Sunday, January 19, 2025

ವ್ಯಾಸ ವೀಕ್ಷಿತ 119 (Vyaasa Vikshita 119)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಅಗ್ನಿಗೇ ಅಜೀರ್ಣವಾಯಿತು!

ಶ್ವೇತಕಿಯ ಮಾತುಗಳನ್ನು ಕೇಳಿ, ರುದ್ರನು ದುರ್ವಾಸರನ್ನು ಬರಮಾಡಿಕೊಂಡು, "ವಿಪ್ರ-ಶ್ರೇಷ್ಠನೇ, ಈತನು ಮಹಾತ್ಮನಾದ ಶ್ವೇತಕಿ. ನನ್ನ ಆಣತಿಯಂತೆ ಈ ರಾಜನಿಗೆ ಯಜ್ಞವನ್ನು ಮಾಡಿಸು" ಎಂದನು. ಅದಕ್ಕೆ ಆತನೂ ಆಗಲೆಂದನು.

ಆ ಬಳಿಕ ಆ ಮಹಾತ್ಮನಾದ ರಾಜನ ಯಜ್ಞವು ವಿಧ್ಯನುಸಾರ ಕಾಲಕ್ಕೆ ಸರಿಯಾಗಿ ನೆರವೇರಿತು. ಬಹುವಾದ ದಕ್ಷಿಣೆಯಿಂದ ಕೂಡಿದ್ದ ಯಜ್ಞವದು.

ಅದು ಮುಗಿಯಲು, ಯಾಜಕರಾಗಿ ಬಂದಿದ್ದವರು, ಎಂದರೆ ಯಜ್ಞವನ್ನು ಮಾಡಿಸಲೆಂದು ಬಂದಿದ್ದವರು, ದುರ್ವಾಸರಿಂದ ಅನುಮತಿಯನ್ನು ಪಡೆದವರಾಗಿ ತಮ್ಮ ತಮ್ಮ ಎಡೆಗಳಿಗೆ ಹೊರಟರು. ಯಜ್ಞದೀಕ್ಷೆಯಲ್ಲಿದ್ದ ಸದಸ್ಯರೂ ಹಿಂತಿರುಗಿದರು. ರಾಜನೂ ಸ್ವನಗರಕ್ಕೆ ಹೋದನು.

ಅಲ್ಲಿ ಆತನನ್ನು ವೇದ-ಪಾರಂಗತರಾದ ಬ್ರಾಹ್ಮಣರು ವಂದಿಸಿದರು. ವಂದಿಗಳು, ಎಂದರೆ ಹೊಗಳುಭಟರು, ಹಾಗೂ ನಾಗರಿಕರು ಆತನನ್ನು ಅಭಿನಂದಿಸಿದರು.

ಇಂತಹ ನಡತೆಯುಳ್ಳ ರಾಜ-ಶ್ರೇಷ್ಠನಾದ ರಾಜರ್ಷಿ-ಶ್ವೇತಕಿಯು ದೀರ್ಘಕಾಲಾನಂತರ ಋತ್ವಿಕ್ಕುಗಳಿಂದ ಪ್ರಶಂಸಿಸಲ್ಪಟ್ಟು ಸ್ವರ್ಗಕ್ಕೆ ತೆರಳಿದನು.

ಆತನ ಯಜ್ಞದಲ್ಲಿ ಅಗ್ನಿಯು ಹನ್ನೆರಡು ವರ್ಷಗಳ ಕಾಲ ಹವಿಸ್ಸನ್ನು, ಎಂದರೆ ಘೃತವನ್ನು ಕುಡಿದಿದ್ದನಷ್ಟೆ. ಇಂತಹ ಯಜ್ಞದಲ್ಲಿ ಹಾಗೆ ಹವಿಸ್-ಸ್ವೀಕಾರ ಮಾಡಿದ ಅಗ್ನಿಗೆ ಪರಮ-ತೃಪ್ತಿಯೇ ಉಂಟಾಯಿತು. ಆ ಬಳಿಕೆ ಮತ್ತಿನ್ನಾರು ಅರ್ಪಿಸುವ ಹವಿಸ್ಸನ್ನೂ ಸ್ವೀಕರಿಸುವ ಇಚ್ಛೆಯಾಗಲಿಲ್ಲ. ಮೈಬಿಳಿಚಿಕೊಂಡಂತಾಗಿ, ಬಾಡಿಹೋಗಿ ಹಿಂದಿನ ಪ್ರಕಾಶವೇ ಹೊರಟುಹೋಯಿತು.

ಭಗವಂತನಾದ ವಹ್ನಿಗೇ ಹೀಗೆ ವಿಕಾರವೇರ್ಪಟ್ಟಿತು. ತೇಜೋ-ಹೀನನಾದನು, ಅಗ್ನಿ. ಬಹಳ ಗ್ಲಾನಿಯೂ, ಎಂದರೆ ಆಯಾಸವೂ, ಆಯಿತು, ಅವನಿಗೆ. ತಾನು ನಿಸ್ತೇಜನಾಗಿರುವುದು ಅಗ್ನಿಗೆ ಗೊತ್ತಾಯಿತು.

ಆ ಕಾರಣ ಆತನು ಬ್ರಹ್ಮನ ಪುಣ್ಯ-ಧಾಮಕ್ಕೆ ಹೋದನು. ಅಲ್ಲಿ ಆಸೀನನಾಗಿದ್ದ, ಎಂದರೆ ಕುಳಿತಿದ್ದ, ಬ್ರಹ್ಮನ ಬಳಿ ಈ ಮಾತನ್ನು ಹೇಳಿದನು:

"ಪೂಜ್ಯನೇ, ಶ್ವೇತಕಿ-ಮಹಾರಾಜನು ತನ್ನ ಯಜ್ಞದಿಂದ ನನಗೆ ಬಹಳವೇ ಸಂತೋಷವನ್ನುಂಟುಮಾಡಿದ್ದಾನೆ. ಆದರೆ ಅದರಿಂದಾಗಿ ನನಗೆ ತೀವ್ರವಾದ ಅರುಚಿಯುಂಟಾಗಿಬಿಟ್ಟಿದೆ. ನನ್ನ ತೇಜಸ್ಸೂ ಬಲವೂ ಕ್ಷೀಣವಾಗಿವೆ. ನಿನ್ನ ಅನುಗ್ರಹದಿಂದ ನಾನು ಹಿಂದಿನ ದೃಢತೆಯನ್ನು ಅಪೇಕ್ಷಿಸುತ್ತಿದ್ದೇನೆ."

ಅಗ್ನಿಯು ಹೀಗೆ ಹೇಳಲು, ಮುಗುಳ್ನಗೆ ನಗುತ್ತಾ ಬ್ರಹ್ಮನು ಹೇಳಿದನು: "ಹನ್ನೆರಡು ವರ್ಷಗಳ ಕಾಲ "ವಸೋರ್ಧಾರಾ" ಎಂಬ ಹವಿಸ್ಸನ್ನು ಸೇವಿಸಿರುವೆ. ಅದಕ್ಕೇ ಈ ಶ್ರಮವಾಗಿದೆ. ತೇಜೋಹೀನನಾಗಿರುವೆ ಎಂಬ ಕಾರಣಕ್ಕೇ ನೀನು ಖೇದಗೊಳ್ಳಬೇಕಾಗಿಲ್ಲ. ನೀನು ಮತ್ತೆ ಹಿಂದಿನಂತೆಯೇ ಆಗುವೆ. ನಾನು ನಿನ್ನ ಅರುಚಿಯನ್ನು ಕಾಲ ಕಾದು ಹೋಗಲಾಡಿಸುವೆ.

ಹಿಂದೆ ದೇವತೆಗಳ ಆದೇಶದಂತೆ ನೀನು ದೈತ್ಯರ ನೆಲೆಯೆನಿಸಿದ್ದ ಘೋರವಾದ ಖಾಂಡವ-ವನವನ್ನು ಭಸ್ಮ ಮಾಡಿದ್ದೆಯಲ್ಲವೇ? ಈಗ ಅಲ್ಲಿ ಎಲ್ಲ ಪ್ರಾಣಿಗಳೂ ನಿವಾಸ ಮಾಡುತ್ತಿವೆ, ಅಗ್ನಿಯೇ. ಅವುಗಳ ಮೇದಸ್ಸಿನಿಂದ ತೃಪ್ತನಾಗಿ ನೀನು ಸ್ವಸ್ಥನಾಗುವೆ. ಆ ವನವನ್ನು ಸುಡಲು ಬೇಗನೆ ಹೊರಡು. ನಿನ್ನ ಈ ಬಾಡುವಿಕೆಯಿಂದ ಬಿಡುಗಡೆ ಹೊಂದುವೆ." ಬ್ರಹ್ಮನ ಬಾಯಿಂದ ಬಂದ ಈ ಮಾತನ್ನು ಕೇಳಿದ ಅಗ್ನಿದೇವನು ಬಹಳವೇ ವೇಗದಿಂದ ಅಲ್ಲಿಗೆ ಓಡಿದನು.

ಖಾಂಡವಕ್ಕೆ ಬಂದನು. ವಾಯುವಿನ ಸಹಾಯವನ್ನೂ ಪಡೆದುಕೊಂಡು, ಒಡನೆಯೇ ಕ್ರೋಧಾವೇಶದಿಂದ ಜ್ವಲಿಸಿದನು. ಖಾಂಡವವು ಉರಿಯುತ್ತಿದ್ದುದನ್ನು ಅಲ್ಲಿ ವಾಸಮಾಡುತ್ತಿದ್ದ ಪ್ರಾಣಿಗಳು ಕಂಡವು.ಬೆಂಕಿಯನ್ನು ತಣಿಸಲು ಮಹಾಯತ್ನವನ್ನು ಮಾಡಿದವು.

ಸೂಚನೆ : 12/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.