ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಕೃಷ್ಣನಿಗೆ ಅಗ್ರಪೂಜೆಯೇ!? - ಎಂದು ಉದ್ಗಾ ರಮಾಡಿದ ಶಿಶುಪಾಲನು ಭೀಷ್ಮರ ಬಗ್ಗೆ ತನ್ನ ಅಧಿಕ್ಷೇಪದ ಮಾತುಗಳನ್ನು ಮುಂದುವರಿಸಿ ಹೇಳಿದ:
“ಭೀಷ್ಮ, ನೀನು ಅಪಹರಣಮಾಡಿಕೊಂಡು ಬಂದಿದ್ದ ಆ ಕಾಶಿರಾಜಪುತ್ರಿಯನ್ನು ನಿನ್ನ ಭ್ರಾತೃವಾದ ವಿಚಿತ್ರವೀರ್ಯನೇ ಇಷ್ಟಪಡಲಿಲ್ಲವಲ್ಲವೇ? ಅದಾದರೂ ಏಕೆ? ಆತನು ಸಜ್ಜನರ ಮಾರ್ಗವನ್ನು ಹಿಡಿದವನಾದ್ದರಿಂದ!
ಎಲ್ಲರೂ ನೋಡನೋಡುತ್ತಿದ್ದಂತೆಯೇ ಇಬ್ಬರು ವಿಧವೆಯರು ಮತ್ತೊಬ್ಬ ಪುರುಷನಿಂದ ಸಂತಾನವನ್ನು ಪಡೆದರೆಲ್ಲಾ – ಅದಾದದ್ದಾದರೂ ನಿನ್ನಿಂದಾಗಿಯೇ! ಇಷ್ಟಾಗಿಯೂ ಇನ್ನೂ ನಿನ್ನನ್ನು ನೀನು ಸಜ್ಜನರು ನಡೆದ ಹಾದಿಯಲ್ಲಿಯೇ ಇರುವವನು - ಎಂದುಕೊಂಡುಬಿಡುವೆಯಾ?!
ಎಲೈ ಭೀಷ್ಮನೇ, ನಿನಗಾವ ಧರ್ಮವಿದೆ? ನಿನ್ನ ಬ್ರಹ್ಮಚರ್ಯವೆಂಬುದೂ ವ್ಯರ್ಥವೇ ಸರಿ. ಏಕೆ? ಯಾವುದೋ ಮೋಹಕ್ಕೆ ಬಲಿಯಾಗಿ ಬ್ರಹ್ಮಚರ್ಯವನ್ನಿಟ್ಟುಕೊಂಡಿರುವೆ! ಅಥವಾ ಷಂಡತನದಿಂದಲೇ ಇರಬೇಕು - ಇದರಲ್ಲಿ ಸಂಶಯವಿಲ್ಲ.
ನಿನಗಿನ್ನಾವ ಏಳ್ಗೆಯನ್ನೂ ಎಲ್ಲೂ ಕಾಣೆ ಭೀಷ್ಮನೇ! ನನಗೆ ತೋರುವುದೆಂದರೆ ನೀನು ವೃದ್ಧಸೇವೆಯನ್ನೇ ಮಾಡಿಲ್ಲ, ಎಂದರೆ ಬಹುಶ್ರುತರ ಶುಶ್ರೂಷೆಯನ್ನೇ ನೆರವೇರಿಸಿಲ್ಲ: ಎಂದೇ ಹೀಗೆಲ್ಲಾ ಮಾತನಾಡುತ್ತಿದ್ದೀಯೇ.
ಯಜ್ಞಮಾಡುವುದು, ದಾನ ಮಾಡುವುದು, ಅಧ್ಯಯನ ಮಾಡುವುದು – ಇವೆಲ್ಲವೂ ಪುಣ್ಯಕಾರ್ಯಗಳೇ; ಆದರೂ ಸಂತಾನವನ್ನು ಪಡೆಯುವುದರ ಹದಿನಾರನೆಯ ಒಂದು ಭಾಗಕ್ಕೂ ಇವಾವುವೂ ಸಮನಾಗಲಾರವು. ವ್ರತಗಳು ಉಪವಾಸಗಳು - ಇವನ್ನು ಒಬ್ಬನು ಬಹುವಾಗಿ ಮಾಡಬಹುದು; ಆದರೆ ಯಾರು ಸಂತಾನವನ್ನು ಪಡೆದಿಲ್ಲವೋ ಅಂತಹವನಿಗೆ ಅವೆಲ್ಲವೂ ವ್ಯರ್ಥವೇ ಆಗುತ್ತದೆ – ತಿಳಿದುಕೋ, ಭೀಷ್ಮನೇ.
ಇದೋ ಹೀಗೆ ಮಕ್ಕಳಿಲ್ಲದವನೂ ಮುದುಕನೂ, ಸೋಗಿನ ಧರ್ಮವನ್ನು ಪಾಲಿಸುವವನೂ ಆದ ನೀನು, ಹಂಸದ ಹಾಗೆ: ಹಂಸವು ಹೇಗೆ ಜ್ಞಾತಿಗಳಿಂದಲೇ ಸಾವನ್ನು ಪಡೆಯಿತೋ ಹಾಗೆಯೇ ಜ್ಞಾತಿಗಳಿಂದಲೇ ಸಾವನ್ನು ಪಡೆಯುವವನು ನೀನು!
ಜ್ಞಾನಸಂಪನ್ನರಾದವರು ಹೇಳುತ್ತಿದ್ದ ಮಾತೊಂದನ್ನು ನಿನಗೆ ಹೇಳುತ್ತೇನೆ, ಕೇಳಿಸಿಕೋ. ಸಮುದ್ರವೊಂದರ ತೀರದಲ್ಲಿ ವಯಸ್ಸಾದ ಹಂಸವೊಂದು ವಾಸಿಸುತ್ತಿತ್ತು. ಅದು ಧರ್ಮದ ಮಾತುಗಳನ್ನಾಡುತ್ತಿತ್ತು. ಆದರೆ ಅದರ ಆಚರಣೆಯು ಮಾತ್ರ ಅದಕ್ಕೆ ವಿರುದ್ಧವಾಗಿಯೇ ಇರುತ್ತಿತ್ತು. ಪಕ್ಷಿಗಳಿಗೆ ಅದು ಉಪದೇಶ ಮಾಡುತ್ತಿತ್ತು. ಧರ್ಮಂ ಚರತ, ಮಾಧರ್ಮಂ - ಧರ್ಮವನ್ನು ಆಚರಿಸಿ, ಅಧರ್ಮವನ್ನಲ್ಲ - ಎಂಬುದಾಗಿ. ಅದರ ಮಾತುಗಳನ್ನು ಪಕ್ಷಿಗಳೆಲ್ಲವೂ ಆಲಿಸುತ್ತಿದ್ದವು, ಕೇಳಿಸಿಕೋ ಭೀಷ್ಮನೇ.
ಸಮುದ್ರಜಲದೊಳಗೆಲ್ಲಾ ಸಂಚರಿಸಿ ಇದಕ್ಕೆ ಭಕ್ಷ್ಯಗಳನ್ನು ತಂದುಕೊಡಲಾರಂಭಿಸಿದುವು, ಆ ಪಕ್ಷಿಗಳು. ಮತ್ತು ಹಾಗೆ ತಂದುಕೊಡುವುದನ್ನು ಧರ್ಮವೆಂದೇ ಭಾವಿಸಿದ್ದವು ಕೂಡ, ಅವು. ಅಷ್ಟೇ ಅಲ್ಲದೆ, ಆ ಹಂಸದ ಸಮೀಪದಲ್ಲಿಯೇ ತಮ್ಮ ಮೊಟ್ಟೆಗಳನ್ನಿಟ್ಟು ಹೋಗುತ್ತಿದ್ದುವು. ಆದರೆ ಆ ಪಾಪಿಯಾದ ಹಂಸವು ಆ ಮೊಟ್ಟೆಗಳನ್ನೆಲ್ಲಾ ತಿಂದುಹಾಕಿಬಿಡುತ್ತಿತ್ತು. ಆ ಪಕ್ಷಿಗಳು ಮೈಮರೆತಿದ್ದರೂ, ಈ ಹಂಸವು ಮಾತ್ರ ತನ್ನ ಸ್ವಕರ್ಮದ ವಿಷಯದಲ್ಲಿ ಜಾಗರೂಕತೆಯಿಂದಲೇ ಇದ್ದಿತು!
ಹೀಗಿರಲು, ಮೊಟ್ಟೆಗಳೆಲ್ಲಾ ಕಡಿಮೆಯಾಗಿಹೋಗುತ್ತಿರಲು, ಒಂದಾನೊಂದು ಪಕ್ಷಿಯು ಧೀಮಂತವಾಗಿದ್ದು ಸಂದೇಹಪಟ್ಟುಕೊಂಡಿತು, ಹಾಗೂ ಹಂಸದ ಆ ಕೃತ್ಯವನ್ನು ಕಂಡುಕೊಂಡುಬಿಟ್ಟಿತು! ಹಂಸದ ಈ ಪಾಪಕಾರ್ಯವನ್ನು ಉಳಿದ ಪಕ್ಷಿಗಳಿಗೆ ತಿಳಿಸಿತು.ಆಮೇಲೆ ಆ ಪಕ್ಷಿಗಳು ಹತ್ತಿರದಲ್ಲೇ ಮರೆಯಲ್ಲಿ ಉಳಿದುಕೊಂಡಿದ್ದು, ಹಂಸದ ದುಷ್ಕೃತ್ಯವನ್ನು ಪ್ರತ್ಯಕ್ಷವಾಗಿಯೇ ಕಂಡುಕೊಂಡವು: ಢೋಂಗೀಜೀವನದ ಆ ಹಂಸವನ್ನು ಕೊಂದುಹಾಕಿದವು!
ನಿನಗರ್ಥವಾಯಿತೇ, ಭೀಷ್ಮಾ?” - ಎಂದನು?
ಸೂಚನೆ : 11/10/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.