ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೮೭. ಯಾವುದು ಬಲ?
ಉತ್ತರ- ಧೈರ್ಯ.
ಒಬ್ಬ ವ್ಯಕ್ತಿಗೆ ಬಲವನ್ನು ಅಥವಾ ಶಕ್ತಿ ಸಾಮರ್ಥ್ಯವನ್ನು ಕೊಡುವ ಅಂತಹ ನಿಜವಾದ ಬಲ ಯಾವುದು? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಆದ್ದರಿಂದ ಧೈರ್ಯವೆಂಬುದು ಹೇಗೆ ಬಲವಾಗುತ್ತದೆ? ಎಂಬುದನ್ನು ವಿಚಾರಿಸಬೇಕಾಗಿದೆ. ಧೈರ್ಯ ಎಂಬ ಶಬ್ದಕ್ಕೆ ಬಲಯುತ, ಧೀರ ಎಂಬುದಾಗಿ ಶಬ್ದರತ್ನಾವಲಿ ಎಂಬ ಶಬ್ದಕೋಷ ಈ ಅರ್ಥವನ್ನು ಕೊಡುತ್ತದೆ. ಧಿಯಂ ರಾತಿ - ಧೀರಃ ಅಂದರೆ ಪಂಡಿತ ಎಂದರ್ಥ. ಅವನಲ್ಲಿರುವ ಭಾವಕ್ಕೆ ಧೈರ್ಯವೆಂದು ಹೆಸರು. ಯಾವುದು ಇದ್ದರೆ ಮನುಷ್ಯನಿಗೆ ನಿಜವಾಗಿ ಬಲ ಬರುತ್ತದೆ ಎಂಬುದು ಪ್ರಶ್ನೆಯ ಆಶಯವಾಗಿದೆ. ಧೈರ್ಯ ಒಂದಿದ್ದರೆ ಎಲ್ಲಾ ಬಲವೂ ಇದ್ದಂತೆಯೇ ಎಂಬುದು ಈ ಉತ್ತರದ ಆಶಯ. ಆದ್ದರಿಂದ ಧೈರ್ಯವನ್ನೇ ಇಲ್ಲಿ ಬಲ ಎಂಬುದಾಗಿ ಹೇಳಲಾಗಿದೆ. ಹಾಗಾದರೆ ಧೈರ್ಯವು ಹೇಗೆ ಬಲವಾಗುತ್ತದೆ? ಧೈರ್ಯ ಎಂದರೇನು? ಮುಂದಾದ ಅನೇಕ ವಿಷಯಗಳನ್ನು ಚಿಂತಿಸೋಣ. “ಶೋಭಾ ವಿಲಾಸೋ ಮಾಧುರ್ಯಂ ಗಾಮ್ಭೀರ್ಯಂ ಧೈರ್ಯತೇಜಸೀ । ಲಲಿತೌದಾರ್ಯಮಿತ್ಯಷ್ಟೌ ಸತ್ತ್ವಜಾಃ ಪುರುಷಾ ಗುಣಾಃ ॥” ಧೈರ್ಯ ಎಂಬುದು ಅತ್ಯಂತ ಶ್ರೇಷ್ಠವಾದ ಗುಣ. ಧೀರನಲ್ಲಿ ಇರಬೇಕಾದ ಉತ್ಕೃಷ್ಟವಾದ ಗುಣ. ಒಬ್ಬ ಧೀರನಲ್ಲಿ ಒಟ್ಟು ಎಂಟು ಉದಾತ್ತ ಗುಣಗಳು ಇರುತ್ತವೆ. ಅವುಗಳಲ್ಲಿ ಧೈರ್ಯವೂ ಒಂದು.
ಈ ಗುಣವು ಸತ್ತ್ವಗುಣದ ಪರಿಣಾಮವಾಗಿ ಬರುವಂತದ್ದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಮೂರು ಬಗೆಯ ಧೃತಿಯ ಅಥವಾ ಧೈರ್ಯದ ವಿವರಣೆಯನ್ನು ಹೀಗೆ ಕೊಡುತ್ತಾನೆ. ಧೃತಿಯು ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬುದಾಗಿ ಮೂರು ವಿಧವಾಗಿ ವಿಂಗಡಿಸಿ, ಅದರಲ್ಲಿ ಶ್ರೇಷ್ಠವಾದ ಧೃತಿ ಸಾತ್ವಿಕವಾದದ್ದು. ಯಾವ ಅವ್ಯಭಿಚಾರಿಯಾದ ಧೃತಿಯು ಅಥವಾ ಧೈರ್ಯವು ಮನುಷ್ಯನ ಜ್ಞಾನಯೋಗದಿಂದ ಮನಸ್ಸು, ಪ್ರಾಣ, ಇಂದ್ರಿಯ ಮತ್ತು ಅವುಗಳ ಕ್ರಿಯೆಗಳನ್ನು ತಡೆಯಲು ಸಾಧ್ಯವೋ ಅಂತಹ ಧೃತಿಯನ್ನು ಸಾತ್ತ್ವಿಕ ಧೃತಿಯೆಂದು ಕರೆಯಲಾಗಿದೆ. ಯಾವನು ಧರ್ಮ, ಅರ್ಥ ಮತ್ತು ಕಾಮಗಳನ್ನು ಫಲಾಪೇಕ್ಷಯಿಂದ ಪಡೆಯಲು ಯಾವ ಧಾರಣೆಯನ್ನು ಮಾಡುತ್ತಾನೋ, ಅದಕ್ಕೆ ರಾಜಸಿಕ ಧೃತಿ ಎಂಬುದಾಗಿ ಮತ್ತು ಯಾವ ಧೃತಿಯಿಂದ ನಿದ್ದೆ, ಭಯ, ಚಿಂತೆ, ದುಃಖ ಮತ್ತು ಮದವು ಬಿಡುವುದಿಲ್ಲವೋ, ಅಂತಹ ಧೃತಿಯನ್ನು ತಾಮಸಿಕ ಧೃತಿ ಎಂಬುದಾಗಿ ಕರೆಯಲಾಗಿದೆ. ಈ ಮೂರು ಬಗೆಯ ಧೃತಿಗಳಲ್ಲಿ ಸಾತ್ತ್ವಿಕವಾದ ಧೃತಿಯು ಶ್ರೇಷ್ಠವಾದದ್ದು. ಅದರಿಂದಲೇ ಅವನು ಧೀರ ಎಂಬುದಾಗಿ ಕರೆಸಿಕೊಳ್ಳುತ್ತಾನೆ. ಅದರಿಂದಲೇ ಅವನು ಬುದ್ಧಿಯುಳ್ಳವನು ಬುದ್ಧಿವಂತ, ಧೀಮಂತ, ಬುಧ ಇತ್ಯಾದಿಯಾಗಿ ಕರೆಸಿಕೊಳ್ಳುತ್ತಾನೆ. ಅಂದರೆ ಒಬ್ಬ ವ್ಯಕ್ತಿಯ ಬುದ್ಧಿಯು ಸಮರ್ಪಕವಾಗಿ ಕಾರ್ಯ ಮಾಡಬೇಕಾದರೆ ಅದು ಸಾತ್ವಿಕ ಗುಣಯುತವಾದ ಧೈರ್ಯದಿಂದ ಮಾತ್ರ ಸಾಧ್ಯ. ಆದ್ದರಿಂದ ಅದೇ ಅವನಿಗೆ ಬಲ ಎಂಬುದಾಗಿ ಹೇಳಲಾಗಿದೆ.