ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಉನ್ನತಶಿಕ್ಷಣಸಂಸ್ಥೆಯೊಂದರಲ್ಲಿ ಇತ್ತೀಚೆಗೆ ಘಟಿಸಿದ ಆತ್ಮಹತ್ಯಾಪ್ರಕರಣವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆಯಷ್ಟೆ? ಮಾಧ್ಯಮಗಳಲ್ಲಿ ಪರಿಶೀಲನೆ, ಸರ್ಕಾರದಿಂದ ತನಿಖೆಗಳೂ ಆ ಕುರಿತಾಗಿ ಆಗುತ್ತಿವೆ.
ಸಾಮಾನ್ಯವಾಗಿ ಉನ್ನತವ್ಯಾಸಂಗ/ಸಂಶೋಧನೆಗಳಿಗೆ ಬರತಕ್ಕವರು ಧೀಮಂತರೇ. ಆದರೆ ತಾವೋ ತಮ್ಮವರೋ ನಿರೀಕ್ಷಿಸಿದಷ್ಟು ಉತ್ತಮಾಂಕಗಳನ್ನು ಪಡೆಯಲಾಗದೆಯೋ, ತಮ್ಮ ವೈಯಕ್ತಿಕ-ಜೀವನದಲ್ಲಾದ ಮತ್ತಾವುದೋ ಅಸಾಫಲ್ಯವನ್ನು ಎದುರಿಸಲಾಗದೆಯೋ, ಆತ್ಮಹತ್ಯೆಗೆ ಶರಣಾಗಿಬಿಡುವವರುಂಟು! ಆತ್ಮಹತ್ಯೆಯೆಂಬುದು ಘಟಿಸಿದಾಗ ಅದನ್ನು ಮಾಡಿಕೊಂಡವರ ಜೀವನಕಥೆಯು ಮುಗಿಯಿತೆಂದಾದರೂ, ಅವರ ತಂದೆ-ತಾಯಿಗಳ/ ಆಶ್ರಿತಕುಟುಂಬದವರ/ಬಂಧುಮಿತ್ರರ/ಆಪ್ತೇಷ್ಟರ ಮನೋವ್ಯಥೆಗೆ ಕೊನೆಯೇ ಇರುವುದಿಲ್ಲವೇನೋ?
ಅಲ್ಲಿಗೆ, ಬುದ್ಧಿಶಕ್ತಿಯು ಹೆಚ್ಚಿದೆಯೆಂದ ಮಾತ್ರಕ್ಕೆ ಮನೋಬಲವೂ ಹೆಚ್ಚಾಗಿರುವುದೆನ್ನಲಾಗದಲ್ಲವೇ?
ಆತ್ಮಹತ್ಯೆಗೊಡ್ಡಿಕೊಳ್ಳುವವರು ಮಾನ-ಅವಮಾನಗಳನ್ನು ತಮ್ಮ ಶರೀರಕ್ಕೆ ಅಂಟಿಸಿಕೊಂಡುಬಿಡುವರು: “ಈ ಶರೀರವಿರುವ ತನಕ ಖೇದ/ಅವಮಾನಗಳು ತಪ್ಪಿದ್ದಲ್ಲ” – ಎಂಬ ಭಾವನೆ ಅವರಲ್ಲೂರಿರುತ್ತದೆ: ನೋವೇ ಬೇಡ, ಸಾವೇ ಮೇಲು - ಎಂಬ ಲೆಕ್ಕವವರದು!
ಅಲ್ಲಿಗೆ, ನಾವು ನಮ್ಮ ಶರೀರವನ್ನು ಹೇಗೆ ಕಾಣಬೇಕೆಂಬ ಪ್ರಶ್ನೆಯೇ ಪ್ರಧಾನವೆಂದಾಯಿತು. ಆತ್ಮಹತ್ಯಾ-ಪ್ರವೃತ್ತರಿಗೆ ಸಲಹೆಕೊಡುವುದೇನೋ ಇದೆ. ಆದರೆ ಮೂಲತಃ ಆ ತೆರನಾದ ಪ್ರವೃತ್ತಿಯೇ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಬೇಕಾದುದೇ ಮತ್ತೂ ಮುಖ್ಯವಲ್ಲವೇ? ಒಂದರ್ಥದಲ್ಲಿ, "ನನ್ನ ಮೈ-ನನ್ನಿಚ್ಛೆ" - ಎಂಬ ಚಿಂತನವುಳ್ಳವರೇ, ಅಥವಾ ಅದುಳ್ಳವರಿಂದ ಪ್ರಭಾವಿತರಾಗಿರುವವರೇ, ಇಂತಹ ಕುಕೃತ್ಯಗಳನ್ನೆಸಗುವುದೂ !
ಹಾಗಿದ್ದರೆ ಈ ಬಗ್ಗೆ ಯಾವ ನಿಲುವನ್ನು ಜ್ಞಾನಿಗಳಾದ ನಮ್ಮ ಪೂರ್ವಿಕರು ತಳೆದಿದ್ದರು?
ಇದಕ್ಕೆ, ನಮ್ಮ ಇತಿಹಾಸ-ಪುರಾಣಗಳಲ್ಲಿಯ ಸದೃಶ- ಪ್ರಸಂಗಗಳನ್ನು ಪರಿಶೀಲಿಸಬೇಕು. ಅದಕ್ಕಾಗಿ ಕಥಾಪ್ರಸಂಗದ ನಿರೂಪಣೆ-ವಿಮರ್ಶೆಗಳೆಂದರೆ, ಸಾಕಷ್ಟು ಸ್ಥಳಾವಕಾಶವೂ ಬೇಕಾಗುತ್ತದಷ್ಟೆ. ಬದಲಾಗಿ, ನೇರಾಗಿ ಶರೀರದ ಬಗ್ಗೆಯೇ ಅವರು ಹೇಳಿರುವ ಮಾತುಗಳನ್ನೇ ಗಮನಿಸುವುದು ಉಚಿತವಾದೀತು.
ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಭೀಷ್ಮಪಿತಾಮಹರ ನುಡಿಗಳು ಜೀವನಕ್ಕೇ ಮಾರ್ಗದರ್ಶಕ. ಅವಲ್ಲೊಂದು ಮಾತಿಗೆ ಶ್ರೀರಂಗಮಹಾಗುರುಗಳು ಒತ್ತುಕೊಟ್ಟಿರುವರು. ಅದೆಂದರೆ: “ತಿಳಿವಳಿಕೆಯುಳ್ಳವನು ತನ್ನ ಶರೀರವನ್ನು ಎಂದೂ ಕಡೆಗಾಣಿಸಕೂಡದು.”
ಅದು ಪವಿತ್ರವೆನ್ನುವುದಕ್ಕೆ ಭೀಷ್ಮರು ಕೊಡುವ ಕಾರಣಗಳು ಮೂರು. ಮತಿಮಂತರೂ ಮನಸ್ವಿಗಳೂ ಈ ಶರೀರವನ್ನೇ ಆಶ್ರಯಿಸಿರುವರು (ಯತ್ರಾಸತೇ ಮತಿಮಂತಃ) - ಎಂಬುದು ಮೊದಲನೆಯದು. ಶಕ್ರ-ವಿಷ್ಣು-ಸರಸ್ವತಿಯರು ಈ ದೇಹದಲ್ಲಿ ನೆಲೆಸಿರುವರು - ಎಂಬುದಿನ್ನೊಂದು. ಭೂತಕೋಟಿಗಳು ಇದನ್ನೇ ಆಶ್ರಯಿಸಿರುವುದು - ಎಂಬುದು ಮೂರನೆಯದು.
ಈ ಮಾತುಗಳೆಲ್ಲ ಅರ್ಥಗರ್ಭಿತವಾದವು: ಅವುಗಳಿಗೆ ಕಿಂಚಿತ್ತಾದ ವಿವರಣೆಯಾದರೂ ಬೇಕು.
ಮತಿಮಂತರೆಂದರೆ ಧೀಮಂತರು, ಮನಸ್ವಿಗಳೆಂದರೆ ದೃಢವಾದ ಚಿತ್ತವುಳ್ಳವರು. ಋಷಿಗಳೆಂದರೆ ಮೇಧೆ-ಮನೀಷೆಗಳನ್ನು ಹೊಂದಿರುವವರೇ ಸರಿ. ನಮ್ಮ ಜೀವನದ ಗುರಿಗಳೆಂದರೆ ನಾಲ್ಕೇ: ಧರ್ಮಾರ್ಥಕಾಮಮೋಕ್ಷಗಳು; ಅವೆಲ್ಲವನ್ನು ಕುರಿತಾದ ಶಾಸ್ತ್ರಗಳು ಬಂದಿರುವುದೂ ಇಂತಹ ಋಷಿಗಳಿಂದಲೇ. ಶರೀರವಿದ್ದುದರಿಂದಲೇ ಈ ದೊಡ್ಡ ಸಾಧನೆಗಳನ್ನು ಅವರು ಮಾಡಿರುವುದು; ಜೊತೆಗೆ ಅವರ ಗೋತ್ರ-ಸೂತ್ರಗಳನ್ನು ಹೇಳಿಕೊಳ್ಳುವೆವಾಗಿ ಅವರು ನಮ್ಮೊಳಗೇ, ಮೈಯೊಳಗೇ, ಉಂಟೆಂದೇ ಲೆಕ್ಕ. ಇದು ಮೊದಲನೆಯದು.
ಇದಲ್ಲದೆ, ಮಾನವಶರೀರವೆಂಬುದು ದೇವತೆಗಳ ನಿವಾಸಭೂಮಿ: ಮೂಲಾಧಾರದಿಂದ ಸಹಸ್ರಾರದವರೆಗೆ ನಾನಾದೇವತೆಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಸ್ಥಾನಗಳುಂಟು. ಎಲ್ಲರ ಹೃದಯದಲ್ಲೂ ಭಗವಂತನಿದ್ದೇ ಇರುವನಷ್ಟೆ?
ಮೂರನೆಯದಾಗಿ, ಜೀವನದ ಪರಮೋನ್ನತ-ಸಾಧನೆಯನ್ನು ಮಾಡಿದವನಿಗೆ, ಸಮಸ್ತ-ಜೀವಿಗಳೂ ತನ್ನಲ್ಲೇ ಇರುವುದರ ಅರಿವಾಗುವುದು - ಎಂಬ ತಾತ್ತ್ವಿದರ್ಶನವನ್ನು ಗೀತೆಯೂ ಮನುಸ್ಮೃತಿಯೂ ನಿರೂಪಿಸಿವೆ.
ಇವೆಲ್ಲ ಕಾರಣಗಳಿಗಾಗಿ, ಮಾನವಶರೀರವೆಂಬುದು ಇಚ್ಛೆಬಂದಂತೆ ಕೆಡಿಸಿಕೊಳ್ಳುವಂತಹುದಲ್ಲ - ಎಂಬುದೇ ಭೀಷ್ಮೋಕ್ತಿ-ಸಾರ.
ಇವೆಲ್ಲಕ್ಕಿಂತಲೂ ಮಿಗಿಲಾಗಿ, ಮನಮುಟ್ಟುವ ಉದಾಹರಣೆಯೊಂದನ್ನು ಶ್ರೀರಂಗಮಹಾಗುರುಗಳು ಕೊಟ್ಟಿರುವರು. ಮೋಕ್ಷವು ಬಿಡುಗಡೆಯಾದರೆ, ಶರೀರದೊಳಗೆ ಕಟ್ಟಿಹಾಕಲ್ಪಟ್ಟಿರುವುದೇ ಬಂಧನವಷ್ಟೆ.
ಅಪರಾಧಿಯನ್ನು ಜೈಲಿನಲ್ಲಿಡುವರು. ಮಾಡಿದ ತಪ್ಪಿಗೆ ಶಿಕ್ಷೆಯನ್ನನುಭವಿಸಿ ಹೊರಬರುವುದೇ ನ್ಯಾಯವಾದ ಮಾರ್ಗವಲ್ಲವೇ? ಅಲ್ಲೂ, ಒಳ್ಳೆಯ ನಡತೆಯಿಂದಾಗಿ ಶಿಕ್ಷೆಯು ಕಡಿಮೆಯಾಗಲೋ, ಶೀಘ್ರವಾಗಿಯೇ ಬಿಡುಗಡೆಹೊಂದಲೋ ಆಸ್ಪದವಿರುತ್ತದಷ್ಟೆ?
ಆದರೆ ಅದರ ಬದಲಾಗಿ, ಜೈಲಿನ ಕಡುಕಷ್ಟವು ಬೇಡವೆಂದು, ಅಲ್ಲಿಂದೇನಾದರೂ ತಪ್ಪಿಸಿಕೊಂಡು ಹೋಗಿಬಿಟ್ಟಲ್ಲಿ, ಕೊನೆಗೆ ಅದಕ್ಕಾಗಿ ಪ್ರಯತ್ನಪಟ್ಟರೂ ಸಹ, ಅಂತಹವರನ್ನು ಮತ್ತೆ ಹಿಡಿದುಹಾಕಿ ಇನ್ನೂ ಘೋರವಾದ ಶಿಕ್ಷೆಯನ್ನೇ ವಿಧಿಸುವರಲ್ಲವೇ? (ಆತ್ಮಹತ್ಯೆಯೆಸಗಿದವರು ಪ್ರೇತಾವಸ್ಥೆಯನ್ನು ಹೊಂದಿ ಮತ್ತೂ ಪಾಡುಪಡಬೇಕಾಗುತ್ತದೆ - ಎಂದೆಚ್ಚರಿಸುತ್ತವೆ, ಧರ್ಮಶಾಸ್ತ್ರಗಳು.)
ಹೀಗಾಗಿ, ಆತ್ಮಹತ್ಯೆಯೆಂಬುದು ಘೋರತರವಾದ/ಘೋರತಮವಾದ ದುಃಖಕ್ಕೇ ಹೆದ್ದಾರಿ!
ಆದುದರಿಂದ, ಅದೆಷ್ಟೇ ಕಷ್ಟಗಳು ಬರುತ್ತಿದ್ದರೂ, ಪವಿತ್ರವಾದ ಈ ಶರೀರವನ್ನು ಶ್ರೇಷ್ಠವಾದ ಕಾರ್ಯಗಳಲ್ಲಿ ತೊಡಗಿಸಿ ಹಿರಿದಾದ ಸಾಧನೆಗಳನ್ನು ಮಾಡಲು ಸರ್ವದಾ ಯತ್ನಿಸತಕ್ಕದ್ದು - ಎಂಬುದೇ ಇವೆಲ್ಲದರ ಪಾಠ.
ಯಾರೂ ಎಂದೂ ಮರೆಯಬಾರದ ಪಾಠವೂ ಇದು ಹೌದಲ್ಲವೇ?