Saturday, January 4, 2025

ಕೃಷ್ಣಕರ್ಣಾಮೃತ 46 ನಮ್ಮತ್ತ ಬರುತ್ತಿರುವ ದೇವನಿಗೆ ಐದು ಹೋಲಿಕೆಗಳು (Krishakarnamrta 46)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಮಸಿ ರವಿರಿವೋದ್ಯನ್...

ಶ್ರೀಕೃಷ್ಣನನ್ನು ನಾವು ಭಜಿಸುತ್ತೇವೆ. ಭಜಿಸುತ್ತೇವೆ ಸರಿಯೇ, ಆದರೆ ಏಕೆ ಭಜಿಸಬೇಕು? - ಎಂಬ ಪ್ರಶ್ನೆಯು ಅಯುಕ್ತವಲ್ಲವಷ್ಟೆ? ನಾವು ಆತನನ್ನು ಭಕ್ತಿಯಿಂದ ಕರೆಯಬಹುದು. ಆದರೆ ಕರೆದರೆ ಆತನೇನು ಬಂದುಬಿಡುವನೇನು? - ಎಂದೂ ಕೇಳಬಹುದಷ್ಟೆ?

ಹೌದು, ಆಯಾತಿ, ಬರುವನು - ಎನ್ನುತ್ತಾನೆ, ಲೀಲಾಶುಕ. ಹೇಗೆ ಬರುತ್ತಾನೆ ಅವನು? ಎಂಬ ಪ್ರಶ್ನೆಗೆ ಅವನು ಬರುವ ಬಗೆಗಳನ್ನು ಕಣ್ಣಿಗೆ ಕಟ್ಟುವಂತೆ ಹಲವು ಹೋಲಿಕೆಗಳ ಮೂಲಕ ಹೇಳುತ್ತಾನೆ, ಕವಿ. ಪಂಚ-ಪ್ರಕಾರಗಳಲ್ಲಿ ಯಾವೊಂದು ಬಗೆಯಲ್ಲಾದರೂ ಬರಬಹುದು. ಒಂದಕ್ಕಿಂತ ಒಂದು ರೋಚಕವಾದ ಪರಿಗಳಲ್ಲಿ ಆಗಮಿಸುವ ಆತ, ಎಲ್ಲ ಬಗೆಗಳಲ್ಲೂ ಬರಬಹುದು.

ಹೇಗೆ ಹೇಗೆ ಬರುವ ಶ್ರೀಕೃಷ್ಣ?

ಕತ್ತಲಲ್ಲಿ ಸೂರ್ಯನಂತೆ ಬರುವ ಆತ. ನಾವೆಲ್ಲ ಕತ್ತಲಲ್ಲಿದ್ದೇವೆ ಅಲ್ಲವೆ? ಕತ್ತಲಿನಲ್ಲೇ ಇದ್ದು ಅಭ್ಯಾಸವಾಗಿಬಿಟ್ಟವರಿಗೆ ಬೆಳಕನ್ನು ಕಂಡರೆ ಭಯವೇ ಆಗಿಬಿಡುವುದೂ ಉಂಟು! ಕತ್ತಲೆಂದರೆ ಬರೀ ಹೊರಗತ್ತಲಲ್ಲವಲ್ಲ? ಹೊರಗತ್ತಲಿಗಿಂತ ಒಳಗತ್ತಲೇ ಹೆಚ್ಚು ಕಷ್ಟವಾದದ್ದು, ಅಲ್ಲವೇ? "ತಮೋಽಜ್ಞಾನಂ" ಎಂದು ಹೇಳುವಂತೆ ಅಜ್ಞಾನವೇ ಅಂಧಕಾರ.

ಇನ್ನು ಯಾವುದು ದ್ಯೋತಿಸುತ್ತಿರುವುದೋ ಅದೇ ಜ್ಯೋತಿ. ದ್ಯೋತಿಸುವುದೆಂದರೆ ಬೆಳಗುವುದು. ಸಂಧ್ಯೆಯೆಂಬ ಪದವೇ ಸಂಜೆಯೆಂಬ ಪದವಾಗುವಂತೆ, ದ್ಯೋತಿಯೆಂಬ ಪದವೇ ಜ್ಯೋತಿಯೆಂಬ ಪದವಾಗುವುದು.

ಜ್ಯೋತಿಯಿಂದಲೇ ಅಲ್ಲವೆ, ಕತ್ತಲು ಕಳೆಯುವುದು? ಎಂದೇ ಬೃಹದಾರಣ್ಯಕೋಪನಿಷತ್ತೂ "ತಮಸೋ ಮಾ ಜ್ಯೋತಿರ್ಗಮಯ" - ಎಂದು ಕೇಳಿಕೊಳ್ಳುವುದು ಅಲ್ಲವೇ? ಎಂದರೆ, ಕತ್ತಲೆ(ಯೆಡೆ)ಯಿಂದ ನನ್ನನ್ನು ಬೆಳಕಿ(ನೆಡೆ)ಗೆ ಸೇರಿಸು, ಎಂದರ್ಥ.

ಹಣತೆಯಿಂದಲೋ ಬೆಂಕಿಯಿಂದಲೋ ಕತ್ತಲು ಒಂದಿಷ್ಟು ಕಡಿಮೆಯಾಗಬಹುದು. ನಕ್ಷತ್ರಗಳಿಂದಲೂ ಚಂದ್ರಮನಿಂದಲೂ ಸಹ ಎಷ್ಟೋ ಒಂದಿಷ್ಟು ಹೋಗುವುದು, ಸರಿಯೇ. ಆದರೆ ಸೂರ್ಯೋದಯವಾಯಿತೆಂದರೆ ಅದು ಬೇರೆಯೇ ಲೆಕ್ಕ! ಅಂಧಕಾರವೇ ಅಳಿಯುವುದು!  ಕತ್ತಲು ಎತ್ತ ಹೋಯಿತೋ ತಿಳಿಯದಂತಾಗುವುದು.

ಇಂದ್ರಿಯಗಳ ಬೆಳಕೂ ಬೆಳಕೇ. ಪುಟ್ಟ ಹಣತೆಗಳ ಲೆಕ್ಕವದು. ಆದರೆ ಸೂರ್ಯನು ಬೆಳಕಿನ ರಾಶಿ. ಸುದರ್ಶನ ಚಕ್ರವನ್ನೋ ಗಣಪತಿಯನ್ನೋ  ಸ್ತುತಿಸುವಾಗ "ಸೂರ್ಯ-ಕೋಟಿ-ಸಮ-ಪ್ರಭ!" - ಎನ್ನುವುದುಂಟಲ್ಲವೇ? ಪ್ರಕೃತ, ಉದ್ಯನ್ ರವಿಃ - ಎಂದರೆ ಉದಯಿಸುತ್ತಿರುವ ರವಿ.

ಎರಡನೆಯ ಹೋಲಿಕೆ ದೋಣಿಯೆಂಬುದು. ಅಂಬು-ರಾಶಿಯೆಂದರೆ ಜಲ-ರಾಶಿ. ಅದು ದೊಡ್ಡ ನದಿಯೂ ಆಗಬಹುದು, ಸಮುದ್ರವೇ ಆಗಬಹುದು. ಅದರಲ್ಲಿ ಮುಳುಗುತ್ತಿರುವವರಿಗೆ ಆತನು ಪ್ಲವ. ಪ್ಲವವೆಂದರೆ ತೇಲುವ ವಸ್ತು, ಇಲ್ಲಿ ದೋಣಿ. ಸಂಸಾರವನ್ನೇ ಸಾಗರವೆಂದು ಚಿತ್ರಿಸುವುದು ಉಂಟಲ್ಲವೇ? ಅದನ್ನು ದಾಟಿ, ಆಚೆಯ ದಡವನ್ನು ಸೇರಬೇಕಾದರೆ ಆತನೇ ದೋಣಿಯಂತೆ ಇರತಕ್ಕವನು. ಮಜ್ಜನವೆಂದರೆ ಮುಳುಗುವುದು. ಮುಳುಗಿದರೆ ಕಥೆಯೇ ಮುಗಿಯಿತು. ಹಾಗಿರಲು, ಮುಳುಗುವವರಿಗೆ ದೋಣಿಯಂತೆ ಆತನೇ ಆಸರೆಯಾಗಿರುವನು.

ಮೂರನೆಯ ಹೋಲಿಕೆ ಮೋಡವೆಂಬುದು. ಬಾಯಾರಿದವರಿಗೆ ಬೇಕು ನೀರು. ತೃಷೆಯೆಂದರೆ ಬಾಯಾರಿಕೆ. ಬಾಯಾರಿಕೆಯುಳ್ಳವನು ತೃಷಿತ. ತೀವ್ರವಾಗಿ ಬಾಯೊಣಗಿದಾಗ ಆಹಾರವೂ ಬೇಡವಾಗುತ್ತದೆ. ನೀರೇ ಬೇಕೆನಿಸುತ್ತದೆ. ನಾಲ್ಕು ಹನಿ ಸಿಕ್ಕರೂ ಸಾಕು - ಎಂದುಕೊಳ್ಳುತ್ತಿರುವಾಗ, ಒಣಗಿರುವ ಭೂಮಿಗೂ, ನೀರಡಿಕೆಯುಳ್ಳ ಬಾಯಿಗೂ ಮೇಘವೆಂಬುದೇ ಜೀವಪ್ರದವಾಗಿರುವಂತಹುದು.

ನಾವು ಕಾಣುವ ಮೋಡಗಳು ನೀರನ್ನಷ್ಟೆ ಸುರಿಸುತ್ತವೆ. ಆ ನೀರೇನು ಸಿಹಿನೀರೇ? ಆದರೆ ಮೇಘವು ಸ್ವಾದು-ವರ್ಷಿಯಾದರಂತೂ ಆಗ ಆಗುವ ಆನಂದಕ್ಕೆ ಎಣೆಯೇ ಇರದು. ಸ್ವಾದುವೆಂದರೆ ಮಧುರವಾದದ್ದು. ಇಂಗ್ಲೀಷಿನ ಸ್ವೀಟ್ ಎಂಬ ಪದವು ಸಂಸ್ಕೃತದ ಸ್ವಾದುವಿನಿಂದಲೇ ಬಂದದ್ದು - ಎಂದು ಭಾಷಾ-ವಿಜ್ಞಾನಿಗಳು ಹೇಳುತ್ತಾರೆ. ಸ್ವಾದುವಾದ ಜಲವನ್ನು ವರ್ಷಿಸುವ ಮೇಘವೇ ಸ್ವಾದು-ವರ್ಷಿ. ಬಲುಬಾಯಾರಿದವನಿಗೆ ಮಧುರವಾದ ಕೆಲವೇ ಮಳೆಹನಿಗಳು ದೊರೆತರೂ ಕಡುಖುಷಿಪಡುವಂತಾಗುತ್ತದೆ. ಹಾಗೆ ನೀರುಂಡ ಮೇಘವನ್ನು ಹೋಲುವ ನಮ್ಮ ಕೃಷ್ಣನು ಮಧುರವನ್ನೇ ಸುರಿಸುವನು. ಮಧುರವೇನು? ಅವನೇ ಅಮೃತ!

ನಾಲ್ಕನೆಯ ಹೋಲಿಕೆ ನಿಧಿಯದ್ದು. ಸಂಸ್ಕೃತದಲ್ಲಿ ಕೆಲವೊಮ್ಮೆ ಒಂದೇ ಪದವೇ ಎರಡು ವಸ್ತು/ಅವಸ್ಥೆಗಳ ಸಾಮ್ಯವನ್ನು ಹೇಳಬಲ್ಲುದು. ನಿಧನವೆಂದರೆ ಸಾವು. ನಿಧನನೆಂದರೆ ಧನವಿಲ್ಲದವನು ಕೂಡ. ಹಣವಿಲ್ಲದವನನ್ನು ಲೋಕವು ಹೆಣದಂತೆ ಕಾಣುವುದಲ್ಲವೇ? ಅಂತೂ ಧನರಹಿತನ ಜೀವನವು ಬರಡೆನಿಸಿದರೆ ಆಶ್ಚರ್ಯವಿಲ್ಲ. ಬಡತನದಿಂದ ಬಲು ಬಳಲಿದವನು ಬೇಸತ್ತು ಬೇಸತ್ತು, ಸತ್ತುಹೋಗುವುದೇ ಲೇಸೆಂದುಕೊಳ್ಳುತ್ತಿರುವನು. ಆದರೆ ಅಷ್ಟರಲ್ಲಿ ನಿಧಿಯೇ ದೊರಕಿಬಿಟ್ಟರೆ! ಆತನ ಆನಂದಕ್ಕೆ, ಪರಮ-ಪರಿತೋಷಕ್ಕೆ, ಪಾರವೆಂಬುದುಂಟೇ?

ಎಂತಹ ನಿಧಿಯೇ ಸಿಕ್ಕರೂ ಮುಖ್ಯವಾಗಿ ಆರೋಗ್ಯವಿರಬೇಕು, ಅಲ್ಲವೇ? ಆಸ್ತಿಯನ್ನು ಅನುಭವಿಸಲೂ ಸ್ವಾಸ್ಥ್ಯ ಬೇಕು. ರೋಗಿಯಾದವನಿಗೆ ಆಮಯವು ವಾಸಿಯಾಗುವವರೆಗೂ ಏನೂ ಬೇಕಾಗುವುದಿಲ್ಲ. ಆಮಯವೆಂದರೆ ರೋಗ.

ತೀವ್ರವಾದ ಆಮಯವಾಗಿಬಿಟ್ಟರಂತೂ, "ದೇವರೇ, ಜೀವ-ಸಹಿತ ಉಳಿಸಪ್ಪಾ, ಉಳಿಸಪ್ಪಾ" ಎಂದು ಕೇಳಿಕೊಳ್ಳುವುದೇ ಆಗುತ್ತದೆ. ದೀರ್ಘ-ಕಾಲದ ತೀವ್ರಾಮಯವಾಗಿಬಿಟ್ಟರಂತೂ ಸಾವನ್ನೇ ಸ್ವಾಗತಿಸುವಂತಾಗಿಬಿಟ್ಟಿರುತ್ತದೆ! ಆ ದಶೆಯಲ್ಲಿರುವವರಿಗೆ ಒಳ್ಳೆಯ ವೈದ್ಯನೇ ದೊರೆತುಬಿಟ್ಟರೆ ಹೋದ ಜೀವ ಬಂದಂತಾಗುತ್ತದೆ.

ಒಳ್ಳೆಯ ಭೇಷಜವನ್ನು, ಎಂದರೆ ಔಷಧವನ್ನು, ಕೊಡುವ ವೈದ್ಯನು ಯಾರಿಗೆ ಬೇಡ? ಅಶ್ವಿನೀ-ದೇವತೆಗಳನ್ನು "ದೇವ-ಲೋಕದ ಭಿಷಕ್" ಎನ್ನುತ್ತಾರಲ್ಲವೇ? ವೈದ್ಯನನ್ನು ನಾರಾಯಣನೆಂದೇ ಹರಿಯೆಂದೇ ಭಾವಿಸುವುದುಂಟಲ್ಲವೇ? ಹಾಗೆ ನಮಗೊದಗಿರುವ ಅನಾದಿ-ಕಾಲದ ರೋಗವೆಂದರೆ ಈ ಸಂಸಾರವೇ. ಬಹಳ-ಕಾಲದಿಂದ ಕಾಯಿಲೆಯಿಂದ ಬಹಳವೇ ಬಳಲುತ್ತಿರುವವರೇ ದೀರ್ಘ-ತೀವ್ರಾಮಯ-ಗ್ರಸ್ತರು. ಅವರಿಗೆ ಭಿಷಕ್ ಆಗಿ - ಎಂದರೆ ವೈದ್ಯನಾಗಿ -ಬರುವವ ನಮ್ಮ ಕೃಷ್ಣ.

ಯಾರನ್ನಾದರೂ ಕಂಡಾಗ "ಆರೋಗ್ಯವೇ?" ಎಂದೋ, ಅಥವಾ  ಕ್ಷೇಮವೇ ಎಂದೋ, ಕುಶಲವೇ ಎಂದೋ, ಕೇಳುವುದುಂಟಲ್ಲವೇ? ಆರೋಗ್ಯವು ಕೆಟ್ಟಿರುವಾಗಲಂತೂ ಮತ್ತೆ ಆರೋಗ್ಯವನ್ನು ದಯಪಾಲಿಸತಕ್ಕವನು ಈ ವೈದ್ಯನೇ ಸರಿ! ಕೃಷ್ಣನು ವೈದ್ಯನಂತೆ ಬರುವನು!

ಹೀಗೆ ರವಿಯಂತೆ, ಪ್ಲವದಂತೆ, ಮೇಘದಂತೆ, ನಿಧಿಯಂತೆ, ಹಾಗೂ ಭಿಷಕ್ಕಿನಂತೆ - ಬರುವವ, ಬಂದು ಕುಶಲತೆಯನ್ನು ಕೊಡುವವನೇ ಕೃಷ್ಣ. ಕುಶಲವನ್ನು ಕೊಡಲೆಂದೇ ಬರುತ್ತಿರುವನು, ಈ ಶೌರಿ - ಎನ್ನುತ್ತಾನೆ, ಲೀಲಾಶುಕ.

ಏನು ಶೌರಿಯೆಂದರೆ? ಶೂರ-ವಂಶದಲ್ಲಿ ಬಂದವನು ಶೌರಿ. ಶೂರರ ವಂಶವು ಶೂರ-ವಂಶ. ಕೃಷ್ಣನ ಪೂರ್ವಜರು ಶೌರ್ಯದಲ್ಲಿ ಕಡಿಮೆಯೇನಲ್ಲ. ಇದರ ಜೊತೆಯಲ್ಲಿ ಶೂರಸೇನನ ವಂಶದಲ್ಲಿ ಬಂದವನು ಶೌರಿ. ಶೂರಸೇನನನ್ನು ಶೂರನೆಂದೇ ಸಂಕ್ಷೇಪವಾಗಿ ಕರೆಯುವುದುಂಟು. ಭೀಮಸೇನನನ್ನು ಭೀಮನೆಂದೇ ಹೇಳುವುದಿಲ್ಲವೇ? ಹೀಗಾಗಿ ಶೂರನ ವಂಶದಲ್ಲಿ ಬಂದನೆಂಬ ಕಾರಣಕ್ಕೂ ಇವನು ಶೌರಿ.

ಇಂತಹ ಶೂರನಾದ ಶೌರಿಯು ನಮಗೆ ಕುಶಲತೆಯನ್ನು ದಯಪಾಲಿಸಲಿ - ಎಂದು ನಾವು ಕೇಳೀಕೊಳ್ಳುವುದಲ್ಲ; ಆತನನ್ನು ಕರೆದರೆ ಕುಶಲವನ್ನು ಕೊಡಲೆಂದೇ ಬರುವನೆಂದು ಹೇಳುತ್ತಾನೆ, ಲೀಲಾಶುಕ. ಈ ಶ್ಲೋಕದಲ್ಲಿ ಸಂಸಾರವೆಂಬುದು ಕತ್ತಲೆಯಂತೆ, ಸಾಗರದಂತೆ, ಕೊನೆಯಿಲ್ಲದ ತರ್ಷದಂತೆ, ಎಂದರೆ ಬಾಯಾರಿಕೆಯಂತೆ, ನಿರ್ಧನತೆಯಂತೆ, ಹಾಗೆಯೇ ದೀರ್ಘವೂ ತೀವ್ರವೂ ಆದ ರುಜಿನದಂತೆ - ಎಂಬ ಧ್ವನಿಗಳು ಅನುಸ್ಯೂತವಾಗಿ ಬರುತ್ತಿರುವುದನ್ನು ಗಮನಿಸಬಹುದು.

ತಮಸಿ ರವಿರಿವೋದ್ಯನ್, ಮಜ್ಜತಾಮ್ ಅಂಬುರಾಶೌ

   ಪ್ಲವ ಇವ, ತೃಷಿತಾನಾಂ ಸ್ವಾದು-ವರ್ಷೀವ ಮೇಘಃ, |

ನಿಧಿರಿವ ನಿಧನಾನಾಂ, ದೀರ್ಘ-ತೀವ್ರಾಮಯಾನಾಂ

   ಭಿಷಗಿವ, ಕುಶಲಂ ನೋ ದಾತುಮ್ ಆಯಾತಿ ಶೌರಿಃ ||

ಸೂಚನೆ : 04/1/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.