Tuesday, June 30, 2026

ವ್ಯಾಸ ವೀಕ್ಷಿತ 194 ಸಹದೇವನು ಮುಗಿಸಿದ ದಕ್ಷಿಣ-ದಿಗ್ವಿಜಯ (Vyaasa Vikshita194)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಕಿಷ್ಕಿಂಧೆಯಲ್ಲಿ ವಾನರರಾಜರಾದ ಮೈಂದ-ದ್ವಿವಿದರಿತ್ತ ರತ್ನಗಳನ್ನು ಸ್ವೀಕರಿಸಿದ ಸಹದೇವನು, ಮಾಹಿಷ್ಮತಿಯ ನೀಲನನ್ನು ಎದುರಿಸಿದನು. ಅಲ್ಲಿ ಅವರಿಬ್ಬರಿಗೆ ಭಯಂಕರವಾದ ಯುದ್ಧವೇ ಆಯಿತು.

ಅಲ್ಲಿ ನೋಡುತ್ತಿದ್ದಂತೆಯೇ ಆಶ್ಚರ್ಯವೊಂದು ಘಟಿಸಿತು: ಸಹದೇವನ ಕಡೆಯ ರಥ-ಗಜ-ತುರಗಗಳೂ ಸೈನಿಕರೂ ಅವರ ಕವಚಗಳೂ ಇದ್ದಕ್ಕಿದ್ದಂತೆ ಬೆಂಕಿಯಿಂದ ಉರಿಯಲಾರಂಭಿಸಿದವು!

ಅಲ್ಲಾದುದೇನು?

ಅದಕ್ಕೊಂದು ಹಿನ್ನೆಲೆಯಿದೆ. ಈ ನೀಲ-ಮಹಾರಾಜನಿಂದ ಅಗ್ನಿದೇವನಿಗೆ ಹಿಂದೊಂದು ಉಪಕಾರವಾಗಿತ್ತು; ಆ ಕಾರಣ, ಅಗ್ನಿಯು ನೀಲನ ಸೈನ್ಯಕ್ಕೆ ಅಭಯ-ಪ್ರದಾನವನ್ನು ಮಾಡಿದ್ದನು. ಎಂದೇ, ಇದನ್ನರಿತಿದ್ದ ಯಾವುದೇ ಅರಸರೂ ನೀಲರಾಜನ ಮೇಲೆ ದಂಡೆತ್ತಿಹೋಗುತ್ತಿರಲಿಲ್ಲ.

ತನ್ನ ಸೈನ್ಯವೆಲ್ಲಾ ಅಗ್ನಿಯಿಂದ ಸುತ್ತುವರಿಯಲ್ಪಡುತ್ತಿರುವುದನ್ನು ಸಹದೇವನೂ ಕಂಡನು. ಆದರೆ ಅದರಿಂದಾಗಿ ಕಂಪಿತನಾಗಲಿಲ್ಲ. ಬದಲಾಗಿ, ಆಚಮನವನ್ನು ಮಾಡಿ ಶುದ್ಧನಾಗಿ, ಅಗ್ನಿದೇವ-ಸ್ತುತಿಯನ್ನು ಮಾಡಿದನು.

ಜೊತೆಗೆ, ಹೀಗೆ ಬಿನ್ನವಿಸಿಕೊಂಡನು ಕೂಡ: “ಹವ್ಯವಾಹನನೆನಿಸಿದ ಅಗ್ನಿದೇವನೇ, ಯಜ್ಞಕ್ಕೆ ನೀನೇ ವಿಘ್ನವನ್ನುಂಟುಮಾಡುವುದು ತರವಲ್ಲ!” ಎಂದು. ಅಷ್ಟೇ ಅಲ್ಲ; ನೆಲದ ಮೇಲೆ ದರ್ಭೆಯನ್ನು ವಿಧಿವತ್ತಾಗಿ ಹಾಸಿಕೊಂಡನು. ತನ್ನ ಸೈನ್ಯವೇ ಭಯೋದ್ವೇಗಗಳಿಗೆ ತುತ್ತಾಗಿದ್ದರೂ, ಅವರ ಎದುರೇ ಅದರ ಮೇಲೆ ಆಸೀನನಾದನು.

ಸಹದೇವನ ಈ ವರ್ತನೆಯಿಂದ ಅಗ್ನಿಯು ಪ್ರಸನ್ನನಾದನು. ಎಂದೇ, ಆತನತ್ತ ಉರಿದು ಬರಲಿಲ್ಲ; ಬದಲಾಗಿ, ಶಾಂತನಾಗಿ ಬಂದು, ಸಾಂತ್ವನದ ಮಾತುಗಳನ್ನೇ ಆಡಿದನು: “ಏಳು ಸಹದೇವಾ, ನಿನ್ನ ಹಾಗೂ ಧರ್ಮರಾಜನ ಅಭಿಪ್ರಾಯಗಳು ನನಗೆ ವಿದಿತವಾಗಿವೆ. ಈ ಪುರಿಯನ್ನು ರಕ್ಷಿಸಬೇಕೆಂಬುದು ನನ್ನ ಸಂಕಲ್ಪವಾಗಿತ್ತು, ಅಷ್ಟೆ” - ಎಂದನು.

ಅಗ್ನಿಯು ಹೀಗೆ ಶಾಂತನಾಗಿ ಹಿಂದಿರುಗಲು, ನೀಲರಾಜನೇ ಸಹದೇವನ ಬಳಿಗೆ ಬಂದನು. ಸಹದೇವನನ್ನು ಸತ್ಕರಿಸಿದನು. ಸಹದೇವನು ನೀಲರಾಜನೊಡನೆ ಮಾತನಾಡಿ, ಆತನೂ ಕರವನ್ನೊಪ್ಪಿಸುವಂತೆ ಮಾಡಿದನು; ತನ್ನ ದಿಗ್ವಿಜಯ-ಪ್ರಯಾಣವನ್ನು ಮುಂದುವರಿಸಿದನು.

ಆಮೇಲೆ ತ್ರಿಪುರಾಧಿಪತಿ, ಪೌರವರಾಜ್ಯಾಧಿಪತಿ, ಸುರಾಷ್ಟ್ರಾಧಿಪತಿ - ಇವರುಗಳನ್ನು ಸಹದೇವನು ವಶಪಡಿಸಿಕೊಂಡನು. ಬಳಿಕ, ಭೋಜಕಟ-ರಾಜ್ಯಕ್ಕೆ ಒಡೆಯನಾದ ರುಕ್ಮಿ, ಹಾಗೂ ಆತನ ತಂದೆಯಾದ ಭೀಷ್ಮಕ - ಇವರಲ್ಲಿಗೆ ತನ್ನ ರಾಯಭಾರಿಯನ್ನು ಕಳುಹಿಸಿಕೊಟ್ಟನು. ಅವರು ವಾಸುದೇವನ ನಿಕಟತೆಯನ್ನು ಸ್ಮರಿಸಿ, ತಮ್ಮ ಸಹಕಾರವನ್ನು ಸೂಚಿಸಿದರು.

ಮತ್ತೂ ದಕ್ಷಿಣದ ದಂಡಕಾರಣ್ಯವನ್ನೂ ಸಹದೇವನು ವಶಕ್ಕೆ ತೆಗೆದುಕೊಂಡನು. ಆಮೇಲೆ ಸಮುದ್ರ-ದ್ವೀಪವಾಸಿಗಳಾಗಿದ್ದ ಮ್ಲೇಚ್ಛರನ್ನು ಜಯಿಸಿದನು. ಹಾಗೆಯೇ ನಿಷಾದರು, ಪುರುಷಾದರು (ಎಂದರೆ ನರಮಾಂಸ-ಭಕ್ಷಕರು), ಹಾಗೂ ಕಾಲಮುಖ ಎಂಬ ಹೆಸರಿನ ನರ-ರಾಕ್ಷಸರು – ಇವರುಗಳನ್ನೂ, ಈ ತೆರನಾದ ಇನ್ನೂ ಅನೇಕರನ್ನೂ, ಜಯಿಸಿದನು.

ಕೇರಳ, ಕರ-ಹಾಟಕದೇಶಗಳಿಗೆ (ಇದು ಇಂದಿನ ಕರ್ನಾಟಕವೇ ಸರಿ) ತನ್ನ ದೂತರನ್ನು ಕಳುಹಿಸಿ, ಅದಷ್ಟರಿಂದಲೇ ಅವರನ್ನು ವಶವರ್ತಿಗಳನ್ನಾಗಿಸಿಕೊಂಡನು. ಹಾಗೆಯೇ ಪಾಂಡ್ಯರು, ದ್ರವಿಡರು, ಆಂಧ್ರರು, ಕಲಿಂಗರು - ಇವರುಗಳನ್ನೂ ದೂತ-ದ್ವಾರಾ ವಶಪಡಿಸಿಕೊಂಡನು.

ಆಮೇಲೆ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ತನ್ನ ಭ್ರಾತೃವಿನ ಪುತ್ರನಾದ ಘಟೋತ್ಕಚನನ್ನು ಸ್ಮರಿಸಿಕೊಂಡನು. ಆತನೋ, ಚಿಂತಿತ-ಮಾತ್ರದಿಂದಲೇ ಪ್ರತ್ಯಕ್ಷನಾದನು! ಆತನನ್ನು ವಿಭೀಷಣನಲ್ಲಿಗೆ ದೂತನನ್ನಾಗಿ ಕಳುಹಿಸಿಕೊಟ್ಟನು. ಆತನ ಮಾತುಗಳನ್ನು ವಿಭೀಷಣನು ಸಂತೋಷವಾಗಿಯೇ ಒಪ್ಪಿದನು. ಹಾಗೂ ನಾನಾ-ರತ್ನಗಳನ್ನೂ ದಿವ್ಯಾಭರಣಗಳನ್ನೂ ಬೆಲೆಬಾಳುವ ಮಣಿಗಳನ್ನೂ ವಿಶೇಷ-ವಸ್ತ್ರಗಳನ್ನೂ ಕಾಣಿಕೆಯಾಗಿತ್ತನು.

ಇವೆಲ್ಲವನ್ನೂ ಸಂಗ್ರಹಿಸಿ ಹಿಂದಿರುಗಿದ ಸಹದೇವನು, ಯುಧಿಷ್ಠಿರನಿಗೆ ಸಮಸ್ತವನ್ನೂ ಸಮರ್ಪಿಸಿದನು. ಯುಧಿಷ್ಠಿರನೂ ಸಹದೇವನ ಸಾಧನೆಗೆ ಸಂತೋಷಿಸಿದನು.


ಸೂಚನೆ : 28
/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.