Sunday, January 19, 2025

ಕೃಷ್ಣಕರ್ಣಾಮೃತ 47 ಕೃಷ್ಣ-ಕಟಾಕ್ಷ-ಸೌಂದರ್ಯ, ವೇಣು-ನಾದ-ಮಾಧುರ್ಯ (Krishakarnamrta 47)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕದಾ ವಾ ಕಾಲಿಂದೀ

ನಮಗೆ ತುಂಬ ಇಷ್ಟರಾದವರನ್ನು ಕಾಣಬೇಕೆಂಬ, ಮತ್ತೆ ಮತ್ತೆ ಕಾಣುತ್ತಿರಬೇಕೆಂಬ, ತವಕವು ಯಾರಿಗಿರದು? ನಮ್ಮ ಆದರಕ್ಕೆ ಪಾತ್ರರಾದವರನ್ನು ಕಂಡರೆ ಸಂತೋಷವಾಗುವುದು. ಆದರೆ ಅವರು ನಮ್ಮತ್ತ ದೃಷ್ಟಿಬೀರಿದರೆಂದರೆ  ಮತ್ತೂ ಹೆಚ್ಚು ಸಂತೋಷವೇ. ಕೃಷ್ಣನನ್ನು ಕುರಿತಾಗಿ ಇಂತಹ ಹಂಬಲ ಲೀಲಾಶುಕನದು. 

ಕೃಷ್ಣನು ಕಟಾಕ್ಷ ಬೀರಿದನೆಂದಷ್ಟೇ ಆದರೂ ಸಾಲದು.  ನಮ್ಮತ್ತ ಆತನು ಹಾಗೆ ದೃಷ್ಟಿಹಾಯಿಸಿದುದು ನಮಗೆ ಗೊತ್ತಾಗಬೇಕು. ಅದೂ ನಾವೇ ಕಣ್ಣಾರ ಕಂಡು ಗೊತ್ತಾಗಬೇಕು. ಅರ್ಥಾತ್, ಕೃಷ್ಣನೇ ಎದುರಿಗೆ ತೋರಬೇಕು, ಆತನ ಕಟಾಕ್ಷಗಳು ತನ್ನ ದೃಷ್ಟಿಗೆ ಗೋಚರವಾಗಬೇಕು - ಎಂಬುದೇ ಭಕ್ತ-ಲೀಲಾಶುಕನ ಹಂಬಲಿಕೆಯಾಗಿದೆ. ಎಂದು ಕಂಡೇನೋ ಆತನನ್ನು? - ಎಂದು ತನ್ನ ಹಾರ್ದವಾದ ಅಭಿಲಾಷವನ್ನು ತೋಡಿಕೊಳ್ಳುತ್ತಿದ್ದಾನೆ.

ಎಂತಹವು ಕೃಷ್ಣನ ಕಟಾಕ್ಷಗಳು? ಕೃಷ್ಣನೇ ಕಪ್ಪು; ಆತನ ಕಣ್ಗುಡ್ಡೆಯು ಮತ್ತೂ ಕಪ್ಪಾಗಿರಬೇಕಷ್ಟೆ. ಕಪ್ಪೆಂದ ಕೂಡಲೇ ಕೃಷ್ಣನಿಗೆ ಸಂಬಂಧಿಸಿದ ಕಪ್ಪೆಂದರೆ ಸ್ಮರಣೆಗೆ ಬರುವುದು, ಯಮುನೆಯ ಕಪ್ಪೇ.

ವೇದಗಳಲ್ಲಿ ಸಹ ಗಂಗೆ-ಯಮುನೆಯರನ್ನು ಸಿತಸರಿತ್-ಅಸಿತಸರಿತ್ ಎಂದಿದೆ. ಸಿತವೆಂದರೆ ಬೆಳ್ಳಗಿರುವುದು. ಅಸಿತ-ಸರಿತ್ ಎಂದರೆ ಕಪ್ಪುಬಣ್ಣದ ನದಿ, ಅರ್ಥಾತ್ ಯಮುನೆ. ಇಂದೂ ಸಹ ತ್ರಿವೇಣೀ-ಸಂಗಮದಲ್ಲಿ ಈ ಎರಡು ವರ್ಣದ ಪ್ರವಾಹಗಳು ಗೋಚರವಾಗುತ್ತವೆ. ಕಾಲ-ವರ್ಣದ ಯಮುನೆಗೆ ಇನ್ನೊಂದು ಹೆಸರೇ ಕಾಲಿಂದೀ.

ಶ್ಯಾಮಲ-ವರ್ಣಕ್ಕೇ ಹೆಸರಾದ ಮತ್ತೊಂದು ವಸ್ತುವೆಂದರೆ ಕನ್ನೈದಿಲೆ (ಕುವಲಯ). ಹೀಗೆ ಕಾಲಿಂದಿಯಂತೆಯೂ ಕುವಲಯದ ದಳಗಳಂತೆಯೂ ಕಪ್ಪಗಿರುವುವು ಶ್ರೀಕೃಷ್ಣನ ಕಣ್ಗುಡ್ಡೆಗಳು, ಅರ್ಥಾತ್ ಕಟಾಕ್ಷಗಳು.

"ಕಾಲಿಂದಿಯಲ್ಲಿರುವ ಕುವಲಯದಳಗಳಂತೆ" - ಎಂದೂ ಅರ್ಥಮಾಡಬಹುದು. ಅಂತೆಯೇನು? ಕಾಲಿಂದಿಯ ಕುವಲಯಗಳಿಗಿಂತಲೂ ಮಿಗಿಲಾಗಿ  ಕಪ್ಪಗಿರುವುವು ಅವು - ಎಂದೂ ಅರ್ಥವು ಶಕ್ಯ! ಒಂದರ್ಥದಲ್ಲಿ, ಕೃಷ್ಣನನ್ನೇ ಕಾಲಿಂದಿಯೆಂದುಕೊಂಡರೆ, ಅವನ ಕಟಾಕ್ಷಗಳೇ ಅಲ್ಲಿಯ ಕುವಲಯಗಳು!

ಕಣ್ಮನಸ್ಸುಗಳನ್ನು ಸೆಳೆಯುವ ಆ ಕಟಾಕ್ಷಗಳಲ್ಲಿ ಮತ್ತೆರಡು ವಿಶೇಷಗಳೂ ಇವೆ. ಅವುಗಳು ತರಲ, ಎಂದರೆ ಚಂಚಲ; ಎಂದೇ ಆಕರ್ಷಕವೂ. ಅಲೆಗಳ ಪ್ರಭಾವದಿಂದಾಗಿ ಯಮುನಾ-ಕುವಲಯಗಳೂ ಚಂಚಲವಲ್ಲವೇ? ಎರಡನೆಯದಾಗಿ, ಹೀಗೆಂದು ಹೇಳಲಾಗದ ಕರುಣಾ-ಲಹರಿಯಿಂದ ಅವು ವ್ಯಾಪ್ತವಾಗಿವೆ.

ಕೃಷ್ಣನನ್ನು ಎದುರಿಗೇ ಕಾಣುವಷ್ಟು ಭಾಗ್ಯವಿಲ್ಲವೆನ್ನುವುದಾದರೆ, ಸ್ವಲ್ಪ-ದೂರದಿಂದಲೇ ಅದಾಗುವುದಾದರೂ ಅದೂ ಭಾಗ್ಯವೇ: ಕಣ್ಣಿಗಲ್ಲದಿದ್ದರೆ ಕಿವಿಗಾದರೂ ಬೀಳಬಹುದಲ್ಲಾ, ಆತನ ಮುರಳಿಯ ಕೇಲಿ-ನಿನದಗಳು? ಕೇಲಿಯೆಂದರೆ ಕ್ರೀಡೆ. ನಿನದವೆಂದರೆ ನಾದವೇ.

 ವೇಣು-ವಾದನದಲ್ಲಿ ಎಲ್ಲೆಯಿಲ್ಲದ ಸಾಮರ್ಥ್ಯವುಳ್ಳವನು, ಆತನು:  ಅಪ್ರಯತ್ನವಾಗಿ ಆಟಕ್ಕೆಂದು ವಾದನಮಾಡಿದರೂ ಸಾಕು, ಅದರ ಮಹತ್ತ್ವ-ಪ್ರಭಾವಗಳು ಏನೂ ಊನವಾಗವು. ಕಲೆಯು ಒಲಿದುಬಿಟ್ಟಿದ್ದರೆ, ಯತ್ನವಿಲ್ಲದೆಯೇ ಅದರಲ್ಲಿ ಮಾಧುರ್ಯವೂ ತಾರಕತ್ವವೂ ಮೂಡಿರುವುವಲ್ಲವೇ?

ಅತ್ಯಂತಪಟುವಾದ ಚಿತ್ರಕಾರನು ಒಮ್ಮೊಮ್ಮೆ ಹರಟುತ್ತ  ಗೀಚಿದರೂ ಒಳ್ಳೆಯ ಚಿತ್ರವೇ ಮೂಡುವುದುಂಟಲ್ಲವೇ? ಸರ್ಕಸ್ಸಿನಲ್ಲಿ ಪಳಗಿರುವವರು ಅದೆಷ್ಟು ಸರಳವೆಂಬಂತೆ ಮಾಡುವ ಮಹಾದ್ಭುತಗಳು ಮೆಚ್ಚುಗೆಯನ್ನೂ ಅಚ್ಚರಿಯನ್ನೂ ನೋಡುಗರಲ್ಲಿ ಮೂಡಿಸುವುವಲ್ಲವೇ? ಹಾಗೆಯೇ, ಇಂತಿಂತಹ ರಾಗ-ತಾಳಗಳೊಂದಿಗೆ ಈ ಭಾವವನ್ನು ತರಬೇಕೆಂಬ ಲೆಕ್ಕಾಚಾರಗಳೇ ಇಲ್ಲದೆಯೇ, ಸುಮ್ಮನೆಯ ಕೊಳಲೊಳ-ಹೊರಗುಗಳಲ್ಲಿನ ಉಸಿರಾಟ-ಬೆರಳಾಟಗಳಿಂದ ಇಲ್ಲಿ ಹೊಮ್ಮುವ ನಾದವೂ ಉತ್ಕೃಷ್ಟವಾದದ್ದೇ. ಕಟಾಕ್ಷಗಳನ್ನು ಅತ್ತಿತ್ತ ಬೀರುತ್ತ ನುಡಿಸುತ್ತಲಿರುವ ಈ ವೈಣವಿಕನ, ಎಂದರೆ ಕೊಳಲುಗಾರನ,  ಗಾನ-ವೈಖರಿಯ ಪ್ರಶಂಸನೀಯ-ವೈಭವವನ್ನು ವರ್ಣಿಸಲಾದೀತೇ?

ಯಾವುದನ್ನು 'ಇದು ಹೀಗೆ' ಎಂದು ಬಿಡಿಸಿಹೇಳಬಲ್ಲೆವೋ ಅದು ನಿರ್ವಚನೀಯವೆನಿಸಿಕೊಳ್ಳುತ್ತದೆ. ಯಾವುದು ಅನಿರ್ವಚನೀಯವೋ ಅದನ್ನು ಹೇಳಲು "ಕೋಽಪಿ/ಕಾಪಿ/ಕಿಮಪಿ"ಗಳನ್ನು ಬಳಸುತ್ತೇವೆ. ಎಂದರೆ "ಯಾವುದೋ ಒಂದು (ಅದ್ಭುತವಾದದ್ದು)", ಎಂದರೆ ಮಾತಿಗೆ ನಿಲುಕದ್ದು ಎಂದರ್ಥ. ಶ್ಲೋಕದ ಪೂರ್ವಾರ್ಧದಲ್ಲಿ ಕರುಣೆಯ ಬಗೆಗೆ "ಕಿಮಪಿ" ಹೇಳಿದ್ದರೆ, ಉತ್ತರಾರ್ಧದಲ್ಲಿ ಮುರಳೀನಿನಾದದಿಂದ ಉಂಟಾಗುವ ಅಂತಸ್-ತೋಷವನ್ನು ಅರ್ಥಾತ್ ಒಳಗಣ ಮುದವನ್ನು, "ಕಮಪಿ" ಎಂಬುದು ಹೇಳುತ್ತದೆ. ಮಿಕ್ಕ ಸಂತೋಷಗಳು ಬಾಹ್ಯವಾದವು, ಎಂದೇ ಮಿತವೂ ಹೌದು. ಆದರಿದು ಅಮಿತಾನಂದ-ಪ್ರದವಾದುದು.

ಏನೀ ವೇಣು-ಧ್ವನಿಯ ವಿಶೇಷ? ಅದು ತಂಪಂತೆ! ನಾದದಲ್ಲೂ ತಂಪಿರುವುದುಂಟೇ? ಎಷ್ಟು ತಂಪು, ಮತ್ತದರಿಂದೇನು? ಶಿವನು ಶಿರಸ್ಸಿನಲ್ಲಿ ಧರಿಸಿರುವ ಚಂದ್ರನೆಷ್ಟು ತಂಪೋ ಅಷ್ಟು ತಂಪು.

ನಮಗೆ ಗೊತ್ತಿರುವ ಚಂದ್ರನಿಗೆ ಏರಿಳಿತಗಳುಂಟು: ಶುಕ್ಲ-ಪಕ್ಷದಲ್ಲಿ ವೃದ್ಧಿ, ಕೃಷ್ಣ-ಪಕ್ಷದಲ್ಲಿ ಕ್ಷಯ. ಶಿವ-ಶಿರಸ್ಸಿನ ಚಂದ್ರನಿಗೆ ವೃದ್ಧಿ-ಕ್ಷಯಗಳಿಲ್ಲ.

ಸೂರ್ಯನು ತಾಪಕಾರಿಯಾದರೆ ಚಂದ್ರನು ತಾಪಹಾರಿ. ಚಂದ್ರನದು "ಬಾಡಿಗೆ ಬೆಳಕು", ಸೂರ್ಯನಿಂದ ಬಂದದ್ದರ ಪ್ರತಿಫಲನವಷ್ಟೆ. ಆದರೆ ಶಿವನ ತಲೆಯ ಮೇಲಿನ ಚಂದ್ರ ಸ್ವತಃ ಪ್ರಕಾಶಿಸುವವನು, ನಿತ್ಯ-ಶೀತಲ. ಆತನ ಸ್ಥಾನದ ಪ್ರಭಾವವೂ ಅಲ್ಲಿದೆ. ಶಿವನ ಜಟೆಯಲ್ಲಿಯೇ ಗಂಗೆಯುಂಟು. ಹಿಮಗಿರಿ-ತನಯೆಯಾದ ಗಂಗೆಯೇ ಶೀತಲೆ. ಇನ್ನು ಶಿವನ ತಲೆಯ ಮೇಲಿರುವವಳು ಮತ್ತೂ ತಂಪೇ. ಶಿವ-ಜಟೆಯ ನಡುವೆ ಹರಿಯುವ ಗಂಗೆಯ ಸಂಗವುಳ್ಳ ಚಂದ್ರನನ್ನು ಇಲ್ಲಿ ಜಟಾ-ಚಂದ್ರನೆಂದಿದೆ. ಆತನಿನ್ನೆಷ್ಟು ಶಿಶಿರ!

ಇಲ್ಲಿ ಮತ್ತೊಂದು ಧ್ವನಿಯೂ ಇದೆ. ನಾವೆಲ್ಲ ತಾಪಕ್ಕೆ ಒಳಗಾದವರು. ಕಾಮ-ಕ್ರೋಧಗಳು ತಾಪವಲ್ಲವೆ? ಲೋಭ-ಮೋಹ-ಮದ-ಮಾತ್ಸರ್ಯಗಳೂ ತಾಪವೇ. ಅವಾವುದರ ಸೋಂಕೂ ಇಲ್ಲದವ ಶಿವ. ಇಲ್ಲಿ ಹೇಳಿದ ಆರಕ್ಕೂ ಮೂಲ ಕಾಮವೇ ಸರಿ. ಅದನ್ನೇ ಗೆದ್ದವನಿಗೆ ಮಿಕ್ಕವೇನು ಲೆಕ್ಕವೇ? ಶಿವನು ಕಂದರ್ಪ-ಪ್ರತಿಭಟ. ಎಂದರೆ ಕಾಮನನ್ನೇ ಅಡಗಿಸಿದವ.  ಎಂದೇ ಉಳಿದವೂ ಆತನನ್ನು ಏನೂ ಮಾಡವು. ಎಂದೇ ಆತನ ತಂಪು ವಿಶಿಷ್ಟವಾದದ್ದು.

ಇಂತಹ ತಂಪಾದ ಪುರುಷನ ಶಿರಸ್ಸೂ ತಂಪೇ. ನಾವುಗಳಾದರೆ ಸಣ್ಣಸಣ್ಣದಕ್ಕೂ ತಲೆ ಕಾಯಿಸಿಕೊಳ್ಳತಕ್ಕವರು! ಶಿವನ ಜಟಾ-ಸ್ಥಾನವು ಸ್ವತಃ ತಂಪೇ. ಅಲ್ಲಿಯ ಗಂಗೆಯೂ ತಂಪೇ. ಇವೆರಡರಿಂದಲೂ ತನ್ನ ತಂಪನ್ನು ಹೆಚ್ಚಿಸಿಕೊಂಡವನೇ ಆ ಚಂದ್ರ. ಅಂತಹ ತಂಪನ್ನೇ, ಅಥವಾ ಅದಕ್ಕೂ ಮಿಗಿಲಾದ ತಂಪನ್ನೇ, ಸೂಸತಕ್ಕವು ಶ್ರೀಕೃಷ್ಣನ ಮಧುರ-ವೇಣುನಾದಗಳು!

ಹೀಗೆ ಶ್ಲೋಕದ ಪೂರ್ವಾರ್ಧವು ನಯನ-ಗೋಚರವಾಗುವಂತಹ ವಿಷಯವನ್ನು ಹೇಳಿದರೆ ಉತ್ತರಾರ್ಧವು ಶ್ರವಣ-ಗೋಚರವಾಗುವಂತಹುದನ್ನು ಹೇಳುತ್ತದೆ. ಅದನ್ನಾದರೂ ಎಂದು ಕಂಡೇನು, ಇದನ್ನಾದರೂ ಎಂದು ಕೇಳೀಯೇನು? - ಎಂಬುದನ್ನು ತೋರಿಸಲೆಂದೇ ಶ್ಲೋಕದ ಪೂರ್ವಾರ್ಧವೂ ಉತ್ತರಾರ್ಧವೂ "ಕದಾ ವಾ" ಎಂದೇ ಆರಂಭಗೊಂಡಿರುವುದು. ಕದಾ ಎಂದರೆ ಎಂದು ಎಂದು.

ಹೀಗೆ, ಯಮುನೆಯ ಕುವಲಯಗಳಂತೆ ಇರುವ, ಅಥವಾ ಅವನ್ನೇ ಮೀರಿಸಿರುವ, ಶೀತಲತೆಯು ಕಟಾಕ್ಷದಲ್ಲಿದೆ; ಜಟಾಧಾರಿಯಾದವನ ಚಂದ್ರನಂತೆ ಇರುವ, ಅಥವಾ ಅದನ್ನೂ ಮೀರಿಸಿರುವ, ತಂಪು ವೇಣುನಾದದಲ್ಲಿದೆ. ಹೀಗೆ ಕಣ್ಣಿಗೂ ಕಿವಿಗೂ ತಂಪನ್ನೆರೆಯುವುದರ ಅನುಭವಗಳು ನನಗೆ ಅದೆಂದು ಆಗುವುವೋ? - ಎಂದು ಎದುರುನೋಡುತ್ತಾ, ಅಭಿಲಷಿಸುವನು ನಮ್ಮ ಲೀಲಾಶುಕ.

ಹೇಗೆ ಶಿವ-ಶಿರೋ-ಜಟಾ-ವರ್ತಿಯಾದ ಚಂದ್ರನು ಕಲಾ-ಮಾತ್ರನಾಗಿದ್ದು ಸೂಕ್ಷ್ಮನಾಗಿರುವನೋ, ಹಾಗೆಯೇ ಕೃಷ್ಣ-ಮುರಲೀ-ಕೇಲಿ-ನಾದಗಳೂ ಸೂಕ್ಷ್ಮವಾದವೇ. ಹೀಗೆ ಭಗವದ್-ಯೋಗ-ಭಾವವನ್ನು ಸೂಚಿಸುವ ಸೂಕ್ಷ್ಮದೃಶ್ಯ-ಸೂಕ್ಷ್ಮನಾದಗಳೆರಡನ್ನೂ ಕವಿಯು ನಮ್ಮ ಮುಂದೆ ತಂದಿರಿಸಿದ್ದಾನೆ!

ಕಕಾರ-ಲಕಾರ-ಚಕಾರ-ಟಕಾರಗಳ ಅನುಪ್ರಾಸಗಳಿವೆ.

ಕದಾ ವಾ ಕಾಲಿಂದೀ-ಕುವಲಯ-ದಲ-ಶ್ಯಾಮಲತರಾಃ

ಕಟಾಕ್ಷಾ ಲಕ್ಷ್ಯಂತೇ ಕಿಮಪಿ ಕರುಣಾ-ವೀಚಿ-ನಿಚಿತಾಃ? |

ಕದಾ ವಾ ಕಂದರ್ಪ-ಪ್ರತಿಭಟ-ಜಟಾ-ಚಂದ್ರ-ಶಿಶಿರಾಃ

ಕಮಪ್ಯಂತಸ್ತೋಷಂ ದದತಿ ಮುರಲೀ-ಕೇಲಿ-ನಿನದಾಃ? ||

ಸೂಚನೆ : 18/1/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.