Monday, November 20, 2023

ವ್ಯಾಸ ವೀಕ್ಷಿತ - 63 ಮರ್ತ್ಯರು ಅಮರ್ತ್ಯರಾಗಿದ್ದ ಸಂನಿವೇಶ (Vyaasa Vikshita - 63 Martyaru Amartyaragidda Samnivesha)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ತನ್ನ ಮಾತನ್ನು ಮುಂದುವರೆಸುತ್ತಾ ಯುಧಿಷ್ಠಿರನು ಹೇಳಿದನು:  ಧರ್ಮವನ್ನು ಬಲ್ಲವರಲ್ಲಿ ಅತ್ಯಂತ ಶ್ರೇಷ್ಠರಾದ ವ್ಯಾಸರೇ, ಮತ್ತೂ ಒಂದು ವಿಷಯ. ಗುರುಗಳ ಮಾತು ಧರ್ಮ್ಯವಾದದ್ದು (ಯಾವುದು ಧರ್ಮದಿಂದ ಕೂಡಿರುವುದೋ ಅದನ್ನೇ "ಧರ್ಮ್ಯ"ವೆನ್ನುವುದು); ಹಾಗೂ ಗುರುಗಳೆಲ್ಲರಲ್ಲಿ  ತಾಯಿಯೇ ಪರಮಗುರುವೆನಿಸುವಳು. ಅಂತಹ ತಾಯಿ ಹೇಳಿದುದೂ, "ಭಿಕ್ಷೆಯನ್ನು ಹೇಗೋ ಹಾಗೆ ಎಲ್ಲರೂ ಸೇವಿಸಿರಿ" - ಎಂಬುದಾಗಿ. ಆದ್ದರಿಂದ ಇದುವೇ ಶ್ರೇಷ್ಠಧರ್ಮವೆಂಬುದಾಗಿ ನಾನು ಭಾವಿಸುತ್ತೇನೆ - ಎಂದು.


ಆಗ ಕುಂತಿಯು, "ಧರ್ಮದಲ್ಲಿಯೇ ನಡೆಯುವವನು ಯುಧಿಷ್ಠಿರ. ಅವನೀಗ ಏನು ಹೇಳಿದನೋ ಅದು ವಾಸ್ತವವೇ. ನಾನು ಬಹಳ ಹೆದರುವುದೇ ಅನೃತಕ್ಕೆ. ನಾನು ಅನೃತದಿಂದ ಬಿಡುಗಡೆ ಹೊಂದುವುದು ಹೇಗೆಂಬುದೇ ನನ್ನ ಚಿಂತೆ" – ಎಂದಳು.


ಎಲ್ಲರ ಮಾತುಗಳನ್ನು ಆಲಿಸಿದ ವ್ಯಾಸಮಹರ್ಷಿಗಳು ಹೇಳಿದರು: ಮಂಗಳಕರಳೇ, ನೀನು ಅನೃತದಿಂದ ಬಿಡುಗಡೆ ಹೊಂದುತ್ತೀಯೆ. ಇದಕ್ಕೆ ಸಂಶಯವಿಲ್ಲ. ಆದರೆ ಇದನ್ನು ಎಲ್ಲರೆದುರಿಗೆ ಹೇಳಲಾರೆ. ನೀನೇ ಸ್ವತಃ (ಎಂದರೆ ಏಕಾಂತದಲ್ಲಿ) ಇದನ್ನು ಕೇಳು. ಯುಧಿಷ್ಠಿರನು ಇದನ್ನು ಹೇಳಿರುವುದು ಸಹ ಧರ್ಮವೇ ಆಗಿದೆ. ಇದರಲ್ಲಿ ಸಂಶಯವಿಲ್ಲ.


ಹೀಗೆಂಬುದಾಗಿ ಹೇಳಿ ಶ್ರೇಷ್ಠನಾದ ಪೂಜ್ಯ ವ್ಯಾಸರು ಎದ್ದುನಿಂತರು. ದ್ರುಪದರಾಜನ ಕೈಯನ್ನು ಹಿಡಿದು ರಾಜಭವನವನ್ನು ಪ್ರವೇಶಿಸಿದರು. ಪ್ರಕೃತ, ಪಾಂಡವರು ಏಕಪತ್ನಿಯನ್ನು ಹೊಂದುವುದು ಹೇಗೆ ಧರ್ಮವಾದೀತೆಂಬುದನ್ನು ದ್ರುಪದನಿಗೆ ತಿಳಿಹೇಳಿದರು.


ವ್ಯಾಸರು ಹೇಳಿದರು - ರಾಜನೇ, ಹಿಂದೆ ನಡೆದುದರ ಮಾತಿದು. ನೈಮಿಷಾರಣ್ಯದಲ್ಲಿ ದೇವತೆಗಳು ಒಂದು ಯಜ್ಞವನ್ನು ಮಾಡುತ್ತಿದ್ದರು. ಸೂರ್ಯಪುತ್ರನಾದ ಯಮನು ಅಲ್ಲಿ ಯಜ್ಞವನ್ನು ನೆರವೇರಿಸುತ್ತಿದ್ದನು. ಯಮನು ಆ ಯಜ್ಞದಲ್ಲಿ ದೀಕ್ಷಿತನಾಗಿದ್ದರಿಂದ ಪ್ರಜೆಗಳಲ್ಲಿ ಯಾರೊಬ್ಬನನ್ನೂ ಕೊಲ್ಲಲಿಲ್ಲ. ಪ್ರಜೆಗಳ ಮೃತ್ಯುಸಮಯವು ಮುಂದುಮುಂದಕ್ಕೆ ಹೋಗುತ್ತಿದ್ದು, ಜನರು ಸಾವೇ ಕಾಣದಂತಾಗಿ, ಪ್ರಜೆಗಳ ಸಂಖ್ಯೆಯು ಅಧಿಕವಾಗತೊಡಗಿತು. ಆಗ ಇಂದ್ರಾದಿದೇವತೆಗಳು ಕ್ಷೋಭೆಗೊಂಡವರಾಗಿ ಪ್ರಜಾಪತಿಯಿದ್ದಲ್ಲಿಗೆ ಬಂದರು. ತಮಗೆಲ್ಲರಿಗೂ ಉದ್ವೇಗವಾಗಿರುವುದನ್ನು ವಿವರಿಸಿದರು. ಆಗ ಬ್ರಹ್ಮನು - ನೀವುಗಳೆಲ್ಲ ಅಮರರಾಗಿರತಕ್ಕವರು. ನಿಮಗೆಲ್ಲಿಯ ಭಯ, ಮನುಷ್ಯರಿಂದ? - ಎಂದು ಕೇಳಿದನು. ಅದಕ್ಕೆ ದೇವತೆಗಳು, "ಈಗ ಮರ್ತ್ಯರೂ ಅಮರ್ತ್ಯರೇ ಆಗಿಬಿಟ್ಟಿದ್ದು, ನಮಗೂ ಅವರಿಗೂ ಭೇದವಿಲ್ಲದಂತಾಗಿರುವುದೇ ನಮ್ಮ ಆತಂಕಕ್ಕೆ ಕಾರಣವಾಗಿದೆ" - ಎಂದರು.


ಆಗ ಬ್ರಹ್ಮನು ಹೀಗೆ ಹೇಳಿದನು: ಯಜ್ಞಕಾರ್ಯದಲ್ಲಿ ಯಮನು ದೀಕ್ಷಿತನಾಗಿ ಕುಳಿತಿರುವನು. ಎಂದೇ ಮನುಷ್ಯರಿಗೆ ಸಾವಿಲ್ಲವಾಗಿದೆ. ಆತನ ಈ ಕಾರ್ಯವು ಪೂರೈಸಿತೆಂದರೆ ಇವರ ಅಂತಕಾಲವು (ಕೊನೆಗಾಲವು) ಬರುವುದರಲ್ಲಿ ಸಂಶಯವಿಲ್ಲ. ಯಜ್ಞಕಾರ್ಯವು ಮುಗಿದಂತೆ ಯಮನು ಸ್ವಕಾರ್ಯದಲ್ಲಿ ತೊಡಗುವನು. ಅಷ್ಟರಲ್ಲಿ ಮನುಷ್ಯರ ಶಕ್ತಿಯೂ ಕುಂದಿರುವುದು - ಎಂದು.


ಬ್ರಹ್ಮನ ಈ ಮಾತನ್ನು ಕೇಳಿದ ದೇವತೆಗಳು ಅಲ್ಲಿಂದ ಹೊರಟು ದೇವತೆಗಳ ಯಜ್ಞದೆಡೆಗೆ ಬಂದರು. (ಪಕ್ಕದಲ್ಲಿಯೇ ಹರಿಯುತ್ತಿದ್ದ) ಗಂಗೆಯಲ್ಲಿ ಒಂದು ಬಿಳಿಕಮಲವನ್ನು ಕಂಡರು. ಅದನ್ನು ಕಂಡು ಅವರೆಲ್ಲರಿಗೂ ಆಶ್ಚರ್ಯವಾಯಿತು. ಅದನ್ನು ಕಂಡು ಅವರು ವಿಸ್ಮಿತರಾದರು. ಅವರುಗಳಲ್ಲಿ ಶೂರನೆನಿಸಿದ್ದ ಇಂದ್ರನು ಅದೇನೆಂದು ಪತ್ತೆಮಾಡಲು ಹೊರಟನು.


ಗಂಗೆಯು ಸದಾ ಉಕ್ಕುವ ಎಡೆಯ (ಎಂದರೆ ಗಂಗೋತ್ತರಿಯ) ತನಕ ಹೋಗುವುದಾಯಿತು. ಅಲ್ಲೊಬ್ಬ ಸುಂದರಿಯನ್ನು ಕಂಡನು.

ಸೂಚನೆ : 19/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.