ಲೇಖಕರು: ಎಂ. ಆರ್. ಭಾಷ್ಯಮ್
ಪ್ರತಿಕ್ರಿಯಿಸಿರಿ (lekhana@ayvm.in)
ನಾವು ನಮ್ಮ ಪರಿಸರವನ್ನು ಗಮನಿಸುತ್ತಿರುತ್ತೇವೆ. ಮುಂಜಾವಿನಲ್ಲಿ ಸೂರ್ಯೋದಯ. ನಂತರ ಮಧ್ಯಾಹ್ನ ಸಂಜೆ, ರಾತ್ರಿಗಳು. ಮತ್ತೊಂದು ದಿನದ ಉದಯ. ಇದು ದೈನಿಕ ಚಕ್ರ. ಒಂದು ವರ್ಷ ತೆಗೆದುಕೊಂಡರೆ ವಸಂತ, ಬೇಸೆಗೆ, ವರ್ಷಾ, ಶರದ್, ಹೇಮಂತ, ಶಿಶಿರ ವೆಂಬ 6 ಋತುಗಳು. ಇನ್ನೊಂದು ವರ್ಷ, ಮತ್ತೊಂದು ಆವೃತ್ತ. ಚಂದ್ರಮನ ಕ್ಷಯ-ವೃದ್ಧಿಗಳು, ಸಮುದ್ರದ ಉಬ್ಬರ-ಇಳಿತಗಳು, ಉತ್ತರ-ದಕ್ಷಿಣಾಯನಗಳು, ತಾರೆಗಳ ಹಾಗೂ ತಾರಾಮಂಡಲಗಳ ಚಲನೆ - ಇವೆಲ್ಲವೂ ಬ್ರಹ್ಮಾಂಡದ ರಂಗಮಂಟಪದಲ್ಲಿನ ವಾದ್ಯಗೋಷ್ಠಿಗಳ ಮೇಳನದಂತೆ ಮತ್ತೆ ಮತ್ತೆ ಪುನರಾವರ್ತಿಸುತ್ತವೆ. ಗಮನಿಸಿದರೆ, ಒಂದೊಂದು ಆವರ್ತನೆಯೂ ಅನೇಕ ಒಳ-ಆವರ್ತನೆಗಳನ್ನೊಳಗೊಂಡಿರುವುದು ಕಾಣಬರುತ್ತದೆ.
ನಮ್ಮ ದೈನಂದಿನ, ವಾರ್ಷಿಕ, ಜೀವನದ ಚಟುವಟಿಕೆಗಳನ್ನೂ ಈ ದಿನ- ರಾತ್ರಿ, ಋತುಗಳ ಜೊತೆ ಅಳವಡಿಕೊಳ್ಳುತ್ತೇವೆ. ನಾವೇ ಏಕೆ, ಪಶು - ಪಕ್ಷಿಗಳ ಕಾರ್ಯ ವ್ಯವಸ್ಥೆ ಈ ಚಕ್ರಗಳ ಜೊತೆ ಮೇಳೈಸಿದೆ. ವಲಸೆ ಬರುವುದು, ಗೂಡು ಕಟ್ಟಿ ಮೊಟ್ಟೆ ಇಕ್ಕಿ ತಮ್ಮ ಪೀಳಿಗೆಯನ್ನು ಮುಂದುವರಿಸುವುದು ಎಲ್ಲವೂ ಪ್ರಕೃತಿ ಚಕ್ರಗಳೊಡನೆ ಮೇಳೈಸಿದೆ. ಹಾಗೆಯೇ ಗಿಡಗಳ ಚಿಗುರು, ಹೂಪೂಸುವುದು ಈ ಋತುಗಳೊಡನೆ ಜೋಡಿಸಿಕೊಂಡಿದೆ. ನೀರು ಆವಿಯಾಗಿ ಅಂಬರಕ್ಕೆ ಮತ್ತು ಮೋಡದಿಂದ ಮಳೆ ಭೂಮಿಗೆ. ಹಾಗೆಯೇ ನದಿಗಳು ಉಕ್ಕಿ ಹರಿದು ಶಾಂತಗೊಳ್ಳುತ್ತವೆ. ಎಲ್ಲವೂ ಈ ಪ್ರಕೃತಿಚಕ್ರದ ಮೇಳನದೊಂದಿಗೆ. ಇಡೀ ಪರಿಸರವನ್ನು ಗಮನಿಸಿದಾಗ, ತೈಲವೆರದ ಯಂತ್ರದಂತೆ, ಒಂದೇ ನಮೂನೆಯ ಅನಂತ-ನಿರಂತರ- ಪುನರಾವರ್ತನೆಯ ಒಂದು ಉತ್ಕೃಷ್ಟರಚನೆ ಕಂಡುಬರುತ್ತದೆ.
ಈ ಉತ್ಕೃಷ್ಟರಚನೆಯನ್ನು ಭಾರತೀಯಪರಂಪರೆಯ ವಿಚಾರಧಾರೆಯಲ್ಲಿ ‘ಪ್ರಕೃತಿ’ ಎಂದು ಕರೆಯುತ್ತಾರೆ (ಪ್ರ: ಪ್ರಕೃಷ್ಟ-ಉತ್ಕೃಷ್ಟ, ಕೃತಿ: ರಚನೆ. ) ಭಾರತೀಯ ಮಹರ್ಷಿಗಳು ಕಂಡುಕೊಂಡಂತೆ ಇವು ಈ ವಿಶ್ವವನ್ನು ರಚಿಸಿದ ಬೃಹತ್ ಶಕ್ತಿಯಾದ ಬ್ರಹ್ಮವಸ್ತುವಿನ ಯೋಜನೆ. ಅವರ ಅನುಸಾರವಾಗಿ ಬ್ರಹ್ಮವಸ್ತು ತಾನು ತಾನಾಗಿಯೇ ಒಂದೇ ಇದ್ದಿತು. ಅದಕ್ಕೆ, ತನ್ನಲ್ಲಿ ಸುಪ್ತವಾಗಿರುವ ಎಲ್ಲವನ್ನೂ ಪ್ರದರ್ಶಿಸಬೇಕೆಂಬ ಇಚ್ಛೆ ಹುಟ್ಟಿತು. ಆ ಇಚ್ಛೆಯಿಂದ ತನ್ನನ್ನು ತಾನು ಎರಡಾಗಿ ವಿಂಗಡಿಸಿಕೊಂಡಿತು ಒಂದು ‘ಪುರುಷ’, ಮತ್ತೊಂದು ‘ಪ್ರಕೃತಿ’. ‘ಪುರುಷ’ ಈ ಬ್ರಹ್ಮಾಂಡವೆಂಬ ಪುರಿಯಲ್ಲಿ ವಾಸಮಾಡುವವನು ‘ಪುರಿ ಶೇತೇ ಇತಿ ಪುರುಷಃ ‘ ಆಗಲೇ ಹೇಳಿದಂತೆ ‘ಪ್ರಕೃತಿ’ ಎಂದರೆ ‘ಪ್ರಕೃಷ್ಟ ಕೃತಿ’ ಅಥವಾ ‘ಉತ್ಕೃಷ್ಟವಾದ ಕೃತಿ.’ ಆ ಪುರುಷ ಪ್ರಕೃತಿಯಲ್ಲಿ ಪ್ರವೇಶಿಸಿತು, ಬೀಜ -ಭೂಮಿಯಲ್ಲಿ ಹೊಕ್ಕಂತೆ. ಆಗ ನಾವು ಕಾಣುವ ಮತ್ತು ಕಾಣದಿರುವ ಬ್ರಹ್ಮಾಂಡದ ಸೃಷ್ಟಿ ಆಯಿತು. ಆ ಪುರಷ ತಾನೇತಾನಾಗಿ ತನ್ನಲ್ಲಿರುವ ಎಲ್ಲವನ್ನು ಅಡಗಿಸಿಕೊಂಡಿರುವ ಸ್ಥಿತಿಯನ್ನು ‘ಋತ’ ವೆಂದರೆ ಮತ್ತು ಅದರ ವಿಕಸಿತ ಸ್ಥಿತಿ ‘ಸತ್ಯ’. ಇದನ್ನು ನಾವುಕಾಣುವ ಚಕ್ರದ ಎಲ್ಲೆಡೆಯಲ್ಲೂ ಅನ್ವಯಿಸಬಹುದು.
ಉದಾಹರಣೆಗಾಗಿ ಒಂದು ಬೀಜವನ್ನು ತೆಗೆದುಕ್ಕೊಳ್ಳುವ. ಅದನ್ನು ಭೂಮಿಯಲ್ಲಿ ನೆಟ್ಟು, ಅದು ತನ್ನ ನೈಜತೆಯನ್ನು ಉಳಿಸಿಕೊಂಡು ಬೆಳೆದರೆ ಮೊಳಕೆ, ಕಾಂಡ, ಕೊಂಬೆ - ರಂಬೆಗಳು, ಎಲೆ - ಹೂವು - ಕಾಯಿ - ಫಲವಾಗಿ ಕೊನೆಗೆ ಬೀಜದಲ್ಲಿಯೇ ಪರ್ವ್ಯಸನಗೊಳ್ಳುತ್ತದೆ. ಅಂದರೆ ಇಡೀ ವೃಕ್ಷದ ರಚನೆ, ಬೀಜದಲ್ಲಿ ಅಡಗಿದೆ. ಹಾಗೆಯೇ ಇಡೀ ಸೃಷ್ಟಿಯಲ್ಲೂ ಸಹ. ಭಾರತೀಯಪರಂಪರೆಯ ವಿಚಾರಧಾರೆಯಲ್ಲಿ ತನ್ನಲ್ಲಿಯೇ ಸುಪ್ತವಾಗಿರುವ ಶಕ್ತಿಯನ್ನು ಧರಿಸಿರುವ ಈ ನೈಜಸ್ವಭಾವವನ್ನು ‘ಋತ ’ ವೆಂದು ಕರೆದರೆ, ಅದರ ಅಭಿವ್ಯಕ್ತಿ ‘ಸತ್ಯ. ’ ‘ಬೀಜ’ ಋತವಾದರೆ, ಅದರ ಅಭಿವ್ಯಕ್ತಿ ‘ವೃಕ್ಷ’ ಸತ್ಯ. ಇದನ್ನು ಸಮಗ್ರ ಸೃಷ್ಟಿಗೆ ಅನ್ವಯಿಸಬಹುದು. ಶ್ರೀರಂಗಮಹಾಗುರುಗಳು ಹೇಳುವಂತೆ “ಸೃಷ್ಟಿಯು ಕಾಲ-ದೇಶ ರಂಗಗಳಲ್ಲಿ ನಡೆಯುವ ಆವೃತ್ತಗಳ ಅಭೂತಪೂರ್ವ ನೃತ್ಯ. ಅವುಗಳ ಉಗಮಸ್ಥಾನದಲ್ಲಿರುವುವು ಋತ-ಸತ್ಯಗಳು. ಇವೆರಡೂ ಪರಂಬ್ರಹ್ಮ, ‘ಋತಮ್ ಸತ್ಯಂ ಪರಂಬ್ರಹ್ಮ ಪುರುಷಮ್ ಕೃಷ್ಣ ಪಿಂಗಳಂ..’ ಉಪನಿಷದ್ ವಾಣಿ.”
ಸೂಚನೆ: 3/07/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.