Sunday, January 19, 2025

ವ್ಯಾಸ ವೀಕ್ಷಿತ 120 (Vyaasa Vikshita 120)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅಗ್ನಿಯು ಮಾಡಿದ ವರುಣನ ಆವಾಹನೆ


ಖಾಂಡವವನ್ನು ಸುಡಲು ಅಗ್ನಿಯು ಯತ್ನಿಸಿದನಷ್ಟೆ. ಆದರೆ ಕೆರಳಿದ ನೂರಾರು ಸಾವಿರಾರು ಆನೆಗಳು ತಮ್ಮ ಸೊಂಡಿಲುಗಳಿಂದ ನೀರನ್ನು ಬೇಗನೆ ತಂದು ಸಿಂಪಡಿಸಿದುವು. ಹಾಗೆಯೇ ಕೋಪಗೊಂಡ ಬಹು-ಶೀರ್ಷಗಳುಳ್ಳ ನಾಗಗಳೂ ಜಲಧಾರೆಯನ್ನು ತಮ್ಮ ಶಿರಸ್ಸಿನಿಂದ ತಂದು ಎರಚಿದವು. ಹಾಗೆಯೇ ಇತರ ಪ್ರಾಣಿಗಳೂ ತಮ್ಮ ತಮ್ಮ ಪ್ರಹಾರ-ಪ್ರಯತ್ನಗಳಿಂದ ಬೇಗನೆಯೇ ಬೆಂಕಿಯನ್ನು ತಣಿಸಿಬಿಟ್ಟವು. ಅಗ್ನಿಯಾದರೂ ಮತ್ತೆ ಮತ್ತೆ ಪ್ರಜ್ವಲಿಸಿದನು. ಆದರೆ ಏಳು ಬಾರಿ ಹೀಗೆ ಪ್ರಯತ್ನಿಸಿ ಕೊನೆಗೆ ಖಾಂಡವದಲ್ಲಿ ಶಾಂತನಾಗಿಹೋದನು.


ಅಗ್ನಿಗೆ ನಿರಾಸೆಯಾಯಿತು. ನಿರಂತರ ಖೇದದಿಂದ ಕೂಡಿದವನಾಗಿ, ಕ್ರೋಧದೊಂದಿಗೆ ಬ್ರಹ್ಮನ ಬಳಿ ಸಾಗಿದನು. ಯಥೋಚಿತವಾಗಿ ಎಲ್ಲವನ್ನೂ ಬ್ರಹ್ಮನಿಗೆ ಅರುಹಿದನು. ಕ್ಷಣಕಾಲ ಯೋಚನೆ ಮಾಡಿ ಬ್ರಹ್ಮನು ಆತನಿಗೆ ಹೇಳಿದನು:


"ನೀನು ಆ ಖಾಂಡವವನ್ನು ಹೇಗೆ ದಹಿಸಬಹುದೆಂಬುದಕ್ಕೆ ಉಪಾಯವೊಂದು ನನಗೆ ಹೊಳೆದಿದೆ. ಕೆಲ ಕಾಲ ಸಹಿಸಿಕೋ. ಆಮೇಲದನ್ನು ಸುಡುವಿಯಂತೆ. ನರ-ನಾರಾಯಣರು ನಿನಗೆ ಮುಂದೆ ಸಹಾಯಕರಾಗುವರು. ಅವರೊಡಗೂಡಿ ನೀನು ಆ ಕಾಡನ್ನು ದಹಿಸುವೆ." ಅಗ್ನಿಯೂ, ಹಾಗೇ ಆಗಲಿ, ಎಂದನು.


ಸಾಕಷ್ಟು ಕಾಲ ಕಳೆದಿರಲು, ನರ-ನಾರಾಯಣರು ಜನ್ಮತಾಳಿದ್ದಾರೆಂಬುದು ಅಗ್ನಿಗೆ ವಿದಿತವಾಯಿತು. ಬ್ರಹ್ಮನ ಆ ಮಾತನ್ನು ಸ್ಮರಿಸಿದ ಅಗ್ನಿಯು ಮತ್ತೆ ಬ್ರಹ್ಮನ ಬಳಿ ಸಾಗಿದನು. ಆಗ ಬ್ರಹ್ಮನು ಹೇಳಿದನು:


"ಅಗ್ನಿಯೇ, ಖಾಂಡವ-ವನವನ್ನು ನೀನೀಗ ದಹಿಸುವೆ - ಇಂದ್ರನೇ ನೋಡುತ್ತಿರುವಂತೆಯೇ! ಮೂಲತಃ ದೇವತೆಗಳೇ ಆದ ನರ-ನಾರಾಯಣರು ದೇವ-ಕಾರ್ಯಕ್ಕಾಗಿ ಈಗ ಮನುಷ್ಯ-ಲೋಕಕ್ಕೆ ಬಂದಿರುವರು, ಓ ಅಗ್ನಿಯೇ! ಲೋಕವು ಅವರನ್ನು ಅರ್ಜುನ ಹಾಗೂ ವಾಸುದೇವ - ಎಂಬುದಾಗಿ ತಿಳಿದಿದೆ. ಅವರಿಬ್ಬರು ಇದೀಗ ಖಾಂಡವ-ವನದ ಬಳಿ ಇರುವರು. ಖಾಂಡವ-ದಹನಕ್ಕಾಗಿ ನೀನು ಅವರ ಸಹಾಯವನ್ನು ಯಾಚಿಸು. ಖಾಂಡವಕ್ಕೆ ದೇವತೆಗಳ ರಕ್ಷೆಯಿದ್ದರೂ ನೀನು ಅದನ್ನು ಸುಡಬಲ್ಲವನಾಗುವೆ. ಆ ಪಾರ್ಥ-ವಾಸುದೇವರು ಪ್ರಾಣಿಗಳೆಲ್ಲವನ್ನೂ ಪ್ರಯತ್ನ-ಪೂರ್ವಕವಾಗಿ ತಡೆಹಿಡಿದುಬಿಡುವರು. ಇಂದ್ರನನ್ನೂ ಸಹ ಅವರು ತಡೆಯತಕ್ಕವರು. ನನಗದರಲ್ಲಿ ಸಂಶಯವಿಲ್ಲ."


ಈ ಮಾತನ್ನು ಕೇಳಿದ ಅಗ್ನಿಯು ತ್ವರಿತವಾಗಿ ಕೃಷ್ಣ-ಪಾರ್ಥರ ಬಳಿಗೆ ಬಂದು ಬೇಡಿಕೊಂಡನು. ಇಂದ್ರನಿಗೆ ಅದು ಇಷ್ಟವಿಲ್ಲದಿದ್ದರೂ ಸಹ, ಖಾಂಡವವನ್ನು ಸುಡುವವನಾಗಿದ್ದ ಅಗ್ನಿ-ದೇವನಿಗೆ ಅರ್ಜುನನು ಆ ಸಮಯಕ್ಕೆ ಸರಿಯಾದ ಮಾತನ್ನು ಹೇಳಿದನು:


"ಅಯ್ಯಾ ಅಗ್ನಿಯೇ, ನನ್ನಲ್ಲಿ ದಿವ್ಯವೂ ಉತ್ತಮವೂ ಆದ ಅಸ್ತ್ರಗಳು ಹಲವು ಇವೆ. ಅದರಿಂದಾಗಿ ಹಲವರು ವಜ್ರಧಾರಿಗಳನ್ನು ನಾನೆದುರಿಸಬಲ್ಲೆ. ಆದರೆ ನನ್ನ ಬಳಿ, ನನ್ನ ಬಾಹುಬಲಕ್ಕೆ ಸರಿತೂಗುವ ಧನುಸ್ಸಿಲ್ಲ. ಯುದ್ಧದಲ್ಲಿ ನನ್ನ ವೇಗವನ್ನು ಸಹಿಸುವಂತಹ ಒಂದು ಬಿಲ್ಲಿರಬೇಕಲ್ಲವೇ? ಜೊತೆಗೆ ಬಾಣಗಳನ್ನು ನಾನು ಕ್ಷಿಪ್ರವಾಗಿ ಬಿಡುತ್ತಿರಬೇಕಲ್ಲವೆ? ಅದಕ್ಕಾಗಿ ಅಕ್ಷಯವಾದ ಬಾಣಗಳೂ ಅವಶ್ಯ. ನಾ ಬಯಸುವ ಅಷ್ಟೊಂದು ಶರಗಳನ್ನು ಹೊರತಕ್ಕ ರಥವೂ ಕೂಡ ನನ್ನ ಬಳಿಯಿಲ್ಲವಲ್ಲಾ?


ಹೀಗಾಗಿ ನನಗೆ ವಾಯು-ವೇಗವುಳ ಶ್ವೇತ-ವರ್ಣದ ದಿವ್ಯಾಶ್ವಗಳು ಬೇಕು, ಸೂರ್ಯ-ಸಮವಾದ ತೇಜಸ್ಸುಳ್ಳ ಹಾಗೂ ಮೇಘದಂತೆ ಗಂಭೀರವಾದ ಸ್ವನವುಳ್ಳ ರಥವೂ ಬೇಕು.

ಹಾಗೆಯೇ, ನಾಗಗಳನ್ನೂ ನಿಶಾಚರರನ್ನೂ ರಣದಲ್ಲಿ ಸಂಹರಿಸಲೋಸುಗ, ಶ್ರೀಕೃಷ್ಣನಿಗೂ ಆತನ ವೀರ್ಯಕ್ಕೆ ಸಮವೆನಿಸುವ ಆಯುಧವೂ ಬೇಕಾಗಿದೆ.


ಸೂಚನೆ : 19
/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.