Tuesday, October 10, 2023

ಮಹಾ ಮಹಿಮಳಾದ ದ್ರೌಪದೀ (Maha Mahimalada Draupadi)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)ಮಹಾಭಾರತದಲ್ಲಿ ದ್ರೌಪದಿಯದು ಅತ್ಯಂತ ಪ್ರಮುಖವಾದ ಪಾತ್ರ. ತನ್ನ ಸೌಂದರ್ಯದಿಂದ, ಬುದ್ಧಿಮತ್ತೆಯಿಂದ, ಸಹನಶೀಲತೆಯಿಂದ, ಪಾತಿವ್ರತ್ಯದಿಂದ ಲೋಕದ ಗೌರವಾದರಗಳಿಗೆ ಪಾತ್ರಳಾಗಿದ್ದವಳು. ಅವಳ ಸ್ಮರಣೆಯಿಂದ ನಮ್ಮ ಪಾತಕಗಳು ಹೇಗೆ ನಾಶವಾಗುತ್ತವೆ ಎಂಬುದನ್ನು ಅವಳ ಜೀವನದ ಮೇಲೆ ಒಂದು ನೋಟ ಹರಿಸಿ ತಿಳಿಯಲು ಪ್ರಯತ್ನಿಸೋಣ. ಪಾಂಚಾಲ ದೇಶದ ರಾಜ ದೃಪದ. ಅವನು ದ್ರೋಣರ ಮೇಲಿನ ದ್ವೇಷದಿಂದ ಅವರನ್ನು ಸಂಹರಿಸುವ ಪುತ್ರ ಬೇಕೆಂದು ಯಜ್ಞ ಮಾಡಿದಾಗ ದೃಷ್ಟದ್ಯುಮ್ನನ ಜೊತೆಗೆ ಯಜ್ಞಕುಂಡದಿಂದ ಉದ್ಭವಿಸಿ ಬಂದವಳು ದ್ರೌಪದೀ. ಅಗ್ನಿಯಂತೆ ಸದಾ ದೇದೀಪ್ಯಮಾನಳಾಗಿದ್ದವಳು. ಅಂತಹ ದ್ರೌಪದಿಯನ್ನು ಅರ್ಜುನನು ಸ್ವಯಂವರದಲ್ಲಿ ಗೆಲ್ಲುತ್ತಾನೆ. ಆದರೆ ಅವಳನ್ನು ವಿವಾಹವಾಗುವುದು ಕೇವಲ ಅರ್ಜುನನಲ್ಲ, ಭಗವಾನ್ ವೇದವ್ಯಾಸರ ಸಮ್ಮುಖದಲ್ಲಿ, ಶ್ರೀ ಕೃಷ್ಣಪರಮಾತ್ಮನ ಸಮ್ಮತಿಯ ಮೇರೆಗೆ ಯುಧಿಷ್ಠಿರ ಮುಂತಾದ ಪಂಚಪಾಂಡವರೂ ದ್ರೌಪದಿಯನ್ನು ವರಿಸುತ್ತಾರೆ.ಈ ರೀತಿಯ ಲೋಕ ವಿಭಿನ್ನವಾದ ವಿವಾಹದ ನಡೆಗೆ ಅವಳ ಪೂರ್ವ ವೃತ್ತಾಂತ ಕಾರಣವಾಗಿದೆ. ಪ್ರತಿಯೊಬ್ಬರ ಜೀವನವೂ ಕೂಡ ಅವರವರ ಪೂರ್ವ ಕರ್ಮಕ್ಕನುಗುಣವಾಗಿ ಮುಂದೆ ರೂಪಿತವಾಗುತ್ತಾ ಹೋಗುತ್ತದೆ ಎಂಬುದು ಜ್ಞಾನಿಗಳ ಒಮ್ಮತ. ಐವರು ಪತಿಯಂದಿರನ್ನು ಹೊಂದುವುದಕ್ಕೆ ಕಾರಣವಾದ ದ್ರೌಪದಿಯ ಜನ್ಮ ವೃತ್ತಾಂತದ ಕಡೆಗೆ ಗಮನ ಹರಿಸೋಣ.


ದ್ರೌಪದಿಯು ಸ್ವರ್ಗ ಶ್ರೀ: ಅಂದರೆ ದೇವಲೋಕದ ಸಂಪತ್ತು, ಆ ಸಂಪತ್ತೇ ಮೂರ್ತ ರೂಪವನ್ನು ತಾಳಿ ದ್ರೌಪದಿಯಾಗಿ ಭುವಿಗೆ ಬಂದಿರುವುದು. ಒಮ್ಮೆ ದೇವತೆಯರ ಪತ್ನಿಯರಿಗೆ ತಮ್ಮ ತಮ್ಮ ಒಂದೊಂದು ಅಂಶವನ್ನು ಸೇರಿಸಿ ಒಂದು ರೂಪವನ್ನು ಪಡೆದು ಭಗವಂತನ ಸೇವೆಯನ್ನು ಮಾಡಬೇಕು ಎಂಬುದಾಗಿ ಇಚ್ಛೆ ಉಂಟಾಗುತ್ತದೆ. ಅದೇ ಸಮಯಕ್ಕೆ ಭಗವಂತನ ಸಂಕಲ್ಪದಂತೆ ಯಮ, ವಾಯು,ಇಂದ್ರ ಮತ್ತು ಅಶ್ವಿನಿ ದೇವತೆಗಳು ತಮ್ಮ ತಮ್ಮ ಅಂಶದೊಂದಿಗೆ ಭೂಮಿಯಲ್ಲಿ ಜನ್ಮ ತಾಳಬೇಕಾಗುತ್ತದೆ ಅವರೇ ಪಂಚಪಾಂಡವರು. ಸ್ವರ್ಗ ಶ್ರೀಯು ಮೊದಲು ಒಬ್ಬ ಋಷಿಪುತ್ರಿಯಾಗಿ ಜನ್ಮ ತಾಳುತ್ತಾಳೆ ಅಪ್ರತಿಮ ಸೌಂದರ್ಯವಿದ್ದರೂ ಅವಳಿಗೆ ಅನುರೂಪನಾದ ಪತಿ ಸಿಗದ ಕಾರಣ ಮಹಾದೇವನನ್ನು ಕುರಿತು ಕಠಿಣವಾದ ತಪಸ್ಸನ್ನು ಮಾಡುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿ ಮಹಾದೇವ ಪ್ರತ್ಯಕ್ಷನಾದಾಗ ಸಕಲಗುಣ ಪರಿಪೂರ್ಣನಾದ ಪತಿಯನ್ನು ದಯಪಾಲಿಸು ಎಂಬುದಾಗಿ ಐದು ಬಾರಿ ಕೇಳುತ್ತಾಳೆ, ಪರಿಣಾಮ ಶಿವನು ನಿನ್ನ ಪ್ರಾರ್ಥನೆಯಂತೆ ನೀನು ಐವರು ಪತಿಯಂದಿರನ್ನು ಹೊಂದುವೆ. ಆದರೆ ಇನ್ನೊಂದು ದೇಹವನ್ನು ಪಡೆದಾಗ ಅದು ಸಿದ್ಧಿಸುವುದು ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಅವಳೇ ಇಂದಿನ ಜನ್ಮದಲ್ಲಿ ದ್ರೌಪದಿಯಾಗಿ ಜನಿಸುತ್ತಾಳೆ. ಅವಳು ಅವಳ ಜನ್ಮ ವೃತ್ತಾಂತಕ್ಕೆ ಅನುಗುಣವಾಗಿ ಅಂತೆಯೇ ಭಗವಂತನ ಸಂಕಲ್ಪಕ್ಕೆ ಅನುಗುಣವಾಗಿ ಐವರು ಮಂದಿ ಪತಿಯರನ್ನು ಪಡೆಯುತ್ತಾಳೆ. ಹಾಗಾಗಿ ಇದು ಕೇವಲ ದ್ರೌಪದಿಗೆ ಮಾತ್ರ ಹೊಂದುವ ವಿಶೇಷ ಧರ್ಮ. ಪ್ರತಿಯೊಬ್ಬರ ಜೊತೆಗೆ ಇರುವಾಗಲೂ ಆಯಾಯ ದೇವತಾ ಭಾವವನ್ನು ತುಂಬಿಕೊಂಡು ಸಂಸಾರವನ್ನು ನಡೆಸಿ ಪಾತಿವ್ರತ್ಯವನ್ನು ಸದಾ ಕಾಪಾಡಿಕೊಂಡ ಮಹಾ ಮಹಿಮಳು ದ್ರೌಪದೀ. ಶ್ರೀ ಕೃಷ್ಣ ಪರಮಾತ್ಮನಿಂದ ತನಗೆ ಅತ್ಯಂತ ಪ್ರಿಯಳಾದ ತಂಗಿ ಎಂಬುದಾಗಿ ಭಾವಿಸಲ್ಪಟ್ಟವಳು. ಪರಮಾತ್ಮನಿಗೆ ತಲುಪುವಂತೆ ಪ್ರಾರ್ಥನೆ ಮಾಡುವ ವಿಧಾನವನ್ನು ಚೆನ್ನಾಗಿ ಬಲ್ಲವಳು. ಹಾಗಾಗಿಯೇ ಆಪತ್ತಿನ ಸಂದರ್ಭದಲ್ಲಿ ಪರಮಾತ್ಮನಿಂದಲೇ ನೇರವಾಗಿ ರಕ್ಷಣೆಯನ್ನು ಪಡೆದುಕೊಂಡವಳು.


ಪತಿಯಂದಿರ ಬಗ್ಗೆ ಅತ್ಯಂತ ನಿಷ್ಠೆ ಹಾಗೂ ಭಕ್ತಿಯನ್ನು ಹೊಂದಿ ಪತಿಸೇವೆಯೇ ಪರಮಾತ್ಮನ ಸೇವೆ ಎಂದು ಭಾವಿಸಿ ಅವರು ವನವಾಸಕ್ಕೆ ಹೊರಡುವಾಗ ತಾನು ತವರಿಗೆ ಹೋಗಿ ಅರಮನೆಯ ಸೌಖ್ಯವನ್ನು ಅನುಭವಿಸಲಿಲ್ಲ. ತನ್ನ ಮಕ್ಕಳನ್ನು ಮಾತ್ರ ಪಾಂಚಾಲಕ್ಕೆ ಕಳುಹಿಸಿ ತಾನು ವನವಾಸದ ಕ್ಲೇಶಕ್ಕೆ ಸಿದ್ಧಳಾಗಿ ಪಾಂಡವರ ಜೊತೆಗೆ ಅಷ್ಟೂ ಕಾಲವೂ ಸಹಧರ್ಮಿಣಿಯಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತಾಳೆ. ಪಾಂಡವರಿಗೂ ಕೂಡ ಅವಳನ್ನು ಕಂಡರೆ ಅತ್ಯಂತ ಪ್ರೀತಿ ಮತ್ತು ಗೌರವ. ಕೃಷ್ಣ ಪರಮಾತ್ಮನ ಅಷ್ಟ ಮಹಿಷಿಯರಲ್ಲಿ ಒಬ್ಬಳಾದ ಸತ್ಯಭಾಮೆಯು ಪಾಂಡವರು ವನವಾಸದಲ್ಲಿರುವ ಕಾಲದಲ್ಲಿ, ಪತಿಯ ಜೊತೆಗೆ ಅವರಿದ್ದೆಡೆಗೆ ಬಂದು ದ್ರೌಪದಿಯನ್ನು ಭೇಟಿಯಾಗಿ ಕುಶಲ ಸಮಾಚಾರವನ್ನು ವಿಚಾರಿಸುತ್ತಾಳೆ. ಹಾಗೆಯೇ ಅವರಿಬ್ಬರೂ ಮಾತುಕತೆ ನಡೆಸುತ್ತಿರುವಾಗ ಕುತೂಹಲದಿಂದ ದ್ರೌಪದಿಯನ್ನು ಹೀಗೆ ಪ್ರಶ್ನಿಸುತ್ತಾಳೆ, ನಿನ್ನನ್ನು ನಿನ್ನ ಪತಿಯಂದಿರು ಅಷ್ಟು ಪ್ರೀತಿಯಿಂದ ಕಾಣುತ್ತರಲ್ಲಾ ಅದು ಹೇಗೆ ಸಾಧ್ಯವಾಯಿತು? ನೀನೇನಾದರೂ ಮಂತ್ರಗಳ ಅಥವಾ ಮೂಲಿಕೆಗಳ ಸಹಾಯವನ್ನು ಪಡೆದಿದ್ದೇಯೇ ಹೇಗೆ? ನನಗೂ ತಿಳಿಸು ಎಂಬುದಾಗಿ. ಆಗ ಪತಿಯ ಪ್ರೀತಿಗೆ ಪಾತ್ರವಾಗುವುದಕ್ಕೆ ಕಾರಣವಾಗುವುದು ನಮ್ಮ ಅಂತರಂಗವೇ ಹೊರತು ಬಾಹ್ಯವಾದ ಅವಲಂಬನೆ ಅಲ್ಲ ಎಂಬುದನ್ನು ತಿಳಿಯಪಡಿಸಿ, ಪತಿಯಂದಿರ ನಿಶ್ಚಲ ಪ್ರೇಮಕ್ಕೆ ಕಾರಣವಾದಂತಹ ತನ್ನ ಗುಣಗಳನ್ನು ವಿವರಿಸುತ್ತಾಳೆ. ಸತ್ಯಭಾಮೆಗೆ ಆಗ ದ್ರೌಪದಿಯು ಕೇವಲ ಅಪ್ರತಿಮ ರೂಪಸಂಪನ್ನೆ ಮಾತ್ರವಲ್ಲ ಅಪರಿಮಿತ ಗುಣಸಂಪನ್ನೆಯೂ ಹೌದು ಎಂಬುದು ಮನವರಿಕೆ ಆಗುತ್ತದೆ.ದ್ರೌಪದಿ ವ್ಯಾವಹಾರಿಕ ವಿಷಯದಲ್ಲಿಯೂ ಅತ್ಯಂತ ಜಾಣ್ಮೆಯನ್ನು ಹೊಂದಿರುತ್ತಾಳೆ, ರಾಜ್ಯಕೋಶದ ಬಗ್ಗೆ ಸಂಪೂರ್ಣವಾದ ಅರಿವು ಅವಳಿಗೆ ಇರುತ್ತದೆ.


ದ್ರೌಪದಿಯ ಪಾತಿವ್ರತ್ಯಕ್ಕೆ ಅನೇಕ ಬಾರಿ ಭಂಗ ಬರುವಂತಹ ಪ್ರಸಂಗಗಳು ಎದುರಾದರೂ ಅವುಗಳನ್ನೆಲ್ಲ ಧೀರತನದಿಂದ ಎದುರಿಸಿ ಪಾಂಡವರಿಗೆ ತಕ್ಕ ಪತ್ನಿಯಾಗಿಯೇ ಕೊನೆಯವರೆಗೂ ಇರುತ್ತಾಳೆ. ಶ್ರೀಕೃಷ್ಣನ ಮೇಲಿನ ಅನನ್ಯ ಭಕ್ತಿಯಿಂದ ಹಾಗೂ ಪಾತಿವ್ರತ್ಯವೆಂಬ ತಪಸ್ಸಿನಿಂದ ದ್ರೌಪದಿಯ ಆತ್ಮದೀಪ್ತಿಯು ಸದಾ ಬೆಳಗಿ ಕನ್ಯಾ ಎಂಬ ಪದಕ್ಕೆ ಅನ್ವರ್ಥಳಾಗಿರುತ್ತಾಳೆ.ಅಂತಹ ಪರಮ ಪಾವನೆಯಾದ ದ್ರೌಪದಿಯ ಸ್ಮರಣೆ ನಮಗೆ ಅತ್ಯಂತ ಪುಣ್ಯಪ್ರದವಾಗಿದೆ.


ಸೂಚನೆ : 07/10/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.