Sunday, January 26, 2025

ಕೃಷ್ಣಕರ್ಣಾಮೃತ 48 ದರ್ಪದ ಸರ್ಪದ ಮರ್ದನ (Krishakarnamrta 48)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಮದಮಯಮದಮಯದುರಗಂ


ಕೃಷ್ಣನು ಕಾಳಿಯಸರ್ಪದ ಮರ್ದನವನ್ನು ಮಾಡಿದ ಕಥೆ ಸುವಿದಿತವಷ್ಟೆ. ಕಾಲಿಯ/ಕಾಲೀಯ/ಕಾಲಿಂಗಗಳೆಂದರೂ ಅದೇ ಹಾವೇ. ಮದಮಯನಾದ ಕಾಲಿಯನನ್ನು ಆತನ ನೆಲೆಯಾದ ಯಮುನೆಗೇ ಇಳಿದು ದಮನ ಮಾಡಿದ ವೀರ್ಯಶಾಲಿಯೇ ಕೃಷ್ಣ - ಎಂದಷ್ಟೇ ಹೇಳುತ್ತದೆ, ಈ ಶ್ಲೋಕ.

ಎಂತಹ ಉರಗವದು? ಅದನ್ನೇಕೆ ದಮನ ಮಾಡಬೇಕಾಯಿತು? - ಎಂಬುದನ್ನಿಲ್ಲಿ ಹೇಳಿಲ್ಲ. ಲೀಲಾಶುಕನು ಕೃಷ್ಣಕರ್ಣಾಮೃತವನ್ನು ಬರೆದ ಕಾಲಕ್ಕೆ ಯಾರಿಗೆ ತಿಳಿದಿರಲಿಕ್ಕಿಲ್ಲ, ಈ ಕಥೆ? ಎಂದೇ ಹೆಚ್ಚು ವಿವರಗಳು ಅಂದಿಗೆ ಬೇಕಿರಲಿಲ್ಲ.

ಯಮುನಾನದಿಗೆ ಕಲಿಂದ-ನಂದಿನೀ, ಕಾಲಿಂದೀ ಎಂದೂ ಹೆಸರುಗಳುಂಟು. ಕೃಷ್ಣಾ ಎಂದರೆ ಯಮುನೆಯೂ ಹೌದು. ಅದರ ನೀರು ಕಾಲ-ವರ್ಣದ್ದು, ಎಂದರೆ ಸ್ವತಃ ಕಪ್ಪು ಬಣ್ಣದ್ದು. ವಿಷಮಯತೆಯಿಂದಾಗಿ ಮತ್ತೂ ಕಪ್ಪಾಗಿದೆ. ವಿಷವಾದರೂ ಅದರೊಳಗೆ ಸೇರಿಕೊಂಡಿರುವ ಕಾಲಿಯನದು. ಆತ ಕೃಷ್ಣ-ಸರ್ಪ, ಕಪ್ಪುಬಣ್ಣದವ. ತಮೋಗುಣದ ಕಪ್ಪು ಕಾಳಿಯನದು. ಭಗವಂತನಾದ ಕೃಷ್ಣನೂ ಕಪ್ಪೇ ಆದರೂ, ಆತನ ಕಾಲಿಮೆ, ಎಂದರೆ ಕಪ್ಪು, ತದ್ವಿರುದ್ಧವಾದುದು.

ಆ ಭುಜಂಗದ, ಎಂದರೆ ಸರ್ಪದ ವಿಷವು, ಅದೆಷ್ಟು ಉಗ್ರವಾಗಿತ್ತೆಂದರೆ ತನ್ನಿಮಿತ್ತ ಆ ನದಿಯ ನೀರೂ ಕುದಿಯುತ್ತಿತ್ತು! ಅದರ ಮೇಲೆ ಹಾರುವ ಹಕ್ಕಿಗಳಿಗೂ ಆ ವಿಷ-ಪ್ರಭಾವವು ತಟ್ಟಿ ಅವು ಸತ್ತುಬೀಳುತ್ತಿದ್ದವು! ಯಮುನೆಯ ಮೇಲೆ ಬೀಸುವ ಗಾಳಿಯೂ ವಿಷಮಯವಾಗಿದ್ದು, ಬಳಿ ಬೆಳೆದ ಗಿಡಮರಗಳೂ, ಬಳಿ ಸುಳಿದ ಪಶು-ಪ್ರಾಣಿಗಳೂ ಸಾವನ್ನಪ್ಪುತ್ತಿದ್ದವು!

ಇಂತಹ ಘಾತುಕ-ಖಳರನ್ನು ದಮಿಸಲೆಂದೇ, ಎಂದರೆ ದಮನಮಾಡಲೆಂದೇ, ಕೃಷ್ಣನ ಅವತಾರವಾಗಿರುವುದಷ್ಟೆ? ಆ ನದೀತೀರದಲ್ಲಿ ಒಂದೇ ಒಂದು ಕದಂಬ-ವೃಕ್ಷ ಮಾತ್ರ ಬೆಳೆದಿತ್ತು. ಗರುಡನು ಅಮೃತವನ್ನು ತರುತ್ತಿದ್ದಾಗ ಅದರೊಂದು ಬಿಂದುವು ಬಿದ್ದ ಎಡೆಯಲ್ಲಿ ಈ ಮರವು ಬೆಳೆದಿದ್ದರಿಂದ ಯಮುನಾ-ವಿಷವು ಇದನ್ನು ಪೂರ್ತಿಯಾಗಿ ಹಾಳಗೆಡವಲಾಗಲಿಲ್ಲವಂತೆ! ಆ ಮರವನ್ನೇ ಹತ್ತಿ ಅದರ ತುದಿಯಿಂದ ಧುಮುಕಿದ, ಕೃಷ್ಣ, ಈ ನೀರಿನೊಳಗೆ.

ಧುಮುಕಿದ ರಭಸಕ್ಕೆ ನೀರೆಲ್ಲ ಉಲ್ಲೋಲ-ಕಲ್ಲೋಲವಾಯಿತು (ಅಲ್ಲೋಲ-ಕಲ್ಲೋಲವೆಂಬ ಪದವು ಸರಿಯಲ್ಲ). ಉತ್ತುಂಗ-ತರಂಗಗಳೆದ್ದವು. ತನ್ನ ಧಾಮಕ್ಕೆ ಧಾಳಿ ಮಾಡಿರುವವರಾರೆಂದು ಕಾಣಲು ಕ್ರೋಧೋದ್ರೇಕದಿಂದ ಸರ್ರನೆ ಬಂದ ಸರ್ಪವು ಕಂಡದ್ದು ಈ ಮುದ್ದುಬಾಲಕನನ್ನು; ಶ್ರೀವತ್ಸ-ಚಿಹ್ನೆಯನ್ನು ಹೊಂದಿದ್ದ ಆತನು ಪೀತಾಂಬರ-ಧಾರಿ. ಸುಂದರ-ಮುಖ, ಮೃದು-ಚರಣಗಳುಳ್ಳವನಾಗಿ ಪ್ರೇಕ್ಷಣೀಯನಾಗಿದ್ದ ಬಾಲ!

ಈ ಭೀಕರ-ಭುಜಂಗಮ ಕಾಳಿಂಗನ ಪ್ರಥಮ ಪ್ರಹಾರವೆಂದರೆ ಕೃಷ್ಣನ ಮರ್ಮಾಂಗವನ್ನು ಕಚ್ಚುವುದು! ಅದರಿಂದೇನೂ ಬವಣೆಪಡದ ಕೃಷ್ಣ ನಿರ್ಭಯನಾಗಿಯೇ ಆಡುತ್ತಿದ್ದಾನೆ, ಈ ಅಹಿಯ ಹೆಡೆಯ ಮೇಲೆ: "ಆಡಿದನೋ ರಂಗ ಅದ್ಭುತದಿಂದಲಿ, ಕಾಳಿಂಗನ ಫಣೆಯಲಿ!" ಆ ರಂಗನ ಮೈಯನ್ನೇ ಸುತ್ತಿಕೊಂಡುಬಿಟ್ಟ ಆ ಪನ್ನಗ!

ಕೃಷ್ಣನ ಬಂಧುಮಿತ್ರರಿಗೆಲ್ಲಾ ಆತಂಕವೋ ಆತಂಕ! ಬಲರಾಮನೂ ಕೃಷ್ಣನ ಜೊತೆಗಿಲ್ಲವಲ್ಲಾ! ಅಯ್ಯೋ! - ಎಂದು ಎಲ್ಲರೂ ಓಡೋಡಿಬಂದಿದ್ದಾರೆ. ಬಲರಾಮನನ್ನು ಕರೆದರೆ, ಆತನಂತೂ ಮುಗುಳ್ನಗೆ ನಕ್ಕು ಆತ ಸುಮ್ಮನಿದ್ದಾನೆ! ಏನಾಗುತ್ತಿದೆಯೆಂಬುದು ಅವನಿಗೆ ಗೊತ್ತ್ತದ್ದೇ!

ಇವರೆಲ್ಲರ ಆಕ್ರಂದನವನ್ನು ಕಂಡ ಕೃಷ್ಣನಿಗೆ, ಇನ್ನು ಸುಮ್ಮನಿರುವುದು ಬೇಡವೆನಿಸಿ, ಸರ್ಪ-ಬಂಧದಿಂದಾಚೆಗೆ ಸೆಟೆದು ನಿಂತ. ಅದಕ್ಕೆ ಪ್ರತಿಯಾಗಿ, ತನ್ನ ಸೀಳುನಾಲಿಗೆಯನ್ನು ಹೊರಚಾಚುತ್ತಾ ಅತಿಕರಾಲವಾದ ವಿಷಾಗ್ನಿಯನ್ನು ಕಾರುತ್ತಾ ಬುಸುಬುಸುಗುಟ್ಟುತ್ತಾ ಹೆಡೆ ಬಿಚ್ಚಿ ಆಕ್ರಮಣ ಮಾಡಿದ, ಈ ಕರಾಳ-ವ್ಯಾಳ.

ಆತನನ್ನು ಸುತ್ತಿಸಿ ಸುತ್ತಿಸಿ ಸುಸ್ತಾಗಿಸಿದ, ಕೃಷ್ಣ. ಆತನ ಹೆಡೆಗಳನ್ನೇ ಮೆಟ್ಟುತ್ತಾ ಬಂದ. ನೂರೊಂದು ಹೆಡೆಗಳು; ಒಂದನ್ನು ಮೆಟ್ಟಿದರೆ ಮತ್ತೊಂದು ಪುಟಿದೇಳುವುದು. ಮೇಲೆದ್ದ ಫಣೆಗಳನ್ನು ತುಳಿತುಳಿದು ಕುಣಿಕುಣಿದು ದಿವ್ಯ-ನಾಟ್ಯವನ್ನೇ ಮಾಡಿದ, ಶ್ರೀಕೃಷ್ಣ!

ಈ ನರ್ತನ-ಸಂದರ್ಭದಲ್ಲಿ ಶ್ರೀಮದ್ಭಾಗವತವು ಆತನನ್ನು "ಅಖಿಲ ಕಲೆಗಳ ಆದಿಗುರು" ಎಂದು ಹೇಳಿರುವುದನ್ನು ಶ್ರೀರಂಗಮಹಾಗುರುಗಳು ಎತ್ತಿ ಹೇಳುತ್ತಿದ್ದರು. ಭಾರತೀಯ-ಸಂಸ್ಕೃತಿಯಲ್ಲಿ ಆವಿರ್ಭಾವಗೊಂಡ ಎಲ್ಲ ಕಲೆಗಳ ಮೂಲವೂ ಲಕ್ಷ್ಯವೂ ಭಗವಂತನನ್ನು ತಲುಪುವುದೇ, ಅಲ್ಲವೇ?

ಆ ಸರ್ಪದ ಫಣಾ-ಮಣಿಗಳನ್ನು ಸ್ಪರ್ಶಿಸುತ್ತಿದ್ದಂತೆಯೇ ಅತಿಯಾಗಿ ಕೆಂಪಾಗುತ್ತಿತ್ತು, ಕೃಷ್ಣನ ಕಮಲ-ಸದೃಶವಾದ ಪಾದ. ಕೃಷ್ಣ-ನರ್ತನದ ವೈಭವವನ್ನು ಕಂಡು ತಾವೂ ನರ್ತನವನ್ನಾರಂಭಿಸಿದರು, ಆಕಾಶ-ಸ್ಥಿತರಾದ ಗಂಧರ್ವ-ಸಿದ್ಧ-ಚಾರಣರೂ ದೇವತಾಸ್ತ್ರೀಯರೂ. ಪಣವ-ಆನಕ-ಮೃದಂಗಾದಿ- ವಾದ್ಯಗಳ ವಾದನ, ಸ್ತುತಿ-ಗಾನಗಳು, ಪುಷ್ಪ-ವರ್ಷಗಳು - ಇವೆಲ್ಲವನ್ನೂ ಸಂತೋಷದಿಂದ ಅವರು ಮಾಡಿದರು.

ಹೆಡೆಗಳನ್ನು ಹೀಗೆ ಕೃಷ್ಣ-ಪಾದವು ಮೆಟ್ಟುತ್ತಾ ಕುಟ್ಟುತ್ತಾ ಮೊಟ್ಟುತ್ತಿರಲು, ಮೊದಮೊದಲು ಕಣ್ಣಿನಿಂದಲೂ ವಿಷಕಾರುತ್ತಿದ್ದ ಕಾಳಿಯ, ಈಗ ಬಾಯಿಮೂಗುಗಳಿಂದ ರಕ್ತವನ್ನು ಕಕ್ಕಲಾರಂಭಿಸಿದ. ನಿಮಿರಿ ನಿಂತಿದ್ದ ಮೈಯ ಬಲವು ಕುಗ್ಗಿತು, ಅಂಗಗಳ ಭಂಗಗಳಾದವು. ಆಗಷ್ಟೆ ನೆನೆಯಲಾರಂಭಿಸಿದ, ಭಗವಂತನನ್ನು. ಸಂಕಟ ಬಂದಾಗಲೇ ವೇಂಕಟರಮಣನಲ್ಲವೇ!

ಕಾಳಿಯನಿಗಾದ ದುಃಸ್ಥಿತಿ ತೀವ್ರವಾದದ್ದೇ: ಜಗತ್ತನ್ನೇ ತನ್ನ ಗರ್ಭದಲ್ಲಿಟ್ಟುಕೊಂಡಿದ್ದ ಈ ಅರ್ಭಕನ, ಎಂದರೆ ಶಿಶುವಿನ, ಮೈಭಾರದಿಂದ, ಹಾಗೂ ಹಿಮ್ಮಡಿಗಳ ಗುದ್ದುಗಳಿಂದ, ಹೆಡೆಗಳೆಂಬ ಕೊಡೆಗಳಿಗಾದ ಹೊಡೆತವು ತಡೆಯಲಾರದಾಯಿತು. ಪನ್ನಗನ ಪತ್ನಿಯರು ಕಂಗೆಟ್ಟರು, ಆರ್ತರಾದರು, ಕೃಷ್ಣನಿಗೆ ಶರಣಾದರು, ಪತಿಯ ಪ್ರಾಣಭಿಕ್ಷೆಯನ್ನು ಅಂಗಲಾಚಿ ಬೇಡಿಕೊಂಡರು.

"ಶತ್ರುವಾದರೇನು, ಪುತ್ರನಾದರೇನು? - ಖಲನಾದರೆ ನಿಗ್ರಹವೇ - ಅದಕ್ಕೇ ಆಗಿರುವ ಅವತಾರ ಕೃಷ್ಣನದು" - ಎಂಬುದನ್ನವರೀಗ ಮನಗಂಡರು. ದುಷ್ಟರಿಗಿಂತಹ ಕಷ್ಟವನ್ನು ಭಗವಂತನು ಕೊಟ್ಟರೆ, ಅದೂ ಒಳ್ಳೆಯದಕ್ಕೇ, ಅದೂ ಕಲ್ಮಷ-ಧ್ವಂಸಕ್ಕಾಗಿಯೇ!" -  ಎಂದುಸುರಿದರು. ಶ್ರೀರಂಗಮಹಾಗುರುಗಳ ಒಕ್ಕಣೆಯಲ್ಲಿ ಇದು "ನಿಗ್ರಹರೂಪವಾದ ಅನುಗ್ರಹ"!

ಭಗವಂತನು ಜ್ಞಾನ-ವಿಜ್ಞಾನ-ನಿಧಿಯೆಂಬುದನ್ನು ಕಂಡುಕೊಂಡು ಅವನನ್ನರು ಕೊಂಡಾಡಿದರು. ನಿನ್ನನ್ನರಿಯದ ನಮ್ಮ ಪತಿಯ ಪ್ರಥಮಾಪರಾಧವಿದೆಂದು ಪ್ರತಿಪಾದಿಸಿ, ಪುತ್ರ-ಸದೃಶನನ್ನು ಮನ್ನಿಸೆಂದು ಮನವಿ ಮಾಡಿದರು. ಕೊನೆಗೆ ಕಾಲಿಯನೂ ಕೈಮುಗಿದು ಕ್ಷಮೆಕೇಳಿದನು.

ಕೃಷ್ಣನ ಸೂಚನೆಯಂತೆ ಬೇರೊಂದು ದ್ವೀಪಕ್ಕೆ ಆತನು ಸಕುಟುಂಬನಾಗಿ ಸರಿಯುವುದಾಯಿತು. ಯಮುನೆಯಿನ್ನು ತಿಳಿಯಾಯಿತು. ಸರ್ವರಿಗೂ ಸಂಸೇವ್ಯವಾಯಿತು.

ಗರುಡನ ಭಯವಿತ್ತು, ಆ ನಾಗನಿಗೆ. "ನನ್ನ ಪಾದ- ಲಾಂಛನವು ನಿನ್ನ ಹೆಡೆಯ ಮೇಲಿರುವುದರಿದ ಗರುಡನಿನ್ನು ನಿನ್ನ ಬಳಿ ಬರನು" ಎಂದು ಕೃಷ್ಣನು ಅಭಯವಿತ್ತನು. ಸಂಧ್ಯಾ-ಕಾಲಗಳಲ್ಲಿ ಈ ಕಾಲಿಯಮರ್ದನ-ಪ್ರಸಂಗವನ್ನು ನೆನೆಯುವವರಿಗೂ ಸರ್ಪ-ಭಯವೆಂಬುದಿರದೆಂದು ಭಾಗವತವು ಹೇಳುತ್ತದೆ.

ಇಂತಹ ಅದ್ಭುತ-ಲೀಲಾ-ಪ್ರಸಂಗವನ್ನು ಲೀಲಾಶುಕನು  ಇಲ್ಲಿ ಚಿತ್ರಿಸಿದ್ದಾನೆ. ಮದಮಯ - ಮದಮಯವೆಂದು ಆರಂಭವಾಗುವ ಈ ಶ್ಲೋಕವು, ತಾಂಡವಕ್ಕೆ ತಾಳಕ್ಕೆ ಸರಿಯಾಗಿ ಬರುವ ಆರ್ಯಾ-ವೃತ್ತದಲ್ಲಿದೆ. ತೀರ್ಯ-ವೀರ್ಯಗಳ ಅನುಪ್ರಾಸವೂ ಘಟನೆಗೊಪ್ಪುವಂತಿದೆ.

ಉತ್ತರಾರ್ಧದ ಮಮರತಿ-ಮಮರತಿಯೂ ಅನುರಣಿಸುತ್ತದೆ. ಏನದರ ಆಶಯ?
ತ್ರಿಶಂಕುವನ್ನು ಬರಬೇಡ ಎಂದರಲ್ಲವೆ, ಅಮರರು, ಎಂದರೆ ದೇವತೆಗಳು? ಅವರ ಕೈಯಲ್ಲಿ ತಿರಸ್ಕೃತಿಯನ್ನು, ಎಂದರೆ ತಿರಸ್ಕಾರವನ್ನು, ಅನುಭವಿಸುವಂತೆ ಆಗದಿರುವ ಹಾಗೆ ಮಾಡುವ ಮುರಾರಿಯು ನನಗೆ ಮುದವೀಯಲಿ - ಎಂದು ಕವಿಯಿಲ್ಲಿ ಕೇಳಿಕೊಂಡಿದ್ದಾನೆ.

ಮದಮಯಮದಮಯದುರಗಂ

ಯಮುನಾಮವತೀರ್ಯ ವೀರ್ಯ-ಶಾಲೀ ಯಃ |

ಮಮ ರತಿಮಮರ-ತಿರಸ್ಕೃತಿ-

-ಶಮನ-ಪರಃ ಸ ಕ್ರಿಯಾತ್ ಕೃಷ್ಣಃ ||

ಸೂಚನೆ : 25/1/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.