ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೯೦. ವಿಷ ಯಾವುದು ?
ಉತ್ತರ- ದುಷ್ಟ ಮನುಷ್ಯ.
ವಿಷ ಎಂದರೆ ನಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಒಂದು ಬಗೆಯ ದ್ರವ್ಯ - ದ್ರವವಿಶೇಷ. ಕಾಕೋಲ, ಕಾಲಕೂಟ, ಹಲಾಹಲ, ಸೌರಾಷ್ಟ್ರಿಕ, ಶೌಕ್ಲಿಕೇಯ, ಬ್ರಹ್ಮಪುತ್ರ, ಪ್ರದೀಪನ, ದಾರದ, ವತ್ಸನಾಭ ಎಂಬುದಾಗಿ ಒಂಬತ್ತು ಬಗೆಯ ವಿಷದ್ರವ್ಯವನ್ನು ಹೇಳಲಾಗಿದೆ.
ಈ ಎಲ್ಲಾ ಬಗೆಯ ವಿಷಪದಾರ್ಥಗಳು ಸೇವನೆಯಿಂದ ಅಪಾಯವನ್ನು ತಂದಿಡುತ್ತವೆ. ಇದು ಅತ್ಯಂತ ತಾಮಸಿಕವಾದ ಪದಾರ್ಥ. ಮನುಷ್ಯನಿಗೆ ಸರ್ವಥಾ ವರ್ಜ್ಯವಾದ ಪದಾರ್ಥ. ಯಾವುದೇ ಕಾರಣಕ್ಕೂ ಇದು ಬಯಸುವಂತಹದ್ದಲ್ಲ. ಪ್ರತಿಯೊಬ್ಬರೂ ಕೂಡ ವಿಷದಿಂದ ದೂರವಿರಬೇಕು ಎಂಬುದನ್ನೇ ಬಯಸುತ್ತಾರೆ. ಅಷ್ಟು ವಿಷಮ ಪರಿಣಾಮವನ್ನು ತಂದುಕೊಡುವ ಪದಾರ್ಥವೇ ವಿಷ. ವಿಷದ ಸೇವನೆಯಿಂದ ಶರೀರದ ಮರ್ಮಾಘಾತವು ಉಂಟಾಗುತ್ತದೆ. ಒಂದು ಬಗೆಯ ಮಾದಕ ದ್ರವ್ಯವೂ ಹೌದು. ಇದು ನಮ್ಮ ಶರೀರವನ್ನು ಹಾಳುಗೆಡುವುದರ ಮೂಲಕ ಮಾನಸಿಕವಾದ ಅಸ್ವಾಸ್ಥ್ಯವನ್ನು ನೀಡುವ ಭೌತಿಕವಾದ ದ್ರವ್ಯ. ಇಂತಹ ತಿರಸ್ಕೃತವಾದ, ಅತ್ಯಂತ ಹೇಯವಾದ ಪದಾರ್ಥವನ್ನು ದುಷ್ಟಮನುಷ್ಯರಿಗೆ ಹೋಲಿಸಿ ಈ ಪ್ರಶ್ನೋತ್ತರ ಸಾಗಿದೆ. ದುಷ್ಟಮನುಷ್ಯನು ನಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡುವ ವ್ಯಕ್ತಿ. ಆದ್ದರಿಂದ ದುಷ್ಟವ್ಯಕ್ತಿಯನ್ನು ವಿಷ ಎಂಬುದಾಗಿ ಪ್ರಶ್ನೋತ್ತರ ಸಾರುತ್ತಿದೆ. ಹಾಗಾಗಿ ದುಷ್ಟಮನುಷ್ಯ ಹೇಗೆ ನಮಗೆ ವಿಷವಾಗಿ ಪರಿಣಮಿಸುತ್ತಾನೆ? ಎಂಬುದನ್ನು ನಾವಿಲ್ಲಿ ಚಿಂತಿಸಬೇಕಾಗಿದೆ.
ದುಷ್ಟಮನುಷ್ಯ ಎಂದರೆ ಯಾರಲ್ಲಿ ದುಷ್ಟಪ್ರವೃತ್ತಿ - ದುಷ್ಟಚಿಂತನೆ ಇರುತ್ತದೆಯೋ ಅಂತಹ ವ್ಯಕ್ತಿ. ಈ ವ್ಯಕ್ತಿಯ ಸ್ವಭಾವ ಸದಾಕಾಲದಲ್ಲೂ ಮತ್ತೊಬ್ಬರಿಗೆ ಅಹಿತವನ್ನು ಉಂಟುಮಾಡುವಂಥದ್ದೇ ಆಗಿರುತ್ತದೆ. ಈ ಮನುಷ್ಯ ವಿಷದಷ್ಟೇ ಅಪಾಯಕಾರಿ. ವಿಷವು ಸೇವಿಸಿದರೆ ಮಾತ್ರ ಅಪಾಯಕಾರಿ. ಆದರೆ ಈ ದುಷ್ಟವ್ಯಕ್ತಿ ಬಳಿಯಲ್ಲಿದ್ದರೆ ಅಪಾಯ. ಅವನ ಸಾಂಗತ್ಯ ಒಂದು ವೇಳೆ ಆದರೆ ಅದು ವಿಷಕಿಂತಲೂ ಅಪಾಯಕಾರಿ. ಈ ದೃಷ್ಟಿಯಿಂದ ದುಷ್ಟಮನುಷ್ಯನು ವಿಷಕಿಂತಲೂ ಅಪಾಯ ಎನ್ನಲಾಗಿದೆ. ವಿಷವು ಶರೀರದ ಅಂಗಕ್ಕೆ ಮರ್ಮಕ್ಕೆ ಆಘಾತಕಾರಿ. ಆದರೆ ಈ ದುಷ್ಟಮನುಷ್ಯನು ಕೇವಲ ಶರೀರದ ಮರ್ಮಘಾತಕ ಮಾತ್ರ ಅಲ್ಲ, ಅವನು ಭಾವನಾಘಾತಕ, ವಂಚಕ, ವಿಶ್ವಾಸಘಾತಕ, ಮೋಸ ಮಾಡುವವ. ಈತ ತಮೋಗುಣದ ಅತ್ಯಂತ ಪರಮಾವಧಿಯ ಅತಿರೇಕದ ವಿಪರಿಣಾಮದ ಒಂದು ಸಮಷ್ಟಿಯ ಪ್ರತಿರೂಪ. ಆದ್ದರಿಂದ ಇಂತಹ ವ್ಯಕ್ತಿಯ ಸಂಗತಿ ಅಥವಾ ಆತನ ಸಂಪರ್ಕ ದೂರದಿಂದಲೋ ಹತ್ತಿರದಿಂದಲೂ ಮಾನಸಿಕವಾಗಿಯೋ ಶಾರೀರಕವಾಗಿಯೋ ಹೇಗಾದರೂ ಅದು ಅತ್ಯಂತ ಹೇಯವೇ. ಒಂದು ದೃಷ್ಟಿಯಿಂದ ಇದು ವಿಷಕಿಂತಲೂ ಅತ್ಯಂತ ಅಪಾಯ. ದುಷ್ಟ ವ್ಯಕ್ತಿಯನ್ನು ವಿಷದಂತೆ ದೂರ ಇಡುವುದು ಕ್ಷೇಮ. ದುಷ್ಟ ವ್ಯಕ್ತಿ ವಿದ್ಯಾವಂತನಾಗಿದ್ದರೂ ತ್ಯಜಿಸಲೇಬೇಕು. ಹಾವಿನ ಹೆಡೆಯ ಮೇಲೆ ಮಣಿ ಇದ್ದ ಮಾತ್ರಕ್ಕೆ ಅದು ವಿಷವನ್ನು ಕಾರದು ಎಂದು ಹೇಳಲು ಸಾಧ್ಯವಿಲ್ಲ. ವಿಷ ಒಮ್ಮೆ ಕೊಲ್ಲುತ್ತದೆ. ಆದರೆ ದುಷ್ಟ ಮತ್ತೆ ಮತ್ತೆ ಕೊಲ್ಲುತ್ತಾನೆ. ಇಂತಹ ಅನೇಕ ಸುಭಾಷಿತಗಳು ಇದರ ಜೊತೆಯಲ್ಲಿ ಅನುಸಂಧಾನಕ್ಕೆ ಯೋಗ್ಯವಾದವುಗಳು.