ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೮೬. ಯಾರು ತಾಯಿ?
ಉತ್ತರ- ಧೇನು.
ಯಾರು ತಾಯಿ? ಎಂಬ ಪ್ರಶ್ನೆಗೆ, ಯಾರು ನಮ್ಮ ಈ ಜನ್ಮಕ್ಕೆ ಕಾರಣೀಭೂತಳೋ ಅವಳು ಎಂಬ ಉತ್ತರ ಸಹಜವಾಗಿದೆ. ಈ ದೃಷ್ಟಿಯಿಂದ ಜನ್ಮಭೂಮಿಯನ್ನು ತಾಯಿ ಎಂಬುದಾಗಿ ಕರೆದಿರುವ ಸಂಪ್ರದಾಯ ನಮ್ಮದು. ಭೂತಾಯಿಯೋ ಅಥವಾ ನಮ್ಮ ಸ್ವಂತ ತಾಯಿಯೋ ಎಲ್ಲರಿಗೂ ತಾಯಿಯಾಗಲು ಸಾಧ್ಯವಿಲ್ಲ. ಯಾರಿಗೆ ಜನ್ಮವನ್ನು ಕೊಟ್ಟಿರುತ್ತಾಳೋ ಅವರಿಗೆ ತಾಯಿಯಾಗಬಹುದು ಆದರೆ ಇಲ್ಲಿ ಕೇಳುವ ಪ್ರಶ್ನೆ ‘ತಾಯಿ ಯಾರು? ‘ಎಂಬುದು. ತಾತ್ಪರ್ಯ ಎಲ್ಲರಿಗೂ ತಾಯಿ ಯಾರು? ಎಂಬುದಾಗಿ. ಮಾನವ ಕೋಟಿಗೆ ಮಾತ್ರವಲ್ಲದೆ ಇನ್ನು ಅನೇಕ ಜೀವಜಂತುಗಳಿಗೂ ತನ್ನ ಅಮೃತಪ್ರಾಯವಾದ ಜೀವಾತುವನ್ನು ಕೊಡುವವಳು ಯಾರೋ ಅವಳನ್ನು ‘ತಾಯಿ’ ಎಂಬುದಾಗಿ ಕರೆಯಬೇಕು. ಅಂದರೆ ಅಂತಹ ತಾಯಿ ಯಾರು? ಎಂಬುದು ಇಲ್ಲಿಯ ಪ್ರಶ್ನೆ. ಅದಕ್ಕೆ ಧೇನು ಅಥವಾ ಗೋವು ಎಂಬುದು ಉತ್ತರ.
ಗೋವು ತನ್ನ ಕರುವಿಗೆ ತಾಯಿ ಎಂಬುದು ನಿರ್ವಿವಾದ. ಅವಳು ಮಮತೆಯಿಂದ ಪ್ರೀತಿಯಿಂದ ತನ್ನ ಕರುವಿಗೆ ಹಾಲನ್ನು ಉಳಿಸಿ ಹೇಗೆ ಪೋಷಿಸುತ್ತಾಳೋ, ಅಂತೆಯೇ ಅವಳ ಹಾಲನ್ನು ಉಂಡು ಬೆಳೆಯುವ ಅನೇಕ ಜೀವಗಳಿವೆ. ಮಾನವ ಮಾತ್ರ ಗೋವಿನ ಹಾಲನ್ನು ಉಂಡು ಬೆಳೆಯುವ ಜೀವವಲ್ಲ. ನಾಯಿ, ಬೆಕ್ಕು ಮುಂತಾದ ಇನ್ನು ಅನೇಕ ಪ್ರಾಣಿಗಳು ಗೋವಿನ ಹಾಲನ್ನೇ ಬಳಸಿ ಬೆಳೆಯಬಹುದು ಎಂಬ ಸೃಷ್ಟಿಸಹಜವಾದ ನಡೆ ಅವುಗಳಲ್ಲಿ ಕಾಣಸಿಗುತ್ತದೆ. ಆದರೆ ಗೋವಿನ ಕರು ಆರಂಭದ ಮೂರು ನಾಲ್ಕು ತಿಂಗಳು ಆ ಹಾಲನ್ನೇ ಉಂಡು ಬದುಕುತ್ತದೆ ಮತ್ತು ಹಾಲಿನಲ್ಲಿರುವ ಅನೇಕ ಬ್ಯಾಕ್ಟೀರಿಯಾಗಳು ಅದನ್ನೇ ಬಳಸಿ ಬದುಕುತ್ತವೆ. ಉಳಿದವುಗಳಿಗೆ ಉಳಿದ ಆಹಾರಗಳ ಜೊತೆ ಹಾಲು ಪೋಷಕವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಹಾಲು ಜೀವನೋಪಯೋಗಿ ಎಂಬುದರಲ್ಲಿ ಸಂದೇಹವಿಲ್ಲ. ನಾವಿಲ್ಲಿ ಚಿಂತಿಸಬೇಕಾದ ವಿಷಯ ಇದರ ಜೊತೆಯಲ್ಲಿ ಇನ್ನೂ ಆಳವಾದದ್ದು.
ಮಾನವನ ಜೀವನ ಉಳಿದ ಜೀವಿಗಳಂತಲ್ಲ. ಇವನ ಜೀವನ ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಎಂಬ ಮೂರು ಸ್ತರದ ವ್ಯಾಪ್ತಿಯುಳ್ಳದ್ದು. ಈ ಮೂರು ಸ್ತರಗಳಲ್ಲಿ ಉಪಯೋಗವಾಗುವಂತಹ ಒಂದು ಶ್ರೇಷ್ಠವಾದ ಅಮೃತಪ್ರಾಯವಾದ ಪದಾರ್ಥವಿದ್ದರೆ ಅದು ಶುದ್ಧ ದೇಸೀ ಗೋವಿನ ಹಾಲು ಅಥವಾ ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆ, ತುಪ್ಪ. ಒಬ್ಬ ಯೋಗಿಯಾದವನು ಕೇವಲ ಹಾಲನ್ನು ಮಾತ್ರ ಕುಡಿದು ಜೀವಿಸಿದರೆ ಅವನ ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಜೀವನ ಸುಗಮವಾಗುತ್ತದೆ. ‘ಶಸ್ತಂ ಕ್ಷೀರಾಜ್ಯಭೋಜನಮ್’ ಹಾಲನ್ನು ಅಥವಾ ತುಪ್ಪವನ್ನು ಬಳಸಿ ತನ್ನ ಯೋಗಜೀವನವನ್ನು ಸುಗಮಗೊಳಿಸಿಕೊಳ್ಳಬೇಕು ಎಂಬ ಉಪದೇಶವನ್ನು ಯೋಗಶಾಸ್ತ್ರ ನೀಡುತ್ತದೆ. ಹಾಗಾಗಿ ಯೋಗಮಯ ಜೀವನವನ್ನು ನಡೆಸುವ ಪ್ರತಿವ್ಯಕ್ತಿಗೆ ಹಾಲಿಗಿಂತ ಉತ್ತಮವಾದ ಇನ್ನೊಂದು ಪದಾರ್ಥವಿಲ್ಲ ಎಂದು ಹೇಳಬಹುದು. ಹಾಲನ್ನು ಪೂರ್ಣ ಆಹಾರ ಎಂಬುದಾಗಿ ಆಯುರ್ವೇದ ಹೇಳುತ್ತದೆ. ಈ ಎಲ್ಲ ಹಿನ್ನೆಲೆಗಳಿಂದ ಯೋಚಿಸಿದಾಗ ಅಂತಹ ಜೀವಾತುವಾದ ಪದಾರ್ಥವನ್ನು ಬಾಲ್ಯದಿಂದ ಆರಂಭಿಸಿ ಮುಪ್ಪಿನವರೆಗೆ ಬಳಸಿ ಯೋಗಮಯ ಬಾಳಾಟವನ್ನು ನಡೆಸಲು ಪೂರಕವಾದ ಪದಾರ್ಥವನ್ನು ಅನುಗ್ರಹಿಸುವ ತಾಯಿ ಇದ್ದರೆ ಅದು ಧೇನು ಅಲ್ಲದೆ ಮತ್ತೇನು!.