Monday, January 27, 2025

ಪ್ರಶ್ನೋತ್ತರ ರತ್ನಮಾಲಿಕೆ 2

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧ - ಯಾರು ಗುರು ?

ಉತ್ತರ - ತತ್ತ್ವವನ್ನು ತಿಳಿದವನು, ಶಿಷ್ಯನ ಉದ್ಧಾರಕ್ಕಾಗಿ ನಿತ್ಯವೂ ಪ್ರಯತ್ನಶೀಲನಾದವನು.


ಸಾಮಾನ್ಯವಾಗಿ ಗುರು ಎಂಬ ಪದಕ್ಕೆ ಅರ್ಥವನ್ನು ಹೇಳುವಾಗ 'ಒಂದಕ್ಷರಂ ಕಲಿಸಿದಾತಂ ಗುರುಂ'- ಯಾರು ಪಾಠವನ್ನು ಹೇಳಿಕೊಡುತ್ತಾರೋ ಅವರನ್ನು 'ಗುರು' ಎಂದು ಹೇಳುವ ರೂಢಿಯುಂಟು. ಇಂದು ಈ ಪದವನ್ನು ಎಲ್ಲೆಲ್ಲೋ ಬಳಸುವ ಅಭ್ಯಾವನ್ನು ಮಾಡಿಕೊಂಡಿದ್ದೇವೆ. 'ಏನ್ ಗುರು? ಏನ್ ವಿಶೇಷ?' ಎಂಬುದಾಗಿ ಯಾರಾನ್ನಾದರೂ ಮಾತನಾಡಿಸುವಾಗ ಈ ಪದವನ್ನು ಬಳಸುತ್ತೇವೆ. ಇಂತಹ ಬೇರೆ ಬೇರೆ ಸಂದರ್ಭಗಳಲ್ಲಿ ಅತಿವಿಶಿಷ್ಟಾರ್ಥವನ್ನು ಕೊಡುವ ಈ ಪದವನ್ನು ಹಗುರವಾಗಿ ಬಳಸುವ ಅಭ್ಯಾಸವಾಗಿದೆ. ಆದರೆ ನಿಜವಾದ ಅರ್ಥವೇನು? ಎಂಬ ಬಗ್ಗೆ ಶ್ರೀಶಂಕರ ಭಗವತ್ಪಾದರು ಸಂಕ್ಷಿಪ್ತವಾದ ಒಂದು ವಾಕ್ಯ ಅಥವಾ ಪದಗುಚ್ಛ ಅಥವಾ ಒಂದು ಪದದಿಂದ ಅರ್ಥವಿವರಣೆಯನ್ನು ನೀಡಿರುವುದನ್ನು ನಾವು ಮನನ ಮಾಡಬೇಕಾಗಿದೆ. 

 'ಗುರು' ಎಂಬ ವಿಷಯಕ್ಕೆ ನಾವು ಬಂದಾಗ ಪ್ರತಿದಿನ ಒಂದು ಶ್ಲೋಕವನ್ನು ಹೇಳುತ್ತೇವೆ. ಗುರುರ್ಬ್ರಹ್ಮಾ ಗುರುರ್ವಿಷ್ಣು:... ಇತ್ಯಾದಿಯಾಗಿ ಅಂದರೆ ಈ ಗುರುವು ಬ್ರಹ್ಮ ವಿಷ್ಣು ಶಿವಾತ್ಮಕನು ಮತ್ತು ಅದಕ್ಕಿಂತಲೂ ಮೀರಿರುವಂತಹ  ಯಾವ ತತ್ವವಿದೆಯೋ ಅದನ್ನೇ ಗುರು ಎಂಬುದಾಗಿ ಕರೆಯಬೇಕು ಎಂಬ ಅಭಿಪ್ರಾಯ.  ಅಂದರೆ ಈ ಗುರುವು ಸೃಷ್ಟಿ ಸ್ಥಿತಿ ಮತ್ತು ಲಯಕಾರಕನಾಗಿ ಅಷ್ಟಲ್ಲದೆ ಇದಕ್ಕೂ ಮೂಲನಾದ ಪರಬ್ರಹ್ಮ ಸ್ವರೂಪನಾಗಿ  ಇರುತ್ತಾನೆ. ಹಾಗಾಗಿ ಇಂತಹ ಗುರುವು ಮಾತ್ರ ಶಿಷ್ಯನ ಉದ್ಧಾರವನ್ನು ಮಾಡಲು ಸಾಧ್ಯ. 


ಈ ಗುರು ಶಿಷ್ಯನ ಬುದ್ಧಿಯಲ್ಲಿ ಇರುವ ಅಜ್ಞಾನವನ್ನು ನೀಗಿಸಿ ಸುಜ್ಞಾನವನ್ನು ಬೆಳಗಿಸಬಲ್ಲ. ಶಿಷ್ಯನಲ್ಲಿ ಇರುವ ಉತ್ತಮವಾದ ಗುಣವನ್ನು ಸೃಜಿಸಬಲ್ಲ ಅಂತಹ ಗುಣವನ್ನು ಬೆಳೆಸಬಲ್ಲ ಹಾಗೆಯೇ ಶಿಷ್ಯನಲ್ಲಿ ಇರುವ ಅವಗುಣಗಳನ್ನು ಸಾಯಿಸಬಲ್ಲ. ಹಾಗಾಗಿ ಇಂತಹ ಮೂರು ಗುಣಗಳಿಂದ ಕೂಡಿರುವವನು ಮಾತ್ರವೇ ಗುರುವಾಗಬಲ್ಲ. ಇದಕ್ಕೆ ಶ್ರೀರಂಗ ಮಹಾ ಗುರುಗಳು "ಗುರು" ಎಂಬಲ್ಲಿ ಎರಡು ಕೊಂಬು ಇದೆಯಪ್ಪ ಎಂಬುದಾಗಿ ಹೇಳಿ ಆ ಎರಡು ಕೊಂಬುಗಳನ್ನು ತೆಗೆದರೆ ಅದು ಗರ ಅಂದರೆ ವಿಷವಾಗುತ್ತದೆ.  ಗುರು ತನ್ನ ಎರಡು ಕೊಂಬುಗಳಿಂದ ಶಿಷ್ಯನನ್ನು ಉದ್ದರಿಸಬಲ್ಲ.ಗುರುವಾದವನು ಶಿಷ್ಯನ ಉದ್ಧಾರವನ್ನೇ ದೃಷ್ಟಿಯಾಗಿಸಿಕೊಂಡು ತನ್ನ ಕಾರ್ಯವನ್ನು ಮಾಡುತ್ತಾನೆ ಹಾಗಾಗಿ ಇಂತಹ ಶಿಷ್ಯನ ಉದ್ಧಾರಕ್ಕಾಗಿ ಸತತ ಪರಿಶ್ರಮವನ್ನು ಮಾಡುವ ತತ್ವವನ್ನು ತಿಳಿದವನು ಮಾತ್ರವೇ ಗುರುವಾಗಬಲ್ಲ. "ಗುಕಾರಸ್ತು ಅಂಧಕಾರಃ ಸ್ಯಾತ್ ರುಕಾರಸ್ತು ತನ್ನಿರೋಧಕಃ । ಅಂಧಕಾರನಿರೋಧಿತ್ವಾತ್ ಗುರುರಿತ್ಯಭೀಧೀಯತೇ" - ಶಿಷ್ಯನಲ್ಲಿರುವ ಜ್ಞಾನಕ್ಕೆ ಆವರಣವಾದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನವನ್ನು ಉಂಟುಮಾಡಿ ತಾನು ಯಾವ ಜ್ಞಾನ ಆನಂದರೂಪವಾದ ಅನುಭವವನ್ನು ಪಡೆಯುತ್ತಾನೋ ಅಂತಹದ್ದೇ ಅನುಭವವನ್ನು ಉಂಟುಮಾಡಿಸಿದರೆ  ಆತ ಶಿಷ್ಯನಾಗುತ್ತಾನೆ. ಗುರುವಿನಲ್ಲಿ ಒಂದಾಗಿ ಶಿಷ್ಯನೂ ಆ ಗುರುರೂಪವನ್ನೇ ಪಡೆಯುತ್ತಾನೆ. ಇದೇ ಶಿಷ್ಯನ ಉದ್ಧಾರ. ಅಲ್ಲಿಯ ತನಕ ಯಾರು ಪ್ರಯತ್ನಶೀಲರೋ ಅವನು ತಾನೇ ನಿಜವಾದ ಗುರು!.


ಸೂಚನೆ : 26/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.