Sunday, November 12, 2023

ವ್ಯಾಸ ವೀಕ್ಷಿತ - 62 ದ್ರುಪದ-ಧೃಷ್ಟದ್ಯುಮ್ನ-ಯುಧಿಷ್ಠಿರರು ವ್ಯಾಸರಿಗೆ ಹೇಳಿದುದು ( Vyaasa Vikshita - 62 Drupada-Drishtadyumna-Yudhishthiraru Vyasarige Helidudu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)



ಆಗ ವ್ಯಾಸರು ಹೇಳಿದರು: ಒಬ್ಬಳಿಗೇ ಬಹುಪತಿತ್ವವೆಂಬುದು ಲೋಕವಿರೋಧಿಯೂ ಹೌದು, ವೇದವಿರೋಧಿಯೂ ಹೌದು – ಎಂಬೀ ಕಾರಣದಿಂದಾಗಿ, ಅದು ಧರ್ಮಲೋಪವೆಂದೆನಿಸಿಕೊಳ್ಳುವುದು. ಅಂತಹ ಈ ವಿಷಯದ ಬಗ್ಗೆ ನಿಮ್ಮಲ್ಲಿ ಯಾರ ಯಾರ ಮತವು (ಎಂದರೆ ಅಭಿಪ್ರಾಯವು) ಏನೇನು? -  ಎಂಬುದನ್ನು ನಾನು ಕೇಳಲು ಬಯಸುತ್ತೇನೆ. ಪ್ರತಿಯೊಬ್ಬರೂ ತಮ್ಮ ತಮ್ಮ ಮತವನ್ನು ಹೇಳಬಹುದು – ಎಂದರು.

(ಯಾರಾದರೂ, ಪ್ರಶ್ನೆಯೆತ್ತಿದರೆ, ನಿಮ್ಮ ಪ್ರಶ್ನೆಗಿದು ಉತ್ತರ – ಎಂದು ಸುಮ್ಮನೆ ನುಡಿದು ನಡೆದುಬಿಡುವವರಲ್ಲ, ವ್ಯಾಸರು. ಧರ್ಮದ ಮರ್ಮವನ್ನು ಚೆನ್ನಾಗಿ ಬಲ್ಲ ಅವರು, ಎದುರಿಗಿರುವ ಕೇಳುಗರ ಅಭಿಪ್ರಾಯಗಳನ್ನು ಮೊದಲು ಕೇಳಿ ತಿಳಿದು, ಆ ಬಳಿಕ ತಾಳ್ಮೆಯಿಂದ ತರ್ಕಬದ್ಧವಾಗಿ ಧರ್ಮಸೂಕ್ಷ್ಮವನ್ನು ಬಿಡಿಸಿ ಹೇಳಿ, ಎಲ್ಲರಿಗೂ ಯಥಾಥವನ್ನು ಮನದಟ್ಟು ಮಾಡಿಕೊಡುವರು. ಅವರ ಮಾತಿನ ಈ ಪರಿಯನ್ನು  ಇಲ್ಲಿ ಮನಗಾಣಬೇಕು).

ಅವರು ಹೀಗೆ ಹೇಳಲು, ದ್ರುಪದ-ಧೃಷ್ಟದ್ಯುಮ್ನರೂ ಯುಧಿಷ್ಠಿರ-ಕುಂತಿಯರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದರು.

ದ್ರುಪದನು ನುಡಿದುದು ಹೀಗೆ: ಬ್ರಾಹ್ಮಣಶ್ರೇಷ್ಠರೇ, ಲೋಕಕ್ಕೂ ವೇದಕ್ಕೂ ವಿರುದ್ಧವೆನಿಸುವ ಇದು ಅಧರ್ಮವೆಂದೇ ನನ್ನ ಮತ. ಅನೇಕ ಪುರುಷರಿಗೆ ಪತ್ನಿಯೊಬ್ಬಳೇ - ಎಂಬುದು ಎಲ್ಲೂ ಇಲ್ಲವಷ್ಟೆ? ಹಿಂದಿನ ಮಹಾತ್ಮರಾರೂ ಇದನ್ನು ಧರ್ಮವೆಂದು ಆಚರಿಸಿರುವುದು ಕಂಡುಬಂದುದಿಲ್ಲ. ಬಲ್ಲವರಾಗಿದ್ದೂ ಅಧರ್ಮವನ್ನು ಆಚರಿಸುವುದೆಂಬುದು ಹೇಗೂ ಇರಲಾರದಷ್ಟೆ. ಈ ಕಾರಣಕ್ಕಾಗಿಯೇ ಈ ಕ್ರಿಯೆಯನ್ನು ನಡೆಸಲು ನನಗೆ ಸಂಕಲ್ಪವೇ ಉಂಟಾಗುತ್ತಿಲ್ಲ. ಇದು ಧರ್ಮವಾದೀತೆಂಬುದು ನನಗೆ ಎಂದಿಗೂ ಸಂದಿಗ್ಧವಾಗಿಯೇ (ಸಂದೇಹಕ್ಕೆ ಆಸ್ಪದವಾಗಿಯೇ) ಉಳಿಯುವುದಾಗಿ ತೋರುತ್ತದೆ - ಎಂದನು.

ಆ ಬಳಿಕ, ಧೃಷ್ಟದ್ಯುಮ್ನನು ಹೀಗೆಂದನು: ದ್ವಿಜಶ್ರೇಷ್ಠರೂ, ತಪೋಧನರೂ, ಬ್ರಾಹ್ಮಣವರ್ಯರೂ ಆದವರು ತಾವು. ಜ್ಯೇಷ್ಠಭ್ರಾತೃವೆನಿಸಿದವನು (ಎಂದರೆ ಹಿರಿಯ ಸೋದರನು) ಸುಶೀಲನಾಗಿದ್ದೂ ತನ್ನ ತಮ್ಮನ ಭಾರ್ಯೆಯನ್ನು ಅದೆಂತು ಸಂಗಮಿಸಿಯಾನು? ಧರ್ಮಗತಿಯು (ಎಂದರೆ ಧರ್ಮದ ನಡೆಯು) ಸೂಕ್ಷ್ಮವಾದದ್ದು; ಎಂದೇ ಅದನ್ನು ನಾವರಿಯೆವು. ಹೀಗಾಗಿ ಇದು ಧರ್ಮವೋ ಅಧರ್ಮವೋ - ಎಂಬ ವಿನಿಶ್ಚಯವು ಶಕ್ಯವಲ್ಲ, ನಮ್ಮಂತಹವರಿಗೆ. ಹೀಗಿರಲು ಐವರಿಗೆ ಕೃಷ್ಣೆಯು ಮಹಿಷಿಯಾಗುವುದೆಂಬುದರ ಬಗ್ಗೆ ಸರಿಯಾದುದು ಯಾವುದೆಂಬ ನಿರ್ಣಯವು ನನ್ನ ಮಟ್ಟಿಗೆ ಅಶಕ್ಯವಾಗಿದೆ – ಎಂದನು.

ಆಗ ಯುಧಿಷ್ಠಿರನು ಹೀಗೆ ನುಡಿದನು: ನನ್ನ ವಾಣಿಯು (ಮಾತು) ಎಂದೂ ಅನೃತವನ್ನು ಆಡಿದುದಿಲ್ಲ; ನನ್ನ ಮತಿಯೂ ಅಧರ್ಮದಲ್ಲಿ ತೊಡಗಿದ್ದಿಲ್ಲ; ಹೀಗಿರುವಾಗ ನನ್ನ ಮನಸ್ಸು ಈ ವಿವಾಹವಿಷಯದಲ್ಲಿ ಪ್ರವೃತ್ತವಾಗಿದೆ. ಹೀಗಾಗಿ, ಇದು ಅಧರ್ಮವಾಗಲಾರದು. (ಇದೇ ಬಗೆಯ ಮಾತುಗಳನ್ನು ಶಾಕುಂತಲನಾಟಕದ ದುಷ್ಯಂತನೂ ಆಡುವುದನ್ನು ಇಲ್ಲಿ ಸ್ಮರಿಸಬಹುದು. ತಮ್ಮ ಈವರೆವಿಗಿನ ನಡತೆಯ ಬಗ್ಗೆ ಆತ್ಮವಿಶ್ವಾಸವುಳ್ಳವರ ಚಿಂತನವೂ ನುಡಿಯೂ ಹೀಗೆಯೇ ಇರುತ್ತದೆ. ಇದು ಜಂಭದ ಮಾತಿರಬೇಕೆಂದು ಶಂಕಿಸಬೇಕಿಲ್ಲ).  

ಅಷ್ಟೇ ಅಲ್ಲ. ಪುರಾಣಗಳಲ್ಲಿ ಈ ವಿಷಯವು ಕೇಳಿಬರುತ್ತದಷ್ಟೆ: ಗೌತಮ-ಗೋತ್ರದವಳಾದ ಜಟಿಲಾ ಎಂಬುವಳು ಏಳು ಋಷಿಗಳನ್ನು ವಿವಾಹವಾದಳು. ಹಾಗೆಯೇ ಮತ್ತೊಬ್ಬ ಮುನಿಪುತ್ರಿ, ವಾರ್ಕ್ಷೀ ಎಂಬುವಳು; ನಾನಾತಪಸ್ಸುಗಳಿಂದ ಪವಿತ್ರರಾಗಿದ್ದ ಹಾಗೂ ಸಮಾನ-ನಾಮಕರಾಗಿದ್ದ(ಒಂದೇ ಹೆಸರಿನ) ಸೋದರರಾದ ಹತ್ತು ಮಂದಿ ಪ್ರಚೇತಸರನ್ನು ಮದುವೆಯಾಗಿದ್ದಳು, ಅಲ್ಲವೇ?

ಸೂಚನೆ : 11/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.