Monday, October 30, 2023

ವ್ಯಾಸ ವೀಕ್ಷಿತ - 60 ದ್ರೌಪದೀ-ವಿವಾಹದ ಪ್ರಸ್ತಾವ (Vyaasa Vikshita - 60 Draupadi-vivahada Prastava)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)



ಪರಸ್ಪರವಿಶ್ವಾಸವು ಹೀಗೆ ಬೆಳೆಯಲು, ತನ್ನ ಮಕ್ಕಳೊಂದಿಗೆ ಆಗಮಿಸಿ, ದ್ರುಪದನು ಯುಧಿಷ್ಠಿರನಿಗೆ ಹೀಗೆ ಹೇಳಿದನು: "ಇಂದು ಪುಣ್ಯದಿನ. ವಿಧಿವತ್ತಾಗಿ ಪಾಣಿಗ್ರಹಣವನ್ನು ಮಹಾಬಾಹುವಾದ ಅರ್ಜುನನು ಮಾಡಲಿ. ಅದಕ್ಕಾಗಿ ತಕ್ಕ ಮಂಗಳಾರಂಭವಾಗಲಿ" - ಎಂದು. ಅದಕ್ಕೆ ಧರ್ಮಾತ್ಮನಾದ ಯುಧಿಷ್ಠಿರನು, "ರಾಜನೇ, ನನಗೂ ವಿವಾಹವೀಗ ನೆರವೇರಬೇಕಾಗುತ್ತದೆಯಷ್ಟೆ?" - ಎಂದನು. ಅದಕ್ಕೆ ದ್ರುಪದನು, "ನನ್ನ ಮಗಳ ಕೈಯನ್ನು ವಿಧಿವತ್ತಾಗಿ ಹಿಡಿಯುವುದನ್ನು ನೀನೇ ಮಾಡಬಹುದು; ಅಥವಾ ಉಳಿದ ಸಹೋದರರಲ್ಲಿ ಯಾರೊಂದಿಗಾದರೂ ಕೃಷ್ಣೆಯ ವಿವಾಹಕ್ಕೆ ತಮ್ಮ ಅಪ್ಪಣೆಯಾಗಬಹುದು, ವೀರನೇ" ಎಂದನು.

ಆಗ ಯುಧಿಷ್ಠಿರನು ಹೇಳಿದನು: ರಾಜನೇ, ಕೃಷ್ಣೆಯು ನಮ್ಮೆಲ್ಲರಿಗೂ ಮಹಿಷಿ (ಎಂದರೆ ಪಟ್ಟದರಸಿ) ಯಾಗುವಳು. ಹಾಗೆಂಬುದಾಗಿಯೇ ನನ್ನ ತಾಯಿಯು ಈ ಮೊದಲೇ ಆದೇಶಿಸಿರುವಳು. ನಾನೂ ಭೀಮಸೇನನೂ ಇನ್ನೂ ಅವಿವಾಹಿತರೇ. ರತ್ನಸ್ವರೂಪಳಾದ ನಿನ್ನ ಈ ಪುತ್ರಿಯನ್ನು ಅರ್ಜುನನು ಗೆದ್ದಿರುವನು. ರಾಜನೇ, ನಮ್ಮೊಳಗಿನ ಒಪ್ಪಂದವಿದು: ಯಾವುದೇ ರತ್ನವಿದ್ದರೂ ನಾವೆಲ್ಲರೂ ಅದನ್ನು ಒಟ್ಟಾಗಿಯೇ ಸೇವಿಸುವುದು - ಎಂಬುದಾಗಿ. ಆ ಒಪ್ಪಂದವನ್ನು ನಾವು ತೊರೆಯಲಿಚ್ಛಿಸುವುದಿಲ್ಲ, ರಾಜನೇ. ಕೃಷ್ಣೆಯು ನಮ್ಮೆಲ್ಲರಿಗೂ ಧರ್ಮಾನುಸಾರವಾಗಿಯೇ ಮಹಿಷಿಯಾಗತಕ್ಕವಳು ಆದ್ದರಿಂದ ಆಕೆಯು ಅಗ್ನಿಯೆದುರಿಗೇ ಅನುಕ್ರಮವಾಗಿ ನಮ್ಮೆಲ್ಲರ ಕೈಯನ್ನು ಹಿಡಿಯಲಿ.

ಆಗ ದ್ರುಪದನು ಹೇಳಿದನು: " ಒಬ್ಬನಿಗೆ ಹಲವರು ಪತ್ನಿಯರು ವಿಹಿತವಾಗಿರುವುದನ್ನು (ವೇದಗಳಲ್ಲೇ) ನಾವು ಕೇಳಿರುತ್ತೇವೆ. ಆದರೆ ಒಬ್ಬಳಿಗೇ ಅನೇಕ ಪತಿಯರು ಆಗುವುದನ್ನು ಎಲ್ಲಿಯೂ ಕೇಳಿಲ್ಲ. ಅಯ್ಯಾ ಕೌಂತೇಯನೇ, ನೀನು ಧರ್ಮವನ್ನು ಬಲ್ಲವನು, ಶುಚಿಯಾದವನು. ಲೋಕಕ್ಕೂ ವೇದಕ್ಕೂ ಇದು ವಿರುದ್ಧವಾದದ್ದು. ಹಾಗಿದ್ದು ಅಧರ್ಮವೆನಿಸತಕ್ಕ ಇಂತಹ ಕಾರ್ಯವನ್ನು ನೀನು ಮಾಡುವುದುಂಟೇ?" – ಎಂಬುದಾಗಿ. (ಇಲ್ಲಿ ಸ್ಪಷ್ಟವಾಗಿ ತಿಳಿದುಬರುವ ಅಂಶವೊಂದಿದೆ. ಪಾಶ್ಚಾತ್ಯರ ನಿರೂಪಣೆಗಳನ್ನು ಅನುಸರಿಸಿಯೋ, ಅಥವಾ ತಮ್ಮ ಸ್ವಂತಚಿಂತನೆಗಳಿಂದಲೋ, ಕೆಲವರು ಹೀಗೆ ಕಲ್ಪಿಸುವುದುಂಟು: "ಒಬ್ಬಳಿಗೇ ಹಲವು ಪತಿಯರಿರುವ ಕ್ರಮ ಎಂದಿನಿಂದಲೂ ಇತ್ತು - ಕೆಲವು ಗುಡ್ಡಗಾಡುಗಳ ಮಂದಿಯಲ್ಲಾದರೂ ಇತ್ತು" ಇತ್ಯಾದಿಯಾಗಿ. ಈ ರೀತಿಯ ಸ್ವಕಪೋಲಕಲ್ಪಿತಗಳಿಗೆ ವ್ಯಾಸಮಹಾಭಾರತದಲ್ಲಿ ಯಾವುದೇ ಆಧಾರವಿಲ್ಲ - ಎಂಬುದನ್ನು ಮನಗಾಣಬೇಕು. ಅಧುನಿಕ ಕಥೆ-ಕಾದಂಬರಿ-ನಾಟಕ-ಸಿನೆಮಾಗಳಲ್ಲಿ ಬಂದದ್ದನ್ನೆಲ್ಲಾ ವಾಲ್ಮೀಕಿಯೋ ವ್ಯಾಸರೋ ಬರೆದದ್ದೆಂಬುದಾಗಿ ಭ್ರಮಿಸಬಾರದು. ಮೂಲದಲ್ಲಿ ಇಲ್ಲದಿರುವುದನ್ನು ಭಾವಿಸಲು ಯುಕ್ತ-ಸಾಕ್ಷ್ಯಾಧಾರಗಳೇನೂ ಇಲ್ಲದೇ ಹೋದಾಗ, ಅವನ್ನು ಕೇವಲ ಊಹೆ/ಕಲ್ಪನೆಯೆಂದಷ್ಟೇ ಭಾವಿಸಬಹುದಷ್ಟೆ. "ಒಬ್ಬಳ ಬಹುಪತಿತ್ವವೆಂಬುದು ಲೋಕವಿರುದ್ಧವೂ ಹೌದು ವೇದವಿರುದ್ಧವೂ ಹೌದು" -  ಎಂಬುದಾಗಿ ದ್ರುಪದನು ಸ್ಪಷ್ಟವಾಗಿ ಹೇಳಿ, ಅದು ಅಧರ್ಮವೆಂದು ಜರೆದಿರುವುದನ್ನೂಇಲ್ಲಿ ಗಮನಿಸಬೇಕು.)

ಆಗ ಯುಧಿಷ್ಠಿರನು ಹೇಳಿದನು: "ಮಹಾರಾಜನೇ, ಧರ್ಮವು ಸೂಕ್ಷ್ಮವಾದದ್ದು. ಅದರ ನಡೆಯನ್ನು ನಾವು ಅರಿಯೆವು. (ಆ ಕಾರಣಕ್ಕೆ) ನಮ್ಮ ಪೂರ್ವಿಕರಾದವರು (ಎಂದರೆ ಹಿಂದಿನ ಮಹಾತ್ಮರು) ನಡೆದ ಹಾದಿಯಲ್ಲಿ ನಾವು ನಡೆಯತಕ್ಕವರು (ಎಂದರೆ, ಯಾರಿಗೆ ಸ್ವತಃ ಧರ್ಮದ ಜಾಡನ್ನೂ ನಡೆಯನ್ನೂ ಹಿಡಿಯಲಾಗದೋ ಅಂತಹವರೇನು ಮಾಡಬಹುದು? ಧರ್ಮಿಷ್ಠರಾದ ಹಿರಿಯರು ಹೋಗುವ ಹಾದಿಯನ್ನೇ ಹಿಡಿಯುವುದೇ ಕ್ಷೇಮ - ಎಂಬ ನ್ಯಾಯವಾದ ಲೆಕ್ಕವೇ ಇಲ್ಲಿದೆ).

ಸೂಚನೆ : 29/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.