ಲೇಖಕರು : ವಿದ್ವಾನ್ ನರಸಿಂಹ ಭಟ್
ಶ್ರೀ ಶಂಕರ ಭಗವತ್ಪಾದರು ಮನುಕುಲದ ಉದ್ಧಾರಕ್ಕಾಗಿ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ಸ್ತೋತ್ರಗಳು ಎಂದರೆ ಯಾವುದೋ ಒಂದು ದೇವತೆಯನ್ನು ಉದ್ದೇಶವಾಗಿ ಇಟ್ಟುಕೊಂಡು, ಅದರ ಗುಣವಿಶೇಷವನ್ನು ವರ್ಣಿಸುವಂಥದ್ದು. ಇಲ್ಲಿ ಶ್ರೀ ಶಂಕರಾಚಾರ್ಯರು ರಚಿಸಿರುವ ಒಂದು ವಿಶಿಷ್ಟವಾಗಿರುವ ಸ್ತೋತ್ರ 'ಪ್ರಶ್ನೋತ್ತರ ರತ್ನಮಾಲಿಕಾ' ಎಂಬುದಾಗಿದೆ. ಇಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲಿ ಸ್ತೋತ್ರಗಳನ್ನು ಹೇಳಲಾಗಿದೆ. ಇಲ್ಲಿ ಯಾವುದೇ ದೇವಾತಾಪರವಾದ ಸ್ತುತಿ ಇಲ್ಲ. ಆದರೆ ಪ್ರಪಂಚದಲ್ಲಿರುವ ಅನೇಕ ವಿಷಯಗಳ ಬಗ್ಗೆ ಮಾಹಿತಿ ಇದೆ. ಅಂತಹ ಅತ್ಯಪೂರ್ವ ವಿಷಯಗಳ ಮಹತ್ವವನ್ನು ಸಾರಲು, ಅವುಗಳಲ್ಲಿರುವ ತತ್ತ್ವವನ್ನು ಸಾರಲು ಇಲ್ಲಿ ಪ್ರಶ್ನೋತ್ತರದ ರೂಪವನ್ನು ಸ್ವೀಕರಿಸಲಾಗಿದೆ. ಉದಾಹರಣೆಗೆ - ಯಾರು ಗುರು? ಎಂಬುದಾಗಿ ಪ್ರಶ್ನಿಸಿ, ಯಾರು ಅಧಿಗತ ತತ್ತ್ವನೋ, ಶಿಷ್ಯನ ಹಿತಕ್ಕೋಸ್ಕರ ಪ್ರತಿನಿತ್ಯವೂ ಯಾರು ಉದ್ಯಮಶೀಲನೋ ಅವನನ್ನು ' ಗುರು ' ಎಂಬುದಾಗಿ ಕರೆಯಬೇಕು ಎಂಬ ಉತ್ತರವನ್ನು ನೀಡಿದ್ದನ್ನು ನಾವು ಕಾಣಬಹುದು. ಇದೇ ರೀತಿಯಾಗಿ ಅನೇಕ ಧಾರ್ಮಿಕವಾದ ವಿಚಾರಗಳನ್ನು ಒಳಗೂಡಿಸಿ ಈ ಪ್ರಶ್ನೋತ್ತರರೂಪದಲ್ಲಿ ಅಳವಡಿಸಲಾಗಿದೆ.
ಹಾಗಾಗಿ ಓದುಗರ ಮುಂದೆ ಶಂಕರರ ವಿಚಾರವನ್ನು ಶ್ರೀರಂಗ ಮಹಾಗುರುಗಳ ವಿಶೇಷ ನೋಟದೊಂದಿಗೆ ಪ್ರಸ್ತುತಪಡಿಸಬೇಕು ಎಂಬ ಉದ್ದೇಶದಿಂದ ಈ ಪ್ರಶ್ನೋತ್ತರ ರತ್ನಮಾಲಿಕೆ ಎಂಬ ಲೇಖನ ಸರಣಿಯನ್ನು ಆಯ್ದುಕೊಳ್ಳುವ ಮನಸ್ಸನ್ನು ಮಾಡಿದ್ದೇನೆ. ಇದು ಕಾಲಾತೀತವಾಗಿ ಆಬಾಲ ವೃದ್ಧರಿಗೂ ಬರುವ ಸಂಶಯಗುಚ್ಚವಾಗಿದೆ! ಸಮಗ್ರ ಉತ್ತರವು ಇಂದಿಗೂ ಅಳವಡಿಸಿಕೊಳ್ಳಬಹುದಾಗಿದೆ. ಹಾಗಾಗಿ ಇಂತಹ ವಿಷಯಗಳಿಂದ ಪರಿಕಲ್ಪಿತವಾದ ಈ ಸ್ತೋತ್ರಪುಷ್ಪವನ್ನು ಸಮರ್ಪಿಸುವವನಾಗಿದ್ದೇನೆ.
ಮಾನವನು ತನ್ನ ಜೀವಿತವನ್ನು ಇತರ ಪ್ರಾಣಿಗಳಂತೆ ಮಾಡಬಾರದು. ಜೀವಿತಾವಧಿಯಲ್ಲಿ ವಿವೇಕವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ನಮ್ಮ ಸುತಮುತ್ತಲಿನ ವಿಷಯ ಅರಿವು ಅತ್ಯಗತ್ಯ. ಅದು ಸಜ್ಜನರ ಸಂಸರ್ಗದಿಂದ ಮತ್ತು ವೇದ ಶಾಸ್ತ್ರ ಮೊದಲಾದ ವಿದ್ಯೆಗಳ ಅಧ್ಯಯನದಿಂದ ಲಭ್ಯವಾಗುತ್ತದೆ. ಎಲ್ಲಾ ವೇದ ಅಥವಾ ಶಾಸ್ತ್ರಾದಿ ವಿದ್ಯೆಗಳನ್ನು ಅರಿತುಕೊಂಡೇ ಜೀವಿತವನ್ನು ಧನ್ಯವಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯವಿಲ್ಲ. ಆದರೆ ಯಾರು ಇಂತಹ ವಿಷಯವನ್ನು ತಮ್ಮ ತಪಸ್ಸು ಸಾಧನಗಳಿಂದ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ವಿಷಯ ಮತ್ತು ಅವುಗಳಿಗಿರುವ ಸಂಬಂಧ ಮತ್ತು ಪ್ರಯೋಜನವನ್ನು ಸಮಗ್ರವಾಗಿ ತಿಳಿದಿರುತ್ತಾರೋ ಅವರ ಅನುಭದ ಸಾರವನ್ನು ತಿಳಿದರೂ ಸಾಕು. ಅಂತಹ ಅನುಭವದ ಸಾರರೂಪವಾದ ಮಾತನ್ನೇ ಜೋಡಿಸಿ ಸ್ತೋತ್ರರತ್ನವಾಗಿಸಿ ನಮಗೆ ಶ್ರೀಂಕರಭಗವತ್ಪಾದರು ಅನುಗ್ರಹಿಸಿರುತ್ತಾರೆ. ಹಾಗಾಗಿ ಇಂತಹ ವಿಷಯಗಳ ತಾತ್ತ್ವಿಕಸ್ವರೂಪವನ್ನು ಅರಿಯಲು ನಾವು ಅಷ್ಟು ಶ್ರಮಪಡುವ ಅವಶ್ಯಕತೆಯೂ ಇರುವುದಿಲ್ಲ. ಅದನ್ನು ಈ ಸ್ತೋತ್ರದಲ್ಲಿ ಕಾಣಬಹುದು. ಅಂತಹ ವಿಷಯವನ್ನೇ ಆಯ್ದುಕೊಂಡು ನನ್ನ ಬುದ್ಧಿಗೆ ಸೀಮಿತವಾಗಿ ವಿವರಿಸಲು ಪ್ರಯತ್ನಪಡುತ್ತಿದ್ದೇನೆ. ನನ್ನ ಬುದ್ಧಿಗೆ ಸಂಸ್ಕಾರವನ್ನು ಕೊಟ್ಟು ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಶ್ರೀರಂಗ ಮಹಾಗುರುಗಳ ಅನುಗ್ರಹದ ಬಲದ ಮೇಲೆ ನಾನು ಇಂತಹ ಗಹನವಾದ ವಿಷಯಗಳನ್ನು ವಿವರಿಸುವ ಸಾಹಸೀಪ್ರವೃತ್ತಿಯನ್ನು ಮಾಡುತ್ತಿದ್ದೇನೆ.