ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅಗ್ನಿಯನ್ನು ಅರ್ಜುನನು ಹೀಗೆ ಕೇಳಿದನು: "ಪೂಜ್ಯನೇ, ಕಾರ್ಯಸಿದ್ಧಿಯಾಗಲು ಉಪಾಯವೇನೆಂಬುದನ್ನು ಹೇಳು – ಮಹಾವನದಲ್ಲಿ ಮಹಾವರ್ಷವನ್ನು ಸುರಿಸುತ್ತಿರುವ ಇಂದ್ರನನ್ನೇ ನಾನೀಗ ತಡೆಯಬೇಕಲ್ಲವೇ? ಅಯ್ಯಾ ಅಗ್ನಿದೇವ, ಪೌರುಷದಿಂದ ಅದೇನು ಸಾಧಿಸಬೇಕೋ, ಅದನ್ನು ನಾವು ಮಾಡುವೆವು. ಆದರೆ ಅದಕ್ಕೆ ಬೇಕಾದ ಸಮರ್ಥ-ಸಾಧನಗಳನ್ನು ನೀನೇ ಒದಗಿಸಿಕೊಡಬೇಕು."
ಅರ್ಜುನನು ಹೀಗೆ ಹೇಳಲು, ಲೋಕಪಾಲನೂ ಜಲೇಶ್ವರನೂ ಅದಿತಿಪುತ್ರನೂ ಆದ ವರುಣನನ್ನು ಕಾಣಬಯಸಿ ಅಗ್ನಿದೇವನು ಆತನನ್ನು ಸ್ಮರಿಸಿದನು. ತನ್ನನ್ನು ಅಗ್ನಿಯು ಸ್ಮರಿಸಿದನೆಂದು ತಿಳಿದು, ವರುಣನು ದರ್ಶನವಿತ್ತನು. ಲೋಕಪಾಲರಲ್ಲಿ ನಾಲ್ಕನೆಯವನೆನಿಸಿದ ಆ ವರುಣನನ್ನು ಸ್ವಾಗತಿಸಿ, ಅಗ್ನಿಯು ಹೇಳಿದನು. "ವರುಣನೇ, ರಾಜನಾದ ಸೋಮನು ಯಾವ ಬಿಲ್ಲು- ಬತ್ತಳಿಕೆಗಳನ್ನು ನಿನಗಿತ್ತಿದ್ದನೋ ಅವೆರಡನ್ನೂ, ಜೊತೆಗೆ ಕಪಿಧ್ವಜವನ್ನು ಹೊಂದಿರುವ ರಥವನ್ನೂ - ಒಡನೆಯೇ ನನಗೆ ಕೊಡು. ಗಾಂಡೀವದಿಂದ ಅರ್ಜುನನೂ, ಚಕ್ರದಿಂದ ಕೃಷ್ಣನೂ ಮಹತ್ತಾದ ಕಾರ್ಯವೊಂದನ್ನು ನನಗೆ ಮಾಡಿಕೊಡಲಿರುವರು. ಆದ್ದರಿಂದ ಅವನ್ನು ನನಗೆ ಕೊಡು."
ಹಾಗೆಯೇ ಆಗಲೆಂದು ಹೇಳಿದ ವರುಣನು ಆ ಧನೂರತ್ನವನ್ನೂ, ಎಂದರೆ ಶ್ರೇಷ್ಠವಾದ ಬಿಲ್ಲನ್ನೂ, ಜೊತೆಗೆ ಅಕ್ಷಯವಾದ ಬತ್ತಳಿಕೆಯನ್ನೂ ದಯಪಾಲಿಸಿದನು.
ಎಂತಹ ಬಿಲ್ಲದು! ಅದ್ಭುತವಾದದ್ದು, ಮಹಾಶಕ್ತಿ-ಸಂಪನ್ನವಾದದ್ದು, ಬಳಸಿದವರಿಗೆ ಕೀರ್ತಿ-ಕರವಾದದ್ದು, ಅನ್ಯ-ಶಸ್ತ್ರಗಳಿಂದ ಘಾತಗೊಳ್ಳದಂತಹುದು, ಅನ್ಯ-ಶಸ್ತ್ರಗಳನ್ನು ನಾಶಪಡಿಸುವಂತಹುದು; ಸರ್ವಾಯುಧಗಳಿಗಿಂತಲೂ ಹಿರಿದಾದುದು; ಶತ್ರು-ಸೈನ್ಯ-ಧ್ವಂಸಿಯಾದದ್ದು. ಎದುರಾಳಿಯ ಒಂದು ಲಕ್ಷ ಆಯುಧಗಳಿಗೆ ಸಮವಾದದ್ದು. ಅದನ್ನು ಬಳಸಿದವನ ರಾಷ್ಟ್ರವು ವರ್ಧಿಸುವುದು. ನಾನಾವರ್ಣಗಳಿಂದ ಕೂಡಿದ್ದು ಅದು ಆಶ್ಚರ್ಯಕರವಾಗಿರುವುದು. ನುಣುಪಾಗಿರುವುದು ಹಾಗೂ ಏಟು ತಿಂದಿಲ್ಲದ್ದು. ಸುದೀರ್ಘ-ಕಾಲದಿಂದಲೂ ದೇವತೆಗಳಿಂದಲೂ ದಾನವರಿಂದಲೂ ಗಂಧರ್ವರಿಂದಲೂ ಪೂಜಿತವಾಗಿರುವಂತಹುದು.
ಅಂತಹ ಬಿಲ್ಲನ್ನೂ, ಅದಕ್ಕೊಪ್ಪುವ ಅಕ್ಷಯವೆನಿಸುವ ತೂಣೀರವನ್ನೂ ವರುಣನು ಅಗ್ನಿಗಿತ್ತನು. ಇದಲ್ಲದೆ ದಿವ್ಯಾಶ್ವಗಳಿಂದ ಕೂಡಿದ ರಥವನ್ನೂ ಕೊಟ್ಟನು. ಬಹಳ ವಿಶಿಷ್ಟವಾದ ರಥವದು! ಕಪಿ-ಶ್ರೇಷ್ಠನ ಧ್ವಜವನ್ನು ಅದು ಹೊಂದಿತ್ತು. ಅದರ ಕುದುರೆಗಳು ಗಂಧರ್ವ-ದೇಶದವು. ಚಿನ್ನದ ಮಾಲೆಗಳನ್ನು ಧರಿಸಿದ ಬೆಳ್ಳಿಯ ಕುದುರೆಗಳೆಂಬಂತಿದ್ದವು ಅವು. ವರ್ಣದಲ್ಲಿ ಬಿಳೀಮೋಡಗಳಂತಿದ್ದವು. ವೇಗದಲ್ಲಿ ಮನಸ್ಸಿಗೋ ವಾಯುವಿಗೋ ಸಮನೆನಿಸತಕ್ಕವು. ಎಲ್ಲ ಉಪಕರಣಗಳಿಂದಲೂ ಕೂಡಿದ್ದವು. ದೇವತೆಗಳಿಗೂ ದಾನವರಿಗೂ ಅವನ್ನು ಜಯಿಸಲಾಗುತ್ತಿರಲಿಲ್ಲ.
ಅಷ್ಟೇ ಅಲ್ಲ.ಆ ರಥವು ಮಹಾಪ್ರಭೆಯುಳ್ಳದ್ದು. ಅದರ ಧ್ವನಿಯು ಮಹತ್ತಾದುದು. ಸರ್ವ-ರತ್ನಗಳಿಂದಲೂ ಕೂಡಿದ್ದು ಮನೋಹರವಾಗಿರುವಂತಹುದು. ಭೌಮನ ಎಂಬ ಪ್ರಜಾಪತಿಯು, ಒಳ್ಳೆಯ ತಪಸ್ಸನ್ನು ಮಾಡಿ ಅದನ್ನು ನಿರ್ಮಾಣಮಾಡಿದ್ದನು. ಅದರ ರೂಪವನ್ನು ಹೀಗೆಂದು ಹೇಳಲಾಗದು. ಹೇಗೆ ಸೂರ್ಯನ ರೂಪವನ್ನು ಅದು ಹೀಗೆಂದು ಹೇಳಲಾಗುವುದಿಲ್ಲವೋ ಹಾಗೆ. ಆ ರಥವನ್ನು ಹತ್ತಿಹೋಗಿಯೇ ದಾನವರನ್ನು ಸೋಮನು ಗೆದ್ದುದು. ನವ-ಮೇಘದಂತೆ ಕಾಣುತ್ತಿತ್ತು ಆ ಶ್ರೇಷ್ಠರಥ. ತನ್ನ ಶೋಭೆಯಿಂದ ಜ್ವಲಿಸುತ್ತಿರುವಂತೆ ತೋರುತ್ತಿತ್ತು.
ಇಂದ್ರಾಯುಧಕ್ಕೆ ಸಮರಾದ ಕೃಷ್ಣಾರ್ಜುನರು ಆ ರಥವನ್ನು ಏರಿದರು. ಅದರಲ್ಲಿಯ ಧ್ವಜ-ದಂಡವು ಬಂಗಾರದ್ದಾಗಿದ್ದು ಕಳಕಳೆಯಾಗಿತ್ತು. ಅದರ ಮೇಲೆ ಧ್ವಜದಲ್ಲಿದ್ದ ವಾನರವೂ ಸಿಂಹದಂತೆಯೋ ಹುಲಿಯಂತೆಯೋ ತೋರುವುದಾಗಿತ್ತು. ಶತ್ರುಗಳನ್ನು ಸುಟ್ಟೇಬಿಡುವಂತೆ ಅದು ತೋರುತ್ತಿತ್ತು. ಆ ಧ್ವಜದಲ್ಲಿ ಬಗೆಬಗೆಯ ದೊಡ್ಡದಾದ ಭೂತಗಳೂ ನೆಲೆಸಿದ್ದುವು. ಅವುಗಳ ನಾದವೇ ಸಾಕು, ಶತ್ರುಗಳಿಗೆ ಮೂರ್ಛೆಯುಂಟುಮಾಡಲು!
ಸೂಚನೆ : 26/1/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.