Sunday, October 18, 2026

ಪ್ರಶ್ನೋತ್ತರ ರತ್ನಮಾಲಿಕೆ 89 (Prasnottara Ratnamalike 89)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೮೯. ಮೃತ್ಯು ಯಾವುದು? 

ಉತ್ತರ- ಸಮಾಧಾನ ಇಲ್ಲದಿರುವಿಕೆ.


ಮೃತ್ಯು ಎಂದರೆ ಮರಣ. ಮರಣವೆಂಬುದು ಹುಟ್ಟಿದವರೆಲ್ಲರಿಗೂ ಸಹಜವಾದದ್ದು. ಈ ಮರಣವನ್ನು ಕೆಲವೊಮ್ಮೆ ನಮಗೆ ಬೇಕಾದಂತೆ ಪರಿವರ್ತಿಸಿಕೊಳ್ಳಬಹುದು. ಅಂದರೆ ನಮ್ಮ ಜಾಗರೂಕತೆಯಿಂದ ಮರಣವನ್ನು ಮುಂದೂಡಬಹುದು. ಅಥವಾ ಅಜಾಗರೂಕತೆಯಿಂದ ಮರಣವನ್ನು ಬೇಗಲೇ ತಂದುಕೊಳ್ಳಬಹುದು.


ಹಾಗಾಗಿ ಮರಣವೆಂಬುದು ಪುರುಷಪ್ರಯತ್ನದ ಫಲ ಎಂಬುದಾಗಿ ಹೇಳುವುದುಂಟು. ಇದೇ ಅರ್ಥದಲ್ಲಿ 'ಶರಣರ ಜೀವನವನ್ನು ಮರಣದಲ್ಲಿ ಕಾಣು' ಎಂಬ ಗಾದೆಮಾತು ಬಂದಿದೆ. ಸಾರ್ಥಕ ಜೀವನದ ಶೈಲಿಯಿಂದ ಮರಣದಲ್ಲಿ ಸುಖವನ್ನು ಕಾಣಬಹುದು. ಅದಕ್ಕೇ 'ಅನಾಯಾಸೇನ ಮರಣಂ ದೇಹಿ' ಎಂದು ಭಗವಂತನಲ್ಲಿ ಬೇಡಿಕೊಳ್ಳುವ ಅಭ್ಯಾಸ ಬಂದಿದೆ.  ಬದುಕು ಬವಣೆಯಿಂದ ಕೂಡಿದ್ದರೆ ಮರಣದಲ್ಲಿ ಕಷ್ಟದ ಅನುಭವ ಕಾಣುತ್ತದೆ. ಹಾಗಾಗಿ ಸುಖ ಮರಣ ಅಥವಾ ಮತ್ತೆ ಜನನ ಬಾರದಂತೆ ಮರಣ ಬರಲು ಕರ್ಮಯೋಗವನ್ನು ಮಾಡಬೇಕು. ಯೋಗವೆಂದರೆ ಸಮಾಧಾನ ತಾನೇ!. ಕರ್ಮವನ್ನು ಯೋಗದಲ್ಲಿ ಪರ್ಯವಸಾನವಾಗುವಂತೆ ಮಾಡಿದ  ಪಕ್ಷೆ ಅದು ಮರಣವನ್ನು ಮುಂದು ಮಾಡಲು ಅನುಕೂಲಿಸುತ್ತದೆ. ಏನೇ ಆಗಲಿ ಮರಣವೆಂಬುದು ಪ್ರತಿಯೊಬ್ಬರಿಗೂ ಬರುವುದು ಸಹಜವಷ್ಟೇ. ಆದರೆ ಇಲ್ಲಿ ಕೇಳುವ ಪ್ರಶ್ನೆ ಮರಣವು ಯಾವುದು? ಎಂದರೆ ಮರಣಕ್ಕೆ ಕಾರಣ ಯಾವುದು? ಎಂಬುದು. ಅದಕ್ಕೆ ಉತ್ತರ ಸಮಾಧಾನ ಇಲ್ಲದಿರುವಿಕೆ ಎಂದು. ಸಮಾಧಾನತೆ ಇಲ್ಲದಿದ್ದರೆ ಮರಣವು ಬಹಳ ಬೇಗ ಬರುತ್ತದೆ ಎಂದರ್ಥ.


ಸಮಾಧಾನ, ಅವಧಾನ, ಏಕಾಗ್ರತೆ ಇವೆಲ್ಲವೂ ಪರ್ಯಾಯ ಪದಗಳು. ನಾವು ಮಾಡುವ ಪ್ರತಿಯೊಂದು ಕರ್ಮವನ್ನೂ ಅಥವಾ ಕಾರ್ಯವನ್ನು ಸಾವಧಾನತೆಯಿಂದ ಅಥವಾ ಸಮಾಧಾನತೆಯಿಂದ ಮಾಡಿದಾಗ ಆ ಕಾರ್ಯವು ಸಫಲವಾಗುತ್ತದೆ. ಹುಟ್ಟಿದ ಮೇಲೆ ಪ್ರತಿಯೊಬ್ಬನೂ ಒಂದಲ್ಲ ಒಂದು ಕಾರ್ಯವನ್ನು ಮಾಡುತ್ತಲೇ ಇರಬೇಕು. 'ನ ಹಿ ಕಚ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್' ಎಂದು ಕರ್ಮದ ಕುರಿತು ಹೇಳಲಾಗಿದೆ. ಅಂದರೆ ಮಾಡುವ ಕರ್ಮವನ್ನು ಹೇಗೆ ಮಾಡಬೇಕು? ಹೇಗೆ ಮಾಡಿದರೆ ಅದು ಮೃತ್ಯುವನ್ನು ದಾಟಿಸಬಹುದು? ಅಥವಾ ಮಾಡಬೇಕಾದ ಕರ್ಮವನ್ನು ಸರಿಯಾಗಿ ಮಾಡದಿದ್ದರೆ ಮೃತ್ಯು ಹೇಗೆ ಸನ್ನಿಹಿತವಾಗುವುದು? ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ. ನಾವು ಪರಿಪೂರ್ಣ ಜೀವನವನ್ನು ಮಾಡಬೇಕಾದರೆ ಅದು ಅತ್ಯಂತ ಜಾಗರೂಕತೆಯಿಂದ ಅಂದರೆ ಅತ್ಯಂತ ಸಾವಧಾನತೆಯಿಂದ ಮಾಡಬೇಕಾಗುತ್ತದೆ.


ಈ ಜೀವನವನ್ನೇ ಕತ್ತಿನ ಅಲಗು ಎಂಬುದಾಗಿಯೂ ಅಥವಾ ಪರ್ವತದ ಕಡಿದಾದ ದಾರಿಯಂತೆ ಎಂಬುದಾಗಿಯೂ ನಿರೂಪಿಸಿದ್ದುಂಟು. ದಾರಿಯಲ್ಲಿ ಸಾಗುವಾಗ ಎಚ್ಚರಿಕೆಯಿಂದ ಸಾಗಿದರೆ ಗುರಿ ನಿಶ್ಚಿತ. ಅದೇ ಎಚ್ಚರ ತಪ್ಪಿದರೆ ಪ್ರಪಾತ ಖಂಡಿತ. ಜೀವನವೆಂಬುದು ಅತ್ಯಂತ ಸೂಕ್ಷ್ಮವಾದುದು. ಅದನ್ನು ಸರಿಯಾಗಿ ಅರಿತು ಮಾಡಿದರೆ ಜೀವನ ನೆಮ್ಮದಿಯ ತಾಣವಾಗುವುದು. ಹಾಗಿಲ್ಲದಿದ್ದರೆ ಅದೇ ಜೀವನ ಮೃತ್ಯು ಸದೃಶವಾಗುವುದು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ :  18/10/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.