ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಧರ್ಮರಾಜನ ಆಜ್ಞೆಗೆ ಅನುಸಾರವಾಗಿ ಮಹಾ-ಪ್ರತಾಪಶಾಲಿಯಾದ ಶಿಶುಪಾಲನ ಬಳಿಗೆ ಭೀಮನು ಆ ಬಳಿಕ ಹೋದನು. ಭೀಮನು ಏನನ್ನು ಮಾಡಲಿರುವನೆಂಬುದನ್ನು ಕೇಳಿ ತಿಳಿದ ಚೇದಿ-ರಾಜನಾದ ಶಿಶುಪಾಲನೂ ಸಹ ನಗರದಿಂದ ಹೊರಬಂದು ಭೀಮನನ್ನು ಎದುರ್ಗೊಂಡನು. ಕುರುಕುಲ-ಶ್ರೇಷ್ಠನಾದ ಭೀಮನೂ ಚೇದಿವಂಶ-ಶ್ರೇಷ್ಠನಾದ ಶಿಶುಪಾಲನೂ ಆಗ ಕಲೆತು, ಪರಸ್ಪರ ತಮ್ಮ ವಂಶಗಳ ಬಗ್ಗೆ ಕುಶಲಪ್ರಶ್ನೆಯನ್ನು ಮಾಡಿಕೊಂಡರು.
ಆಗ ಶಿಶುಪಾಲನು ತನ್ನ ಚೇದಿ-ರಾಜ್ಯವನ್ನು ಭೀಮನಿಗೊಪ್ಪಿಸಿ ನಗುತ್ತಾ, ಭೀಮನನ್ನು "ನೀನಿದೇನು ಮಾಡಲಿರುವೆ?" ಎಂಬುದಾಗಿ ಕೇಳಿದನು. ಅದಕ್ಕೆ ಭೀಮನೂ ಧರ್ಮರಾಜನು ಮಾಡಹೊರಟಿರುವ ಯಜ್ಞದ ವಿಷಯವನ್ನು ಹೇಳಿದನು. ಆತನೂ ಆ ಮಾತುಗಳನ್ನು ಹಾಗೆಯೇ ಸ್ವೀಕರಿಸಿ, ತದನುಸಾರಿಯಾಗಿಯೇ ವರ್ತಿಸಿದನು. ಆಮೇಲೆ ಭೀಮನು ಅಲ್ಲಿಯೇ ಹದಿಮೂರು ರಾತ್ರಿಗಳನ್ನು ಕಳೆದನು. ಶಿಶುಪಾಲನಿಂದ ಸತ್ಕಾರವನ್ನು ಪಡೆದು ತನ್ನ ಸೈನ್ಯ-ಸವಾರಿಗಳೊಂದಿಗೆ ಶಿಶುಪಾಲನ ಸ್ಥಾನವನ್ನು ಬಿಟ್ಟು ಹೊರಟನು.
ಆ ಬಳಿಕ ಭೀಮನು ಕುಮಾರ-ದೇಶದ ಶ್ರೇಣಿಮಂತನನ್ನು ಜಯಿಸಿದನು. ಆಮೇಲೆ ಕೋಸಲ-ರಾಜನಾದ ಬೃಹದ್ಬಲನನ್ನು ಗೆದ್ದನು. ಹೆಚ್ಚು ಕಷ್ಟವೇ ಪಡದೆ ಅಯೋಧ್ಯಾಧಿಪತಿಯಾದ ಹಾಗೂ ಬಲಶಾಲಿಯೂ ಧರ್ಮಜ್ಞನೂ ಆದ ದೀರ್ಘಯಜ್ಞನನ್ನು ಜಯಿಸಿದನು.
ಆಮೇಲೆ ಉತ್ತರ-ಕೋಸಲಾಧಿಪತಿ, ಮಲ್ಲ-ರಾಷ್ಟ್ರಾಧಿಪತಿಗಳನ್ನೂ, ಶುಕ್ತಿಮಂತ-ಪರ್ವತ, ಹಿಮಾಲಯ-ಪರ್ವತಗಳ ತಪ್ಪಲಿನ ಪ್ರದೇಶಗಳನ್ನೂ, ಕಾಶಿ-ರಾಜನಾದ ಸುಬಾಹು, ಸುಪಾರ್ಶ್ವ-ಪರ್ವತದ ಬಳಿಯಿದ್ದ ಕ್ರಥನೆಂಬ ರಾಜ, ಮತ್ಸ್ಯದೇಶ-ಮಲದದೇಶ-ನೇಪಾಳದೇಶ-ವತ್ಸಭೂಮಿಗಳ ರಾಜರುಗಳು, ನಿಷಾದರ ರಾಜ, ವಿದೇಹ-ರಾಜನಾದ ಜನಕ – ಇವರೆಲ್ಲರನ್ನೂ ಗೆದ್ದನು.
ಶಕರನ್ನೂ ಬರ್ಬರರನ್ನೂ ಛದ್ಮದಿಂದ, ಎಂದರೆ ಮೋಸದಿಂದ, ಗೆದ್ದುಕೊಂಡನು. ವಿದೇಹದೇಶದ ಸುತ್ತಲಿನ ಏಳು ಕಿರಾತಾಧಿಪತಿಗಳನ್ನು ಜಯಿಸಿದನು. ಬಳಿಕ ಸುಹ್ಮ-ಪ್ರಸುಹ್ಮರಾಜರನ್ನೂ ಇನ್ನಿಬ್ಬರನ್ನೂ ಸೋಲಿಸಿದನು. ಜರಾಸಂಧ-ಪುತ್ರನನ್ನು ಕರ-ಸಮರ್ಪಕನನ್ನಾಗಿ ಮಾಡಿಕೊಂಡನು. ಹಾಗೆಯೇ ಕರ್ಣನೆಂಬ ಮತ್ತೊಬ್ಬ ರಾಜ, ಮೋದಾಗಿರಿಯ ರಾಜ - ಇವರುಗಳನ್ನು ಸೋಲಿಸಿದನು. ಪೌಂಡ್ರಕ-ವಾಸುದೇವನನ್ನೂ ಜಯಿಸಿ ವಂಗ-ದೇಶದ ಮೇಲೆ ಆಕ್ರಮಣ ಮಾಡಿದನು. ಮತ್ತೂ ಹಲವರನ್ನು ಜಯಿಸಿ ಸುತ್ತಲಿನ ಮ್ಲೇಚ್ಛ-ರಾಜರನ್ನೆಲ್ಲಾ ಬಗ್ಗುಬಡಿದನು.
ಹೀಗೆ ಹಲವು ಅರಸರನ್ನು ಮೆಟ್ಟಿ, ಅವರ ಐಶ್ವರ್ಯವನ್ನು ತೆಗೆದುಕೊಂಡು, ಮ್ಲೇಚ್ಛರಿಂದ ಕರವನ್ನೂ ನಾನಾ-ರತ್ನಗಳನ್ನೂ ಚಂದನ-ಅಗರು-ವಸ್ತ್ರಗಳನ್ನೂ ಮಣಿ-ಮುತ್ತು-ಕಂಬಲಗಳನ್ನೂ ಕಾಂಚನ-ರಜತ-ವಿದ್ರುಮ(ಹವಳ)ಗಳನ್ನೂ ಕೋಟಿಸಂಖ್ಯೆಯಲ್ಲಿ ಪಡೆದನು. ಇಂದ್ರಪ್ರಸ್ಥಕ್ಕೆ ಹಿಂದಿರುಗಿ ಧರ್ಮರಾಜನಿಗೆ ಎಲ್ಲವನ್ನೂ ಒಪ್ಪಿಸಿದನು, ಭೀಮ.
ಇತ್ತ ಸಹದೇವನು ಧರ್ಮರಾಜನಿಂದ ಸಮ್ಮಾನಿತನಾಗಿ, ದೊಡ್ಡಸೈನ್ಯದೊಂದಿಗೆ ದಕ್ಷಿಣದಿಕ್ಕಿಗೆ ಹೊರಟನು. ಮೊಟ್ಟಮೊದಲು ಆತನು ಶೂರಸೇನರನ್ನು ಜಯಿಸಿದನು. ಆಮೇಲೆ ಮತ್ಸ್ಯರಾಜನನ್ನು , ಬಳಿಕ ಅಧಿರಾಜರಿಗೆ ಅಧಿಪತಿಯಾದ ದಂತವಕ್ತ್ರನನ್ನು ಸೋಲಿಸಿದನು. ಅವನಿಂದ ಕರವನ್ನು ಸ್ವೀಕರಿಸಿ ಅದೇ ರಾಜ್ಯದಲ್ಲೇ ಆತನನ್ನು ಪ್ರತಿಷ್ಠಾಪಿಸಿದನು. ಆಮೇಲೆ ಅಪರ-ಮತ್ಸ್ಯ, ನಿಷಾದ-ದೇಶ, ಗೋಶೃಂಗ-ಪರ್ವತ ಮುಂತಾದವನ್ನು ವಶಪಡಿಸಿಕೊಂಡನು.
ಸಹದೇವನು ಕುಂತಿಭೋಜನ ಮೇಲೆ ಸೆಣಸಲು ಹೋಗುತ್ತಿದ್ದಂತೆಯೇ, ಆತನೇ ಈತನನ್ನು ಪ್ರೀತಿಯಿಂದ ಸ್ವಾಗತಿಸಿ ಆತನ ಶಾಸನವನ್ನು ಒಪ್ಪಿಕೊಂಡನು. ಆಮೇಲೆ ಚರ್ಮಣ್ವತೀ-ನದಿಯ ಬಳಿಯ ರಾಜಸೇಕ-ಅಪರಸೇಕರಾಜ್ಯಗಳ ರಾಜರು, ಮತ್ತೆ ಹಲವು ಅರಸರು, ಭೀಷ್ಮಕ-ರಾಜ, ಪೂರ್ವಕೋಸಲದ ರಾಜ, ಇನ್ನಿತರ ನಾನಾರಾಜರುಗಳು - ಇವರನ್ನೆಲ್ಲ ಸೋಲಿಸಿ ಅವರಿಂದ ಕರಗ್ರಹಣವನ್ನು ಮಾಡಿದರು. ಪುಲಿಂದರನ್ನು ಜಯಿಸಿದನು.
ಇವಾದ ಬಳಿಕ, ಕಿಷ್ಕಿಂಧೆಗೂ ಹೋದನು. ವಾನರ-ರಾಜರಾದ ಮೈಂದ-ದ್ವಿವಿದರೊಂದಿಗೆ ಏಳು ದಿನಗಳ ಯುದ್ಧವಾಯಿತು. ಅವರು ಸೋಲದಿದ್ದರೂ ಸಹದೇವನ ವಿಷಯದಲ್ಲಿ ಸಂತೋಷಪಟ್ಟು, ಹೀಗೆ ಹೇಳಿದರು: “ಪಾಂಡವ-ಶ್ರೇಷ್ಠನಾದ ಸಹದೇವನೇ, ಇವೆಲ್ಲ ರತ್ನಗಳನ್ನೂ ಸಾಗಿಸು. ಧರ್ಮರಾಜನ ಕಾರ್ಯವು ನಿರ್ವಿಘ್ನವಾಗಿ ನೆರವೇರಲಿ.
ಸೂಚನೆ : 21/6/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.