Monday, January 6, 2025

ಯಕ್ಷ ಪ್ರಶ್ನೆ 119 (Yaksha prashne 119)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ –  119 ಸರ್ವಶ್ರೇಷ್ಠನಾದ ಧನಿಕ ಯಾರು?

ಉತ್ತರ - ಪ್ರಿಯ ಮತ್ತು ಅಪ್ರಿಯ, ಸುಖ ಮತ್ತು ದುಃಖ, ಅತೀತ ಮತ್ತು ಅನಾಗತ ಇವು ಯಾರಿಗೆ ಒಂದಾಗಿರುತ್ತವೆಯೋ ಅವನೇ ನಿಜಾರ್ಥದಲ್ಲಿ ಧನಿಕನಾಗುತ್ತಾನೆ.

ಈ  ಪ್ರಪಂಚದಲ್ಲಿ ಬಹಳ ದೊಡ್ಡ ಶ್ರೀಮಂತ ಯಾರು? ಎಂಬುದಾಗಿ ಯಕ್ಷನು ಪ್ರಶ್ನಿಸುತ್ತಾನೆ. ಸಾಮಾನ್ಯವಾಗಿ ಯಾರು ಶ್ರೀಮಂತ? ಎಂಬ ಪ್ರಶ್ನೆಗೆ ಉತ್ತರವಾಗಿ 'ತನಗೆ, ತನ್ನ ಪತ್ನಿ ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳಿಗೆ ಹೀಗೆ ತಲೆತಲಾಂತರ ಕೂತು ತಿನ್ನುವಷ್ಟು ಹಣವನ್ನು ಗಳಿಸಿಕೊಂಡವನು' ಎಂದು ಹೇಳುವುದುಂಟು. "ಸರ್ವೇ ಗುಣಾಃ ಕಾಂಚನಮಾಶ್ರಯಂತಿ" ಎಂಬ ಸುಭಾಷಿತವೂ ಶ್ರೀಮಂತನಲ್ಲಿರುವ ಎಲ್ಲಾ ಅವಗುಣಗಳನ್ನೂ ಮುಚ್ಚಿಹಾಕುವುದೆಂದರೆ ಇದೇ ದುಡ್ಡು ಎಂಬ ದ್ರವ್ಯ ಎನ್ನಲಾಗಿದೆ. ದುಡ್ಡಿನಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಪದಾರ್ಥವನ್ನು ಪಡೆದು ಅದನ್ನು ಅನುಭವಿಸಬಹುದು; ತನಗೆ ಬೇಕಾದವರನ್ನು ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದು; ಹಣವಿದ್ದರೆ ಅಧಿಕಾರ, ಹಣವಿದ್ದರೆ ಕೆಲವೊಮ್ಮೆ ದೇವರನ್ನೂ (ದೇವಾಲಯ) ದರ್ಶನ ಮಾಡಬಹುದು ಎಂಬಷ್ಟರ ಮಟ್ಟಿಗೆ ಹಣದ ಮೇಲೆ ಭರವಸೆಯನ್ನು ಇಟ್ಟು, ಇದೇ ಸಂತೋಷದಾಯಕ ಮತ್ತು ಸುಖಜನಕ ಎಂದು ನಂಬಿದ್ದಾರೆ. ಇಂದಿನ ಶ್ರೀಮಂತಿಕೆಯ ವ್ಯಾಖ್ಯಾನ ಇಂತಿದೆ. ಆದರೆ ಧರ್ಮರಾಜನ ಉತ್ತರ ಇದಕ್ಕೆ ಭಿನ್ನವಾಗಿದೆ. ಪ್ರಿಯ ಮತ್ತು ಅಪ್ರಿಯ, ಸುಖ ಮತ್ತು ದುಃಖ, ಭೂತ ಮತ್ತು ಭವಿಷ್ಯ ಯಾರಿಗೆ ಸಮಾನವಾಗಿರುತ್ತದೆಯೋ ನಿಜವಾಗಿಯೂ ಅವನೇ ಶ್ರೀಮಂತ ಎಂಬ ಉತ್ತರವನ್ನು ಇಲ್ಲಿ ಕೊಡುತ್ತಾನೆ. ಆದರೆ ಅದು ಹೇಗೆ ಸಾಧ್ಯ? 

ಭಗವಂತನು ಈ ಸೃಷ್ಟಿಯನ್ನು ಮಾಡುವ ಸಂದರ್ಭದಲ್ಲಿ ಜೀವಿಗಳಿಗೆ ಬೇಕಾಗುವ ಅನೇಕ ಪದಾರ್ಥಗಳನ್ನು ಅವುಗಳ ಜೊತೆಯಲ್ಲಿಯೇ ಸೃಷ್ಟಿ ಮಾಡಿದ್ದನ್ನು ನಾವು ಕಾಣಬಹುದು. ಆದರೆ ಆ ಪದಾರ್ಥಗಳು ಎಲ್ಲವೂ ಎಲ್ಲ ಜೀವಕ್ಕೂ ಅತ್ಯಂತ ಅಗತ್ಯ ಎಂಬುದಾಗಿ ಹೇಳಲಾಗುವುದಿಲ್ಲ. ಕೆಲವು ಜೀವಿಗಳಿಗೆ ಬೇಕಾದವುಗಳು; ಇನ್ನು ಕೆಲವು ಜೀವಿಗಳಿಗೆ ಬೇಡವಾಗಬಹುದು. ಹೀಗೆ ಯಾವುದೋ ಒಂದು ಒಬ್ಬನಿಗೆ ಪ್ರಿಯವಾದದ್ದು ಇನ್ನೊಬ್ಬನಿಗೆ ಅಪ್ರಿಯವಾಗಬಹುದು. ಅಂತೆಯೇ ಒಬ್ಬನಿಗೆ ಸುಖವಾದ ವಿಷಯ ಇನ್ನೊಬ್ಬರಿಗೆ ಅದು ದುಃಖಕರವಾಗಬಹುದು. ಹೀಗೆ ಈ ಪ್ರಪಂಚವು ಇಷ್ಟು ವಿಸ್ಮಯಕಾರಿಯಾಗಿಯೂ ವಿಭಿನ್ನವಾಗಿಯೂ ಇರುವುದರಿಂದ ಇಂತಹ ವಿಚಿತ್ರ ಸನ್ನಿವೇಶಗಳನ್ನು ಬಳಸಿಕೊಂಡು ಒಬ್ಬ ಪುರುಷ ಹೇಗೆ ತಾನೇ ಸುಖವನ್ನು ಪಡೆಯಬಹುದು ಎಂಬುದಾಗಿ ಈ ಪ್ರಶ್ನೆಯಲ್ಲಿ ವಿವರಿಸಲಾಗಿದೆ. ನಿಜವಾಗಿಯೂ ಸುಖೀ ಅಂದರೆ ಯಾರು? ಅಥವಾ ನಿಜವಾಗಿ ಶ್ರೀಮಂತ ಅಂದರೆ ಯಾರು? ಕೇವಲ ವಸ್ತುಗಳನ್ನು ಸಂಗ್ರಹಿಸಿದರೆ ಅವನನ್ನು ಶ್ರೀಮಂತ ಎನ್ನಲಾಗದು. ಆದರೆ ಇರುವ ವಸ್ತುಗಳನ್ನು ಸರಿಯಾಗಿ ಬಳಸಿಕೊಂಡು ಅವುಗಳಲ್ಲಿ ತೃಪ್ತಿಪಡುವವರನ್ನೇ ಶ್ರೀಮಂತ ಎನ್ನಬೇಕು. ಯಾರ ಮನಸ್ಸು ತೃಪ್ತವಾಗಿರುತ್ತದೆಯೋ ಅವನೇ ನಿಜವಾಗಿಯೂ ಶ್ರೀಮಂತ. ಇದಕ್ಕೆ ಒಂದು ಸುಭಾಷಿತ ಹೀಗಿದೆ. ಕೆಲವರು ರೇಷ್ಮೆ ಬಟ್ಟೆಯನ್ನು ಧರಿಸಿ ಸಂತೋಷಪಡಬಹುದು, ಇನ್ನು ಕೆಲವರು ನಾರುವಸ್ತ್ರದಿಂದಲೇ ಸಮಾಧಾನಪಡಬಹುದು. ಆದರೆ ಇವರಿಬ್ಬರೂ ಅನುಭವಿಸುವ ಸಂತೋಷದಲ್ಲಿ ಭೇದವಿಲ್ಲ. ಸಂತೋಷಕ್ಕೆ ಹೊರಗಿನ ವಸ್ತು ಕಾರಣವಲ್ಲ. ಮನಸ್ಸೇ ಕಾರಣ. ಮನಸ್ಸೊಂದು ತೃಪ್ತವಾಗಿದ್ದರೆ ಶ್ರೀಮಂತ ಬಡವ ಎಂಬ ಭೇದಕ್ಕೆ ಅವಕಾಶವೇ ಇರುವುದಿಲ್ಲ ಎಂದು. ಮನಸ್ಸು ತೃಪ್ತಿಯನ್ನು ಪಟ್ಟರೆ ಆತ ಬಾಹ್ಯವಾದ ಹಣದ ವಿಷಯದಲ್ಲಿ ದರಿದ್ರನಾದರೂ ಶ್ರೀಮಂತನೇ. ತೃಪ್ತಿಪಡದಿದ್ದರೆ ಹಣ ಇದ್ದರೂ ಶ್ರೀಮಂತನಲ್ಲ. ಆದರೆ ಸುಖದುಃಖಗಳಲ್ಲಿ ಪ್ರಿಯ ಅಪ್ರಿಯಗಳಲ್ಲಿ, ಜಯ ಅಪಜಯಗಳಲ್ಲಿ ಹೀಗೆ ಎಲ್ಲಾ ಪರಿಸ್ಥಿತಿಯಲ್ಲಿ ಒಂದೇ ಸಮನಾಗಿರುವವನು ಸ್ಥಿತಪ್ರಜ್ಞನಾಗಿರುತ್ತಾನೆ. ಅವನೇ ಜ್ಞಾನಿಯಾಗಿರುತ್ತಾನೆ. ಅವನೇ ನಿಜವಾದ ಅರ್ಥದಲ್ಲಿ ಶ್ರೀಮಂತ ಎಂಬುದು ಪ್ರಶ್ನೋತ್ತರದ ಆಶಯವಾಗಿದೆ

ಸೂಚನೆ : 05/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.