Saturday, November 4, 2023

ಪಂಚಕನ್ಯೆಯರು - ಉಪಸಂಹಾರ (Panncakanyeyaru - Upasanhara)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in) 

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ l ಪಂಚಕನ್ಯಾಸ್ಮರೇನ್ನಿತ್ಯಮಹಾಪಾತಕ ನಾಶನಮ್ ll ಎಂಬ ಪ್ರಸಿದ್ಧ ಶ್ಲೋಕದ ಬಗ್ಗೆ ಚಿಂತಿಸಿದ್ದೇವೆ. ವಿವಾಹಿತರಾದ ಅಹಲ್ಯಾ ಮುಂತಾದವರು ಹೇಗೆ ಕನ್ಯಾ ಎಂಬ ಪದಕ್ಕೆ ಅರ್ಹರಾಗಿ ಪ್ರಾತಃಸ್ಮರಣೀಯರಾಗಿದ್ದಾರೆ,ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ.


ಕನ್ಯಾ ಎಂದರೆ ಆತ್ಮ ದೀಪ್ತಿಯಿಂದ ಬೆಳಗುವವರುಅಹಲ್ಯಾದಿಗಳು ಹೇಗೆ ತಮ್ಮಲ್ಲಿ ಆತ್ಮ ಪ್ರಕಾಶವನ್ನು ತುಂಬಿಕೊಂಡು ಪರಮಾತ್ಮನ ಅನುಗ್ರಹಕ್ಕೆ ಸದಾ ಪಾತ್ರರಾಗಿದ್ದರು ಎಂಬುದನ್ನು ಅವರುಗಳ ಜೀವನ ಚರಿತ್ರೆಯ ಮೇಲೆ ಒಂದು ನೋಟವನ್ನು ಹರಿಸಿ ಗಮನಿಸಿದ್ದೇವೆಅವರುಗಳನ್ನು ಹೇಗೆ ಸ್ಮರಿಸಿಕೊಂಡರೆ ನಮ್ಮ ಜೀವನ ಪಾವನವಾಗುತ್ತದೆ ಎಂಬುದನ್ನು ಇನ್ನೊಮ್ಮೆ ಗಮನಿಸಿ ಈ ಲೇಖನವನ್ನು ಸಂಪನ್ನಗೊಳಿಸಬೇಕಾಗಿದೆ.


 ಪಾತಕ ಎಂದರೆ ಪತನ, ಅಥವಾ ಮೇಲಿನಿಂದ ಕೆಳಕ್ಕೆ ಬೀಳಿಸುವುದು ಎಂಬುದಾಗಿ ಅರ್ಥಯಾವ ಯಾವ ಕಾರ್ಯಗಳು ನಮ್ಮನ್ನು ನಮ್ಮ ಸ್ಥಾನದಿಂದ ಕೆಳಕ್ಕೆ ಬೀಳಿಸುತ್ತವೆಯೋ ಅಂತಹ ಕಾರ್ಯಗಳೆಲ್ಲವೂ ಪಾತಕಗಳೇಅವು ಭೌತಿಕ ದೈವಿಕ  ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿರಬಹುದುಪ್ರತಿಯೊಬ್ಬರೂ ಈ ಮೂರೂ ಕ್ಷೇತ್ರಗಳಲ್ಲೂ ಶುದ್ಧವಾದ ಜೀವನವನ್ನೂ ನಡೆಸಿ ದಿನದಿಂದ ದಿನಕ್ಕೆ ಏಳಿಗೆಯನ್ನು ಹೊಂದಬೇಕಾದುದು ಆದರ್ಶ. ಯಾವ ನಮ್ಮ ಕಾರ್ಯಗಳು ಆ ಮೂರೂ ಕ್ಷೇತ್ರಗಳ ಏಳಿಗೆಯನ್ನು ಕುಂಠಿತಗೊಳಿಸಿ  ನಮ್ಮ ಅಧ:ಪತನಕ್ಕೆ ಕಾರಣವಾಗುತ್ತವೆಯೋ ಅವೇ ಪಾಪಕಾರ್ಯಗಳುನಿತ್ಯ ಜೀವನದಲ್ಲಿ ನಮಗೆ ತಿಳಿದೋ ತಿಳಿಯದೆಯೋ ಅಂತಹ ಕಾರ್ಯಗಳು ನಮ್ಮಿಂದ ಆಗುತ್ತಲೇ ಇರುತ್ತವೆಅಂತಹ ಪಾಪ ಕಾರ್ಯಗಳ ನಿವಾರಣೆಗೆ ಭಗವಂತನ ಸ್ಮರಣೆಯೇ ಮಹೌಷಧವಾಗಿದೆನೇರವಾಗಿ ಭಗವಂತನ ಸ್ಮರಣೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಭಕ್ತರ ಅಥವಾ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಂತಹವರ ಸ್ಮರಣೆಯೂ ಸಹಕಾರಿಯಾಗಬಲ್ಲದುಏಕೆಂದರೆ ಅಂತಹವರ ಸ್ಮರಣೆಯೂ ನಮ್ಮನ್ನು ಭಗವಂತನ ಸ್ಮರಣೆಯಲ್ಲಿಯೇ ನಿಲ್ಲಿಸುತ್ತದೆ ಎಂಬುದನ್ನು ಈ ಪಂಚಕನ್ಯೆಯರ ಜೀವನ ಚರಿತ್ರೆಯಿಂದ ಅರಿಯಬಹುದು.


 ಅಹಲ್ಯೆಯು ಕ್ಷಣಕಾಲ ಮನಸ್ಸಿನ ಸ್ಥಿರತೆಯನ್ನು ಕಳೆದುಕೊಂಡ ಪರಿಣಾಮ ಪತಿದ್ರೋಹದಂತಹ ಮಹಾಪಾತಕವೇ ಅವಳಿಂದ ಎಸಗಲ್ಪಟ್ಟಿತುಆ ಕಾರ್ಯವು ಅವಳನ್ನು ಅವಳ ಸ್ಥಾನದಿಂದ ಪತನಗೊಳಿಸಿತುಆದರೆ ಪತಿಯಾದ ಗೌತಮರು ನೀಡಿದ ಶಾಪ ಮತ್ತೆ ಪುನಃ ಅವಳನ್ನು ಮೇಲಕ್ಕೆ ಏರಿಸಿ ಮೊದಲಿಗಿಂತಲೂ ಉನ್ನತವಾದ ಸ್ಥಿತಿಯನ್ನೇ ದೊರಕಿಸಿತುಅಹಲ್ಯೆಯು ತನ್ನಿಂದಾದ ಪಾಪಕಾರ್ಯಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಂಡು,ಸಾಮಾನ್ಯರಿಗೆ ಅಲಭ್ಯವಾದ,ಸಾಕ್ಷಾತ್ ಶ್ರೀರಾಮಚಂದ್ರನ ದರ್ಶನವನ್ನೇ ಪಡೆದು ಕೃತಾರ್ಥಳಾದಳುಅವಳ ಜೀವನ ಚರಿತ್ರೆಯು ನಮಗೆ ಪಾಠವಾಗಿದೆಯಾವುದೇ ಸಮಯದಲ್ಲಿ ಬೇಕಾದರೂ ಮನಸ್ಸು ಸ್ಥಿರತೆಯನ್ನು ಕಳೆದುಕೊಳ್ಳಬಹುದು ಆದ್ದರಿಂದ ಸದಾಕಾಲ ಜಾಗರೂಕರಾಗಿರಬೇಕು ಇಂದ್ರಿಯನಿಗ್ರಹವನ್ನು ಎಂತಹ ಸಮಯದಲ್ಲಿಯೂ ಕಳೆದುಕೊಳ್ಳಬಾರದುಶ್ರೀರಾಮಚಂದ್ರನ ದೃಷ್ಟಿಪಾತದಿಂದ ಪರಮಪವಿತ್ರಳಾದ ಅಹಲ್ಯೆಯ ಸ್ಮರಣೆಯು ನಮ್ಮನ್ನು ಶ್ರೀರಾಮನ ಸ್ಮರಣೆಯಲ್ಲಿಯೇ ನಿಲ್ಲಿಸುವುದರಿಂದ ಅವಳ ಸ್ಮರಣೆ ಅತ್ಯಂತ ಶ್ರೇಷ್ಠವಾಗಿದೆ.


ದ್ರೌಪದಿಯು ಮಹಾ ಪತಿವ್ರತೆಸಾಕ್ಷಾತ್ ಶ್ರೀಕೃಷ್ಣನ ಪ್ರೀತಿಗೆ ಪಾತ್ರಳಾಗಿ ಅವನಿಂದ ತಂಗಿ ಎಂದು ಕರೆಸಿಕೊಂಡ ಮಹಿಮಾನ್ವಿತಳುಪತಿಯಂದಿರ ಬಗ್ಗೆ ಅವಳಿಗಿದ್ದ ನಿಷ್ಠೆ ಅವಳನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿಸುವಂತಹದ್ದುಜೀವನದಲ್ಲಿ ಎದುರಾದ ಕಷ್ಟಗಳನ್ನುಅವಮಾನಗಳನ್ನು ದಿಟ್ಟತನದಿಂದ ಎದುರಿಸಿದ ಧೀರ ನಾರೀ ದ್ರೌಪದಿಅವಳ ಸ್ಮರಣೆಯಿಂದ ಅಂತಹ ಧೃತಿ ನಮ್ಮಲ್ಲೂ ಜಾಗೃತವಾಗುತ್ತದೆಹಾಗೆಯೇ ಪರಮಾತ್ಮನನ್ನು ಅತ್ಯಂತ ಶುದ್ಧ ಹೃದಯದಿಂದ ಭಾವಿಸುತ್ತಾ, ಆಪದ್ಬಾಂಧವ ಗೋವಿಂದನೊಬ್ಬನೇ ಎಂಬುದಾಗಿ ನಂಬಿಅವನ ನಾಮ ಸ್ಮರಣೆಯಿಂದಲೇ ಕ್ಲಿಷ್ಟಕರವಾದ ಪರಿಸ್ಥಿತಿಯಿಂದ ತನ್ನನ್ನು ತಾನು ರಕ್ಷಿಸಿಕೊಂಡಳುಅಂತಹ ದ್ರೌಪದಿಯ ಸ್ಮರಣೆ ನಮ್ಮ ಮನಸ್ಸನ್ನು ಗೋವಿಂದನ ಸ್ಮರಣೆಯಲ್ಲಿಯೇ ನಿಲ್ಲಿಸಿ ನಮ್ಮ ಪಾತಕಗಳು ನಾಶವಾಗುತ್ತವೆ.

ಸೀತಾಮಾತೆಯನ್ನು ಸ್ಮರಣೆಮಾಡಿಕೊಳ್ಳುವುದೂ ಒಂದೇಶ್ರೀರಾಮಚಂದ್ರನನ್ನು ಸ್ಮರಣೆ ಮಾಡಿಕೊಳ್ಳುವುದೂ ಒಂದೇಅವರಿಬ್ಬರೂ ಒಂದೇ ತತ್ವದ ಎರಡು ಮುಖಗಳುಶ್ರೀರಾಮ ಪರಮಾತ್ಮಸ್ವರೂಪನಾದರೆ ಸೀತಾಮಾತೆ ಶುದ್ಧ ಪ್ರಕೃತಿ ಸ್ವರೂಪಿಣಿಸೀತಾಮಾತೆಯ ಸ್ಮರಣೆಯಿಂದ ನಮ್ಮೆಲ್ಲರ ಪ್ರಕೃತಿ ಶುದ್ಧವಾಗಿ ಪರಮಾತ್ಮನ ದರ್ಶನಕ್ಕೆ ಯೋಗ್ಯತೆಯನ್ನು ಪಡೆದುಕೊಳ್ಳುತ್ತದೆ.


"ಸ್ತ್ರೀತ್ವವನ್ನು ಧರಿಸಿ ಪರಮಪುರುಷನಿಗೆ ನರನಾರಾಯಣ ಎರಡು ರೂಪಗಳಲ್ಲಿಯೂ ಭಾರ್ಯೆಯಾಗಿ ತ್ರಿಧಾಮದಲ್ಲಿಯೂ ಗೃಹಿಣಿಯಾಗಿದ್ದಾಳೆ ಸೀತೆ". ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಅಂತಹ ಸೀತಾಮಾತೆಯ ಸ್ಮರಣೆಯಿಂದ ನಮ್ಮ ಸಕಲ ಪಾಪಗಳೂ ನಿವಾರಣೆಯಾಗಿ ಪರಮಪುರುಷನ ಅನುಗ್ರಹಧಾರೆ ನಮ್ಮ ಮೇಲೆ ಹರಿಯುತ್ತದೆ ಎಂಬುದು ನಿತ್ಯಸತ್ಯ.


ವಾನರಕುಲ ಸಂಜಾತೆಯಾದ ತಾರಾ ಭಗವಂತನ ಮಹಿಮೆಯನ್ನು ಚೆನ್ನಾಗಿ ಬಲ್ಲವಳಾಗಿದ್ದಳು ಹಾಗೂ ಅದರ ಬಗ್ಗೆ ಪತಿಗೂ ತಿಳುವಳಿಕೆಯನ್ನು ನೀಡುತ್ತಿದ್ದಳುಅಂತೆಯೇ ರಾವಣನ ಪತ್ನಿಯಾದ ಮಂಡೋದರಿಯೂ ಕೂಡ ಪರಮ ಸಾತ್ವಿಕಳಾಗಿ ಬೆಳಗಿದವಳು.ಶ್ರೀರಾಮನ ಮೂಲ ಸ್ವರೂಪ ಹಾಗೂ ಅವನ ಅವತಾರ ಮಹಿಮೆಯನ್ನು ಅರಿತು ಭಗವಂತನನ್ನು ಅನನ್ಯ ಭಾವದಿಂದ ಸ್ತುತಿಸಿದವಳುಹೀಗೆ ಈ ಪಂಚಕನ್ಯೆಯರು ತಮ್ಮಲ್ಲಿ ಪರಮಾತ್ಮ ಪ್ರಕಾಶವನ್ನು ತುಂಬಿಕೊಂಡು ಕನ್ಯಾ ಪದಕ್ಕೆ ಅನ್ವರ್ಥರಾಗಿ ತಾವೂ ಬೆಳಗಿ ಲೋಕವನ್ನೂ ಬೆಳಗಿಸಿದವರುಈ ಪಂಚಕನ್ಯೆಯರ ಸ್ಮರಣೆ ನಮ್ಮ ಮನೋ ಬುದ್ಧಿಗಳನ್ನು ಪರಮಾತ್ಮನ ಸ್ಮರಣೆಯಲ್ಲಿರಿಸಿ ನಮ್ಮ ಜೀವನಗಳನ್ನು ಪಾವನಗೊಳಿಸುವುದು ನಿಶ್ಚಿತ.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 4/11/2023 ರಂದು ಪ್ರಕಟವಾಗಿದೆ.