ಲೇಖಕರು: ಡಾ. ರಾಮಮೂರ್ತಿ ಟಿ.ವಿ.
(ಪ್ರತಿಕ್ರಿಯಿಸಿರಿ lekhana@ayvm.in)
ನಮ್ಮ ದೇಶದಾದ್ಯಂತ ವಾಲ್ಮೀಕಿ ಜಯಂತಿಯನ್ನು ಆಶ್ವಯುಜ ಮಾಸದ ಶುಕ್ಲಪಕ್ಷದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಕರ್ನಾಟಕವೂ ಸೇರಿ ಎಂಟು ರಾಜ್ಯಗಳಲ್ಲಿ ಜಯನ್ಯುತ್ಸವಕ್ಕಾಗಿ ಸಾರ್ವತ್ರಿಕ ರಜೆಯನ್ನು ದಿನಾಂಕ ೨೬- ೧೦-೨೦೨೬ರಂದು ಘೋಷಿಸಲಾಗಿದೆ. ಅದ್ಯಾತ್ಮರಾಮಾಯಣ ಆಧಾರಿತ ವಾಲ್ಮೀಕಿಮಹರ್ಷಿಗಳ ಪೂರ್ವವೃತ್ತಾಂತವು ಹೀಗಿದೆ: ಪೂರ್ವಕಾಲದಲ್ಲಿ ರತ್ನಾಕರನೆಂಬುವನು ಕುಟುಂಬಪಾಲನೆಗಾಗಿ ಕಾಡಿನಲ್ಲಿ ದರೋಡೆಕಾರನಾಗಿ ವಾಸಿಸುತ್ತಿದ್ದನು. ಒಮ್ಮೆ ರತ್ನಾಕರನು ಕಾಡಿನ ಹಾದಿಯಲ್ಲಿ ಕೆಲವು ಮಹರ್ಷಿಗಳು ಹೋಗುತ್ತಿದ್ದಾಗ, ಅವರ ಬಳಿಯಿದ್ದ ವಸ್ತುಗಳನ್ನು ದೋಚಲು ಬರುತ್ತಾನೆ. ಋಷಿಗಳು ಅವನಿಗೆ ಮಾರ್ಗದರ್ಶನ ಮಾಡಲು, ಅವನಲ್ಲೊಂದು ಪ್ರಶ್ನೆಯಿಡುತ್ತಾರೆ: "ಈ ಪಾಪಕಾರ್ಯಳನ್ನು ಯಾರಿಗಾಗಿ ಮಾಡುವಿಯೋ, ಅವರೇನಾದರೂ ನಿನ್ನ ಪಾಪದಹೊರೆಯನ್ನು ನಿನ್ನೊಂದಿಗೆ ಹೊತ್ತುಕೊಳ್ಳುವರೇ ?” ಉತ್ತರವನ್ನು ಕೇಳಿಕೊಂಡು ಬಾ ಎಂದು ನಿರ್ದೇಶಿಸುತ್ತಾರೆ.
ರತ್ನಾಕರನು ಮನೆಯಲ್ಲಿದ್ದ ತನ್ನವರನ್ನೆಲ್ಲಾ ಕೇಳಿದಾಗ , ಅವರು “ನಮ್ಮ ಪಾಲನೆ ನಿನ್ನ ಕರ್ತವ್ಯ ಆದರೆ ನೀನಿದಕ್ಕಾಗಿ ಮಾಡುವ ಪಾಪದ ಫಲ ನೀನೇ ಅನುಭವಿಸಬೇಕು, ನಾವಲ್ಲ.” ಎಂದೆನ್ನುತ್ತಾರೆ. ಆಗ ರತ್ನಾಕರನ ಮನಃಪರಿವರ್ತನೆಯಾಗಿ, ಋಷಿಗಳ ಬಳಿ ಬಂದು ತನ್ನ ತಪ್ಪನ್ನೊಪ್ಪಿಕೊಳ್ಳುತ್ತಾನೆ. ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುತ್ತಾನೆ. ಆಗ ಋಷಿಗಳು “ರಾಮ” ನಾಮದ ಉಪದೇಶ ಮಾಡಲು, ರತ್ನಾಕರನು ಹಿಂದಿನ ಪಾಪದಿಂದಾಗಿ “ರಾಮ” ನಾಮವನ್ನು ಉಚ್ಚರಿಸಲಾರನಾದನು. ಆಗ ಋಷಿಗಳು ಅವನಿಗೆ “ಮರಾ, ಮರಾ” ಎಂದು ಜಪಿಸಲು ತಿಳಿಸಲು, ರತ್ನಾಕರನು:“ಮರಾ… ಮರಾ…” ಎಂದು ಸತತವಾಗಿ ಜಪಿಸಲು, ಮುಂದೆ ಆ ಜಪವು “ರಾಮ… ರಾಮ” ವೆಂದಾಗಿ, ಪೂರ್ಣ ಅಂತರ್ಮುಖನಾಗಿ ಅವನ ಸುತ್ತಲೂ ಹುತ್ತ (ವಲ್ಮೀಕ) ಬೆಳೆಯಲಾರಂಬಿಸಿತು. ಬಹುಕಾಲಾನಂತರ ಋಷಿಗಳು ಆ ಮಾರ್ಗದಲ್ಲಿ ಬಂದು ರತ್ನಾಕರನನ್ನು ವಲ್ಮೀಕದಿಂದ ಹೊರತೆಗೆದಿದ್ದರಿಂದ, ಹಿಂದಿನ ರತ್ನಾಕರನು “ವಾಲ್ಮೀಕಿ” ಮಹರ್ಷಿಗಳಾಗುತ್ತಾರೆ. ವಾಲ್ಮೀಕಿರಾಮಾಯಣದಲ್ಲಿ ಮೇಲಿನ ಕಥೆಯ ಉಲ್ಲೇಖವಿಲ್ಲದಿದ್ದರೂ, ಅವರನ್ನು ತಪಸ್ಸು ಮತ್ತು ಸ್ವಾಧ್ಯಾಯದಲ್ಲಿ ನಿರತರಾಗಿರುವ,
ಶ್ರೇಷ್ಠವಾಕ್ಪಟುಗಳಾಗಿರುವ ಮುನಿಶ್ರೇಷ್ಠರೆಂದು ಪರಿಚಯಸಲ್ಪಡುತ್ತಾರೆ. ವಾಲ್ಮೀಕಿ ರಾಮಾಯಣದ ಬಾಲಕಾಂಡದ ಆಧಾರದ ಮೇಲೆ, ಪ್ರಸಕ್ತ ಅಯೋಧ್ಯೆಯಿಂದ ಸುಮಾರು ೧೫ ರಿಂದ ೨೦ ಕಿಲೋಮೀಟರ್ ದೂರದಲ್ಲಿರುವ ತಮಸಾ ನದಿಯ ( ಸ್ಥಳೀಯವಾಗಿ ತಮ್ಸಾ, ಟೋನ್ಸ್ ನದಿಯ ) ತೀರವನ್ನು ವಾಲ್ಮೀಕಿ ಮಹರ್ಷಿಗಳಿದ್ದ ಸ್ಥಳವೆನ್ನುತ್ತಾರೆ. ವಾಲ್ಮೀಕಿಗಳಿಗೆ ರಾಮಾಯಣಕಾವ್ಯ ರಚಿಸಲು ನಾರದಮುನಿಗಳು ಮತ್ತು ಬ್ರಹ್ಮದೇವರು ಮೂಲ ಪ್ರೇರಕರು. ಒಮ್ಮೆ ದೇವರ್ಷಿನಾರದರನ್ನು ವಾಲ್ಮೀಕಿಗಳು “ಈ ಲೋಕದಲ್ಲಿ ಗುಣವಂತನು, ಪರಾಕ್ರಮಶಾಲಿ, ಧರ್ಮಜ್ಞ, ಕೃತಜ್ಞ, ಸತ್ಯವಂತ ಮತ್ತು ದೃಢವ್ರತನಾದ, ಇತ್ಯಾದಿ ಹದಿನಾರು ಸದ್ಗುಣವುಳ್ಳ ಪುರುಷನು ಯಾರು?” ಎಂದು ಪ್ರಶ್ನಿಸಲು, ನಾರದರು “ಇಕ್ಷ್ವಾಕು ವಂಶದಲ್ಲಿ ಜನಿಸಿದ ರಾಮನೆಂಬ ಮಹಾಪುರುಷನು " ನೆಂದು ಉತ್ತರಿಸುತ್ತಾ, ರಾಮನ ಜೀವನವನ್ನು ಸಂಕ್ಷೀಪ್ತ ರಾಮಾಯಣವೆಂಬ ಶ್ಲೋಕಮಾಲಾ ರೂಪದಲ್ಲಿ ವಿವರಿಸುತ್ತಾರೆ.
ಶ್ರೇಷ್ಠವಾಕ್ಪಟುಗಳಾಗಿರುವ ಮುನಿಶ್ರೇಷ್ಠರೆಂದು ಪರಿಚಯಸಲ್ಪಡುತ್ತಾರೆ. ವಾಲ್ಮೀಕಿ ರಾಮಾಯಣದ ಬಾಲಕಾಂಡದ ಆಧಾರದ ಮೇಲೆ, ಪ್ರಸಕ್ತ ಅಯೋಧ್ಯೆಯಿಂದ ಸುಮಾರು ೧೫ ರಿಂದ ೨೦ ಕಿಲೋಮೀಟರ್ ದೂರದಲ್ಲಿರುವ ತಮಸಾ ನದಿಯ ( ಸ್ಥಳೀಯವಾಗಿ ತಮ್ಸಾ, ಟೋನ್ಸ್ ನದಿಯ ) ತೀರವನ್ನು ವಾಲ್ಮೀಕಿ ಮಹರ್ಷಿಗಳಿದ್ದ ಸ್ಥಳವೆನ್ನುತ್ತಾರೆ. ವಾಲ್ಮೀಕಿಗಳಿಗೆ ರಾಮಾಯಣಕಾವ್ಯ ರಚಿಸಲು ನಾರದಮುನಿಗಳು ಮತ್ತು ಬ್ರಹ್ಮದೇವರು ಮೂಲ ಪ್ರೇರಕರು. ಒಮ್ಮೆ ದೇವರ್ಷಿನಾರದರನ್ನು ವಾಲ್ಮೀಕಿಗಳು “ಈ ಲೋಕದಲ್ಲಿ ಗುಣವಂತನು, ಪರಾಕ್ರಮಶಾಲಿ, ಧರ್ಮಜ್ಞ, ಕೃತಜ್ಞ, ಸತ್ಯವಂತ ಮತ್ತು ದೃಢವ್ರತನಾದ, ಇತ್ಯಾದಿ ಹದಿನಾರು ಸದ್ಗುಣವುಳ್ಳ ಪುರುಷನು ಯಾರು?” ಎಂದು ಪ್ರಶ್ನಿಸಲು, ನಾರದರು “ಇಕ್ಷ್ವಾಕು ವಂಶದಲ್ಲಿ ಜನಿಸಿದ ರಾಮನೆಂಬ ಮಹಾಪುರುಷನು " ನೆಂದು ಉತ್ತರಿಸುತ್ತಾ, ರಾಮನ ಜೀವನವನ್ನು ಸಂಕ್ಷೀಪ್ತ ರಾಮಾಯಣವೆಂಬ ಶ್ಲೋಕಮಾಲಾ ರೂಪದಲ್ಲಿ ವಿವರಿಸುತ್ತಾರೆ.
ಒಮ್ಮೆ ತಮಸಾ ನದಿಯ ತೀರದಲ್ಲಿ ಕಾಮಮೋಹಿತವಾಗಿದ್ದ ಕ್ರೌಂಚಪಕ್ಷಿಗಳ ಜೋಡಿಯಲ್ಲಿ, ಗಂಡುಪಕ್ಷಿಯು ಬೇಡನಿಂದ ಕೊಲ್ಲಲ್ಪಟ್ಟಾಗ, ಶೋಕಮಗ್ನರಾದ ವಾಲ್ಮೀಕಿಗಳ ಬಾಹ್ಯ ಅರಿವೇಯಿಲ್ಲದೇ ೮ ಅಕ್ಷರಗಳುಳ್ಳ ೪ ಪಾದಗಳಿರುವ ಹೊಸ ಛಂದಸ್ಸಿನಲ್ಲಿ ಶ್ಲೋಕವೊಂದು ಅವರ ಬಾಯಿಂದ ಹೊರಹೊಮ್ಮುತ್ತದೆ. ಆ ಸಂದರ್ಭ, ಶ್ಲೋಕದ ಉದ್ಗಾರ ದೈವ ಪ್ರೇರಣೆಯಾದುದರಿಂದ , ಅಲ್ಲಿಗೆ ಬ್ರಹ್ಮದೇವರು ಆಗಮಿಸಿ ಮಹರ್ಷಿಗಳಿಗೆ "ಇದೆಲ್ಲವೂ ನನ್ನ ಪ್ರೇರಣೆಯಿಂದ ನಡೆದಿದೆ,
ಇಡೀ ರಾಮಾಯಣವನ್ನು ಇದೇ ಛಂದಸ್ಸಿನಲ್ಲಿ ಅಮರತ್ವವುಳ್ಳ ಮಹಾಕಾವ್ಯವಾಗಿ ರಚಿಸು. ಎಲ್ಲ ಘಟನೆಗಳು ನಿನ್ನ ಅಂತರ್ದೃಷ್ಟಿಗೆ ತಿಳಿಯುತ್ತದೆ" ಎಂದು ಆಶೀರ್ವದಿಸಿ ಬ್ರಹ್ಮದೇವರು ಅಂತರ್ಧಾನರಾಗುತ್ತಾರೆ. ರಾಮನ ಬಾಹ್ಯ ಮತ್ತು ಅಂತರಂಗ ದರ್ಶನ: ಅಯೋಧ್ಯಾಕಾಂಡದಲ್ಲಿ ರಾಮ–ಸೀತೆ–ಲಕ್ಷ್ಮಣರು ವನವಾಸದ ಸಮಯದಲ್ಲಿ ವಾಲ್ಮೀಕಿಗಳ ಆಶ್ರಮಕ್ಕೆ ಬಂದು ಅವರಿಗೆ ಗೌರವ ಸಲ್ಲಿಸುವ ಘಟನೆ, ಉತ್ತರಕಾಂಡದಲ್ಲಿ ವಾಲ್ಮೀಕಿ ಮಹರ್ಷಿಗಳು ರಾಮನ ಸಭೆಗೆ, ಸೀತೆ , ಲವ -ಕುಶರ ಜೊತೆ ಬಂದು ಸೀತೆಯ ಪಾವಿತ್ರ್ಯಕ್ಕೆ ಸಾಕ್ಷಿ ನೀಡುವ ಘಟನೆ, ಮಹರ್ಷಿಗಳು ರಾಮನನ್ನು ನೇರವಾಗಿ ಭೇಟಿ ಮಾಡುವ ಸಂದರ್ಭಗಳು. ಉಳಿದೆಲ್ಲವೂ ಅವರಿಗೆ ರಾಮನಿರುವಾಗಲೇ ರಾಮಚರಿತ್ರೆಯು ಬ್ರಹ್ಮದೇವರ ಅನುಗ್ರಹದಿಂದ ಅಂತರ್ದೃಷ್ಟಿಗೆ ಗೋಚರವಾಗುತ್ತದೆ. ಇಂದಿಗೂ ಆ ಪುರುಷೋತ್ತಮನನ್ನು ಕಂಡು ಆನಂದಿಸಬಹುದೆನ್ನುವ ಅನೇಕ ಸಾಧುಸಂತರ ಅನುಭವದ ಮಾತುಗಳಲ್ಲಿ ಕನಕದಾಸರ ಅನುಭವದ ಕೃತಿ ಹೀಗೆ ಹೇಳುತ್ತದೆ: "ಇಷ್ಟು ದಿನ ಈ ವೈಕುಂಠ, ಎಷ್ಟು ದೂರವೋ ಎನ್ನುತಲಿದ್ದೆ, ದೃಷ್ಟಿಯಿಂದಲಿ ನಾನು ಕಂಡೆ ,ಸೃಷ್ಟಿಗೀಶನೇ ಶ್ರೀರಂಗಶಾಯಿ". ವಾಲ್ಮೀಕಿ ಮಹರ್ಷಿಗಳಿಗಿಂತ ಮುಂಚೆಯೇ ಪ್ರಾಚೀನ ವೇದಗಳಲ್ಲಿ ಛಂದೋಬದ್ಧ ಕಾವ್ಯವಿದೆ. ಶ್ರೀರಂಗಮಹಾಗುರುಗಳ ವಾಣಿಯನ್ನು ಸ್ಮರಿಸೋಣ. “ಭುವಿಯನ್ನು ದಿವಿಯೊಡನೆ ಸೇರಿಸುವ ಗ್ರಂಥ ರಾಮಾಯಣ. ನವರಸನಾಯಕನಾದ ರಾಮನನ್ನು ನಾಯಕನನ್ನಾಗಿ ಹೊಂದಿರುವ ಅದಿಕಾವ್ಯ ರಾಮಾಯಣ”. ದೈವಿಕ ಆಧಾರಿತವಾಗಿಯೂ, ವ್ಯವಸ್ಥಿತಪಾತ್ರವರ್ಗದಿಂದ ಕೂಡಿರುವ, ನವರಸಗಳ ಸಮ್ಮಿಶ್ರವಾಗಿಯೂ, ೨೪೦೦೦ ಶ್ಲೋಕಗಳುಳ್ಳ, ಮಹಾಕಾವ್ಯ ರಚಿಸಿದಂತೆ ವಾಲ್ಮೀಕಿ ಮಹರ್ಷಿಗಳಿಗಿಂತ ಮುಂಚೆ ಯಾರೂ ಇರಲಿಲ್ಲ. ಅದರಿಂದಾಗಿ ಅವರು ಅದಿಕವಿಯಾದವರು. ”ಶ್ಲೋಕಗಳ ಸಾರದಿಂದ ತುಂಬಿರುವ, ಸರ್ಗಗಳೆಂಬ ಅಲೆಗಳಿಂದ ಕಿಕ್ಕಿರಿದಿರುವ, ಕಾಂಡಗಳೆಂಬ ಮಹಾಮೀನುಗಳನ್ನು ಒಳಗೊಂಡಿರುವ ರಾಮಾಯಣವೆಂಬ ಮಹಾಸಾಗರಕ್ಕೆ ನಾನು ನಮಸ್ಕರಿಸುತ್ತೇನೆ.” ಇದು ಅಸಂಖ್ಯಾತ ಭಾರತೀಯರ ನಿತ್ಯ ಪಾರಾಯಣದ ಪ್ರಾರ್ಥನಾಶ್ಲೋಕವೊಂದರ ಭಾವಾರ್ಥವಾಗಿದೆ. ಇಂತಹ ಪುಣ್ಯಮಯ ಕಾವ್ಯವು “ಸರ್ವ ಪಾಪಗಳನ್ನು ನಾಶಮಾಡುವ ರಾಮಾಯಣವನ್ನು ಯಾರು ಶ್ರವಣ ಮಾಡುವರೋ ಅಥವಾ ಇತರರಿಗೆ ಶ್ರವಣ ಮಾಡಿಸುವರೋ, ಅವರು ಪರಮಗತಿಯನ್ನು ಹೊಂದುವರು ” ಎಂದು ವಾಲ್ಮೀಕಿಗಳೇ ಫಲಶ್ರುತಿಯನ್ನು ಹೇಳುತ್ತಾರೆ. ಇಂತಹ ಅದಿಕವಿಗಳನ್ನು ಶ್ರೀರಾಮಚಂದ್ರನ ಅನನ್ಯ ಭಕ್ತಿಗಾಗಿ ಪ್ರಾರ್ಥಿಸೋಣ.
ಸೂಚನೆ : 24/10/2026 ರಂದು ಈ ಲೇಖನವು ವಿಜಯ ಕರ್ನಾಟಕದ ಬೋಧಿ ವೃಕ್ಷದ ಪತ್ರಿಕೆಯಲ್ಲಿ ಪ್ರಕಟವಾಗಿದೆ.