Monday, November 27, 2023

ಯಕ್ಷ ಪ್ರಶ್ನೆ 65 (Yaksha prashne 65)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 64 ನಟ-ನರ್ತಕರಿಗೆ ಏಕೆ ದಾನವನ್ನು ಮಾಡಬೇಕು ?

ಉತ್ತರ - ಯಶಃಪ್ರಾಪ್ತಿಗಾಗಿ  

ಈ ಹಿಂದಿನ ಮತ್ತು ಮುಂದಿನ ಕೆಲವು ಲೇಖನಗಳಲ್ಲಿ ದಾನವನ್ನು ಯಾರಿಗೆ ಮಾಡಬೇಕು? ಮತ್ತು ಯಾರಿಗೆ ಮಾಡಿದರೆ ಯಾವ ಫಲ ಲಭಿಸುತ್ತದೆ? ಎಂಬ ವಿಷಯದ ಬಗ್ಗೆ ಪ್ರಶ್ನೋತ್ತರವಿದೆ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಧನಸಂಗ್ರಹವನ್ನು ಮಾಡಲೇಬೇಕು. ಸಂಗ್ರಹ ಮಾಡಿದ ಧನವನ್ನು ಸದ್ವಿನಿಯೋಗ ಮಾಡಬೇಕು. ಸಂಗ್ರಹಿಸದ ಧನವು ಎರಡು ರೀತಿಯಲ್ಲಿ ವಿನಿಯೋಗವಾಗಬೇಕು. ಮೊದಲನೆಯದಾಗಿ ದಾನ ಮತ್ತು ಎರಡನೆಯದಾಗಿ ಸ್ವತಃ ಭೋಗಿಸುವಂತಹದ್ದು. ಇವೆರಡೂ ಆಗದಿದ್ದಲ್ಲಿ ಆ ಧನಕ್ಕೆ ನಾಶವೇ ಗತಿಯಾಗುವುದು ಎಂದು ಸುಭಾಷಿತವು ಸಾರುತ್ತದೆ. ಜೀವನವು ಕೇವಲ ಆತ್ಮದ ಉನ್ನತಿಯನ್ನು ಮಾತ್ರ ಪಡೆಯುವ ಉದ್ದೇಶವಾದರೂ, ಅದಕ್ಕೆ ಪೂರಕವಾದ ಅನೇಕ ಕಾರ್ಯವನ್ನೂ ಜೊತೆಜೊತೆಯಲ್ಲೇ ಮಾಡಲೇಬೇಕಾದುದು ಅಷ್ಟೇ ಕರ್ತವ್ಯ ಮತ್ತು ಅನಿವಾರ್ಯವೂ ಹೌದು. ಹಾಗಾಗಿ ನಾವು ಸಂಗ್ರಹಿಸಿದ ಧನವು ಯಾವ ರೀತಿ ಉಪಯೋಗವಾದರೆ ಅದು ಆತ್ಮೋನ್ನತಿಗೆ ಸಹಾಯಕವಾಗುವುದು ಎಂಬುದೂ ಇಲ್ಲಿನ ಪ್ರಶ್ನೆಯಲ್ಲಿ ಅಡಕವಾಗಿದೆ. ಮತ್ತು ಜೀವನವೆಂಬುದು ಅನ್ಯೋನ್ಯ ಆಶ್ರಯ ಆಶ್ರಯಿಭಾವದಿಂದ ನಡೆಯಬೇಕಾಗಿದೆ. ತನ್ನ ಧನವನ್ನು ಇನ್ನೊಬ್ಬರಿಗೆ ಕೊಟ್ಟಾಗ ಆ ವ್ಯಕ್ತಿಯು ಆ ಧನವನ್ನು ಉಪಯೋಗಿಸಿ ಜೀವನಕ್ಕೆ ಬೇಕಾದ ದ್ರವ್ಯವನ್ನು ಪಡೆಯಲು ಸಾಧ್ಯ. ಅಷ್ಟೇ ಅಲ್ಲದೇ ಧನವು ತ್ಯಾಗ ಮಾಡುತ್ತಿದ್ದಾಗಲೇ ಮತ್ತೆ ಬಂದು ಸೇರುತ್ತದೆ. ತ್ಯಾಗ ಮಾಡಿದಾಗಲೆ ಆತ ಶುದ್ಧನಾಗುತ್ತಾನೆ. ಒಂದು ವೇಳೆ ಅದನ್ನು ಬಚ್ಚಿಡುತ್ತಾ ಹೋದರೆ ನಿಂತ ನೀರಂತೆ ಪಾಚಿಕಟ್ಟಿ ಯಾರಿಗೂ ಉಪಯೋಗ ಬಾರದ ನೀರಿನಂತಾಗುತ್ತದೆ ಆ ಧನ. ಅದಕ್ಕಾಗಿ ಧನ ವಿನಿಯೋಗ ಸದಾ ಆಗುತ್ತಿರಬೇಕು. ಅದು ಒಳ್ಳೆಯ ಕಾರ್ಯಕ್ಕೆ ಆಗುವಂತಿರಬೇಕು. 

ಪ್ರಕೃತ ಪ್ರಶ್ನೆಯಲ್ಲಿ ಯಕ್ಷನು ನರ್ತಕರಿಗೆ ಅಥವಾ ನಟರಿಗೆ ಏಕೆ ದಾನ ಮಾಡಬೇಕು? ಎಂದು ಕೇಳುತ್ತಾನೆ. ನಟರಿಗೆ ದಾನ ಮಾಡುವುದರಿಂದ ಆಗುವ ಫಲವೇನು? ಎಂಬುದು ಧರ್ಮರಾಜನ ಉತ್ತರದಿಂದ ಲಭ್ಯವಾಗುತ್ತದೆ. ಯಶಸ್ಸು ಇಂತಹ ಕೊಡುಗೆಯಿಂದ ಪ್ರಾಪ್ತವಾಗುತ್ತದೆ. ನಟರು ತಮ್ಮ ಕಲೆಯಿಂದ ಜನರನ್ನು ರಂಜಿಸುವವರು. ಕಲೆಯೇ ಅವರಿಗೆ ಬೆಲೆಯನ್ನು ಕೊಡುವಂತಹದ್ದು. ಕಲಾವಿದನು ತನ್ನ ಕಲೆಯಿಂದ ಕಲೆಯ ಮೂಲನಾದ ಭಗವಂತನನ್ನು ತಲುಪಲು ಕಲಾಪ್ರೇಮಿಗಳಿಗೆ ಕಲಾರಸಿಕರಿಗೆ ಕಾರಣೀಭೂತನಾಗುತ್ತಾನೆ. ಅವನಿಗೆ ಸಿಕ್ಕ ಸಮ್ಮಾನವು ಕಲಾಧೀಶನಿಗೆ ಕೊಟ್ಟ ಗೌರವವಾಗುತ್ತದೆ. ಕಲಾವಿದನು ತೃಪ್ತನಾಗಿ ಆ ದಾನಿಗೆ ಮನಸ್ಸು ತುಂಬಿ ಒಳ್ಳೆಯದಾಗಲಿ ಎಂಬ ಬಯಸುತ್ತಾನೆ ಅಲ್ಲವೇ. ಈ ಸದಾಶಯವೇ ದಾನಿಯ ಆತ್ಮೋನ್ನತಿಗೆ ಕಾರಣವಾಗುತ್ತದೆ. ಈ ಪ್ರಕಾರವಾಗಿ ಬರುವ ಯಶಸ್ಸನ್ನು ಪ್ರತಿಯೊಬ್ಬ ಮಾನವನೂ ಪಡೆಯಬೇಕು. ಅದಕ್ಕೆ ಹಿರಿಯರು ಆಶೀರ್ವಾದವನ್ನು ಮಾಡುವಾಗ 'ಯಶಸ್ವೀ ಭವ' ಎಂದು ಹರಸುತ್ತಿದ್ದರು. ಇಂತಹ ಯಶಸ್ಸನ್ನು ಪ್ರತಿಯೊಬ್ಬರೂ ಬಯಸಬೇಕಾದುದೇ. ಏಕೆಂದರೆ ಅವನ ಸಂಪತ್ತು, ಅವನ ಸಂಗ್ರಹವು ಸದ್ವಿನಿಯೋಗಕ್ಕೆ ಕಾರಣವಾಯಿತು. ನಟನಾದವು ನಾನಾ ಪ್ರದೇಶಗಳಿಗೆ ಸಂಚಾರ ಮಾಡುತ್ತಾ ತನಗೆ ಸಂದ ಸಮ್ಮಾನವನ್ನು ಸಮ್ಮಾನಿಸಿದವರನ್ನು ಪರಿಚಯಿಸುತ್ತಾ ಸಾಗುತ್ತಾನೆ. ಅದರಿಂದ ನಟನಿಗೆ ಕೊಟ್ಟ ದಾನಿಯು ಜಗತ್ತಿಗೆ ಪರಿಚಯವಾಗುತ್ತಾ ಅವನ ಹೆಸರು ಎಲ್ಲೆಡೆ ಪಸರಿಸುತ್ತದೆ. ಇದೇ ಅವನ ಯಶಸ್ಸಿಗೆ ಕಾರಣ. 

ಸೂಚನೆ : 26/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.