ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಇನ್ನೊಂದು ವಾರಕ್ಕೆ ಬರಲಿದೆ ದೀಪಾವಳಿ. ಈಚೆಗೆ ವಿಶ್ವದಾದ್ಯಂತ ಆಚರಿಸಲ್ಪಡುವ ಹಬ್ಬವಿದಾಗಿದೆ. ಊರೆಲ್ಲಾ ಬೆಳಕಾಗುವ ಹಬ್ಬ. ಹೊಸಬಟ್ಟೆಯುಟ್ಟು ಕಿರಿಯರೂ ಹಿರಿಯರೂ ಸಂಭ್ರಮಿಸುವ ಹಬ್ಬ.
ಏನು ದೀಪಾವಳಿ ಹಬ್ಬವೆಂದರೆ? ಹಬ್ಬವೆನ್ನುವುದೇನೆಂದು ಮೊದಲು ತಿಳಿಯಬೇಕಲ್ಲವೆ? ಸಂಸ್ಕೃತದ 'ಪರ್ವ'ದಿಂದ ಬಂದ ಪದವಿದು. ಪರ್ವವೆಂದೊಡನೆ ಸ್ಮರಣೆಗೆ ಬರುವುದೇ ಹದಿನೆಂಟು ಪರ್ವಗಳುಳ್ಳ ಮಹಾಭಾರತ. ಪರ್ವವೆಂದರೆ ಗಿಣ್ಣು. ಕಬ್ಬಿನ ಜಲ್ಲೆಯಲ್ಲಿ ಗಿಣ್ಣುಗಳುಂಟಲ್ಲವೇ? "ಕಾಲವೇ ಒಂದು ಕಬ್ಬಿನ ಜಲ್ಲೆ; ಅಲ್ಲಿಯ ಗಿಣ್ಣುಗಳೇ ಪರ್ವಕಾಲಗಳು" - ಎಂಬುದಾಗಿ ಶ್ರೀರಂಗಮಹಾಗುರುಗಳು ವಿವರಿಸಿದ್ದರು. ಗಿಣ್ಣೆಂದರೆ ರಸಘಟ್ಟ. ಹುಣ್ಣಿಮೆ-ಅಮಾವಾಸ್ಯೆಗಳು ಪರ್ವಕಾಲಗಳು. ಸಮುದ್ರದಲ್ಲಿ ರಸ(ಜಲ)ವುಕ್ಕುವಂತೆ ಭಗವದ್ರಸವೂ ಉಕ್ಕಲು ಅನುಕೂಲಿಸುವ ಕಾಲವದು.
ಎಂದೇ ದರ್ಶ-ಪೂರ್ಣಮಾಸಗಳೆಂಬ ಯಾಗಗಳನ್ನಾಚರಿಸುತ್ತಿದ್ದುದು ಹುಣ್ಣಿಮೆ-ಅಮಾವಾಸ್ಯೆಗಳಲ್ಲೇ - ಎಂಬುದನ್ನು ಗಮನಿಸಬಹುದು. ದೀಪಾವಳಿಯ ಐದು ದಿನಗಳ ಹಬ್ಬದಲ್ಲಿ ಮಧ್ಯಸ್ಥಾನದಲ್ಲಿ ಅಮಾವಾಸ್ಯೆಯೇ ಉಂಟು. ಕಾಲಚಕ್ರದಲ್ಲಿಯ ಇಂತಹ ವಿಶಿಷ್ಟಘಟ್ಟಗಳು ಹೊರಗೂ ಸುಖಸಂಭ್ರಮಗಳಿಗೆ ಪಾತ್ರವಾದವು; ಒಳಗೂ ಜಪ-ಧ್ಯಾನಾದಿಗಳಿಗೆ ಪ್ರಶಸ್ತವಾದವುಗಳು.
ದೀಪಾವಳಿಯೆಂದರೇನು? ದೀಪಗಳ ಆವಳಿಯೇ ದೀಪಾವಳಿ. ಆವ(ಲಿ)ಳಿಯೆಂದರೆ ಪಂಕ್ತಿ, ಸಾಲು. ಸಾಲುಸಾಲು ದೀಪಗಳ ಹಬ್ಬವೇ ದೀಪಾವಳಿ. ಅಮಾವಾಸ್ಯೆಯ ರಾತ್ರಿಯೆಂದರೆ ಕಗ್ಗತ್ತಲೆಯೇ; ದೀಪಗಳನ್ನಾಗ ಸಾಲುಸಾಲಾಗಿ ಹಚ್ಚುವುದು ಕಣ್ಣುಗಳಿಗಂತೂ ಹಬ್ಬವೇ ಸರಿ. ಮನೆಯೊಳಗೂ ದೀಪ, ಹೊರಗೂ ದೀಪಗಳು. ಆಕಾಶದೀಪಗಳನ್ನೂ ಆಗ ಬೆಳಗಿಸುವುದುಂಟಲ್ಲವೇ?
ಜೀವನವೊಂದು ಪಯಣ - ಎನ್ನುವ ಮಾತನ್ನು ಕೇಳುತ್ತೇವೆ. ಪಯಣವೆಂದೊಡನೆ ಎಲ್ಲಿಂದ, ಎಲ್ಲಿಗೆ ಎಂಬ ಪ್ರಶ್ನೆಗಳು ಬರುತ್ತವೆ. ಒಳ್ಳೆಯ ಜಾಗವನ್ನು ಬಿಟ್ಟು ಕೆಟ್ಟ ಜಾಗಕ್ಕೆ ಹೋಗೋಣವೆಂದು ಯಾರಾದರೂ ಬಯಸುವರೇ? ಬೆಳಕಿರುವ ಎಡೆಯನ್ನು ಬಿಟ್ಟು ಕತ್ತಲೆಯತ್ತ ಸಾಗಲು ಅಪೇಕ್ಷಿಸುವವರುಂಟೆ? ಉಳಿವನ್ನು ಬಿಟ್ಟು ಅಳಿವಿನತ್ತ ಹೋಗಲು ಯಾರಾದರೂ ಇಚ್ಛಿಸಿಯಾರೇ? ಈ ಮೂರಂಶಗಳನ್ನೇ ಬೃಹದಾರಣ್ಯಕೋಪನಿಷತ್ತು ಅಸತ್- ತಮಸ್-ಮೃತ್ಯುಗಳ ಎಡೆಯಲ್ಲಿರುವ ನಾವು, ಸತ್-ಜ್ಯೋತಿಸ್-ಅಮೃತಗಳತ್ತ ಸಾಗಬೇಕೆಂಬ ಸರ್ವಸಹಜಾಪೇಕ್ಷೆಯನ್ನು ಮುದ್ದಾಗಿ ಸೂಚಿಸುವುದು.
ಭಗವಂತನೇ ಅಮೃತಸ್ವರೂಪ; ನಾವು ಮರ್ತ್ಯರು (ಎಂದರೆ ಮರಣಶೀಲರು, ಇಂದಲ್ಲ ನಾಳೆ ಸಾವಿಗೀಡಾಗುವವರು). ಭಗವಂತನು ಸತ್ಸ್ವರೂಪ; ನಾವೆಲ್ಲಾ ಇದ್ದೂ ಇಲ್ಲದಂತಿರುವ 'ಅಸತ್'ಗಳು. (ಕೆಡುಕುಗಳೆಡೆಯೂ ಅಸತ್; ಶುಭಸ್ವರೂಪನಾದ ಆತನೇ ಸತ್). ಇನ್ನೂ ಸ್ಪಷ್ಟವಾದದ್ದೆಂದರೆ ಭಗವಂತನೇ ಬೆಳಕಿನ ಸ್ವರೂಪ ಎಂಬ ವಿಷಯ.
ದೇವ ಎಂಬ ಪದವೇ 'ದಿವ್' ಎಂಬ ಧಾತುವಿನಿಂದ ಬಂದದ್ದು. ಅದಕ್ಕೆ ಬೆಳಗುವುದು - ಎಂದೇ ಅರ್ಥ. ಭಗವಂತನನ್ನು ಬೆಳಕಿನ ಸ್ವರೂಪನೆಂದು ಹೇಳಿರುವವರಲ್ಲಿ ಭಾರತೀಯರೇ ಅಗ್ರಗಣ್ಯರು ಎಂಬ ಮಾತಿದೆ. "ಭಾರತ" ಎಂಬ ಪದವೇ ವಿಶಿಷ್ಟವಲ್ಲವೇ? ಇನ್ನಾವ ದೇಶಕ್ಕೂ ಈ ಬಗೆಯ ಹೆಸರಿಲ್ಲ! "ಭಾ - ಎಂದರೆ ಬೆಳಕು; ಅದರಲ್ಲಿ ರತಿಯನ್ನು ಹೊಂದಿರುವವರು ಭಾರತರು; ಎಂದರೆ ಬೆಳಕನ್ನು ಉಪಾಸಿಸುವುದರಲ್ಲೇ ನಿರತರಾದವರು, ಅರ್ಥಾತ್ ಭಗವತ್- ಸಾಕ್ಷಾತ್ಕಾರದತ್ತಲೇ ಮನಸ್ಸಿತ್ತವರು; ಬೆಳಕೆಂದರೆ ಜ್ಞಾನ, ಜ್ಞಾನಮಾರ್ಗದಲ್ಲಿ ಸಾಗತಕ್ಕವರು" ಎಂಬ ವಿವರಣೆಯನ್ನು ಶ್ರೀರಂಗಮಹಾಗುರುಗಳಿತ್ತಿರುವರು. (ಇಂಡಿಯ – ಎಂಬ ಬರಡಾದ ಪದಕ್ಕೆ ಈ ಅರ್ಥಸಂಪತ್ತೆಲ್ಲಿ ಬಂದೀತು?)
ಭಗವಂತನು ಜ್ಯೋತಿಃಸ್ವರೂಪನೆಂದು ವೇದಗಳೇ ಹೇಳುತ್ತವೆ. ಸೂರ್ಯ-ಚಂದ್ರ-ನಕ್ಷತ್ರಗಳ ಬೆಳಕೂ ಆತನ ಮುಂದೆ ಏನೇನೂ ಅಲ್ಲ - ಎಂದು ಉಪನಿಷತ್ತುಗಳು ಹೇಳುತ್ತವೆ. "ಬೆಳಕುಗಳಿಗೂ ಬೆಳಕು" ಎಂದು ಗೀತೆಯು ಆತನನ್ನು ಚಿತ್ರಿಸುತ್ತದೆ. ಭಗವಂತನು ಹೊರಬೆಳಕು ಮಾತ್ರವಲ್ಲ; ಅಂತರ್ಜ್ಯೋತಿಯೂ ಹೌದೆಂಬುದು ಭಾರತೀಯರ ಕಾಣ್ಕೆಯೇ.
ಭಗವಂತನು ಜ್ಯೋತಿಃಸ್ವರೂಪ ಎನ್ನುವುದು ಅನುಭವಕ್ಕೆ ಬರುವುದು ಯೋಗವಿದ್ಯೆಯ ಉತ್ತುಂಗಧ್ಯಾನ-ಸಮಾಧಿಸ್ಥಿತಿಗಳಲ್ಲಿ; ಅಂತಃಪ್ರಪಂಚದ ಈ ಅನುಭವವು ಸ್ಮರಣೆಗೆ ಬರುತ್ತಿರಲೆಂದೂ, ಕೊನೆಗೆ ಅನುಭವಕ್ಕೇ ಬರಲೆಂದೂ ಜ್ಯೋತಿಯನ್ನು ಬೆಳಗುವ ಕ್ರಮವನ್ನು ಋಷಿಗಳು ತಂದಿರುವರು - ಎಂಬುದು ಶ್ರೀರಂಗಮಹಾಗುರುಗಳ ದರ್ಶನ. ಪ್ರತಿದಿನದ ಪರ್ವಕಾಲಗಳಾದ ಪ್ರಾತಃಸಂಧ್ಯೆ ಸಾಯಂಸಂಧ್ಯೆಗಳ ಸಮಯದಲ್ಲಿ ದೀಪವನ್ನು ಬೆಳಗಿಸುವ ಕ್ರಮವು ಭಾರತೀಯ ಸಂಸ್ಕೃತಿಯದು.
ನಿತ್ಯವೂ ಪೂಜೆಮಾಡುವಾಗ ದೀಪಾರತಿಯನ್ನು ಬೆಳಗಿ "ಗೃಹಾಣ ಮಂಗಲಂ ದೀಪಂ" (ಈ ಮಂಗಲದೀಪವನ್ನು ಸ್ವೀಕರಿಸು) ಎಂದು ಭಗವಂತನಲ್ಲಿ ಬೇಡಿಕೊಳ್ಳುವುದು ಗೃಹಗೃಹಗಳಲ್ಲಿಯೂ ದೇವಾಲಯಗಳಲ್ಲಿಯೂ ನಡೆಯುವಂತಹುದು. "ವಿಷ್ಣುರಧ್ಯಾತ್ಮದೀಪಃ" "ಲೋಕೈಕದೀಪಾಂಕುರಾಂ" ಎನ್ನುವಂತೆ ಸರ್ವದೇವತೆಗಳನ್ನೂ ಜ್ಯೋತಿಃಸ್ವರೂಪರನ್ನಾಗಿ ಆರಾಧಿಸುವ ದಿವ್ಯವಾದ ಪರ್ವವೇ ದೀಪಾವಳಿ.
ನಮ್ಮ ಒಳಗತ್ತಲನ್ನೂ ಕಳೆಯಲಿ ಈ ದೀಪಾವಳಿ!
ಸೂಚನೆ: 05/11/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.