Monday, November 6, 2023

ವ್ಯಾಸ ವೀಕ್ಷಿತ - 61 ಇದು ಧರ್ಮವೋ ಅಧರ್ಮವೋ - ಎಂಬ ಜಿಜ್ಞಾಸೆ (Vyaasa Vikshita - 61 Idu Dharmavo Adharmavo - Emba Jijnase)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)



ಒಬ್ಬಳನ್ನು ಹಲವರು ವಿವಾಹವಾಗುವುದು ಅಧರ್ಮವಲ್ಲವೇ? – ಎಂಬುದು ದ್ರುಪದನೆತ್ತಿದ ಪ್ರಶ್ನೆಯಾಗಿತ್ತು. ಅದಕ್ಕೆ ಯುಧಿಷ್ಠಿರನಿತ್ತ ಉತ್ತರದ ಮುಂದುವರಿಕೆಯಿದು:

ರಾಜನೇ, ಕೃಷ್ಣೆಯನ್ನು ನಮ್ಮ ತಾಯಿ ಕುಂತಿಯ ಬಳಿ ಒಯ್ದಾಗ, ತನ್ನ ಬಾಯಿಂದ ಬಂದ ನುಡಿಗೆ ಆಕೆ ಹೇಳಿದುದೇನು ಗೊತ್ತೆ? "ನನ್ನ ವಾಕ್ಕು ಸುಳ್ಳನ್ನು ಹೇಳದು; ನನ್ನ ಬುದ್ಧಿಯು ಅಧರ್ಮದಲ್ಲಿ ತೊಡಗದು!" - ಎಂದು. ತಾಯಿಯ ಮಾತಷ್ಟೇ ಅಲ್ಲ, ನನ್ನ ಮನೋಗತವೂ (ಮನಸ್ಸಿನೊಳಗೆ ತೋರಿಬಂದುದೂ) ಇದುವೇ ಆಗಿದೆ. ರಾಜನೇ, ಧ್ರುವವಾದ ಧರ್ಮವಿದು (ಎಂದರೆ ಸ್ಥಿರವಾದದ್ದು). ಇದನ್ನು ವಿಚಾರಮಾಡದೆ ನಡೆಸಿಕೊಡು. ಈ ಬಗ್ಗೆ ನಿನಗೆ ಶಂಕೆಯು ಬರಬೇಕಿಲ್ಲ.

(ಇದರ ತಾತ್ಪರ್ಯವಿದು: ಸುಳ್ಳು ಹೇಳದವರೂ, ಅಧರ್ಮದಲ್ಲಿ ಬುದ್ಧಿಯಾಡದವರೂ ಆದ ಹಿರಿಯರ ನುಡಿಯೊಂದಕ್ಕೆ, ಧರ್ಮಿಷ್ಠನೊಬ್ಬನ ಅಂತರಂಗವೂ ಅಂತೆಯೇ ಸ್ಪಂದಿಸುವ ಸಂನಿವೇಶವಿದ್ದಾಗ, ಸಾಧಾರಣರ ಮೇಲ್ನೋಟಕ್ಕೆ ಇಲ್ಲೇನೋ ಸ್ವಾರ್ಥಸಾಧನದ ಸಮರ್ಥನೆಯಿರಬಹುದೆಂದು ತೋರಬಹುದಾದರೂ, ಇದು ಅಧರ್ಮದ ಹೆಜ್ಜೆಯೋ ಎಂಬ ಭಯವಿರಬೇಕಿಲ್ಲ - ಎಂಬುದನ್ನು ಶುದ್ಧಾಂತಃಕರಣದ ಬಲವೇ ನಿಚ್ಚಳವಾಗಿ ದೃಢಪಡಿಸುವುದು).

ಯುಧಿಷ್ಠಿರನ ಈ ಮಾತಿಗೆ ದ್ರುಪದನು, "ಯುಧಿಷ್ಠಿರನೇ, ನೀನೂ, ಕುಂತಿಯೂ, ನನ್ನ ಮಗನಾದ ಧೃಷ್ಟದ್ಯುಮ್ನನೂ ಈ ಬಗ್ಗೆ ಒಂದು ನಿಶ್ಚಯಕ್ಕೆ ಬಂದು ನನಗೆ ತಿಳಿಸಿ. ನಾಳೆ ಸರಿಯಾದ ಸಮಯಕ್ಕೆ ತದನುಸಾರವಾಗಿ ಮಾಡೋಣ" - ಎಂದನು.

ಆತನ ಮಾತಿನಂತೆ ಅವರೆಲ್ಲರೂ (ಎಂದರೆ ಮೂರೂ ಮಂದಿಯೂ) ಸೇರಿ ಕಥನಮಾಡಿಕೊಂಡರು (ಪರಸ್ಪರರ ಅಭಿಪ್ರಾಯಗಳನ್ನು ಹೇಳಿಕೊಂಡರು). ಅಷ್ಟರಲ್ಲಿ ದ್ವೈಪಾಯನರು (ಎಂದರೆ ಭಗವಾನ್ ವ್ಯಾಸರು) ಅಲ್ಲಿಗೆ ಆಕಸ್ಮಿಕವಾಗಿ ಆಗಮಿಸಿದರು. ಎಲ್ಲ ಪಾಂಡವರೂ ದ್ರುಪದರಾಜನೂ ಎದ್ದುನಿಂತು, ಮಹಾತ್ಮರಾದ ಅವರಿಗೆ ನಮಸ್ಕಾರವನ್ನು ಮಾಡಿದರು. ಇವರೆಲ್ಲರ ಪ್ರಣಾಮವನ್ನು ಮಹಾಮನಸ್ಕರಾದ ಅವರೂ ಪ್ರಸನ್ನರಾಗಿ ಸ್ವೀಕರಿಸಿದರು; ಎಲ್ಲರ ಕುಶಲಪ್ರಶ್ನೆಯನ್ನು ಮಾಡಿ, ಶುದ್ಧವಾದ ಸುವರ್ಣಾಸನದಲ್ಲಿ ಕುಳಿತುಕೊಂಡರು. ಅವರ ಅನುಮತಿಯನ್ನು ಪಡೆದು ಈ ನರಶ್ರೇಷ್ಠರೂ ಸಹ ಉತ್ಕೃಷ್ಟವಾದ ಆಸನಗಳಲ್ಲಿ ಉಪವಿಷ್ಟರಾದರು.

ಕೆಲಕ್ಷಣಗಳ ನಂತರ ದ್ರುಪದಮಹಾರಾಜನು ಮಧುರವಾಗಿ ಮಾತನಾಡುತ್ತಾ, ದ್ರೌಪದಿಯ ವಿಷಯವಾಗಿ ಆ ಮಹಾತ್ಮರನ್ನು ಕೇಳಿದನು: " ಹಲವು ಮಂದಿಗೆ ಒಬ್ಬಳೇ ಧರ್ಮಪತ್ನಿಯಾಗಿದ್ದೂ ಸಂಕರವಾಗದಿರುವುದೆಂಬುದು ಹೇಗೆ ಸಾಧ್ಯ? ಇಲ್ಲಿಯ ಯಥಾರ್ಥತೆಯನ್ನು ಪೂಜ್ಯರಾದ ತಾವು ನನಗೆ ವಿವರಿಸಿ ಹೇಳಬೇಕು" - ಎಂದು.

(ಸಂಕರವೆಂದರೇನು? ಯಾವುದಾದರೂ ವಸ್ತುವು ತಕ್ಕುದಲ್ಲದ ಮತ್ತೊಂದು ವಸ್ತುವಿನೊಂದಿಗೆ ಸೇರುವುದು ಸಂಕರವೆನಿಸುವುದು: ಹಾಲಿಗೆ ನಿಂಬೇಹಣ್ಣಿನ ರಸವನ್ನು ಹಿಂಡಿದಂತೆ. ಅಷ್ಟೇ ಅಲ್ಲ. ತಕ್ಕುದಾದ ವಸ್ತುವಿನೊಂದಿಗೇ ಸೇರುವುದೆಂದಾಗಿದ್ದಾಗಲೂ, ಯೋಗ್ಯವೆಂದೇ ಎನಿಸಬಹುದಾದ, ಸಮಾನಫಲಕಾರಿಯೇ ಆದ ಒಂದಕ್ಕಿಂತ ಹೆಚ್ಚು ವಸ್ತುಗಳೊಂದಿಗೆ ಸೇರುವುದೂ ಯುಕ್ತವಾಗದಿರುವ ಸಂನಿವೇಶಗಳೂ ಉಂಟು; ಅಲ್ಲೂ ಸಂಕರದೋಷವೇರ್ಪಡಬಹುದು. ಒಂದು ಉದಾಹರಣೆ: ಕಲಸಿದ ಅನ್ನವು ಖಾರವಾಯಿತೆಂದು ಖಾರವನ್ನು ಕಡಿಮೆಮಾಡಿಕೊಳ್ಳುವುದಕ್ಕಾಗಿ ತುಪ್ಪವನ್ನೋ ಎಣ್ಣೆಯನ್ನೋ ಸೇರಿಸಿಕೊಳ್ಳುವುದುಂಟು; ಎಣ್ಣೆ-ತುಪ್ಪಗಳೆರಡರ ಫಲವೂ ಒಂದೇ ತಾನೆ? – ಎಂದು ಭಾವಿಸಿ, ಒಂದೇ ಅನ್ನಕ್ಕೇ ಎರಡನ್ನೂ ಹಾಕಿಕೊಂಡಲ್ಲಿ, ಅನ್ನದ ಧರ್ಮವು ಕೆಡುವುದು; ಅದನ್ನು ಸೇವಿಸಿದಲ್ಲಿ ಆರೋಗ್ಯಕ್ಕೆ ಧಕ್ಕೆಯೆಂದು ವೈದ್ಯರು ಎಚ್ಚರಿಸುವರಲ್ಲವೇ? ಇಂತಹ ಸಂಕರಗಳು ವರ್ಜನೀಯವೇ ಸರಿ.)

ಸೂಚನೆ : 5/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.