Monday, November 20, 2023

ಯಕ್ಷ ಪ್ರಶ್ನೆ 64 (Yaksha prashne 64)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 63 ಬ್ರಾಹ್ಮಣನಲ್ಲಿ ಏಕೆ ದಾನವನ್ನು ಮಾಡಬೇಕು ?

ಉತ್ತರ - ಧರ್ಮ ಅಥವಾ ಪುಣ್ಯಪ್ರಾಪ್ತಿಗಾಗಿ  

ಅತ್ಯಂತ ಮುಖ್ಯವಾದ ವಿಷಯ ಧರ್ಮ ಅಥವಾ ಪುಣ್ಯಪ್ರಾಪ್ತಿ. ಅದನ್ನು ಪಡೆಯಲು ಬಹಳ ಮುಖ್ಯವಾದ ಸಾಧನ ಯಾವುದು? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಪುಣ್ಯವನ್ನು ಸಂಪಾದನೆ ಮಾಡಬೇಕೆಂದು ಬಯಸುವವರು ಬ್ರಾಹ್ಮಣನಲ್ಲಿ ದಾನವನ್ನು ಮಾಡಬೇಕು ಎಂಬುದು ಉತ್ತರದ ಸ್ವಾರಸ್ಯ. 

ಈ ಉತ್ತರವನ್ನು ಚಿಂತಿಸಬೇಕಾದರೆ ಯಾರು ಬ್ರಾಹ್ಮಣ? ಅವನಲ್ಲೇ ಏಕೆ ದಾನವನ್ನು ಮಾಡಬೇಕು? ದಾನವೇ ಏಕೆ ಪುಣ್ಯಪ್ರಾಪ್ತಿಗೆ ಶ್ರೇಷ್ಠವಾದ ಸಾಧನ? ಎಂಬೆಲ್ಲಾ ಪ್ರಶ್ನೆಗಳು ಇದರ ಹಿಂದೆ ಬರುತ್ತವೆ. ಯಾರ ಜನ್ಮಕ್ಕೆ ಸತ್ತ್ವಗುಣವು ಪ್ರಧಾನವಾಗಿ ಕಾರಣವಾಗಿದೆಯೋ ಅವನು ಬ್ರಾಹ್ಮಣ. ಬ್ರಾಹ್ಮಣನಾಗಿ ಜನ್ಮ ಪಡೆಯುವಂತಹ ಪುಣ್ಯವು ಯಾರಿಂದ ಹಿಂದಿನ ಜನ್ಮದಲ್ಲಿ ಸಂಪಾದಿಸಲ್ಪಟ್ಟಿದೆಯೋ ಅವನು ತಾನೇ ಬ್ರಾಹ್ಮಣ. ಬ್ರಾಹ್ಮಣನಾಗಿ ಹುಟ್ಟಿ ಅದಕ್ಕೆ ಸಲ್ಲುವ ಕಾರ್ಯವನ್ನೂ ಮಾಡಿದರೆ ಆತ ಶ್ರೇಷ್ಠನಾದ ಬ್ರಾಹ್ಮಣನಾಗುವನು. ಶ್ರೇಷ್ಠವಾದ ಬ್ರಾಹ್ಮಣಜನ್ಮದಲ್ಲಿ ಹುಟ್ಟಿ ಅದಕ್ಕೆ ಸಲ್ಲದ ಕಾರ್ಯವನ್ನು ಮಾಡಿದರೆ ಅವನನ್ನು ಪಶುಜನ್ಮಕ್ಕಿಂತಲೂ ಅಥವಾ ಕೀಟಜನ್ಮಕ್ಕಿಂತಲೂ ಕನಿಷ್ಠ ಎಂದೇ ಭಾವಿಸಬೇಕು. ಬ್ರಹ್ಮಜ್ಞಾನವನ್ನು ಪಡೆದ ಅಥವಾ ಅದನ್ನು ಪಡೆಯಲು ತಪಸ್ಸನ್ನು ಮಾಡುವಂತಹ ವ್ಯಕ್ತಿಯು ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಅಂತಹ ಬ್ರಾಹ್ಮಣ ಮಾತ್ರ ನಿಜವಾದ ಪ್ರತಿಗೃಹೀತಾ- ದಾನವನ್ನು ಸ್ವೀಕರಿಸಲು ಅರ್ಹ. ಅವನಿಗೆ ಕೊಟ್ಟ ದಾನವು ಸದ್ವಿನಿಯೋಗವಾಗುತ್ತದೆ ಎಂದರ್ಥ. ಸತ್ಪಾತ್ರನಲ್ಲಿ ಮಾಡುವ ದಾನವನ್ನು ಉತ್ತಮ ದಾನ ಎಂಬುದಾಗಿ ಹೇಳಿದ್ದಾರೆ. ಯಾವುದೇ ವಸ್ತು ಹಾಳಾಗಬಾರದು, ಅದು ವಿಕಾರವಾಗಬಾರದು, ಆ ವಸ್ತುವನ್ನು ಉತ್ಪಾದನೆ ಮಾಡಿದವನ ಮನೋರಥವನ್ನು ಈಡೇರಿಸುವಂತೆ ಇರಬೇಕು ಎಂಬುದು ಪ್ರತಿಯೊಬ್ಬರ ಬಯಕೆ ತಾನೆ! ಈ ಜಗತ್ತಿನ ಉತ್ಪತ್ತಿಗೆ ಕಾರಣವಾದವುಗಳು ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳು. ಅವುಗಳಲ್ಲಿ ನಿರ್ವಿಕಾರವಾದದ್ದು ಸತ್ತ್ವಗುಣ. ಜನ್ಮಕ್ಕೆ ಕಾರಣವಾದುದು ಸತ್ತ್ವಾದಿ ಮೂರು ಗುಣಗಳು ಮತ್ತು ಕರ್ಮ.

ಈ ಪ್ರಪಂಚವೈವಿಧ್ಯಕ್ಕೆ ಕಾರಣವೇ ಈ ಗುಣ ಮತ್ತು ಕರ್ಮವ್ಯವಸ್ಥೆ. ಮಾವಿನ ಬೀಜದಲ್ಲೇ ಮುಂದೆ ಮಾವಿನ ಮರವಾಗುವ ಎಲ್ಲಾ ಅಂಶಗಳು ಇರುತ್ತವಷ್ಟೇ!. ಬೀಜವಾದಮೇಲೆ ಮಾವನ್ನು ತೆಗೆದು ಇನ್ನಾವುದೋ ಮರವನ್ನು ಅದೇ ಬೀಜದಿಂದ ಬೆಳೆಯಲು ಅಸಾಧ್ಯ ತಾನೇ. ಇಂತಹ ಸೃಷ್ಟಿಸಹಜ ವ್ಯವಸ್ಥೆಯ ಒಂದು ಭಾಗವಾದ ಮಾನವನ ಸೃಷ್ಟಿಯಲ್ಲಿ ಸತ್ತ್ವಗುಣ ಅತಿಶಯವಾಗಿ ಇರುವ ಸೃಷ್ಟಿಯನ್ನು ಬ್ರಾಹ್ಮಣ ಎಂದು ಕರೆದು, ಅದು ನಿರ್ವಿಕಾರವಾದ ಸೃಷ್ಟಿಯಾದ್ದರಿಂದ ಅದನ್ನು ಸತ್ಪಾತ್ರ ಎಂದು ಪರಿಗಣಿಸಿದ್ದಾರೆ ನಮ್ಮ ಋಷಿಗಳು. ಪಾತ್ರ ಸರಿಯಾಗಿ ಇದ್ದರೆ ಮಾತ್ರ ಅದರಲ್ಲಿ ಹಾಕುವ ವಸ್ತುವೂ ನಿರ್ವಿಕಾರವಾಗಿ ಇರಲು ಸಾಧ್ಯ ತಾನೇ! ಈ ವಿಷಯವು ಓತಪ್ರೋತವಾಗಿ ಐಕಮತ್ಯದಿಂದ ವೇದ, ಸ್ಮೃತಿ, ಶಾಸ್ತ್ರ, ಕಾವ್ಯ ಹೀಗೆ ಎಲ್ಲಾ ಸಂಸ್ಕೃತಸಾಹಿತ್ಯದಲ್ಲಿ  ನಿಶ್ಚಯವಾಗಿ ಹೇಳಲ್ಪಟ್ಟಿದೆ. ಈ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ದಾನವನ್ನು ಬ್ರಾಹ್ಮಣನಿಗೇ ಮತ್ತು ಬ್ರಾಹ್ಮಣನಿಗೆ ದಾನವೇ ಧರ್ಮಸಂಪಾದನೆಗೆ ಶ್ರೇಷ್ಠವಾದುದು ಎಂಬುದನ್ನು ನಿರ್ಣಯಿಸಲಾಗಿದೆ. ಪುಣ್ಯಸಂಗ್ರಹಕ್ಕೆ ದಾನದಷ್ಟು ಉತ್ತಮ ಮಾರ್ಗ ಇನ್ನೊಂದಿಲ್ಲ. "ಬ್ರಾಹ್ಮಮನೋಧರ್ಮದಿಂದ ಯಜ್ಞಾರ್ಥವಾಗಿ ದಾನ ತೆಗೆದುಕೊಳ್ಳುವ ಗೃಹಸ್ಥನು ನಿರ್ಲಿಪ್ತನಾಗಿ ತೆಗೆದುಕೊಳ್ಳುತ್ತಾನೆ. ಆ ಪದಾರ್ಥಕ್ಕೆ ಬ್ರಹ್ಮಭಾವವನ್ನು ಕೊಟ್ಟು ತಾನು ನಿರ್ಲಿಪ್ತನಾಗುವುದಕ್ಕೋಸ್ಕರವೇ ದಾನ ತೆಗೆದುಕೊಳ್ಳುತ್ತಾನೆ" ಎಂಬ ಶ್ರೀರಂಗಮಾಹಾಗುರುಗಳ ಈ ಮಾತು ಪ್ರಕೃತ ವಿಷಯವನ್ನು ಅರ್ಥಮಾಡಿಕೊಳ್ಳಲು ನೆರವಾಗುವುದು. ಹಾಗಾಗಿ ಬ್ರಾಹ್ಮಣನಷ್ಟು ಉತ್ತಮ ಪಾತ್ರ ಇನ್ನೊಂದಿಲ್ಲ. ಹಾಗಾಗಿ ಯಾರು ಪುಣ್ಯ, ಧರ್ಮ, ಜನ್ಮ ಇಂತಹ ವಿಷಯಗಳಲ್ಲಿ ನಂಬಿಕೆ ಇಟ್ಟಿದ್ದಾರೋ ಅಂತವರನ್ನು ಉದ್ದೇಶವಾಗಿ ಇಟ್ಟುಕೊಂಡು ವಿವರಿಸಿದ ಧರ್ಮಜನ ಉತ್ತರ ಇದಾಗಿದೆ.

ಸೂಚನೆ : 19/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.