ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಅತ್ಯಂತ ಮುಖ್ಯವೂ, ಅವಶ್ಯವೂ ಆದ ವಿಷಯ ‘ಸದಾಚಾರ’. ಸದಾಚಾರವೆಂದರೆ, ಕೇವಲ ಮಡಿ-ಮೈಲಿಗೆ ಇವುಗಳಿಗೆ ಸಂಬಂಧಿಸಿರುವ ವ್ಯಾಪಾರ ಎಂಬಷ್ಟು ಅರ್ಥವನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ ಇದಕ್ಕೆ ತುಂಬಾ ಆಳವೂ, ವಿಸ್ತಾರವೂ ಆದ ಅರ್ಥವಿದೆ. ‘ಸತ್’ ಎಂಬ ಯಾವ ಪ್ರಪಂಚಕ್ಕೆ ಮೂಲಭೂತವಾದ ವಿಷಯವುಂಟೋ, ಅದನ್ನು ಪಡೆಯಲು ಮಾಡಲೇಬೇಕಾದ ಯಾವೆಲ್ಲ ಕ್ರಿಯೆಗಳುಂಟೋ, ಎಲ್ಲವನ್ನೂ ಒಟ್ಟಾಗಿ ‘ಸದಾಚಾರ’ ಎಂಬ ಪದದಿಂದ ಕರೆಯುತ್ತೇವೆ. ‘ಸತ್’ ಎಂಬ ಪದಾರ್ಥವೂ ಕಾಲಾತೀತವಾದುದು ಮತ್ತು ದೇಶಾತೀತವಾದುದು. ಅಂದರೆ ಪರಬ್ರಹ್ಮ. ಇದೇ ಮುಂದಕ್ಕೆ ವಿಸ್ತಾರವಾಗಿ ಪ್ರಪಂಚವಾಯಿತು. ಹೇಗೆ ಬೀಜವು ವಿಸ್ತಾರವಾದಾಗ, ಬೀಜದ ಧರ್ಮವು ಅದರ ಮುಂದಿನ ಎಲ್ಲಾ ಹಂತಗಳಲ್ಲೂ ಗೋಚರಿಸುವುದೋ, ಹಾಗೆ ಪ್ರಪಂಚದ ಪ್ರತಿಯೊಂದೂ, ಆ ಪರಬ್ರಹ್ಮನ ಧರ್ಮದಿಂದಲೇ ಕೂಡಿದೆ. ಉಪನಿಷತ್ತು ಹೇಳುವಂತೆ ‘ಪ್ರಪಂಚವೆಲ್ಲವೂ ಅವನ ಆವಾಸಸ್ಥಾನವೇ ಆಗಿದೆ’. ಈ ಪ್ರಪಂಚವನ್ನೇ ಆಶ್ರಯಿಸಿ ಪ್ರಪಂಚಮೂಲನಾದ ಭಗವಂತನ ಕಡೆಗೆ ಸಾಗಬೇಕಾದುದು ಪ್ರತಿಯೊಬ್ಬ ಮಾನವನ ಕರ್ತವ್ಯವೂ ಆಗಿದೆಯಷ್ಟೆ. ಸಿಕ್ಕ ಮಾನವಜನ್ಮವನ್ನೂ ಸಾರ್ಥಕಪಡಿಸಿಕೊಳ್ಳಬೇಕಷ್ಟೇ. ಇದಕ್ಕೆಂದೇ ನಮ್ಮ ಭಾರತೀಯ ಆರ್ಯಮಹರ್ಷಿಗಳು ಕಂಡ ಸತ್ಯಾನ್ವೇಷಣೆಯ ಫಲವೇ ‘ಸದಾಚಾರ’. ಇದೊಂದು ಮೂಢನಂಬಿಕೆಯಲ್ಲ. ಮೂರ್ಖರ ಆಚರಣೆಯಲ್ಲ. ವಿಜ್ಞಾನದಿಂದ ಕೂಡಿದ ಆಚರಣೆ.
ಈ ಸೃಷ್ಟಿಯಲ್ಲಿ ಪ್ರತಿಯೊಂದು ಪದಾರ್ಥವೂ ತನ್ನ ತನ್ನ ಶುದ್ಧವಾದ ರೂಪದಿಂದಲೇ ಇರಬೇಕೆಂದು ಬಯಸುತ್ತದೆ. ಮಣ್ಣು, ನೀರು, ಗಾಳಿ ಎಲ್ಲವೂ ಶುದ್ಧವಾಗಿದ್ದಾಗ ಮಾತ್ರ ಅವುಗಳಿಂದ ಪ್ರಯೋಜನ. ಅವು ಕಲುಷಿತವಾದರೆ ಅವನ್ನು ಶುದ್ಧಿಗೊಳಿಸಲಾಗುತ್ತದೆ. ಗಿಡ-ಮರ, ಪ್ರಾಣಿ-ಪಕ್ಷಿ, ನದೀ-ಪರ್ವತ ಎಲ್ಲವೂ ಸಹಜವಾಗಿ ಶುದ್ಧವೇ. ಅವು ಸದಾಕಾಲ ಶುದ್ಧವಾಗಿರಬೇಕು. ಅಶುದ್ಧವಾದಾಗ ಶುದ್ಧಗೊಳಿಸಬೇಕು. ಆದ್ದರಿಂದ ಶುದ್ಧಿಯು ಅದರ ಸ್ವಭಾವ. ಅಶುದ್ಧಿಯು ಅದರ ವಿಕಾರ. ಸೃಷ್ಟಿಯ ಒಂದು ಭಾಗವಾದ ಮಾನವನಿಗೂ ಈ ಪ್ರಕ್ರಿಯೆ ಹೊರತಲ್ಲ. ಕಾಲಕಾಲಕ್ಕೆ ಸಂಭವಿಸುವ ಕಲ್ಮಷವನ್ನು ತೆಗೆಯಬೇಕು. ತನ್ನ ಸ್ವರೂಪಕ್ಕೆ ಚ್ಯುತಿ ಬಾರದರೀತಿಯಲ್ಲಿ ಇರಬೇಕು. ಸ್ವರೂಪವನ್ನು ಹಾಗೇ ಉಳಿಸಿಕೊಳ್ಳಲು ಸದಾಚಾರ ಬೇಕೇಬೇಕು.
ಮಾನವನನ್ನು ಅತ್ಯಂತ ಶುದ್ಧಜನ್ಮ, ಶ್ರೇಷ್ಠಜನ್ಮ ಎಂದೆಲ್ಲಾ ಕೊಂಡಾಡಲಾಗುತ್ತದೆ. ಇದಕ್ಕೆ ಕಾರಣವಿಷ್ಟೆ- ‘ಭಗವಂತನ ಸಾನ್ನಿಧ್ಯವನ್ನು ಪಡೆಯಬಹುದಾದ ಜನ್ಮ’ ಎಂದು. ಆಗಲೇ ಜನ್ಮ ಸಾರ್ಥಕ. ಇದಕ್ಕೆ ನಮ್ಮ ದೇಹೇಂದ್ರಿಯ, ಮನಸ್ಸು, ಬುದ್ಧಿ, ಇವೆಲ್ಲದರ ಶುದ್ಧಿ ಅತ್ಯವಶ್ಯ. ಈ ಶುದ್ಧಿಯ ಒಟ್ಟಾರೆ ಪ್ರಕ್ರಿಯೆಯನ್ನು ‘ಸದಾಚಾರ’ ಎಂದು ಹೇಳುತ್ತೇವೆ. “ಪಂಚೇಂದ್ರಿಯಸ್ಯ ದೇಹಸ್ಯ ಬುದ್ಧೇಶ್ಚ ಮನಸಸ್ತಥಾ | ದ್ರವ್ಯದೇಶಕ್ರಿಯಾಣಾಂ ಚ ಶುದ್ಧಿರಾಚಾರ ಇಷ್ಯತೇ||” ಎಂದು. ಇವೆಲ್ಲವನ್ನು ಶುದ್ಧಿಗೊಳಿಸಬೇಕು. ಆಗ ಅವುಗಳ ಸ್ವರೂಪ ಶುದ್ಧವಾದಂತೆ. ಇದರ ಪರಿಣಾಮವೇ ಪರಮಾತ್ಮನ ಸಾಕ್ಷಾತ್ಕಾರ. ನಮ್ಮೆಲ್ಲರ ಗುರಿ ಇಷ್ಟೇ ತಾನೆ. ನಾವು ಪ್ರತಿನಿತ್ಯ ಪಠಿಸುವ ವಾಕ್ಯವೂ ಇದೇ ತಾನೆ- ‘ಧರ್ಮ-ಅರ್ಥ-ಕಾಮ-ಮೋಕ್ಷ-ಚತುರ್ವಿಧ-ಪುರುಷಾರ್ಥ-ಸಿದ್ಧ್ಯರ್ಥಮ್’ ಎಂದು. ಆದರೆ ವೈಪರೀತ್ಯ ಎಂಬಂತೆ ಧರ್ಮ ಮತ್ತು ಮೋಕ್ಷ ಇವೆರಡರ ವಿಷಯಕ್ಕೆ ತಲೆ ಹಾಕದೆ, ಕೇವಲ ಅರ್ಥಕಾಮಗಳ ದಾಸರಾಗಿರುವ ಜನರ ಸಂಖ್ಯೆಯೇ ಹೆಚ್ಚು. ಆಚಾರವೆಂಬುದು ಆ ಆ ಪದಾರ್ಥದ ನೈಜಸ್ವರೂಪವನ್ನು ಅಂತೆಯೇ ಉಳಿಸಲು ಮಾಡುವ ಪ್ರಕ್ರಿಯೆ. ಇಲ್ಲಿ ನಾವು ವಿಚಾರಮಾಡಲಾಗುತ್ತಿರುವ ಆಚಾರವು ಇನ್ನಾವುದೂ ವಸ್ತುವಿನ ಶುದ್ಧಿಯನ್ನು ಹೇಳುತ್ತಿಲ್ಲ. ಈ ಜೀವವೆಂಬುದು ಶರೀರವವೆಂಬ ಸಾಧನವನ್ನು ಬಳಸಿಕೊಂಡು ಇದೇ ಶರೀರದಲ್ಲೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕಾಗಿದೆ. ಜೀವಶುದ್ದಿ ಅದಕ್ಕೋಸ್ಕವಾಗಿ. ಅದು ತನ್ನ ಸಾಧನವಾದ ಬುದ್ಧಿ ಮನಸ್ಸು ಇಂದ್ರಿಯ ಮೊದಲಾದ ಸಮಷ್ಟಿರೂಪವಾದ ಈ ದೇಹವನ್ನು ಶುದ್ಧಿಗೊಳಿಸಿ ಸಜ್ಜುಗೊಳಿಸಬೇಕು. ಇದನ್ನೇ ಆಚಾರವೆಂದು ಕರೆಯಲಾಗಿದೆ. ಬಾಹ್ಯವಾದ ಸಲಕರಣೆಗಳನ್ನೂ ಈ ಕಾರ್ಯಕ್ಕಾಗಿ ಬಳಸುವ ಅಗತ್ಯವಂತೂ ಇದರ ಜೊತೆಜೊತೆ ಇದ್ದೇ ಇರುತ್ತದೆ. ದ್ರವ್ಯಶುದ್ಧಿ ಪ್ರದೇಶಶುದ್ಧಿ ಕ್ರಿಯಾಶುದ್ಧಿ ಮುಂತಾದವುಗಳ ಶುದ್ಧಿಯೂ ಅಷ್ಟೇ ಅಗತ್ಯ. ಇವೆಲ್ಲವನ್ನು ಸೇರಿಸಿ ಸದಾಚಾರ ಎಂದು ಹೇಳಲಾಗಿದೆ.
ಸದಾಚಾರವೆಂಬುದು ಧರ್ಮದ ಜಾಗ್ರತೆಯನ್ನುಂಟುಮಾಡುತ್ತದೆ. ‘ಆಚಾರಪ್ರಭವೋ ಧರ್ಮಃ’ ಎಂಬ ಮಾತು ಈ ಹಿನ್ನೆಲೆಯಲ್ಲೇ ಬಂದಿದೆ. ಪ್ರತಿಯೊಂದು ವಸ್ತುವಿನ ಅದರದರ ಸಹಜತೆಯನ್ನು ಅಥವಾ ನಾರ್ಮಲ್ ಕಂಡೀಶನ್ ನನ್ನು ಧರ್ಮವೆಂದು ಕರೆಯಬೇಕು ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಂತಹ ಧರ್ಮವನ್ನು ಉಳಿಸಲು ಇರುವ ಕರ್ಮವೇ ಆಚಾರವೆನಿಸುವುದು. ಐದು ಇಂದ್ರಿಯಗಳು, ದೇಹ, ಬುದ್ಧಿ, ಮನಸ್ಸು, ದ್ರವ್ಯ, ದೇಶ ಮತ್ತು ಕ್ರಿಯೆಗಳೆಲ್ಲವೂ ಹೇಗಿದ್ದರೆ ಈ
ಸೂಚನೆ: 14/11/2026 ರಂದು ಈ ಲೇಖನ ವಿಜಯಕರ್ನಾಟಕದ ಬೋಧಿ ವೃಕ್ಷದಲ್ಲಿ ಪ್ರಕಟವಾಗಿದೆ.