ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಶಿಶುಪಾಲನ ಕೃಷ್ಣನ ಸಾಧನೆಗಳನ್ನೆಲ್ಲಾ ಗೇಲಿಮಾಡುತ್ತಾ ಅವಹೇಳನ ಮಾಡುತ್ತಿರುವನು:
“ಚೈತನ್ಯವೇ ಇಲ್ಲದೆ ಗಾಡಿಯೊಂದು. ಅದನ್ನಿವನು ಕಾಲಿನಿಂದ ಬೀಳಿಸಿಬಿಟ್ಟರೇನಂತೆ? (ಇದು ಕೃಷ್ಣನಿಂದಾದ ಶಕಟಾಸುರವಧದ ಗೇಲಿ). ಎಕ್ಕದ ಗಿಡದೆತ್ತರದ ಅರ್ಜುನ-ವೃಕ್ಷಗಳನ್ನೋ ಹಾವೊಂದನ್ನೋ ಇವನ್ನು ಮೆಟ್ಟಿದನೆಂದರೆ ಅಲ್ಲಾದರೂ ಆಶ್ಚರ್ಯವೇನಿದೆ?
ಗೋವರ್ಧನವೆನ್ನುವುದೇನು? ಅದೊಂದು ಹುತ್ತದೆತ್ತರದ ಬೆಟ್ಟ. ಅದನ್ನವನು ಒಂದು ವಾರ ಎತ್ತಿದ್ದನೆಂದರೆ ಅದರಲ್ಲೇನೂ ಆಶ್ಚರ್ಯವಿಲ್ಲವೆಂದೇ ನನ್ನ ಅಭಿಪ್ರಾಯ. ಗೋವರ್ಧನಗಿರಿಯ ಶಿಖರದ ಮೇಲೆ ಆಟವಾಡುತ್ತಾ ಬಹುವಾಗಿ ಅನ್ನವನ್ನು ತಿಂದನಂತೆ. ಅದು ಇತರರಿಗೆ ಅಚ್ಚರಿ ತರಬಹುದು, ನನಗಲ್ಲ. ಬಲಶಾಲಿಯಾದ ಕಂಸನ ಅನ್ನವನ್ನೇ ತಿಂದು, ಆತನನ್ನೇ ಕೊಂದನೆಂಬುದು ಮಹಾದ್ಭುತವೆಂದೇನೂ ನನಗೆ ತೋರುವುದಿಲ್ಲ, ಧರ್ಮಜ್ಞನಾದ ಭೀಷ್ಮನೇ!
ಕುರುವಂಶದಲ್ಲೇ ಅಧಮನಾದ ಭೀಷ್ಮನೇ, ಧರ್ಮಜ್ಞನಲ್ಲದ ನಿನಗೆ ಈಗ ಯಾವ ಮಾತನ್ನು ಹೇಳಲಿದ್ದೇನೋ ಅದನ್ನು ನೀನು ಕಥನ ಮಾಡುವ ಸಂತರ ಬಾಯಿಂದ ಕೇಳಿಯೂ ಇರಲಾರೆ.
ಸ್ತ್ರೀಯರ ಮೇಲೆ ಶಸ್ತ್ರಪ್ರಹಾರ ಮಾಡತಕ್ಕದ್ದಲ್ಲ. ಹಾಗೆಯೇ ಗೋವುಗಳ ಮೇಲೆ, ಬ್ರಾಹ್ಮಣರ ಮೇಲೆ, ಯಾರ ಅನ್ನವನ್ನು ತಿಂದಿರುತ್ತೇವೆಯೋ ಅವರ ಮೇಲೆ, ಹಾಗೂ ಯಾರು ನಮಗೆ ಆಶ್ರಯವಿತ್ತಿರುತ್ತಾರೋ ಅವರ ಮೇಲೂ ಶಸ್ತ್ರಪ್ರಹಾರವು ಯುಕ್ತವಲ್ಲ. ಹೀಗೆಂಬುದಾಗಿ ಧರ್ಮಾತ್ಮರಾದ ಸಂತರು ಸಜ್ಜನರಿಗೆ ಅನುಶಾಸನ ಮಾಡುತ್ತಾರೆ. ಅದೆಲ್ಲವೂ ನಿನ್ನ ವಿಷಯದಲ್ಲಿ ವ್ಯರ್ಥವೆಂದೇ ತೋರುತ್ತದೆ. ಕೇಶವನು ಅದೇನೋ ಜ್ಞಾನವೃದ್ಧನೂ ವಯೋವೃದ್ಧನೂ ಆಗಿರುವನೆಂಬಂತೆ ಹೊಗಳುತ್ತಿರುವೆಯೆಲ್ಲಾ, ಕುರುವಂಶದ ಅಧಮನೇ, ನನಗೇನೂ ಗೊತ್ತಿಲ್ಲವೆಂದುಕೊಂಡೆಯೇನೋ!
ಈತನು ಗೋಘ್ನ ಮತ್ತು ಸ್ತ್ರೀಘ್ನ - ಎಂದರೆ ಗೋವನ್ನೂ ಸ್ತ್ರೀಯನ್ನೂ ಕೊಂದವನು. ನಿನ್ನ ಮಾತಿನ ಮೇರೆಗೆ ಇಂತಹವನು ಪೂಜಾರ್ಹನಾಗಿಬಿಡುವನೇ? ಹೀಗಿರುವ ಮತ್ತಾರು ತಾನೆ ಸ್ತುತ್ಯರ್ಹರಾದಾರು?
ಈತನು ಧೀಮಂತರಲ್ಲೆಲ್ಲಾ ಶ್ರೇಷ್ಠ, ಜಗತ್ತಿಗೇ ಪ್ರಭುವೀತ - ಎಂದೆಲ್ಲಾ ನೀನು ನಿನ್ನ ಮಾತುಗಳಿಂದ ಕೃಷ್ಣನನ್ನು ಸಂಭಾವಿಸುತ್ತಿದ್ದೀಯೆ. ಇದೆಲ್ಲವೂ ಸಹ ನಿಶ್ಚಯವಾಗಿಯೂ ಸುಳ್ಳೇ ಸರಿ.
ಸ್ತುತಿಕಾರನು ಅದೆಷ್ಟೇ ಗಾನ ಮಾಡಲಿ, ಅದು ಗಾತೃವನ್ನು, ಎಂದರೆ ಹಾಡುವವನಿಗೆ ತಿಳಿವಳಿಕೆಯನ್ನು ಕೊಡದು. ಪ್ರಾಣಿಗಳೆಲ್ಲವೂ ತಮ್ಮ ತಮ್ಮ ಪ್ರಕೃತಿಯನ್ನಷ್ಟೇ ಅನುಸರಿಸುವುದು – ಅದಾದರೂ ಭೂಲಿಂಗವೆಂಬ ಪಕ್ಷಿಯು ಹೇಗೋ ಹಾಗೆ - ತನ್ನನ್ನೇ ಆಪತ್ತಿಗೊಡ್ಡಿಕೊಳ್ಳುವುದು. ಭೀಷ್ಮನೇ, ನಿನ್ನ ಪ್ರಕೃತಿಯೇ ಅಧಮವಾದುದು, ಇದರಲ್ಲಿ ಸಂಶಯವೇ ಇಲ್ಲ. ಅದು ಅತ್ಯಂತ ಪಾಪಮಯವೂ ಹೌದು. ಪಾಂಡವರದ್ದೂ ಅಷ್ಟೇ. ಸಜ್ಜನರ ಮಾರ್ಗದಿಂದ ಪತಿತನಾಗಿಹೋಗಿರುವ, ಧರ್ಮಜ್ಞನೂ ಅಲ್ಲದ, ನೀನೇ ಕೃಷ್ಣನು ಅತ್ಯಂತ ಅರ್ಚನೀಯನೆಂದು ಹೇಳಿ ಯಾರಿಗೆ ಮಾರ್ಗದರ್ಶನ ಮಾಡುತ್ತಿದ್ದೀಯೋ ಅಂತಹ ನೀನು ಅದೆಂತು ಧರ್ಮವಂತ?
ತಾನು ಧರ್ಮದಲ್ಲಿರತಕ್ಕವನು, ಜ್ಞಾನಿಗಳಲ್ಲಿ ಶ್ರೇಷ್ಠನಾದವನು - ಎಂದು ಮುಂತಾಗಿ ಭಾವಿಸುವ ಅದಾವನು ತಾನೇ ಧರ್ಮದ ಮೇಲೆ ದೃಷ್ಟಿಯನ್ನಿಟ್ಟುಕೊಂಡೂ ನೀನು ಮಾಡಿದುದನ್ನು ಮಾಡಿಯಾನು, ಭೀಷ್ಮ?
ಭೀಷ್ಮನೇ, ನೀನು ಒಂದು ವೇಳೆ ಧರ್ಮಜ್ಞನೇ ಆಗಿದ್ದಲ್ಲಿ, ನಿನ್ನ ಮತಿಯೂ ಪ್ರಾಜ್ಞವೇ ಆಗಿದ್ದಲ್ಲಿ, ಅಂಬಾ ಎಂಬ ಕನ್ಯೆಯನ್ನು ಅಪಹರಿಸಿದೆಯೆಲ್ಲಾ, ಅವಳು ಅನ್ಯಕಾಮಳಾಗಿದ್ದರೂ, ಎಂದರೆ ಮತ್ತೊಬ್ಬನಲ್ಲಿ ಅನುರಕ್ತಳಾಗಿದ್ದರೂ, ಧರ್ಮಜ್ಞಳೂ ಆಗಿದ್ದರೂ ಸಹ ಅದೆಂತು ನೀ ಹಾಗೆ ಮಾಡಿದೆ?
ನೀನು ನಿನ್ನನ್ನೇ ಪ್ರಾಜ್ಞನೆಂದೂ ಭಾವಿಸಿಕೊಳ್ಳುವೆಯಾ? ನಿನಗೆ ಕ್ಷೇಮವಾಗಲಿ!