ಲೇಖಕರು : ಡಾ. ಹಚ್.ಆರ್. ಮೀರಾ(ಪ್ರತಿಕ್ರಿಯಿಸಿರಿ lekhana@ayvm.in)
ವ್ಯಕ್ತಿಯ ವಿಕಾಸವೆಂತು ಎಂಬುದನ್ನು ರಾಮಾಯಣದ ಈ ಕಥಾಭಾಗದಲ್ಲಿ ನೋಡಬಹುದು. ವಸಿಷ್ಠರ ಬ್ರಹ್ಮಬಲದ ಮುಂದೆ ತಮ್ಮ ಕ್ಷಾತ್ರಬಲವು ಕೆಲಸ ಮಾಡಲಿಲ್ಲ, ಎಂದು ಮನವರಿಕೆಯಾಯಿತು ವಿಶ್ವಾಮಿತ್ರರಿಗೆ. ಈ ಬ್ರಹ್ಮಬಲವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಆಸೆ ತೀವ್ರವಾಗಿಯೇ ಮೂಡಿತು. ತಪಸ್ಸಿನ ಮೂಲಕ ಕ್ರಮವಾಗಿ ರಾಜರ್ಷಿ, ಋಷಿ, ಮಹರ್ಷಿ, ಹಾಗೂ ಕೊನೆಗೆ ಬ್ರಹ್ಮರ್ಷಿ ಪದವಿಗಳನ್ನು ಪಡೆದ ಅವರ ಸಾಧನೆಗಳ ಕಥೆ ನಮಗೆ ಲೌಕಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಆದರ್ಶವಾಗಬಲ್ಲದು.ಅವರ ಜೀವನದ ಆ ಭಾಗದ ಕಾಲ-ರೇಖೆಯನ್ನು ನಾವು ಗಮನಿಸಿದರೆ ನಮಗೆ ಸಿಗುವ ಘಟ್ಟಗಳು-ಪ್ರತಿಬಂಧಕಗಳು ಇವು. ಅವರು ರಾಜರ್ಷಿಯಾದ ಮೇಲೆ ನಡೆದದ್ದು ತ್ರಿಶಂಕುವಿನ ಹಾಗೂ ಅಂಬರೀಷ-ಶುನಃಶೇಫರ ಘಟನೆಗಳು. ಅವುಗಳಲ್ಲಿ ಅವರು ಸಾಕಷ್ಟೇ ತಪಃಫಲವನ್ನು ಕಳೆದುಕೊಂಡದ್ದಾಗಿತ್ತು - ಶಾಪಗಳನ್ನು ಕೊಡುವುದರ ಮೂಲಕ. ಋಷಿಯಾದ ನಂತರ ಮೇನಕೆಯ ಕಾಮಕ್ಕೆ ತುತ್ತಾಗಿ ಕಾಲ-ಶಕ್ತಿಗಳನ್ನು ನಷ್ಟಮಾಡಿಕೊಂಡರು. ಧ್ಯೇಯವನ್ನೂ ಮರೆತರು! ಹಳೆಯ ಸಂದರ್ಭಗಳಲ್ಲಿ ಶಾಪಕೊಡಲು ಮುಂದಾಗುತ್ತಿದ್ದ ಕೌಶಿಕರು, ಈಗ ಸ್ವ-ಪ್ರಜ್ಞೆಯಿಂದ ತಮ್ಮನ್ನು ತಾವು ಹತೋಟಿಯಲ್ಲಿಟ್ಟುಕೊಂಡರು; ಸಮಾಧಾನ-ಚಿತ್ತದಿಂದ ತಮ್ಮ ತಪಸ್ಸನ್ನು ಮತ್ತೂ ಏಕಾಗ್ರತೆಯಿಂದ ಮುಂದುವರೆಸಿದರು. ಯಾವ ದೊಡ್ಡ ಕೆಲಸವನ್ನು ಸಾಧಿಸಬೇಕಾದರೂ ಮನಸ್ಸಿನ ಮೇಲೆ ವಶ ಮುಖ್ಯವಾಗುತ್ತದೆ. ತದನಂತರ ಮತ್ತೆ ತಪಸ್ಸನ್ನು ಮುಂದುವರೆಸಿ ಮಹರ್ಷಿಯಾದ ಅವರಿಗೆ, ತಮ್ಮ ಧ್ಯೇಯಕ್ಕೆ ಬಹಳ ಹತ್ತಿರ ಬಂದಿದ್ದ ಕಾಲದಲ್ಲಿ ಇಂದ್ರ-ಮನ್ಮಥರು ರಂಭೆಯೊಟ್ಟಿಗೆ ಅವರ ತಪಸ್ಸಿಗೆ ವಿಘ್ನವನ್ನೊಡ್ಡಲು ಬಂದರು. ಆಗ, ಕ್ಷಣಮಾತ್ರದಲ್ಲೇ ಇಲ್ಲೇನೋ ತೊಂದರೆಯಿದೆಯೆಂದು ಅವರು ಬಗೆದರು; ಹಿಂದೆ ಬಿದ್ದಂತೆ ಕಾಮದ ಜಾಲಕ್ಕೆ ಬೀಳಲಿಲ್ಲ. ಆದರೆ ಬಲೆಯನ್ನು ತಪ್ಪಿಸಿಕೊಳ್ಳಹೋಗಿ ಬಾವಿಗೆ ಬಿದ್ದಂತಾಯಿತು ಅವರ ಪರಿಸ್ಥಿತಿ! ಅತ್ಯಲ್ಪಕಾಲ ಸಿಡಿದೆದ್ದ ಕೋಪದಿಂದಾಗಿ ರಂಭೆಗೆ ಶಾಪವಿತ್ತಿದ್ದರಿಂದ ಹಳೆಯ ಕಥೆಯ ಪುನರಾವರ್ತನೆಯಾದಂತಾಯಿತು. ಅದಕ್ಕೇ ಅವರು ಆ ಅಸಾಧಾರಣವಾದ ಅಕ್ರೋಧ-ಮೌನಗಳ ದೀಕ್ಷೆ ವಹಿಸಿದ್ದು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ತಪೋಧನವನ್ನು ಕಳೆದುಕೊಳ್ಳುತ್ತಿದ್ದ ಅವರು, ಉಗ್ರ-ಸಂಯಮದ ದೀಕ್ಷೆ ಹೊತ್ತು ಕೊನೆಗೂ ತಮ್ಮ ಲಕ್ಷ್ಯವನ್ನು ಸಾಧಿಸಿದರು.
ವಿಧಿ-ನಿಷೇಧಗಳ ನಿಯಮಗಳು ಯಾವುದೇ ಪ್ರಕ್ರಿಯೆಯ ಒಂದಂಶ. ತಪಸ್ಸಿನಲ್ಲೂ ವಿಹಿತ-ನಿಯಮಗಳನ್ನಾಚರಿಸುವುದು ಎಷ್ಟು ಮುಖ್ಯವೋ, ನಿಷಿದ್ಧ-ಪ್ರವೃತ್ತಿಗಳಿಂದ (ಉದಾಹರಣೆಗೆ ಕಾಮ-ಕ್ರೋಧಾದಿಗಳಿಂದ) ದೂರವಿದ್ದು ತಪೋನಾಶವನ್ನು ತಡೆಗಟ್ಟುವುದೂ ಅಷ್ಟೇ ಮುಖ್ಯ. ತ್ರಿಶಂಕು-ಶುನಃಶೇಫರ ಸಂದರ್ಭಗಳಲ್ಲಿ ತಮಗೆ ನೇರವಾಗಿ ಬಾಧೆಯಾಗಿಲ್ಲದಿದ್ದರೂ ಅವರು ತಪ್ಪು ಮಾಡಿದವರಿಗೆ ಶಾಪಕೊಟ್ಟರು. ಆದರೆ ರಂಭಾ-ಪ್ರಸಂಗದಲ್ಲಿ ತಮ್ಮ ಮುಖ್ಯ-ಧ್ಯೇಯಕ್ಕೇ ಅವಳಿಂದ ಬಾಧೆಯಾಯಿತೆಂದು ಅವರಿಗೆ ಕ್ರೋಧ ಬಂದಿತು. ಪ್ರತಿಸಂದರ್ಭದಲ್ಲೂ ಶಾಪ ಕೊಟ್ಟಾದ ತಕ್ಷಣ ಅವರಿಗೆ ಅದರಿಂದ ಆಗುತ್ತಿರುವ ತೊಂದರೆ ತಿಳಿಯಿತು. ಅಲ್ಲಿಯವರೆಗೆ ಮಾಡದಿದ್ದ ಸಂಕಲ್ಪವನ್ನು ಅವರು ರಂಭಾ-ಶಾಪದ ನಂತರ ಮಾಡಿದರು - ಎಂತಹ ಸಂನಿವೇಶದಲ್ಲೂ ಇನ್ನು ಮುಂದೆ ಕೋಪಿಸಿಕೊಳ್ಳುವುದಿಲ್ಲ, ಮೌನವಾಗಿಯೇ ಇರುತ್ತೇನೆ - ಎಂದು. ಅಸಾಧಾರಣವಾದ ಧ್ಯೇಯೋದ್ದೇಶಗಳಿಗೆ ಅಸಾಧಾರಣವಾದ ಪರಿಶ್ರಮವೂ ಬೇಕಾಗುತ್ತದೆ!
ಇತ್ತ ಅವರು ಇಟ್ಟುಕೊಂಡ ಸಂಯಮ-ನಿಯಮಗಳನ್ನು ಗಮನಿಸಿದರೆ, ಅವರು ತಪಸ್ಸೋಪಾನ(ತಪಸ್ಸಿನ ಮೆಟ್ಟಿಲು)ಗಳನ್ನು ಏರುತ್ತಿದ್ದಂತೆ ಅವರ ಕಟ್ಟು-ಕಟ್ಟಳೆಗಳೂ ಏರಿದುದು ತಿಳಿಯುತ್ತದೆ. ಸಂಯಮಿಗಳಾಗಿದ್ದ ಅವರು ತಮ್ಮ ರಾಣಿಯೊಂದಿಗೆ ಸಂಸಾರಿಗಳಾಗಿಯೇ ಮುನಿಗಳ ಆಹಾರ-ನಿಯಮಗಳನ್ನು ಪಾಲಿಸುತ್ತಾ ಮೊದಲಿಗೆ ತಪೋನಿಷ್ಠರಾದದ್ದು. ನಂತರದ ಘಟ್ಟಗಳಲ್ಲಿ ಏಕಾಂತದಲ್ಲಿದ್ದರು. ಹಲವು ಕಾಲ ಕೇವಲ ವಾಯು-ಸೇವನೆ ಮಾಡಿಕೊಂಡೇ ತಪಸ್ಸನ್ನಾಚರಿಸಿ, ಕೊನೆಕೊನೆಯ ಹಂತಗಳಲ್ಲಿ ತಮ್ಮ ಉಚ್ಛ್ವಾಸ-ನಿಃಶ್ವಾಸಗಳನ್ನೂ ನಿಲ್ಲಿಸಿ (ಎಂದರೆ ಉಸಿರನ್ನೇ ಆಡದೆ) ತಮ್ಮ ತಪಸ್ಸನ್ನು ಮುಂದುವರೆಸಿದರು.
ಇದೇ ವಿನ್ಯಾಸವನ್ನು ನಾವು ಲೌಕಿಕವಾದ ಧ್ಯೇಯಸಾಧನೆಯಲ್ಲೂ ಕಾಣುತ್ತೇವೆ. ಯಾವುದೇ ಮುಖ್ಯ-ಯೋಜನೆಯ ಮೊದಲ ಹಂತಗಳಲ್ಲಿ ನಾವು ಅದಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುತ್ತಿದ್ದರೂ, ಬೇರೆಯ ಕಡೆಗೂ ಗಮನ ಕೊಡಲು ಸಾಧ್ಯವಿರುತ್ತದೆ. ಆದರೆ ಮುಕ್ತಾಯದ ಹಂತಗಳು ಹತ್ತಿರವಾದಾಗ ತಾದಾತ್ಮ್ಯದಿಂದ ಅದೊಂದರಲ್ಲೇ ತೊಡಗುವುದಾಗುತ್ತದೆ. ಹಾಗೆ ಮಾಡದಿದ್ದಲ್ಲಿ ಕಾರ್ಯ-ಸಿದ್ಧಿಯಾಗುವುದೂ ಕಷ್ಟವಾಗಬಹುದು. ಯೋಜನೆಗಳು ಸೂಕ್ಷ್ಮತರವೂ ಕಷ್ಟತರವೂ ಆದಂತೆ ಹೆಚ್ಚು ಹೆಚ್ಚು ನಿಯಮಗಳನ್ನೂ ಕಟ್ಟುಪಾಡುಗಳನ್ನೂ ಅವು ಅಪೇಕ್ಷಿಸುತ್ತವೆ. ಶ್ರೀರಂಗಮಹಾಗುರುಗಳ ಮಾತಿನಂತೆ "ನಿಯಮ-ಬದ್ಧವಾದ ನಡೆಯನ್ನು ವಿಕಾಸವೆಂದೂ, ನಿಯಮ ತಪ್ಪಿದ ನಡೆಯನ್ನು ವಿಕಾರವೆಂದೂ ಕರೆಯುವುದರಲ್ಲಿ ಅರ್ಥವಿದೆ...ವಿಕಾಸವು ಕೊನೆಗೆ ಪ್ರಕಾಶದಲ್ಲೇ ನಿಲ್ಲುತ್ತದೆ". ನಿಯಮ-ಬದ್ಧವಾಗಿ ತಮ್ಮ ತಪಸ್ಸನ್ನಾಚರಿಸಿ ವಿಶ್ವಾಮಿತ್ರರು ಬ್ರಹ್ಮಜ್ಞರಾಗುವಂತಾಯಿತು.
ಒಬ್ಬ ಅಸಾಧಾರಣವಾಗಿ ದೃಢ-ನಿಶ್ಚಯನಾದ ವ್ಯಕ್ತಿಯು ನಿಯಮ-ಬದ್ಧವಾಗಿ ಪರಿಶ್ರಮಪಟ್ಟರೆ ಎಂತಹ ಸಾಧನೆಗಳನ್ನು ಮಾಡಬಲ್ಲ! - ಎನ್ನುವುದು ವಿಶ್ವಾಮಿತ್ರರ ತಪೋಗಾಥೆಯಿಂದ ತಿಳಿಯುತ್ತದಲ್ಲವೆ?
ಸೂಚನೆ : 25/1/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.