ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಭೀಷ್ಮರನ್ನು ಮೂದಲಿಸುತ್ತಾ ಶಿಶುಪಾಲನು ತನ್ನ ಮಾತನ್ನು ಮುಂದುವರಿಸಿದ: ಎಲೈ ಭೀಷ್ಮನೇ, ನೀನೂ ಆ ಹಂಸದಂತೆ. ಈ ರಾಜರುಗಳೆಲ್ಲ ಸೇರಿ ಕ್ರೋಧದಿಂದ ನಿನ್ನನ್ನು ಕೊಂದುಹಾಕುವರೇ ಸರಿ - ಆ ಹಂಸವನ್ನು ಇತರ ಪಕ್ಷಿಗಳು ಕೊಂದಂತೆ.
ಇಂತಹ ಸಂದರ್ಭಕ್ಕೆ ಅನ್ವಯಿಸುವಂತೆ ಗಾಥೆಯೊಂದನ್ನು ಹಾಡುವರು, ಪುರಾಣಜ್ಞರು. ಅದನ್ನೀಗ ಹೇಳುತ್ತೇನೆ ನಿನಗಾಗಿ, ಭೀಷ್ಮನೇ. ಅದು ಹೀಗಿದೆ - ಎಲೈ ಹಂಸವೇ! ನಿನ್ನ ಅಂತರಾತ್ಮವು ದೋಷಭರಿತವಾಗಿದೆ. ಆದರೆ ನೀನೇನೋ ಧರ್ಮೋಪದೇಶವನ್ನು ದೊಡ್ಡದಾಗಿ ಹೇಳುತ್ತೀಯೆ. ನೀ ಮಾಡುತ್ತಿರುವ ಅಂಡಭಕ್ಷಣ-ಕಾರ್ಯವು, ಎಂದರೆ ಮೊಟ್ಟೆಗಳನ್ನು ತಿನ್ನುವ ಕೆಲಸವು ನಿನ್ನ ಮಾತಿಗೆ ಸರ್ವಥಾ ವಿರುದ್ಧವಾಗಿದೆ! ಗೊತ್ತಾಯಿತೇ?
ಅದಿರಲಿ. ಮಹಾಬಲಶಾಲಿಯಾದ ಜರಾಸಂಧನು ನನಗೆ ಬಹಳವೇ ಆದರಕ್ಕೆ ಪಾತ್ರನಾದವನು. ಆತನು ಕೃಷ್ಣನೊಡನೆ ಯುದ್ಧ ಮಾಡಲಿಲ್ಲ - ಏಕೆಂದರೆ ಕೃಷ್ಣನನ್ನು ಆತನು ದಾಸನೆಂದೇ ಬಗೆದಿದ್ದ!
ಜರಾಸಂಧಪ್ರಸಂಗದಲ್ಲಿ ಕೇಶವನು ಮಾಡಿದ ಕರ್ಮವನ್ನಾಗಲಿ, ಭೀಮಾರ್ಜುನರು ಮಾಡಿದುದನ್ನಾಗಲಿ ಸಾಧುವೆಂದು ಯಾರು ತಾನೆ ಒಪ್ಪಿಯಾರು? ಬಾಗಿಲಲ್ಲದೆಡೆಯಿಂದ ಅವರು ಪ್ರವೇಶಮಾಡಿದುದು, ಅದೂ ಛದ್ಮವೇಷದಿಂದ ಮಾಡಿದುದು; ತನ್ನನ್ನು ಬ್ರಾಹ್ಮಣನೆಂಬುದಾಗಿ ತೋರ್ಪಡಿಸಿಕೊಂಡದ್ದು - ಇವುಗಳೆಲ್ಲದರಿಂದಲೂ ಜರಾಸಂಧನ ಪ್ರಭಾವವು ಎಂತಹುದೆಂಬುದು ಕೃಷ್ಣನಿಗೆ ಗೋಚರವಾಗಿರುತ್ತದೆಯೆಂದೇ.
ಜರಾಸಂಧನು ಧರ್ಮಾತ್ಮ; ಬ್ರಾಹ್ಮಣರಿಗೆ ಯೋಗ್ಯವಾದ ಪಾದ್ಯಾದಿಗಳನ್ನು ಮುಂದಿಟ್ಟುಕೊಂಡು ದುರಾತ್ಮನಾದ ಕೃಷ್ಣನಲ್ಲಿಗೆ ಬಂದನಷ್ಟೆ? ಏಕೆ? ಇವರು ಬ್ರಾಹ್ಮಣರಲ್ಲವೆಂದು ತಿಳಿಯದಿದ್ದರಿಂದ. ಎಂದೇ ಕೃಷ್ಣನೂ ಅದನ್ನು ಸ್ವೀಕರಿಸಬಯಸಲಿಲ್ಲ. ಜರಾಸಂಧನು ಅವರಿಗೆ "ಭೋಜನ ಮಾಡೋಣವಾಗಲಿ" ಎಂದು ಕೃಷ್ಣ-ಭೀಮ-ಧನಂಜಯರಿಗೆ ಹೇಳಿದ. ಆದರೆ ಕೃಷ್ಣನು ಅದನ್ನು ವಿಕಾರಮಾಡಿದ, ಎಂದರೆ ಭೋಜನವು ನಡೆಯದಂತೆ ನಡೆದುಕೊಂಡ.
ಮೂರ್ಖ ಭೀಷ್ಮ, ಈ ಕೃಷ್ಣನೇ ಜಗತ್ಕರ್ತಾ ಎಂದೆಲ್ಲ ಭಾವಿಸುವೆಯೆಲ್ಲಾ, ಈತನಾದರೂ ಏತಕ್ಕಾಗಿ ಹಾಗಾದರೆ ತನ್ನನ್ನೇ ಬ್ರಾಹ್ಮಣನೆಂಬುದಾಗಿ ಭಾವಿಸಿಕೊಳ್ಳುವುದಿಲ್ಲ?
ನನಗೆ ಆಶ್ಚರ್ಯವೆಂದು ತೋರುವುದು ಇದು; ಏನೆಂದರೆ ಸಜ್ಜನರ ಮಾರ್ಗದಿಂದ ಪಾಂಡವರನ್ನು ನೀನು ಅಪಕರ್ಷಿಸಿದ್ದೀಯೆ, ಎಂದರೆ ದೂರ ಸೆಳೆದಿದ್ದೀಯೆ; ಮತ್ತು ಅವರಾದರೂ ಅದನ್ನು ಒಳ್ಳೆಯದೆಂದೇ ಭಾವಿಸುತ್ತಾರೆ ಕೂಡ! ಅಥವಾ, ಇನ್ನೊಂದು ದೃಷ್ಟಿಯಿಂದ ಹೇಳುವುದಾದರೆ, ಇದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ಅವರ ಪಾಲಿಗೆ ನೀನು ಒಬ್ಬ ಹೆಂಗಸಿನ ಹಾಗಿರತಕ್ಕವನು; ಹಾಗೂ ಮುದುಕನ ಹಾಗೆ; ಅವರೆಲ್ಲ ಕಾರ್ಯಗಳಿಗೆ ಮಾರ್ಗದರ್ಶಕನೇ ನೀನು!
ಅವನ ಆ ಮಾತನ್ನು ಕೇಳಿದ, ಭೀಮ. ರೂಕ್ಷವಾದ ಭಾವದ ಮಾತುಗಳು, ಅದರ ಅಕ್ಷರಗಳೂ ರೂಕ್ಷವೇ. ಭೀಮನೋ ಪ್ರತಾಪಶಾಲಿ, ಬಲಶಾಲಿಗಳಲ್ಲಿ ಶ್ರೇಷ್ಠನಾದವನು. ಆತನಿಗೆ ಸಿಟ್ಟು ಬಂದಿತು. ಆಗ ಭೀಮನ ಕಣ್ಣುಗಳನ್ನು ನೋಡಬೇಕು! ಮೊದಲೇ ಕಮಲದ ಸೊಬಗನ್ನು ಹೊಂದಿದ್ದ ನೇತ್ರಗಳು! ಸ್ವಭಾವತಃ ಆಯತವೂ ಆಗಿದ್ದವು. ಈಗಂತೂ ಕೋಪದಿಂದ ಇನ್ನೂ ಅರಳಿವೆ. ಈಗ ಮತ್ತೆ ಕ್ರೋಧದಿಂದಾಗಿ ಕೆಂಪಡರಿದ್ದವು; ಈಗಂತೂ ರಕ್ತವೇ ಅವಲ್ಲಿ ತುಂಬಿತ್ತು! ಎಲ್ಲ ರಾಜರಿಗೂ ಕಾಣಿಸಿದ್ದೇನು? ಆತನು ಹುಬ್ಬುಗಂಟಿಕ್ಕಿರುವುದು, ಆತನ ಹಣೆಯ ಮೇಲೆ ಮೂರು ಸಾಲುಗಳು - ತ್ರಿಕೂಟಪರ್ವತದ ಮೇಲೆ ಬರುವ ತ್ರಿಪಥಗಾಮಿನಿಯೆನಿಸುವ ಗಂಗೆಯ ಹಾಗೆ ಅದು ತೋರಿತು. ಕೋಪದಿಂದ ಹಲ್ಲುಗಳನ್ನು ಕಡಿಯುತ್ತಿದ್ದ ಆತನ ಮುಖವನ್ನು ಅವರು ಕಂಡರು. ಯುಗಾಂತಸಮಯದಲ್ಲಿ, ಎಂದರೆ ಪ್ರಳಯಕಾಲದಲ್ಲಿ, ಎಲ್ಲ ಜೀವಿಗಳನ್ನೂ ತಿಂದುಹಾಕಿಬಿಡುವ ಅಪೇಕ್ಷೆಯುಳ್ಳ ಕಾಲಪುರುಷನ ಹಾಗೆ ಕಂಡ, ಭೀಮ!
ಸೂಚನೆ : 18/10/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.