇರಲು ಸಾಧ್ಯ? ಇದ್ದು ಇಲ್ಲದಂತೆ ಬದುಕಲು ಸಾಧ್ಯ?, ಇದ್ದದ್ದನ್ನು ಶಾಶ್ವತ ಬದುಕಿಗಾಗಿ ಬಳಸಿ ಹೇಗೆ ಬದುಕಬೇಕು? ಎಂಬಿತ್ಯಾದಿಯಾಗಿ ಅರಿತಾಗ ಮಾತ್ರ ಆ ಪದಾರ್ಥಕ್ಕೆ ಒಂದು ಸಾರ್ಥಕ್ಯ ಬರುತ್ತದೆ. ಆಗ ಆ ಪದಾರ್ಥದಲ್ಲಿ ನಮಗೆ ಯಾವ ಬಗೆಯ ಅಂಟೂ ಇರುವುದಿಲ್ಲ. ಇಂತಹ ವಿರಾಗಭಾವನೆ ಅಥವಾ ವೈರಾಗ್ಯ ಇದ್ದಾಗ ಅದು ನಮ್ಮಿಂದ ದೂರವಾಗುತ್ತದೆ ಎಂಬ ಭಯವೂ ಇರುವುದಿಲ್ಲ. ಇದನ್ನೇ ಅಭಯ ಎನ್ನಲಾಗಿದೆ. ಈ ಅಭಯದ ಭಾವವನ್ನೇ ವೈರಾಗ್ಯ ಎಂಬುದಾಗಿ ಕರೆಯಲಾಗಿದೆ. ಈ ನೇರದಲ್ಲಿ ಅಭಯ ಮತ್ತು ವೈರಾಗ್ಯಗಳಿಗೆ ಒಂದು ವಿಶಿಷ್ಟವಾದ ಸಂಬಂಧ ಇದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ :  08/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.