Wednesday, September 2, 2026

ಪ್ರಶ್ನೋತ್ತರ ರತ್ನಮಾಲಿಕೆ 81 (Prasnottara Ratnamalike 81)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೮೧. ಪ್ರಾಣಕ್ಕಿಂತಲೂ ರಮ್ಯವಾದುದು ಯಾವುದು?

ಉತ್ತರ- ಕುಲದ ಧರ್ಮ ಮತ್ತು ಸಜ್ಜನಸಂಗ.


ಕುಲ ಎಂದರೆ ವಂಶ. ಆ ವಂಶದಲ್ಲಿ ಇರುವ ಒಳ್ಳೆಯ ಆಚಾರ ವಿಚಾರ ನಡವಳಿಕೆ ಇವೆಲ್ಲವನ್ನೂ ಒಟ್ಟಾಗಿ ಸೇರಿಸಿ ‘ಕುಲಧರ್ಮ’ ಎಂಬುದಾಗಿ ಕರೆಯಲಾಗಿದೆ. ನಮ್ಮ ಹಿಂದಿನವರು ಕುಲದ ಧರ್ಮಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ, ಅದನ್ನು ಉಳಿಸಲು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸುತ್ತಿರಲಿಲ್ಲ. ಕುಲಧರ್ಮವು ಹಾಳಾಗದಂತೆ ಅದನ್ನು ರಕ್ಷಿಸುವಲ್ಲಿ ಸರ್ವವಿಧವಾದ ಪ್ರಯತ್ನವನ್ನೂ ಮಾಡುತ್ತಿದ್ದರು. ಅದೇ ಅರ್ಥವನ್ನು ವಿವರಿಸುವ ಪ್ರಶ್ನೋತ್ತರ ಇದು. 


ಪ್ರಾಣಕ್ಕಿಂತಲೂ ಉತ್ತಮವಾದದ್ದು, ರಮಣೀಯವಾದದ್ದು ಯಾವುದು? ಎಂಬುದು. ಪ್ರಾಣಕ್ಕಿಂತಲೂ ಉತ್ಕೃಷ್ಟವಾದ ಸಂಗತಿಯು ಇರಲು ಸಾಧ್ಯವೇ? ಎಂದೆನಿಸಬಹುದು. ಪ್ರಾಣಕ್ಕಿಂತಲೂ ಉತ್ತಮವಾಗಬೇಕಾದರೆ ಅದು ಎಂತಹದ್ದಾಗಿರಬೇಕು! ಎಂದರೆ ಯಾವುದಕ್ಕೋಸ್ಕರ ಯಾವುದನ್ನು ನಾವು ತ್ಯಾಗ ಮಾಡಲು ಬಯಸುತ್ತೇವೋ, ತ್ಯಾಗ ಮಾಡುವ ವಿಷಯಕ್ಕಿಂತಲೂ ಉಳಿಸಿಕೊಳ್ಳಬೇಕಾದ ವಿಷಯ ಅದಕ್ಕಿಂತ ಉತ್ತಮವಾಗಿರಬೇಕಷ್ಟೆ! ಆಗ ಮಾತ್ರ ನಾವು ಉತ್ತಮವಾದದ್ದನ್ನು ರಕ್ಷಿಸಲು - ಉಳಿಸಲು ಅಲ್ಪವಾದದ್ದನ್ನು ಬಿಡುತ್ತೇವೆ. ಅಲ್ಪವಾದುದ್ದಕ್ಕೆ ಶ್ರೇಷ್ಠವಾದದ್ದನ್ನು ಎಂದೂ ಕೂಡ ನಾವು ಕಳೆದುಕೊಳ್ಳುವುದಿಲ್ಲವಷ್ಟೆ! “ಅಲ್ಪಸ್ಯ ಹೇತೋಃ ಬಹುಹಾತುಮಿಚ್ಛನ್ ವಿಚಾರಮೂಢಃ ಪ್ರತಿಭಾಸಿ ಮೇ ತ್ವಂ” ಕಾಳಿದಾಸನ ರಘುವಂಶ ಮಹಾಕಾವ್ಯದಲ್ಲಿ ಬರುವ ಒಂದು ಮಾತು. ಅಲ್ಪಕ್ಕೋಸ್ಕರ ಉತ್ತಮವಾದುದನ್ನು ಬಿಡುವವ ಮೂಢನಷ್ಟೇ! ಎಂಬುದು ಈ ಮಾತಿನ ಅರ್ಥ. ಅಧಿಕವಾದ ಬೆಲೆಯುಳ್ಳ ವಿಷಯವನ್ನು ಉಳಿಸಲು ಅಲ್ಪವಾದ ಬೆಲೆಯ ಉಳ್ಳ ವಸ್ತುವನ್ನು ಕಳೆದುಕೊಳ್ಳುವುದು ಸಹಜ. ಆದರೆ ಇದಕ್ಕೆ ವಿರುದ್ಧವಾದ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. ರಘುವಂಶದವರ ಮಾತನ್ನು ಮತ್ತು ಅವರ ನಡೆಯನ್ನು ನೋಡಿದಾಗ ಅವರ ಕುಲಧರ್ಮ ಹೇಗಿತ್ತು? ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ರಾಮನೂ ಕೂಡ ಸೀತಾ ಪರಿತ್ಯಾಗವನ್ನು ಮಾಡುವ ಸಂದರ್ಭದಲ್ಲಿ ಇದೇ ಮಾತನ್ನು ಹೇಳುತ್ತಾನೆ. “ಸೂರ್ಯವಂಶಕ್ಕೆ ಕಳಂಕ ನನ್ನಿಂದ ಬರುತ್ತದೆ ಎಂದಾದರೆ ನಾನು ಎಂತಹ ಕಾರ್ಯಕ್ಕೂ ಸಿದ್ಧ. ಏಕೆಂದರೆ ನನ್ನ ಹಿರಿಯರು ಪ್ರಾಣವನ್ನು ಕೊಟ್ಟು ಕುಲಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಹಾಗಾಗಿ ಆ ಕುಲಧರ್ಮವು ಹಾಳಾಗುವುದನ್ನು ಸಹಿಸುವುದಿಲ್ಲ, ಅದನ್ನು ಕಾಪಾಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ” ಎಂಬ ಮಾತನ್ನು ಹೇಳುತ್ತಾನೆ. ಭಗವದ್ಗೀತೆಯಲ್ಲಿ ಅರ್ಜುನನು ಭಗವಾನ್ ಶ್ರೀ ಕೃಷ್ಣನಿಗೆ ಹೇಳುವ ಮಾತು ” ಉತ್ಸನ್ನಕುಲಧರ್ಮಾಣಾಂ ನರಕೇ ನಿಯತಂ ವಾಸಃ” ಕುಲಧರ್ಮಗಳು ನಾಶವಾದರೆ ನರಕವಾಸವೇ ಗತಿ ಎಂದು. ಅಲ್ಲಿ ಅರ್ಜುನ ಹೇಳುವ ಮಾತುಗಳು “ಒಂದು ವೇಳೆ ಕುಲ ನಾಶವಾದರೆ ಕುಲಧರ್ಮಗಳು ಕುಲಾಚಾರಾರಗಳೂ ನಷ್ಟವಾಗುತ್ತವೆ, ಆದ್ದರಿಂದ ನಾನು, ಬಂಧುಬಾಂಧವರು ಅಣ್ಣತಮ್ಮಂದಿರು ಕುಲಗುರುಗಳು ಇವರಿಂದ ಕೂಡಿದ ಶತ್ರುಪಾಳಯವನ್ನು ನಾಶಮಾಡಲು ಇಷ್ಟಪಡುವುದಿಲ್ಲ” ಎಂದು. ಅಂದರೆ ಕೆಲವೊಮ್ಮೆ ಪ್ರಾಣ ಕೊಟ್ಟು, ಕೆಲವೊಮ್ಮೆ ಬೇರೆಯವರ ಪಾಣ ಉಳಿಸಿ ಕುಲಧರ್ಮವನ್ನು ಉಳಿಸಬೇಕಾಗುತ್ತದೆ ಎಂಬ ವಿಷಯವನ್ನು ಇತಿಹಾಸ ಪುಟಗಳಿಂದ ನಾವು ಅರ್ಥ ಮಾಡಿಕೊಳ್ಳಬೇಕು. ಪ್ರಾಣವನ್ನೂ ಕೊಟ್ಟಾದರೂ ಉಳಿಸಬೇಕಾದ ಇನ್ನೊಂದು ವಿಷಯವೇನೆಂದರೆ ಸಜ್ಜನರ ಸಂಗ ಎಂಬುದು. 


ಪ್ರಾಣ ಹೋದರೂ ಸಜ್ಜನರ ಸಂಗವನ್ನು ಮಾತ್ರ ನಾವು ಬಿಡಬಾರದು. ಅವರು ಯಾವ ಮಟ್ಟದಲ್ಲಿ ಜೀವನವನ್ನು ನಡೆಸಿರುತ್ತಾರೋ ಅಂತಹ ಜೀವನವನ್ನು ನಾವು ಮಾಡಬೇಕಾದರೆ ಅಂತಹ ಸಜ್ಜನರ ಸಂಗವನ್ನು ನಾವು ಬಿಡಬಾರದು ಎಂಬ ಮಾರ್ಮಿಕವಾದ ವಿಷಯ ನಮಗಿಲ್ಲಿ ಕಾಣಸಿಗುತ್ತದೆ.

ಸೂಚನೆ :30/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.