Saturday, January 4, 2025

ಅಷ್ಟಾಕ್ಷರೀ 73 ಪುನಾತಿ ಭುವನಂ ಪುಣ್ಯಾ (Astaksari 73 Punati Bhuvanam Punya)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅನ್ಯ-ಸಂಸ್ಕೃತಿಗಳಿಗೂ ಭಾರತೀಯ-ಸಂಸ್ಕೃತಿಗೂ ಇರುವ ಭೇದವೇನು? ಎಂಬೀ ಪ್ರಶ್ನೆಯು ಹಲವೊಮ್ಮೆ ಹಲವರಿಗೆ ಬಂದಿರುವಂತಹುದೇ, ಬರುತ್ತಿರುವಂತಹುದೇ. ಹಲವರಿಗೇನು, ನಮಗೇ ಬರಬಹುದಾದುದೇ, ಪ್ರಾಯಃ ಬಂದಿರುವಂತಹುದೇ.


ಭಾರತದ ಆರಂಭವೆಂದರೆ ಸಿಂಧೂಕಣಿವೆಯ ನಾಗರಿಕತೆಯಿಂದ - ಎನ್ನುವುದುಂಟು. ವೇದಗಳಲ್ಲಂತೂ ಸರಸ್ವತೀ-ನದಿಯ ಕೊಂಡಾಟವು ಸಾಕಷ್ಟೇ ಉಂಟು. ಹಾಗೆ ನೋಡಿದರೆ ಯಾವುದೇ ನಾಗರಿಕತೆಯಾದರೂ ನದೀ-ತೀರಗಳಲ್ಲೇ ತಲೆಯೆತ್ತುವುದು. ಈಜಿಪ್ಟನ್ನು ಸಹ ನೈಲ್-ನದಿಯ ದತ್ತಿ (ಗಿಫ್ಟ್ ಆಫ್ ದಿ ನೈಲ್) ಎನ್ನುವರಲ್ಲವೇ? ನಿತ್ಯ-ಜೀವನವು ನಡೆಯಬೇಕೆಂದರೆ ನೀರು ಸಮೃದ್ಧಿಯಾಗಿಯೇ ಬೇಕಲ್ಲವೇ?


ಸರಸ್ವತೀ-ನದಿಯು ಯಾವ ಕಾರಣಕ್ಕೆ ಅದರ್ಶನವನ್ನು ಹೊಂದಿತೋ, ಮುಂದಂತೂ ಗಂಗೆಯೇ ಮುಖ್ಯ-ನದಿಯಾಯಿತು. ನಿತ್ಯವೂ ಸ್ನಾನ ಮಾಡುವಾಗ "ಗಂಗೇ ಚ ಯಮುನೇ ಚೈವ" ಎಂದು, ಸರಸ್ವತಿಯನ್ನೂ ಮರೆಯದೆ, ಸಪ್ತ-ನದಿಗಳನ್ನು ಸ್ಮರಿಸಿಕೊಳ್ಳುತ್ತೇವಲ್ಲವೇ? ಆದರೆ ಅಮೆರಿಕದಲ್ಲೇನೂ "ಮಿಸ್ಸಿಸ್ಸಿಪ್ಪೀ ಚ ಮಸ್ಸೂರೀ ಟೆನ್ನೆಸ್ಸೀ ಕೊಲೊರಾಡೊ ಚ" ಎಂದು ನದೀ-ಸ್ಮರಣ ಮಾಡುವುದಿಲ್ಲ! ಬ್ರಿಟಿಷರು "ಥೇಮ್ಸ್-ನದೀ ಟ್ರೆಂಟ್-ನದೀ ಚೈವ" ಎಂದು ಹೇಳಿಕೊಳ್ಳುವುದಿಲ್ಲ. ವೋಲ್ಗಾ ಅಮೆಜ಼ಾನ್ ನದಿಗಳನ್ನು ರಷ್ಯನ್ನರೋ ದಕ್ಷಿಣ ಅಮೆರಿಕದವರೋ ಭಕ್ತಿ-ಪೂರ್ವಕವಾಗಿ ಸ್ಮರಿಸುವುದಿಲ್ಲ. ಅವರ ಪಾಲಿಗೆ ಅದೊಂದು ಭೌತಿಕ-ಪದಾರ್ಥವಷ್ಟೇ. 


ವೈದಿಕ-ದೇವತೆಗಳನ್ನು ಕುರಿತು ಪಾಶ್ಚಾತ್ತ್ಯರು ಮಾಡುವ ಅವಹೇಳನ ಗೊತ್ತಿರುವಂತಹುದೇ: "ಮಾನವ-ನಾಗರಿಕತೆಯ ಆರಂಭಾವಸ್ಥೆಯಲ್ಲಿ ಪ್ರಕೃತಿಯ ಶಕ್ತಿಗಳನ್ನು ಕಂಡರೆ ಭಯವೇ ಭಯ; ಎಂದೇ ನೀರಿಗೊಂದು ದೇವತೆ, ಬೆಂಕಿಗೊಂದು ದೇವತೆ, ಗಾಳಿಗೊಂದು ದೇವತೆ, ಮಳೆಗೊಂದು ದೇವತೆಯಾಗಿರುವುದು. ಪ್ರಕೃತಿಯ ಶಕ್ತಿಗಳಿಗೆ ಹೆದರಿಕೊಂಡು ಅವಕ್ಕೆಲ್ಲಾ ಒಂದೊಂದು ದೇವತೆಗಳನ್ನು ಕಲ್ಪಿಸಿಬಿಟ್ಟಿರುವರು, ಭಾರತೀಯರು" - ಎಂದು. 


ಹಾಗಿದ್ದರೆ, 'ಏಕಂ ಸತ್', 'ಏಕೋ ದೇವಃ' - ಎಂದು ಏಕ-ತತ್ತ್ವದ ವಿಸ್ತಾರವಾಗಿಯೇ ನಾನಾ-ದೇವತೆಗಳನ್ನು ಕಂಡುಕೊಂಡಿರುವುದರ ಅರ್ಥವೇನು? ಸರ್ವ-ಶಕ್ತವಾದ ಮೂಲ-ಶಕ್ತಿಯ ನಾನಾಂಶಗಳೇ ಈ ದೇವತೆಗಳೆಲ್ಲಾ - ಎಂಬುದನ್ನು ಮನಗಂಡಿಲ್ಲವೇ? ಅಪವ್ಯಾಖ್ಯಾನಕ್ಕೆ ಎಡೆ(ಲ್ಲೆ)ಯೆಲ್ಲಿ? 


ಭಾರತದ ಸರ್ವ-ನದಿಗಳ ವಿಷಯದಲ್ಲೂ ನಮ್ಮವರಿಗೆ ಪೂಜ್ಯ-ಭಾವನೆಯೇ. ಇದಾದರೂ, ಬರೀ ಹೊಟ್ಟೇಪಾಡಿನ ಬೆಳೆ-ಅಡಿಗೆಗಳಿಗೆ ಅಡಿಗಡಿಗೆ ಬೇಕಾದ ನೀರಿದು - ಎಂಬ ಭಾವನೆಯಿಂದಲ್ಲ, ಬಂದಿರುವುದು. ಪಾಶ್ಚಾತ್ತ್ಯರ ಲೆಕ್ಕಾಚಾರ ಅಷ್ಟಕ್ಕೇ ಸೀಮಿತವಾಗಬಹುದು. ಅದನ್ನು ಮೀರಿದ ಲೆಕ್ಕಾಚಾರವುಂಟು. ಅದು ದೈವಿಕವಾದ ಲೆಕ್ಕಾಚಾರ. ಅದಿರುವುದರಿಂದಲೇ ನದಿಗಳ ದಿವ್ಯ-ಸಾಂನಿಧ್ಯವನ್ನು ಸ್ನಾನ-ಸಮಯದಲ್ಲಿ ನಿತ್ಯವೂ ಬಯಸುವುದು. ನದಿಗಳೆಲ್ಲ ದೇವಿಯರು. ದೇವ-ಸಾಂನಿಧ್ಯವನ್ನು ಪೂಜಾ-ಘಟ್ಟದಲ್ಲಿ ಬೇಡುವಂತೆ, ದೇವೀ-ಸಾಂನಿಧ್ಯವನ್ನು ಮೊದಲೇ, ಸ್ನಾನ-ಘಟ್ಟದಲ್ಲೇ, ಬಯಸುವುದಾಗಿದೆ.


ನದಿಗಳು ಜನಿಸುವುದು ಪರ್ವತಗಳಲ್ಲಿ. ಪರ್ವತಗಳು ಭೂ-ದೇವಿಯ ಕುಚಗಳಂತೆ. ಭೂ-ಮಾತೆಯ ಸ್ತನಗಳಿಂದ ಸ್ರವಿಸುವ ಅಮೃತವೇ ಈ ನದಿಗಳು. ಜೀವ-ಪೋಷಣೆಯೆಂಬುದು ಇವಿಂದಲೇ ಸಾಧ್ಯ. 


ಕೆಲವು ನದಿಗಳು ಸಣ್ಣನದಿಗಳು. ಇಂತಹವು ಅಲ್ಲಿಲ್ಲಿ ಹರಿದು ಕೊನೆಗೆ ದೊಡ್ಡನದಿಗೆ ಸೇರಿಕೊಳ್ಳುತ್ತವೆ: ಉಪ-ನದಿಗಳು ಮಹಾ-ನದಿಗೆ ಸೇರಿಕೊಳ್ಳುವ ಬಗೆಯಿದು. ಮಹಾ-ನದಿಯು ಮಾತ್ರ ಸಮುದ್ರವನ್ನೇ ಸೇರುವುದು.


ನಮ್ಮ ಕವಿಗಳು ರೂಪಕ-ಪ್ರಿಯರು. ರಾಮಾಯಣವನ್ನೇ ಒಂದು ಮಹಾ-ನದಿಯಾಗಿ ಕಂಡಿದ್ದಾರೆ. ಹಾಗಾದರೆ ಈ ನದಿಯು ಜನಿಸುವುದೆಲ್ಲಿ? ಕೊನೆಗದು ಸೇರುವ ಸಾಗರವಾವುದು? - ಎಂಬ ಈ ಎರಡು ಪ್ರಶ್ನೆಗಳಿಗೂ ಸಿದ್ಧವಾದ ಉತ್ತರಗಳಿವೆ. ವಾಲ್ಮೀಕಿಯೇ ಗಿರಿ. ಅಲ್ಲಿಂದ ಹೊರಟ ರಾಮಾಯಣ-ಮಹಾನದಿಯು ಸೇರುವ ಸಾಗರವಾವುದು? ರಾಮನೇ ಆ ಸಾಗರ. ಹಾಗೆ ಸಾಗುತ್ತ ಅದು ಮಾಡುವುದೇನು? ದಾರಿಯುದ್ದಕ್ಕೂ ಎಲ್ಲರನ್ನೂ - ಜಗತ್ತನ್ನೇ - ಪವಿತ್ರವಾಗಿಸುವುದು (ಪುನಾತಿ ಭುವನಂ ಪುಣ್ಯಾ)!


ಗಂಗಾ-ಮಹಾನದಿಯನ್ನೂ ರಾಮಾಯಣ-ಮಹಾನದಿಯನ್ನೂ ಹೋಲಿಸಿ ಶ್ರೀರಂಗಮಹಾಗುರುಗಳು ಹೇಳಿರುವ ಮಾತು ಅತ್ಯಂತ-ಸ್ಮರಣೀಯವಾಗಿದೆ: "ಉತ್ತುಂಗ-ಶಿಖರದಿಂದ ಹರಿದ ಗಂಗೆಯು ಧಿಮಿಧಿಮಿ-ತಾಳದಿಂದ ನಲಿದು ಸಪ್ತ-ಶಾಖೆಯಾಗಿ ಹರಿದು, ಲೋಕಕ್ಕೆ ತಂಪನ್ನುಂಟುಮಾಡುತ್ತಾ, ದಾರಿಯುದ್ದಕ್ಕೂ ಬೆಳವಣಿಗೆಗೆ ಬೇಕಾದ ಕೃಷಿಗೆ ನೀರೊದಗಿಸುತ್ತಾ, ಸಮುದ್ರವನ್ನು ಸೇರುವುದಲ್ಲವೇ? ಹಾಗೆಯೇ ವಾಲ್ಮೀಕಿ-ಗಿರಿಯಿಂದ ಜೀವ-ಲೋಕಕ್ಕೆ ಜ್ಞಾನ-ಧಾರೆಯನ್ನು ಹರಿಸಿ ಋಷಿಗಳನ್ನಾಗಿ ಮಾಡಲು ರಾಮಾಯಣ-ಮಹಾನದಿ ಹರಿದುಬಂದಿತು."


ಹೀಗಾಗಿ, ಗಂಗೆಯೂ ರಾಮಾಯಣವೂ ತಂಪನ್ನೊದಗಿಸುವುವು ಮಾತ್ರವಲ್ಲ; ಎರಡೂ ಪಾಪ-ಹರವೇ. ಸಪ್ತ-ಶಾಖೆಗಳುಳ್ಳ ಗಂಗೆಯಿಂದ ಕೃಷಿ-ಕಾರ್ಯಕ್ಕೆ ಪೋಷಣೆಯೆಂದುಕೊಂಡರೆ, ಸಪ್ತ-ಕಾಂಡಗಳುಳ್ಳ ರಾಮಾಯಣದಿಂದ ಋಷಿ-ಕಾರ್ಯಕ್ಕೆ ಪೋಷಣೆ! ವಾಸ್ತವವಾಗಿ ಗಂಗೆಯಿಂದಲೂ ಉಭಯ-ಪೋಷಣೆಯೂ ಉಂಟು.


ಋಷಿಗಳು ಶ್ರಮಿಸಿದುದು ಧರ್ಮ-ರಕ್ಷಣೆಗಾಗಿ ತಾನೆ? ಪರಮ-ಶಾಂತವಾದ ವಾಲ್ಮೀಕಿಋಷಿ-ಹೃದಯದಿಂದ ಹೊಮ್ಮಿದ, ಧರ್ಮವೇ ಮೈತಾಳಿಬಂದ ಶ್ರೀರಾಮನನ್ನೇ ಸೇರುವ, ಜೊತೆಗೆ ರಾಮನಲ್ಲಿಗೆ ಎಲ್ಲರನ್ನೂ ಒಯ್ಯಬಲ್ಲ, ವಾಹಕವಾದ ಮಹಾ-ವಾಹಿನಿಯೇ ರಾಮಾಯಣ!


ಹೀಗಿರುವಲ್ಲಿ, ರಾಮಾಯಣ-ಮಹಾನದಿಯು ಲೋಕ-ಪಾವನಿಯೆಂಬುದರಲ್ಲಿ ಆಶ್ಚರ್ಯವೇನು?


ಸೂಚನೆ: 4/1/2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.