ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯಾಗವನ್ನು ಯುಧಿಷ್ಠಿರನೇ ನಡೆಸುವುದೆಂದು ಕೃಷ್ಣನು ತೀರ್ಮಾನವಾಗಿ ಹೇಳಿದನು. ಅದಕ್ಕೆ ಯುಧಿಷ್ಠಿರನು ಉತ್ತರಿಸುತ್ತಾ ಹೀಗೆ ಹೇಳಿದನು: "ಕೃಷ್ಣ, ನನ್ನ ಸಂಕಲ್ಪ ಸಫಲವಾಯಿತು. ಕಾರ್ಯಸಿದ್ಧಿಯೂ ಅವಶ್ಯವಾಗಿ ಆಗುವಂತಹುದೇ: ಏಕೆಂದರೆ, ಓ ಹೃಷೀಕೇಶನೇ, ನೀನು ನಿನ್ನ ಇಚ್ಛೆಯಿಂದಲೇ ಇಲ್ಲಿ ಉಪಸ್ಥಿತನಾಗಿರುವೆ".
ಅಂತೂ ಕೃಷ್ಣನ ಅನುಜ್ಞೆಯನ್ನು, ಎಂದರೆ ಅನುಮತಿಯನ್ನು, ಪಡೆದವನೇ, ತನ್ನ ಭ್ರಾತೃಗಳೊಂದಿಗೆ ಯುಧಿಷ್ಠಿರನು ರಾಜಸೂಯಯಜ್ಞವನ್ನು ಮಾಡಲೋಸುಗ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳಲು ಆರಂಭಿಸಿದನು.
ಶತ್ರುಸಂಹಾರಿಯಾದ ಯುಧಿಷ್ಠಿರನು, ಯೋಧರಲ್ಲಿ ಶ್ರೇಷ್ಠನಾದ ಸಹದೇವನಿಗೆ, ಹಾಗೂ ಎಲ್ಲ ಮಂತ್ರಿಗಳಿಗೂ, ಆಮೇಲೆ ಅಪ್ಪಣೆಯಿತ್ತನು: “ಬ್ರಾಹ್ಮಣರು ಹೇಳಿದಂತೆ ಈ ಯಜ್ಞಕ್ಕೆ ಅಂಗ-ಭೂತವಾಗಿರುವ ಎಲ್ಲ ಮಂಗಳ-ಸಾಧನಗಳನ್ನೂ ಸಿದ್ಧಪಡಿಸಿಕೊಳ್ಳಿ.
ಧೌಮ್ಯರು ಹೇಳುವ ಯಜ್ಞಸಾಮಗ್ರಿಯನ್ನು ದೊರೆತಂತೆ ದೊರೆತಂತೆ ಹಾಗೂ ಕ್ರಮಾನುಸಾರವಾಗಿ, ಸೇವಕಜನರು ತರುವುದಾಗಲಿ.
ಅನ್ನ ಮುಂತಾದುವುಗಳ ಸಂಗ್ರಹಕಾರ್ಯದಲ್ಲಿ ಇಂದ್ರಸೇನ, ವಿಶೋಕ, ಅರ್ಜುನಸಾರಥಿಯಾದ ಪೂರು - ಇವರುಗಳು ತೊಡಗಿದಲ್ಲಿ ನನಗೆ ಸಂತೋಷವಾಗುತ್ತದೆ. ಎಲ್ಲರಿಗೂ ಇಷ್ಟವಾಗುವ ಹಾಗೂ ಒಳ್ಳೆಯ ರಸಗಳಿಂದಲೂ ಗಂಧಗಳಿಂದಲೂ ಕೂಡಿರುವ ಅಡಿಗೆಗಳನ್ನು ಮಾಡೋಣವಾಗಲಿ.”
ಯುಧಿಷ್ಠಿರನು ಈ ಮಾತುಗಳನ್ನು ಹೇಳುತ್ತಿದ್ದಂತೆಯೇ ಸಹದೇವನು ಇದೆಲ್ಲವೂ ಆಗಿದೆಯೆಂಬುದಾಗಿ ಯುಧಿಷ್ಠಿರನಿಗೆ ತಿಳಿಸಿದನು. ಸಾಕ್ಷಾದ್ ವೇದಗಳೇ ಮೈತಾಳಿಬಂದಂತಿದ್ದ ಋತ್ವಿಕ್ಕುಗಳನ್ನು ಆಗ ಯುಧಿಷ್ಠಿರನು ಬರಮಾಡಿದನು. ವ್ಯಾಸಮಹರ್ಷಿಗಳೇ ಅಲ್ಲಿ ಬ್ರಹ್ಮಸ್ಥಾನವನ್ನು ಅಲಂಕರಿಸಿದರು. ಧನಂಜಯಗೋತ್ರದಲ್ಲಿ ಶ್ರೇಷ್ಠನೆನಿಸಿದ ಸುಸಾಮ ಎಂಬ ಋಷಿಯು ಸಾಮಗಾನವನ್ನು ಮಾಡಿದನು. ಬ್ರಹ್ಮಿಷ್ಠನಾದ ಯಾಜ್ಞವಲ್ಕ್ಯನು ಅಧ್ವರ್ಯುವರ್ಯನಾದನು. ಇನ್ನು ಹೋತೃವಾಗಿ ವಸುಪುತ್ರನಾದ ಪೈಲನು ಬಂದಿದ್ದನು. ಅವರುಗಳ ಪುತ್ರವರ್ಗ-ಶಿಷ್ಯವರ್ಗಗಳು ಧೌಮ್ಯಮುನಿಯೊಂದಿಗೆ ಸಹಕರಿಸಿದರು.
ಯಜ್ಞವು ಆರಂಭವಾಯಿತು. ಮೊದಲು ಪುಣ್ಯಾಹವಾಚನ ಹಾಗೂ ಯಜ್ಞವಿಧಿಗಳ ವ್ಯವಸ್ಥಾಪನಗಳಾದವು. ಯಜ್ಞಸ್ಥಾನಕ್ಕೆ ಶಾಸ್ತ್ರೋಕ್ತಪೂಜೆಯು ಸಂದಿತು. ರಾಜಾಜ್ಞಾನುಸಾರವಾಗಿ ಶಿಲ್ಪಿಗಳು ದೇವಮಂದಿರಗಳಿಗೆ ಸಮಾನವೆನಿಸುವಂತೆ ವಿಶಾಲವೂ ಸುಗಂಧಭರಿತವೂ ಆದ ಭವನಗಳನ್ನು ನಿರ್ಮಿಸಿಕೊಟ್ಟರು.
ಆಮೇಲೆ ಯುಧಿಷ್ಠಿರನು, ಮಂತ್ರಿಯಾದ ಸಹದೇವನನ್ನು ಬರಮಾಡಿಕೊಂಡನು. ವಿಪ್ರರನ್ನು ಅಮಂತ್ರಿಸಲು ಶೀಘ್ರಗಾಮಿಗಳಾದ ದೂತರನ್ನು ಕಳುಹಿಸೆಂದು ಅಪ್ಪಣೆಯಿತ್ತನು. ಆತನೂ ದೂತರನ್ನು ಕರೆಸಿ, ಬೇರೆ ಬೇರೆ ರಾಷ್ಟ್ರಗಳಲ್ಲಿನ ವಿಪ್ರರನ್ನೂ ಕ್ಷತ್ರಿಯರನ್ನೂ ಹಾಗೆಯೇ ಮಾನ್ಯರಾದ ವೈಶ್ಯರನ್ನೂ ಶೂದ್ರರನ್ನೂ ಕರೆತನ್ನಿರಿ - ಎಂದನು.
ಯುಧಿಷ್ಠಿರನ ಅಪ್ಪಣೆಯಂತೆ, ಶೀಘ್ರಗಾಮಿಗಳಾದ ದೂತರು ಕರೆತರಬೇಕಾದವರನ್ನೆಲ್ಲ ಕರೆತಂದರು.
ಆಗಮಿಸಿದ ವಿಪ್ರರು ರಾಜಸೂಯಕ್ಕಾಗಿ ಯುಧಿಷ್ಠಿರನಿಗೆ ದೀಕ್ಷೆಯನ್ನಿತ್ತರು. ಯಜ್ಞದೀಕ್ಷೆ ತೊಟ್ಟ ಯುಧಿಷ್ಠಿರನೂ ಯಜ್ಞಮಂಟಪಕ್ಕೆ ವಿಪ್ರರೊಂದಿಗೆ ತೆರಳಿದನು. ಭ್ರಾತೃಗಳು, ಜ್ಞಾತಿ(ಬಂಧು)ಗಳು, ಸುಹೃತ್(ಮಿತ್ರರು), ಸಚಿವರು - ಇವರುಗಳೆಲ್ಲಆಗಮಿಸಿದ್ದರು. ನಾನಾದೇಶಗಳಿಂದ ಬಂದ ಇವರುಗಳೊಂದಿಗೆ ಕೂಡಿದ ಧರ್ಮರಾಜನು ಧರ್ಮವೇ ಮೈತಾಳಿಬಂದಂತಿದ್ದನು.
ನಾನಾವಿದ್ಯೆಗಳಲ್ಲೂ ವೇದ-ವೇದಾಂಗಗಳಲ್ಲೂ ನಿಷ್ಣಾತರಾದ ವಿಪ್ರರು ಬೇರೆ ಬೇರೆ ದೇಶಗಳಿಂದ ಆಗಮಿಸಿದರು. ಅವರೆಲ್ಲರಿಗೂ ಆವಾಸಗಳನ್ನು ಕಲ್ಪಿಸಲಾಯಿತು. ಅವರಿಗೆ ಅನ್ನ-ವಸ್ತ್ರಗಳ ವ್ಯವಸ್ಥೆಯಾಯಿತು. ಯಾವುದೇ ಋತುವಿನ ಸೌಕರ್ಯಗಳೂ ದೊರೆಯುವಂತೆ ಶಿಲ್ಪಿಗಳು ವ್ಯವಸ್ಥೆಯನ್ನು ಮಾಡಿದರು.
ರಾಜನಿಂದ ಸತ್ಕೃತರಾಗಿ ಅಲ್ಲಿ ಅನೇಕ ವಿಪ್ರರು ವಾಸಿಸಿದರು. ಪರಸ್ಪರ ಅನೇಕ ಕಥಾಲಾಪಗಳನ್ನು ಮಾಡಿದರು. ನಟ-ನರ್ತಕರನ್ನು ಕಂಡರು. ಯಥೇಷ್ಟವಾದ ಭೋಜನಗಳು ಮಾತುಕತೆಗಳು - ಇವುಗಳ ಸದ್ದೇ ನಿರಂತರವಾಗಿ ಅಲ್ಲಿ ಕೇಳಿಬರುತ್ತಿತ್ತು. ಅಲ್ಲಿ ನಡೆದ ದಾನಕ್ರಿಯೆ-ಭೋಜನಕ್ರಿಯೆಗಳಿಗೆ ಮಿತಿಯೇ ಇರಲಿಲ್ಲ. ಲಕ್ಷ ಗೋಗಳ ದಾನ, ಶಯನಗಳ ದಾನ, ಸುವರ್ಣನಾಣ್ಯಗಳ ದಾನ - ಈ ಕೆಲಸಗಳಲ್ಲೇ ಧರ್ಮರಾಜನು ಮುಳುಗಿದ್ದನು.
ಸೂಚನೆ : 19/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.