ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೭೩. ಕಣ್ಣಿದ್ದೂ ಕುರುಡರು ಯಾರು?
ಉತ್ತರ- ನಾಸ್ತಿಕ ಮನುಷ್ಯ.
ಪ್ರತಿಯೊಬ್ಬ ಮಾನವನೂ ಕೂಡ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಎಂಬ ಐದು ಇಂದ್ರಿಯಗಳನ್ನು ಪಡೆದು, ಅವುಗಳ ಮೂಲಕ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎಂಬ ಐದು ವಿಷಯಗಳನ್ನು ಮತ್ತು ಈ ಐದು ಇಂದ್ರಿಯಗಳಿಂದಲೇ ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಐದು ಭೂತಗಳನ್ನೂ ಅನುಭವಿಸುತ್ತಿದ್ದಾನೆ. ಇವುಗಳನ್ನೇ ‘ಐಂದ್ರಿಯಕ ಪ್ರಪಂಚ’ ಎಂಬುದಾಗಿ ಕರೆಯಲಾಗುತ್ತದೆ. ಒಟ್ಟಾರೆ ನಮ್ಮ ಇಂದ್ರಿಯಗಳಿಂದ ಈ ಬಾಹ್ಯ ಪ್ರಪಂಚವನ್ನುಅರ್ಥಮಾಡಿಕೊಳ್ಳುತ್ತಿದ್ದೇವೆ. ಆದರೆ ಈ ಇಂದ್ರಿಯಗಳಿಂದ ಮಾತ್ರ ಕಾಣುವ ವಿಷಯ ಸತ್ಯ; ಉಳಿದವು ಮಿಥ್ಯ ಎಂಬುದಾಗಿ ಹೇಳುವುದನ್ನು ನೋಡುತ್ತೇವೆ. ಇದನ್ನೇ ‘ನಾಸ್ತಿಕತೆ’ ಎಂಬುದಾಗಿ ಕರೆಯುತ್ತೇವೆ. ಹಾಗಾದರೆ ನಾವು ಇಂದ್ರಿಯಕ್ಕೆ ಕಾಣುವುದನ್ನು ಮಾತ್ರ ಸತ್ಯ ಎಂದು ಒಪ್ಪಿ, ಇಂದ್ರಿಯಕ್ಕೆ ಕಾಣದಿರುವ ಇನ್ನೊಂದು ಪ್ರಪಂಚವನ್ನು ಒಪ್ಪದಿದ್ದರೆ ಆಗುವ ಅನುಕೂಲ ಅಥವಾ ಪ್ರತಿಕೂಲತೆ ಏನು? ಎಂಬುದನ್ನು ನಾವು ಚಿಂತಿಸಬೇಕಲ್ಲವೇ?.
ಯಾವುದೇ ಒಂದು ವಸ್ತುವನ್ನು ತೆಗೆದುಕೊಂಡಾಗ ಅದರ ಒಂದು ಭಾಗ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಅದರ ಇನ್ನೊಂದು ಭಾಗ ಕಾಣದೆ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ಸತ್ಯ. ಇಷ್ಟು ಎದುರಿಗೆ ಕಾಣುವ ವಸ್ತುವೇ ನಮಗೆ ಕೆಲವೊಮ್ಮೆ ಕಾಣುತ್ತದೆ; ಕೆಲವೊಮ್ಮೆ ಕಾಣುವುದಿಲ್ಲ ಎಂಬ ಪರಿಸ್ಥಿತಿ ಇದೆ ಎಂದಾದರೆ ಇನ್ನು ಕಣ್ಣಿಗೇ ಕಾಣದಿರುವ ವಸ್ತುವಿನ ವಿಷಯದ ಬಗ್ಗೆ ನಾವು ಮಾತನಾಡುವುದು ಹೇಗೆ? ಎಂಬುದು ಕೂಡ ಅಷ್ಟೇ ವಿಮರ್ಶಿಸಬೇಕಾದ ವಿಷಯವಲ್ಲವೇ!? ಅಥವಾ ಒಪ್ಪಿಕೊಳ್ಳಬೇಕಲ್ಲವೇ?
ಇಲ್ಲಿ ‘ಇಲ್ಲ’ ಎಂಬುವವನು ‘ನಾಸ್ತಿಕ’, ‘ಇದೆ’ ಎಂಬುವನು ಆಸ್ತಿಕ. ಅಂದರೆ ಧರ್ಮ ಎಂಬುದಿದೆ; ಆ ಧರ್ಮಕ್ಕೆ ಕಾರಣವಾದ ಕರ್ಮ ಇದೆ; ಕರ್ಮದಿಂದ ಕಾಣದ ಧರ್ಮವು ಸಿದ್ಧವಾಗುತ್ತದೆ. ನಮಗೆ ಕಾಣುವ ಕರ್ಮವೇ ಧರ್ಮರೂಪವಾಗಿ ಆದಾಗ, ಹೊಟ್ಟೆ ನೋವಿಗೆ ಆಹಾರ ತಿನ್ನಿದಿದ್ದರೂ ತಿಂದ ಆಹಾರದಿಂದಲೇ ಕಾಣದ ಹೊಟ್ಟೆನೋವನ್ನು ಹೇಗೆ ಅನುಭವಿಸುತ್ತೇವೋ, ಅಂತಹ ಧರ್ಮವನ್ನು ಸಾಧಿಸುವ ರೀತಿಯಲ್ಲಿ ಕರ್ಮವಿದ್ದಾಗ ಅದು ನಮಗೆ ಕಾಣದಿದ್ದರೂ ‘ಇದೆ’ ಎಂದು ಒಪ್ಪಬೇಕಾಗುತ್ತದೆ. ಅದು ಅನುಭವಸತ್ಯ ಎಂದು ಪರಿಗಣಿತವಾಗಬೇಕಾಗುತ್ತದೆ. ಹತ್ತಾರು ಜನ, ಹತ್ತಾರು ಬಾರಿ, ಹತ್ತು ಹಲವು ಕಡೆ ಒಂದೇ ಸತ್ಯವನ್ನು ಅಹುದೆಂದಾಗ ಮಾತ್ರ ಅದು ಸತ್ಯವಾಗುತ್ತದೆ ತಾನೆ? ಈ ಹಿನ್ನೆಲೆಯಲ್ಲಿ ಚಿಂತಿಸಿದಾಗ ನಮಗೆ ತಿಳಿಯುವ ಅಂಶ ಇಷ್ಟೇ - ಒಬ್ಬ ವ್ಯಕ್ತಯ ಪರಿವಿತವಾದ ಬುದ್ಧಿಯಿಂದ ಒಂದು ವಿಷಯ ಇತ್ಯರ್ಥಕ್ಕೆ ಬರದು ಎಂದು. ಅದರ ಬಗ್ಗೆ ಪರಿಪೂರ್ಣ ಪರಿಚಯ ಬರಬೇಕಾದರೆ ಅದಕ್ಕೆ ಹಲವರ ಸಾಕ್ಷೀತ್ವ ಅತ್ಯಂತ ಮುಖ್ಯ. ಹಾಗಾಗಿ ಯಾವುದನ್ನು ತಿಳಿಯಬೇಕಾಗಿದೆಯೋ, ಯಾವುದನ್ನು ತಿಳಿಯುವುದಕ್ಕೋಸ್ಕರವೇ ನಮಗೆ ಭಗವಂತನು ಒಂದು ಸಾಧನವನ್ನು ಕೊಟ್ಟಿದ್ದಾನೋ, ಅದನ್ನು ಬಳಸಿಕೊಳ್ಳದಿದ್ದರೆ ಆಗ ಅದು ಇಲ್ಲದಂತೆಯೇ ಸರಿ. ಅಂದರೆ ಕಣ್ಣು ಕಿವಿ ಇತ್ಯಾದಿ ಇಂದ್ರಿಯಗಳನ್ನು ಕೇವಲ ಭೌತಿಕ ಪ್ರಪಂಚವನ್ನು ಮಾತ್ರ ಅರ್ಥಮಾಡಿಕೊಳ್ಳಲು ಬಳಸಿಕೊಳ್ಳದೆಯೇ ಈ ಇಂದ್ರಿಯಗಳಿಂದಲೇ ದೈವಿಕ ಪ್ರಪಂಚವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಯೋಗಶಾಸ್ತ್ರವೂ ಸಾರುತ್ತದೆ. ಹಾಗಾಗಿ ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಎಂಬುದಾಗಿ ಪರಿಗಣಿಸದೇ ಕಣ್ಣಿನ ಇನ್ನೊಂದು ಪಾರ್ಶ್ವದ ಭಾಗವು ನಮಗೆ ಕಾಣಿಸದಿದ್ದರೂ ಸತ್ಯ ಎಂದು ಹೇಗೆ ಒಪ್ಪಿಕೊಳ್ಳುತ್ತೇವೋ, ಹಾಗೆಯೇ ಸ್ಥೂಲ, ಸೂಕ್ಷ್ಮ, ಪರ ಎಂಬ ಮೂರು ಹಂತಗಳಿಂದ ಕೂಡಿದ ಅರ್ಥಪ್ರಪಂಚವಿದೆ ಎಂಬುದನ್ನು ಒಪ್ಪಬೇಕು. ಕಾಣುವ ಕಣ್ಣನ್ನು ಪಡೆದು ಕೊಂಡಾಗ ಮಾತ್ರ ಅವನು ಪುರುಷನಾಗುತ್ತಾನೆ. ಇಲ್ಲವಾದರೆ ಕಣ್ಣಿದ್ದು ಕುರುಡನಾಗಿ ಅವನೇ ನಾಸ್ತಿಕಪುರುಷನಾಗುತ್ತಾನೆ ಅಷ್ಟೇ.
ಸೂಚನೆ : 5/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.