Monday, November 20, 2023

ಅಷ್ಟಾಕ್ಷರೀ​ - 48 ಮೋಕ್ಷಮಾರ್ಗಂ ನಿಗಚ್ಛತಿ (Astakshara Darshana 48 Mokshamargam Nigacchati)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಹಾಡು-ಕುಣಿತಗಳೆಂದರೆ ಮೋಜಿಗೆ ಪರ್ಯಾಯವೆಂದೇ ಕಾಣುವುದುಂಟು. ದೊಡ್ಡದನ್ನೇನೋ ಸಾಧಿಸಿದಲ್ಲಿ, ಅಥವಾ ತನ್ನ ಶತ್ರುವಿಗೋ ಪ್ರತಿದ್ವಂದ್ವಿಗೋ ಪ್ರಬಲವಾದ ಪ್ರಹಾರಕೊಟ್ಟಿದ್ದಲ್ಲಿ, ಅದರ ವಿಜೃಂಭಣೆಗಾಗಿ ಹಾಡುಕುಣಿತಗಳನ್ನು ಮಾಡುವುದುಂಟು.

ಯಾವುದನ್ನಾದರೂ ತೀರಾ ಅತಿರೇಕಕ್ಕೊಯ್ದು, ಕಿರಿಕಿರಿಯಾಗುವಂತೆ ವರ್ತಿಸಿದಲ್ಲಿ, ಮಾತಾಡಿದಲ್ಲಿ, ಅದನ್ನು ಬಣ್ಣಿಸಲು ಇಂಗ್ಲಿಷಿನಲ್ಲಿ, ಹಾಡು-ಕುಣಿತಗಳನ್ನು ಮಾಡುವುದೆಂಬರ್ಥದ ಪದಗುಚ್ಛವನ್ನು ಬಳಸುತ್ತಾರೆ (make a song and dance about something).

ಹಾಡೆಂದರೆ ಇಂಪಾದ ಧ್ವನಿಗಳನ್ನು ಮಾಡುವುದು, ಕುಣಿತವೆಂದರೆ ಕಣ್ಣುಗಳಿಗೆ ರಂಜಕವಾದ ಬಗೆಯಲ್ಲಿ ಅಂಗಗಳ ಚಲನ-ವಲನಗಳನ್ನು ಮಾಡುವುದು - ಎಂಬುದು ಜನಸಾಮಾನ್ಯರ ಅಭಿಪ್ರಾಯ. (ಚಲನ-ವಲನಗಳು ಬೇರೆ ಬೇರೆ. ಚಲನವೆಂದರೆ ಮುಂದಕ್ಕೋ ಹಿಂದಕ್ಕೋ ಹೋಗುವುದು; ವಲನವೆಂದರೆ ಅಕ್ಕಕ್ಕೋ ಪಕ್ಕಕ್ಕೋ ತಿರುಗುವುದು). ಹೀಗೆ ಹಾಡು-ಕುಣಿತಗಳು ಕಿವಿ-ಕಣ್ಣುಗಳಿಗೆ ಸಂತೋಷವನ್ನುಂಟುಮಾಡತಕ್ಕವು.

ಗಾನವೆಂಬುದೇ ಸಂತೋಷಕರವಾದರೂ, ವಾದ್ಯದೊಂದಿಗೆ ಸೇರಿದಾಗ ಅದರ ಸಂತೋಷವು ಇನ್ನೂ ಹೆಚ್ಚಿನದೇ. ಗದ್ಯ-ಪದ್ಯಗಳ ಸೇರ್ಪಡೆಯು ಗೀತ-ವಾದ್ಯಗಳ ಜೋಡಣೆಯಂತೆ, ಎನ್ನುತ್ತಾನೆ, ಸಂಸ್ಕೃತಕವಿಯೊಬ್ಬ. ಗೀತ-ವಾದ್ಯ-ನೃತ್ಯಗಳು ಮೂರೂ ಮೇಳೈಸಿದಾಗಲೇ ಸಂಗೀತವೆಂದು ಶಾಸ್ತ್ರವು ಹೇಳುವುದು. ಗಾನವೂ ನಾಟಕವೂ ಸೇರಲಾರದೆಂದು ಟಾಲ್ಸ್ಟಾಯನ ಅಭಿಪ್ರಾಯ. ಆದರೆ, ಭರತನಿಂದ ಆರಂಭಿಸಿ ಈಚಿನವರೆಗೂ (ಎಂದರೆ, ಪಾಶ್ಚಾತ್ತ್ಯರ ಪ್ರಭಾವ ಬೀಳುವವರೆಗೂ) ಗಾನವಿಲ್ಲದ ನಾಟಕವೇ ಇದ್ದುದಿಲ್ಲ.

ಒಬ್ಬರು ಚೆನ್ನಾಗಿ ಹಾಡಿದಾಗ, ಅದನ್ನು ಆಲಿಸಿ ಸಂತೋಷಿಸಿದವರಿಗೆ ತಾವೂ ಹಾಡಬೇಕೆಂಬ ಸ್ಫೂರ್ತಿ ಬರುವುದೂ ಅಪರೂಪವೇನಲ್ಲ. "ಸುಮ್ಮನೆ ಆಸೆಪಟ್ಟುಬಿಟ್ಟವರಿಗೆಲ್ಲಾ ಸಂಗೀತವು ಸಿಕ್ಕಿಬಿಡುವುದಲ್ಲ; ಹಾಡು ಎಂಬುದು ರಕ್ತದಲ್ಲೇ ಬಂದಿರಬೇಕು" – ಎಂಬ ಮಾತನ್ನು ಕೇಳಿ, ಒಬ್ಬಳು ವೈದ್ಯರ ಬಳಿಗೆ ಹೋಗಿ ಕೇಳಿಕೊಂಡಳಂತೆ: ಸಂಗೀತವು ಸಹಜವಾಗಿ ಬರುವಂತಹ ರಕ್ತವನ್ನು ನನ್ನ ಮೈಗೆ ತುಂಬಿಸಿ" ಎಂದು. ಶೂದ್ರಕಕವಿಯ ಮೃಚ್ಛಕಟಿಕನಾಟಕದಲ್ಲಿಯ ಶಕಾರನ ಮಾತನ್ನೊಮ್ಮೆ ಸ್ಮರಿಸಬಹುದು: "ನಾನು (ಇಂಗಿನ ಒಗ್ಗರಣೆಯಲ್ಲಿ ಬೇಯಿಸಿದ) ಕೋಗಿಲೆಯ ಮಾಂಸವನ್ನು ತಿಂದಿರುವೆ; ನನಗೆ ಸಂಗೀತವು ಬರುವುದಿಲ್ಲವೆಂದರೇನು?!"

ಬಾಯಲ್ಲಿ ಹಾಡುವುದಕ್ಕೆ ಜೊತೆಯಾಗಿ ಚಪ್ಪಾಳೆಯ ತಾಳವೆಂದು ಆರಂಭವಾಗಿ ತಾಳವಾದ್ಯಗಳು ಹುಟ್ಟಿಕೊಂಡಿರಬಹುದೆಂದು ಊಹಿಸಲಾಗಿದೆ. ಈವರೆಗೆ ದೊರೆತಿರುವ ವಾದ್ಯಗಳಲ್ಲಿ ಮೊಟ್ಟಮೊದಲನೆಯದೆಂದರೆ ಸುಮಾರು ನಲವತ್ತು ಸಾವಿರವರ್ಷಗಳಿಗೂ ಹಿಂದಿನದಾದ ಕೊಳಲಂತೆ. ಯಾವ ವಾದ್ಯವು ಮೊದಲು ಬಂದದ್ದು, ಯಾವುದಾಮೇಲೆ? - ಎಂಬುದನ್ನು ಲೆಕ್ಕಹಾಕಲಾಗದು. ಏಕೆಂದರೆ, ಇದಕ್ಕೆ ಕಾರಣವಾದರೂ, ವಾದ್ಯಗಳಿಗಾಗಿ ಬಳಸಲಾಗಿರುವ ದ್ರವ್ಯಗಳೆಂದರೆ ಮರ-ಮೂಳೆ-ಪ್ರಾಣಿಚರ್ಮ - ಮುಂತಾದವು; ಮತ್ತು ಇವಾದರೂ ದೀರ್ಘಕಾಲ ಮಣ್ಣಿನಲ್ಲಿದ್ದರೆ ಕರಗಿಹೋಗಬಲ್ಲವು (ಬಯೋಡೀಗ್ರೇಡಬಲ್).

ಇನ್ನು ನಮ್ಮ ದೇಶದ ವಾದ್ಯಗಳ ಬಗ್ಗೆ ಹೇಳುವುದಾದರೆ, ವೈದಿಕಸಾಹಿತ್ಯದಲ್ಲೇ ವಾದ್ಯಗಳ ಉಲ್ಲೇಖವಿದೆ. ವಿಶೇಷವಾಗಿ, ವೀಣೆಯ ಉಲ್ಲೇಖವಿದೆ. ವೀಣೆಯೆಂಬುದು ವಾದ್ಯಗಳಲ್ಲಿ ಬಹಳ ಕಷ್ಟವಾದದ್ದೇ. ಏಕೆ? ಕಿಂಚಿತ್ತಾಗಿ ಅಪಸ್ವರ ಬಂತೆಂದರೂ ಅದು ಎದ್ದುಕಾಣುವುದು; ಅದರಿಂದಾಗಿ ಅಪಹಾಸ್ಯಕ್ಕೀಡಾಗುವುದೂ ಸುಲಭ. ವೀಣೆ ನುಡಿಸುವುದರಲ್ಲಿ ಒಂದು ಒಳ್ಳೆಯ ಸಾಮರ್ಥ್ಯವನ್ನು ಸಂಪಾದಿಸಿದವನೇ "ಪ್ರವೀಣ". (ಇದೇ ಪದದ ವಿಸ್ತೃತಾರ್ಥವಾಗಿಯೇ, ಯಾವುದೇ ಕೆಲಸದಲ್ಲಿ ತುಂಬ ನಿಷ್ಣಾತನಾದವನನ್ನೂ ಪ್ರವೀಣನೆನ್ನುವುದು).

ಆದರೆ ಬೇರೊಂದು ಕಾರಣಕ್ಕಾಗಿ ವೀಣೆಯನ್ನು ನುಡಿಸುವುದರ ಹಿರಿಮೆಯನ್ನು ಕೊಂಡಾಡುತ್ತದೆ, ಯಾಜ್ಞವಲ್ಕ್ಯಸ್ಮೃತಿ. ವೀಣಾವಾದನದ ತತ್ತ್ವವನ್ನು ಬಲ್ಲವನು ಮೋಕ್ಷವನ್ನು ಹೊಂದುತ್ತಾನೆ ಎಂಬ ಮಾತು ಅಲ್ಲಿ ಬರುತ್ತದೆ.

ಎಲ್ಲಿಯ ಮನರಂಜನೆ, ಎಲ್ಲಿಯ ಮೋಕ್ಷ? - ಎಂಬ ಪ್ರಶ್ನೆಯು ಬರಬಹುದು. ಭಾರತೀಯ ಕಲೆಗಳ ಸೊಬಗೇ ಇದು. ಗಾನಪ್ರಧಾನವಾದ ವೇದವೆಂದರೆ ಸಾಮವೇದ; ಸಾಮವೇದಕ್ಕೆ ಸೇರಿದ ಉಪನಿಷತ್ತು ಛಾಂದೋಗ್ಯೋಪನಿಷತ್ತು; ಅದರಲ್ಲಿ ವೀಣಾಗಾನದ ಮರ್ಮವನ್ನು ಹೇಳಿದೆ. ವೀಣೆಯೊಂದಿಗೆ ಸಾಮಗಾನವನ್ನು ಮಾಡುವಾಗ ದೇವಕಾಮ-ಮನುಷ್ಯಕಾಮಗಳೆರಡನ್ನೂ ಪಡೆಯುವುದನ್ನು ಹೇಳಿದೆ. ಹೀಗಾಗಿ ಭಗವತ್ಪ್ರೀತಿ-ಇಂದ್ರಿಯತುಷ್ಟಿಗಳೆರಡೂ ಸೇರುವೆಡೆಯಿದಾಗಿದೆ.

ಸಂಗೀತವಿದ್ಯೆಯ ಸಾರವನ್ನರಿತವರಾಗಿದ್ದ ಶ್ರೀರಂಗಮಹಾಗುರುಗಳು, ಅಪ್ರಯಾಸದಿಂದ - ಎಂದರೆ ಹೆಚ್ಚು ಶ್ರಮವೆಂಬುದೇ ಇಲ್ಲದೆ - ಮೋಕ್ಷಮಾರ್ಗವನ್ನು ಹೊಂದುವ ಸಾಧನವಾಗಿ ವೀಣೆಯ ತತ್ತ್ವವನ್ನು ನಿರೂಪಿಸಿದ್ದರು. "ಸವಿದ ಹಣ್ಣಿನ ಚಿತ್ರ ನೋಡಿದರೆ ಸವಿ ಬರುತ್ತದೆ" ಎಂಬ ಸೂತ್ರವನ್ನು ಹೇಳಿ, ದೈವಭಾವದ ಉದ್ಬೋಧವು ಆಗುವ ಬಗೆಯನ್ನು ತಿಳಿಸಿದ್ದಾರೆ. "ದೈವೀವೀಣೆಯನ್ನು ಹೋಲುವ ವೀಣೆಯಿದಾಗಿದೆ, ಇದರ ದರ್ಶನ-ಸ್ಪರ್ಶನಗಳೂ ಪಾಪಹರ" ವೆಂದು ಜ್ಞಾಪಿಸಿ, ಯಾಜ್ಞವಲ್ಕ್ಯರ ಈ ಮಾತನ್ನು ಉಲ್ಲೇಖಿಸಿದ್ದಾರೆ.

ಧರ್ಮಶಾಸ್ತ್ರ-ಅರ್ಥಶಾಸ್ತ್ರಗಳನ್ನೂ ಯೋಗವಿದ್ಯೆ- ಗಾನವಿದ್ಯೆಗಳನ್ನೂ ಬಲ್ಲ ಯಾಜ್ಞವಲ್ಕ್ಯಮಹರ್ಷಿಗಳ ಜಯಂತಿ ಇಂದು. ಅಂತಹ  ಮಹಾತ್ಮರನ್ನು ಇಂದು ಸ್ಮರಿಸಿ ವಂದಿಸೋಣ.

ಸೂಚನೆ: 19/11/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.