ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಶಿಶುಪಾಲನ ಉದ್ಧಟತನದ ಮಾತುಗಳು, ಅದೂ ಭೀಷ್ಮರಂತಹ ಮಹಾಪುರುಷರನ್ನು ಕುರಿತಾದುವು, ಭೀಮನನ್ನು ಕೆರಳಿಸಿದವು.
ಶಿಶುಪಾಲನತ್ತ ವೇಗದಿಂದ ಚಿಮ್ಮುತ್ತಿದ್ದ ಈ ಮನಸ್ವಿಯಾದ ಭೀಮನನ್ನು ಮಹಾಬಾಹುವಾದ ಭೀಷ್ಮರೇ ತಡೆಹಿಡಿದು ನಿಲ್ಲಿಸಿದರು - ಮುನ್ನುಗ್ಗುತ್ತಿರುವ ಕಾರ್ತಿಕೇಯನನ್ನು ಮಹೇಶ್ವರನು ಹಿಡಿದಿಡುವಂತೆ.
ಆಗ ಭೀಷ್ಮರು ಅನೇಕ ಮಾತುಗಳನ್ನು ಭೀಮನಿಗೆ ಹೇಳಿದರು. ಹಿರಿಯರಾದ ಅವರು ಹಾಗೆ ಹೇಳುತ್ತಾ ತಡೆದ ಕಾರಣ ಭೀಮನ ಕ್ರೋಧವು ತಗ್ಗಿತು. ಶತ್ರುಮರ್ದನನಾದ ಆ ಭೀಮನು ಭೀಷ್ಮರ ಮಾತುಗಳನ್ನು ಮೀರಲಿಲ್ಲ - ಉಕ್ಕುತ್ತಿರುವ ಸಮುದ್ರವು, ಹೇಗೆ ಮೋಡವು ದೂರ ಸಾಗಲು, ತನ್ನ ದಡವನ್ನು ಮೀರಿಹೋಗದೋ ಹಾಗೆ.
ಮಹಾಕೋಪಗೊಂಡಿದ್ದ ಆ ಭೀಮಸೇನನ ವಿಷಯದಲ್ಲಿ ವೀರಶಿಶುಪಾಲನೇನೂ ನಡುಕಗೊಳ್ಳಲಿಲ್ಲ. ಎಷ್ಟಾದರೂ ತನ್ನ ಪೌರುಷದಲ್ಲಿ ಆತನು ಸುಪ್ರತಿಷ್ಠಿತನಾಗಿದ್ದನಷ್ಟೆ. ವೇಗದಿಂದ ಮತ್ತೆ ಮತ್ತೆ ಚಿಮ್ಮುತ್ತಿದ್ದ ಆ ಭೀಮನ ಬಗ್ಗೆ ಶತ್ರುದಮನಕಾರಿಯಾದ ಶಿಶುಪಾಲನು ಲೆಕ್ಕವನ್ನೇ ಇಡಲಿಲ್ಲ - ಕ್ರೋಧಗೊಂಡ ಸಿಂಹವು ಜಿಂಕೆಯೊಂದರ ವಿಷಯದಲ್ಲಿ ಹೇಗೆ ಲೆಕ್ಕವಿಡದೋ ಹಾಗೆ.
ಅಷ್ಟೇ ಅಲ್ಲ. ಭಯಂಕರ-ಪರಾಕ್ರಮವುಳ್ಳ ಭೀಮಸೇನನು ಕ್ರೋಧಗೊಂಡಿರುವುದನ್ನು ಕಂಡು, ಪ್ರತಾಪಶಾಲಿಯಾದ ಆ ಚೇದಿರಾಜನು, ಎಂದರೆ ಶಿಶುಪಾಲನು, ಈ ಮಾತನ್ನು ನಗುತ್ತಾ ಹೇಳಿದನು.
"ಭೀಷ್ಮನೇ, ಬಿಡು ಆತನನ್ನು. ಈ ರಾಜರುಗಳೆಲ್ಲ ನೋಡಲಿ - ನನ್ನ ಪ್ರಭಾವದಿಂದಾಗಿ ಸುಟ್ಟುಹೋಗುವ ಈತನನ್ನು - ಬೆಂಕಿಯಲ್ಲಿ ಪತಂಗವು (ಎಂದರೆ ಮಿಡತೆಯು) ಹೇಗೆ ಸುಟ್ಟುಹೋಗುವುದೋ ಹಾಗೆ".
ಚೇದಿರಾಜನ ಆ ಮಾತನ್ನು ಕೇಳಿದರು, ಧೀಮಂತರಲ್ಲಿ ಶ್ರೇಷ್ಠರಾದ ಭೀಷ್ಮಪಿತಾಮಹರು; ಭೀಮಸೇನನನ್ನು ಕುರಿತು ಈ ಪರಿಯಾಗಿ ಹೇಳಿದರು:
"ಅಯ್ಯಾ ಭೀಮಸೇನನೇ, ಚೇದಿರಾಜರ ವಂಶದಲ್ಲೇ ಹುಟ್ಟಿದವ ಈತ. ಹುಟ್ಟುವಾಗಲೇ ಮೂರು ಕಣ್ಣುಗಳೂ ನಾಲ್ಕು ಭುಜಗಳೂ ಇದ್ದವಿವನಿಗೆ! ಕತ್ತೆಗಳು ಕಿರುಚುವ ಹಾಗೆ ಈತನು ಅರಚಿದ! ಈತನ ಆ ಪರಿಗೆ ಆತನ ತಂದೆ-ತಾಯಿಗಳೂ ಬಂಧುಗಳೂ ಹೆದರಿಹೋದರು! ಆತನ ಆ ವಿಕಾರವಾದ ರೂಪವನ್ನು ಕಂಡು ಅವನನ್ನು ತ್ಯಜಿಸುವುದೆಂದೇ ನಿರ್ಧರಿಸಿದರು.
ತನ್ನ ಪತ್ನಿ, ಮಂತ್ರಿ, ಪುರೋಹಿತರೊಂದಿಗೆ ರಾಜನು ಚಿಂತಾಕುಲಿತವಾದ ಚಿತ್ತದೊಂದಿಗಿರುವಾಗಲೇ ಅಶರೀರವಾಣಿಯೊಂದು ನುಡಿಯಿತು:
"ರಾಜನೇ ನಿನಗೆ ಹುಟ್ಟಿರುವ ಈ ಮಗನು ಶ್ರೀಯುಕ್ತನೂ ಅಧಿಕಬಲಶಾಲಿಯೂ ಆಗತಕ್ಕವನು. ಆದ್ದರಿಂದ ಈತನ ದೆಸೆಯಿಂದ ಹೆದರಬೇಕಾದುದಿಲ್ಲ. ಹಾಗಾಗಿ, ನಿಶ್ಚಿಂತನಾಗಿ ಈ ಶಿಶುವನ್ನು ರಕ್ಷಿಸು. ಈತನ ಮೃತ್ಯುಕಾಲವೂ ಈಗ ಸಮುಪಸ್ಥಿತವಾಗಿಲ್ಲ (ಸಮೀಪಿಸಿಲ್ಲ). ಈತನ ಸಾವಿಗೆ ಕಾರಣನಾದವನು ಈತನನ್ನು ಶಸ್ತ್ರದಿಂದಲೇ ಸಂಹರಿಸುವನು. ಮತ್ತು ಆತನು ಈಗಾಗಲೇ ಹುಟ್ಟಿಯಾಗಿದೆ."
ಹೀಗೆ ನುಡಿದ ನುಡಿಯನ್ನು ಕೇಳಿದ ಇವನ ತಾಯಿಯು ಮರೆಯಾಗಿಯೇ ಉಳಿದಿದ್ದ ಆ ಭೂತವನ್ನೇ ಕುರಿತು ಈ ಮಾತನ್ನು ಹೇಳಿದಳು:
"ನನ್ನ ಮಗನನ್ನು ಕುರಿತಾಗಿ ಅದಾರು ಈ ಮಾತನ್ನು ಹೇಳಿದ್ದಾರೆಯೋ ಅವರಿಗೆ ಕೈ ಜೋಡಿಸಿ ನಮಸ್ಕರಿಸುತ್ತೇನೆ. ಅವರು ಮತ್ತೆ ಮಾತನಾಡಿ ಹೇಳಲಿ. ಅದು ದೇವತೆಯಾಗಿರಬಹುದು, ಮತ್ತಾರೇ ಆಗಿರಬಹುದು. ನನ್ನ ಪ್ರಶ್ನೆಯಿದು: ನನ್ನ ಮಗನ ಪಾಲಿಗೆ ಅದಾರು ಮೃತ್ಯುವಾಗತಕ್ಕವರು? - ಎಂಬುದನ್ನು".
ಅಂತರ್ಹಿತವಾಗಿದ್ದ ಆ ಭೂತವು ಆ ಶ್ರುತಶ್ರವೆಯ ಮಾತಿಗೆ ಆಶ್ಚರ್ಯಕರವಾದ ಉತ್ತರವನ್ನು ಕೊಟ್ಟಿತು.