ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ತನ್ನ ಅನುಸ್ಯೂತವಾದ ಯಜ್ಞಕಾರ್ಯಗಳಿಗಾಗಿ ಆಶ್ರಮದಲ್ಲಿದ್ದ ವಿಪ್ರರನ್ನು ಶ್ವೇತಕಿಯು ಯಾಚಿಸಿದ ಪರಿ ಹೀಗೆ:
ನಾನು ಬೇಡಿಕೊಳ್ಳುತ್ತಿದ್ದರೂ ತಾವು ದ್ವೇಷದಿಂದ ನನ್ನನ್ನು ತ್ಯಜಿಸಿದರಾದರೆ ನಾನು ಬೇರೆ ಋತ್ವಿಕ್ಕುಗಳ ಬಳಿ ಹೋಗುವೆ - ಎಂದು ಹೇಳಿ ಸುಮ್ಮನಾದನು. ಅವರೂ ಕೋಪದಿಂದ ಹೇಳಿದರು.
"ರಾಜನೇ ನಿನ್ನ ಯಜ್ಞಗಳು ಮುಗಿಯುವುದೇ ಇಲ್ಲವಲ್ಲಾ! ಕರ್ಮಗಳಲ್ಲಿ ಸರ್ವದಾ ತೊಡಗಿ ನಾವೂ ಬಳಲಿದ್ದೇವೆ. ಆದ್ದರಿಂದ ನೀನು ನಮ್ಮನು ತ್ಯಜಿಸುವುದೇ ಲೇಸು. ನಿನಗೆ ಬುದ್ಧಿಮೋಹವು ಉಂಟಾಗಿರುವುದರಿಂದ ನೀನು ರುದ್ರನಲ್ಲಿಗೆ ಹೋಗುವುದೇ ಒಳಿತು. ಆತನೇ ನಿನಗೆ ಯಜ್ಞಮಾಡಿಸುವನು".
ಅವರ ಈ ಆಕ್ಷೇಪದ ಮಾತುಗಳನ್ನು ಕೇಳಿ ಕ್ರೋಧಗೊಂಡ ಶ್ವೇತಕಿ-ಮಹಾರಾಜನು ಕೈಲಾಸ-ಪರ್ವತಕ್ಕೆ ಹೋದನು. ಅಲ್ಲಿ ಉಗ್ರ-ತಪಸ್ಸನ್ನು ಕೈಗೊಂಡನು. ತೀಕ್ಷ್ಣ-ವ್ರತದಲ್ಲಿ ನಿಷ್ಠನಾಗಿ ದೀರ್ಘ-ಕಾಲ ನಿರಾಹಾರನಾಗಿದ್ದು ತಪಸ್ಸನ್ನು ನಡೆಸಿದನು. ಕೆಲವೊಮ್ಮೆ ಹನ್ನೆರಡು ದಿನಗಳಿಗೊಮ್ಮೆ, ಕೆಲವೊಮ್ಮೆ ಹದಿನಾರು ದಿನಗಳಿಗೊಮ್ಮೆ ಆಹಾರವನ್ನು ತೆಗೆದುಕೊಂಡನು. ಅದೂ ಕೇವಲ ಮೂಲಗಳನ್ನು (ಬೇರುಗಳನ್ನು) ಮತ್ತು ಹಣ್ಣುಗಳನ್ನಷ್ಟೇ ತೆಗೆದುಕೊಂಡನು. ಬಾಹುಗಳನ್ನು ಮೇಲೆತ್ತಿ, ಕಣ್ಣುಮಿಟುಕಿಸದೆ, ಮರದ ಬೆಂಡಿನಂತೆ ನಿಂತಿದ್ದು ಆರು ತಿಂಗಳ ಕಾಲ ಏಕ-ಭಾವದಿಂದ ತಪಸ್ಸನ್ನಾಚರಿಸಿದನು. ಮಹಾ-ತಪಸ್ಸನ್ನು ಆಚರಿಸುತ್ತಿದ್ದ ಆತನ ವಿಷಯದಲ್ಲಿ ಪ್ರಸನ್ನನಾದ ಶಂಕರನು ಅತನಿಗೆ ದರ್ಶನವಿತ್ತನು. ಸ್ನೇಹ-ಭರಿತವೂ ಗಂಭೀರವೂ ಆದ ಧ್ವನಿಯಿಂದ ಹೀಗೆ ಹೇಳಿದನು: ನರ-ಶ್ರೇಷ್ಠನೇ, ನಿನ್ನ ತಪಸ್ಸಿನಿಂದ ನಾನು ಸುಪ್ರೀತನಾಗಿದ್ದೇನೆ. ನಿನಗೆ ಬೇಕಾದ ವರವನ್ನು ಕೇಳಿಕೋ - ಎಂದು.
ರುದ್ರನ ಈ ಮಾತನ್ನು ಕೇಳಿದ ರಾಜರ್ಷಿ-ಶ್ವೇತಕಿಯು ಆತನಿಗೆ ಪ್ರಣಾಮಮಾಡಿ ಹೀಗೆ ನುಡಿದನು: "ಎಲ್ಲರಿಂದಲೂ ನಮಸ್ಕರಿಸಲ್ಪಡುವ ಭಗವಂತನೇ, ದೇವ-ದೇವೇಶನೇ, ನೀನು ಪ್ರಸನ್ನನೇ ಆಗಿದ್ದಲ್ಲಿ ನನ್ನ ಯಜ್ಞವನ್ನು ಮಾಡಿಸು" ಎಂದು.
ಆತನ ಮಾತನ್ನು ಕೇಳಿ ರುದ್ರನು ಮುಗುಳ್ನಗೆಯೊಂದಿಗೆ ಹೀಗೆ ಹೇಳಿದನು: ರಾಜನೇ ಯಜ್ಞವನ್ನು ಮಾಡಿಸುವುದು ನಮ್ಮ ಕಾರ್ಯವಾಗಲಾರದು. ಆದರೆ ಅದಕ್ಕಾಗಿಯೇ ನೀನು ಮಹಾ-ತಪಸ್ಸನ್ನು ಮಾಡಿರುವೆಯಾಗಿ, ಒಂದು ಷರತ್ತಿನ ಮೇಲೆ ನಿನಗೆ ಯಾಗವನ್ನು ಮಾಡಿಸುವೆ, ಎಂದು ಹೇಳಿ, ಮತ್ತೆ ನುಡಿದನು: ರಾಜಶ್ರೇಷ್ಠನೇ, ಹನ್ನೆರಡು ವರ್ಷಗಳ ಕಾಲ ನೀನು ಸಮಾಧಾನದಿಂದಿರುವ ಬ್ರಹ್ಮಚಾರಿಯಾಗಿದ್ದು ತುಪ್ಪದ ಧಾರೆಯನ್ನು ಎಡೆಬಿಡದೆ ಅಗ್ನಿಗೆ ಧಾರೆಯೆರೆಯುವೆಯಾದರೆ, ನೀನು ನನ್ನನ್ನು ಕೇಳಿಕೊಳ್ಳುತ್ತಿರುವುದನ್ನು ಪಡೆಯುವೆ".
ರುದ್ರನು ಹೀಗೆ ಹೇಳಲು, ರಾಜನಾದ ಶ್ವೇತಕಿಯು ಆತನು ಹೇಳಿದಂತೆಯೇ ಮಾಡಿದನು. ಹನ್ನೆರಡು ವರ್ಷಗಳು ಕಳೆಯಲು ಮಹೇಶ್ವರನು ಮತ್ತೆ ಬಂದನು. ರಾಜ-ಶ್ರೇಷ್ಠನಾದ ಶ್ವೇತಕಿಯನ್ನು ಕಾಣುತ್ತಲೇ ಶಂಕರನು ನುಡಿದನು:
"ನೃಪ-ಶ್ರೇಷ್ಠನೇ, ನಿನ್ನ ಯಜ್ಞ-ಕರ್ಮವನ್ನು ಮಾಡಿಸುವಿಕೆಯೆಂಬುದು - ಬ್ರಾಹ್ಮಣರಿಂದಲೇ ಆಗತಕ್ಕದ್ದು. ಆದುದರಿಂದ ನಿನ್ನ ಯಜ್ಞವನ್ನು ನಾನು ಮಾಡಿಸಲಾಗುವುದಿಲ್ಲ. ನನ್ನ ಅಂಶವೇ ಆಗಿರುವ ಬ್ರಾಹ್ಮಣ-ಶ್ರೇಷ್ಠನೊಬ್ಬನು ಭೂಮಿಯಲ್ಲಿದ್ದಾನೆ. ಅತನು ದುರ್ವಾಸನೆಂದು ಪ್ರಸಿದ್ಧಿಪಡೆದಿರುವ ಮಹಾ-ತೇಜಸ್ವಿ. ಆತನು ನನ್ನ ಅಪ್ಪಣೆಯಂತೆ ನಿನ್ನ ಯಜ್ಞವನ್ನು ನೆರವೇರಿಸಿಕೊಡುತ್ತಾನೆ. ಯಜ್ಞ-ಸಾಮಗ್ರಿಗಳನ್ನು ನೀನು ಸಿದ್ಧಪಡಿಸಿಕೋ."
ಆ ಬಳಿಕ ಯಜ್ಞ-ಸಂಭಾರಗಳನ್ನು, ಎಂದರೆ ಯಜ್ಞಕ್ಕೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡವನಾಗಿ, ಮತ್ತೆ ರುದ್ರನಲ್ಲಿಗೆ ಶ್ವೇತಕಿಯು ಹೋದನು. ಹೀಗೆ ಹೇಳಿದನು: "ಯಜ್ಞಕ್ಕೆ ಬೇಕಾದ ಸಂಭಾರಗಳನ್ನು ಸಿದ್ಧಪಡಿಸಿಕೊಂಡಿದ್ದಾಯಿತು, ಇನ್ನಿತರ ಉಪಕರಣಗಳನ್ನು ಸಹ ಎತ್ತಿಟ್ಟುಕೊಂಡದ್ದಾಗಿದೆ. ಮಹಾದೇವನೇ, ನಿನ್ನ ಪ್ರಸಾದದಿಂದ ನಾಳೆ ನನಗೆ ಯಜ್ಞ-ದೀಕ್ಷೆಯೆಂಬುದು ನೆರವೇರಲಿ" ಎಂದು.