Tuesday, June 30, 2026

ಪ್ರಶ್ನೋತ್ತರ ರತ್ನಮಾಲಿಕೆ 72 (Prasnottara Ratnamalike 72)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೭೨. ಹಗಲಿರುಳೂ ಚಿನ್ತಿಸಬೇಕಾದುದು ಯಾವುದು?

ಭಗವಚ್ಚರಣವೇ ಹೊರತು ಸಂಸಾರವಲ್ಲ. ಪ್ರತಿದಿನವೂಪ್ರತೀ ಕ್ಷಣವೂ ಚಿಂತಿಸಬೇಕಾದದು

ಚಿಂತಿಸಲೇಬೇಕಾದದ್ದು ಯಾವುದು? ಎಂದರೆ ಅದು ಭಗವಂತನ ಪಾದಾರವಿಂದ. ಯಾವುದನ್ನು ಚಿಂತಿಸಬೇಕಾಗಿದೆಯೋ ಅದನ್ನು ಚಿಂತಿಸದೆ, ಯಾವುದನ್ನು ಚಿಂತಿಸಿದರೆ ಸಮಯವೂ, ಆಯುಷ್ಯವೂ ವ್ಯರ್ಥವೋ ಅಂತಹ ವಿಷಯವನ್ನು ಚಿಂತಿಸುವ ನಮ್ಮ ಪ್ರವೃತ್ತಿಗೆ ಉತ್ತರರೂಪವಾಗಿ ಇಲ್ಲಿ ವಿಷಯವನ್ನು ನೀಡಲಾಗಿದೆ. ಸಂಸಾರದ ಬಗ್ಗೆ ನಾವು ಪ್ರತಿನಿತ್ಯ ಪ್ರತಿಕ್ಷಣವೂ ಯೋಚಿಸುತ್ತಿದ್ದೇವೆ. ಇದರ ಮಧ್ಯದಲ್ಲಿ ನಮಗೆ ಯಾವುದನ್ನು ಚಿಂತಿಸಬೇಕು? ಎಂಬುದರ ಬಗ್ಗೆ ಸ್ವಲ್ಪವೂ ನಿಗಾ ಇಲ್ಲದಿರುವ ಪರಿಸ್ಥಿತಿ ಬಂದಿದೆ. ಅಷ್ಟರಮಟ್ಟಿಗೆ ನಮ್ಮ ಚಿಂತನೆಯ ದಿಕ್ಕು ಬದಲಾಗಿದೆ. ಆದರೆ ವಸ್ತುತಃ ನಾವು ಯಾವ ದಿಕ್ಕಿನ ಕಡೆ ನಿರಂತರವಾಗಿ ಚಿಂತಿಸಬೇಕಾಗಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಹೀಗೊಂದು ಮಾತು ಬರುತ್ತದೆ -’ಸಂಸಾರೇ ಕಿಂ ಸಾರಂ? ಕಂಸಾರೇಃ ಪದಕಮಲಂ ಸಾರಂ’ ಎಂಬುದಾಗಿ. ಈ ಸಂಸಾರದಲ್ಲಿ ಒಂದು ಸಾರ ಎಂಬುದಾಗಿ ಬರಬೇಕಾದರೆ ಅದಕ್ಕೆ ಕಂಸಾರಿಯದ - ಕಂಸನ ಶತ್ರುವಾದ ಭಗವಾನ್ ಶ್ರೀ ಕೃಷ್ಣನ ಅನವರತ ಚಿಂತನೆಯೇ ಇದಕ್ಕೆ ಸಾರ ಎಂಬುದಾಗಿ ಈ ಮಾತು ತಿಳಿಸುತ್ತದೆ. ನಮ್ಮ ಚಿಂತನೆಯು ಕೇವಲ ಸಂಸಾರದಲ್ಲೇ ಇದೆ ಎಂದರ್ಥ. 


ಸಂಸಾರ ಎಂದರೇನು? ಸಂಸಾರದ ಬಗ್ಗೆ ಚಿಂತಿಸುವುದು ತಪ್ಪೇ? ಇತ್ಯಾದಿ ಪ್ರಶ್ನೆಗಳು ಬರಬಹುದು. ಸಂಸಾರದಲ್ಲಿ ಇದ್ದು ಸಂಸಾರವನ್ನು ದಾಟುವ ಬಗ್ಗೆ ಚಿಂತಿಸುವ ವಿಷಯ ಇಲ್ಲಿದೆ. ಆದರೆ ನಾವಿಂದು ಸಂಸಾರವನ್ನು ಮಾತ್ರ ಚಿಂತಿಸುತ್ತಿದ್ದೇವೆ. ಸಂಸಾರದಲ್ಲಿ ಇದ್ದು ಸಂಸಾರವನ್ನು ದಾಟುವ, ಸಂಸಾರದ ಸಾರ್ಥಕತೆಯನ್ನು ಪಡೆಯುವ ಬಗ್ಗೆ ನಮ್ಮ ಚಿಂತನೆ ಇಲ್ಲದಾಗಿದೆ. "ಮಡದಿ ಮಕ್ಕಳ ಚಿಂತೆ ಬಿಡು ಮನವೇ! ಕಡೆಗೆ ಸತ್ಯನು ನೀನಲ್ಲವೇ?  ಪುರಂದರ ವಿಠಲ ನಿನ್ನೊಲಿದು ನಂಬಿದರೆ, ಸಿರಿ ಸಂಪತ್ತುಗಳೆಲ್ಲವು ಬರುವವು, ಕರವ ಕೂಡಿಸಿ, ನಿತ್ಯ ಹರಿನಾಮವ ಪಾಡು, ನಿರ್ಮಲ ಮುಕ್ತಿಯು ದೊರೆಯುವುದು ಮನವೇ" ಎಂಬ ಪುರಂದರ ದಾಸರ ಕೃತಿ ನಮಗೆ ಇದನ್ನು ಎಚ್ಚರಿಸುತ್ತದೆ. ಸಂಸಾರ ಎಂದರೆ ಗಂಡನಿಗೆ ಹೆಂಡತಿಯ ಚಿಂತೆ, ಹೆಂಡತಿಗೆ ಗಂಡನ ಚಿಂತೆ, ಗಂಡಹೆಂಡಂದಿರಿಗೆ ಮಕ್ಕಳ ಚಿಂತೆ. ಅಜ್ಜ ಅಜ್ಜಿಯರಿಗೆ ಮಕ್ಕಳು ಮೊಮ್ಮಕ್ಕಳ ಚಿಂತೆ. ಹೀಗೆ ಎಲ್ಲ ಕಡೆಗೆ ಚಿಂತೆಯೇ ಆವರಿಸಿದೆ. ಇಷ್ಟನ್ನು ಸೇರಿ ಸಂಸಾರ ಎಂಬುದಾಗಿ ಕರೆಯುವಂತಾಗಿದೆ. ತನ್ನ ಜೀವಿತದಲ್ಲಿ ಇವರ ಬಗ್ಗೆಯೇ ಯೋಚಿಸುತ್ತಾ, ತನ್ನ ಜೀವನವನ್ನು ಇವರಿಗಾಗಿಯೇ ಕಳೆದು, ಜೀವನವನ್ನು ಒಂದು ದಿನ ಮುಗಿಸುವ ಜನರೂ ಇದ್ದಾರೆ. ಅಂತಹವರಿಗಾಗಿ ಈ ಒಂದು ಸೂಚನೆ ಇಲ್ಲಿದೆ. ಪುರಂದರ ವಿಠಲನನ್ನು ನಂಬಿ, ವಿಶ್ವಾಸದಿಂದ ಅವನನ್ನು ಭಾವಿಸಿದರೆ ಅವನೇ ಎಲ್ಲವನ್ನು ಕೊಡಬಲ್ಲ, ಕೈಗೆತ್ತಿ ತುತ್ತು ಈಯಬಲ್ಲ. ಹೀಗಿರುವಾಗ ನಾವೇ ಸಂಸಾರವನ್ನು ತೂಗಿಸುತ್ತೇವೆ; ಸಂಸಾರದ ಭಾರವನ್ನು ನಾವೇ ಹೊರುತ್ತೇವೆ ಎಂಬ ಅಹಂಕಾರ ಬೇಡ. ಹಾಗಾದಾಗ ಈ ಸಂಸಾರ ನಮಗೆ ಭಾರವಾಗುತ್ತದೆ. ಅದೇ ಹೊಣೆಗಾರಿಕೆಯನ್ನು ಅವನಿಗೆ ಒಪ್ಪಿಸಿದರೆ ಸಂಸಾರವು ನಮಗೆ ಸಾರವಾಗಿ, ಅಂದರೆ ನಮಗೆ ಅದು ಅತ್ಯಂತ ಆಪ್ಯಾಯಮಾನವಾಗಿ ಕಾಣುತ್ತದೆ ಎಂಬ ಅಭಿಪ್ರಾಯ ಇಲ್ಲಿದೆ.


ಸೂಚನೆ :  28/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.