Monday, October 30, 2023

ಮನೋನಿಗ್ರಹವನ್ನು ಸಾಧಿಸಿ ಜೀವನವು ಭಗವನ್ಮಯವಾಗಲು ಮಂಡೋದರಿಯ ಸ್ಮರಣೆ (Manonigrahavannu Sadhisi Jivanavu Bhagavanmayavagalu Mandodariya Smarane)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)



ಪಂಚಕನ್ಯೆಯರಲ್ಲಿ ಐದನೆಯವಳು ಮಂಡೋದರೀ. ಮಯಾಸುರ ಎಂಬ ದಾನವ ರಾಜನ ಮಗಳು, ರಾಕ್ಷಸ ರಾಜನಾಗಿ, ಲಂಕಾಧಿಪತಿಯಾಗಿದ್ದ ರಾವಣನ ಜ್ಯೇಷ್ಠ ಪತ್ನಿ. ಅಪ್ರತಿಮ ಪರಾಕ್ರಮಿಯಾದ, ದೇವಾಸುರರ ಯುದ್ಧದಲ್ಲಿ ಇಂದ್ರನನ್ನೇ ಜಯಿಸಿ ಇಂದ್ರಜಿತ್ ಎಂಬ ಹೆಸರು ಪಡೆದ ಮೇಘನಾದನ ತಾಯಿ. ಅವಳಿಗೆ ಅತಿಕಾಯ ಮತ್ತು ಅಕ್ಷಯ ಕುಮಾರ ಎಂಬ ಇನ್ನಿಬ್ಬರು ಪರಕ್ರಾಮಿಗಳಾದ ಮಕ್ಕಳೂ ಇದ್ದರು. ಮಂಡೋದರಿಯು ಶಿವನ ವರಪ್ರಸಾದದಿಂದ ಜನಿಸಿದವಳು ಎಂಬ ಉಲ್ಲೇಖವೂ ಇದೆ. ಮಂಡೋದರಿ ಅಸುರನ ಮಗಳಾಗಿದ್ದರೂ, ದುಷ್ಟ ರಾವಣನ ಕೈ ಹಿಡಿದರೂ ಅತ್ಯಂತ ನೀತಿವಂತೆಯಾಗಿ ಬಾಳಿದವಳು. ಅಧರ್ಮಿಗಳ ನಡುವೆ ಇದ್ದರೂ ತಾನು ಅಧರ್ಮವನ್ನು ಅಂಟಿಸಿಕೊಳ್ಳದೇ ಸದಾ ಧರ್ಮಿಷ್ಠಳಾಗಿ ಜೀವನ ನಡೆಸಿದವಳು. ಸುತ್ತಮುತ್ತಲೂ ಧರ್ಮಕ್ಕೆ ವಿರೋಧವಾದ ವಾತಾವರಣ ಇದ್ದರೂ, ತನ್ನ ತನಕ್ಕೆ ಎಂದಿಗೂ ಧಕ್ಕೆ ತಂದುಕೊಳ್ಳದೇ ಕೆಸರಿನಲ್ಲಿ ಕಮಲ ಅರಳುವಂತೆ ಅರಳಿದವಳು. ರಾಕ್ಷಸರ ಮಧ್ಯೆ ಇದ್ದರೂ ದೈವೀಭಾವವನ್ನು ತನ್ನಲ್ಲಿ ಬೆಳಸಿಕೊಂಡು, ಭಗವನ್ಮಯವಾದ ಬಾಳಾಟವನ್ನೇ ನಡೆಸಿ ಬದುಕನ್ನು ಬೆಳಗಿಸಿ ಕೊಂಡವಳು.

ಆಂಜನೇಯನು ಸೀತಾನ್ವೇಷಣೆಗಾಗಿ ಲಂಕೆಯನ್ನು ಪ್ರವೇಶಿಸಿ ಎಲ್ಲೆಡೆಯೂ ಸೀತಾಮಾತೆಯನ್ನು ಹುಡುಕುತ್ತಾ ರಾವಣನ ಅಂತಃಪುರವನ್ನು ಪ್ರವೇಶಿಸುತ್ತಾನೆ. ಅಲ್ಲಿ ದಿವ್ಯವಾದ ಮುಖಕಾಂತಿಯಿಂದ ಬೆಳಗುತ್ತಿರುವ ಮಂಡೋದರಿಯನ್ನು ನೋಡಿ ಸೀತಾಮಾತೆಯನ್ನು ಕಂಡೆ ಎಂಬುದಾಗಿ ಕ್ಷಣಕಾಲ ಭ್ರಮೆಗೆ ಒಳಗಾಗುತ್ತಾನೆ. ಆದರೆ ಸೀತೆಯು ಇಂತಹ ಜಾಗದಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ಮನಗಂಡು ಪುನಃ ಬೇರೆಡೆಗೆ ತೆರಳುತ್ತಾನೆ. ಮಂಡೋದರಿಯು ಸೀತಾಮಾತೆಯಂತೆಯೇ ಅನುಪಮವಾದ,ಅಲೌಕಿಕ ಸೌಂದರ್ಯವನ್ನು ಹೊಂದಿದ್ದವಳು, ಮಹಾ ಪತಿವ್ರತೆ. ಪತಿಯ ಬಗ್ಗೆ ಅತ್ಯಂತ ಅನುರಾಗವನ್ನು ಹೊಂದಿದವಳು. ಪತಿಯಾದ ರಾವಣನು ಕಾಮ ಮತ್ತು ಕ್ರೋಧಕ್ಕೆ ವಶನಾಗಿ, ಅಧರ್ಮದ ಹಾದಿಯನ್ನು ತುಳಿದಾಗ ಅವನಲ್ಲಿ ಧರ್ಮಪ್ರಜ್ಞೆ ಮೂಡಿಸಿ, ಸನ್ಮಾರ್ಗಕ್ಕೆ ತರಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಾಳೆ. ಅನೇಕ ಬಾರಿ ಅವನ ದುಶ್ಚರಿತವನ್ನು ನಿವಾರಿಸಲು ಪ್ರಯತ್ನಿಸಿ ವಿಫಲಳಾಗುತ್ತಾಳೆ. ಇಂದ್ರಿಯಗಳಿಗೆ ದಾಸನಾಗಿ ದುಷ್ಕಾಮ ಪ್ರವೃತ್ತನಾದ ರಾವಣನಿಗೆ ಅವಳ ಧರ್ಮಯುಕ್ತವಾದ ಮಾತುಗಳು ರುಚಿಸುವುದಿಲ್ಲ. ಶ್ರೀರಾಮನ ಹಾಗೂ ಸೀತಾಮಾತೆಯ ಮಹಿಮೆಯನ್ನು ಅರಿತವಳಾಗಿದ್ದಳು. ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ಪತಿಯ ಕಾರ್ಯವನ್ನು ಸಂಪೂರ್ಣವಾಗಿ ಧಿಕ್ಕರಿಸುತ್ತಾಳೆ. ಸಮಸ್ತರಿಂದಲೂ ಪೂಜಾರ್ಹಳಾದ ಸೀತೆಯನ್ನು ಅಪಹರಣ ಮಾಡಿ ಸ್ವತಃ ಮೃತ್ಯುವನ್ನು ಬರಮಾಡಿಕೊಳ್ಳುತ್ತಿರುವೆ ಎಂದು ಎಚ್ಚರಿಕೆ ನೀಡುತ್ತಾಳೆ. ಮಹಾಲಕ್ಷ್ಮಿ ಸ್ವರೂಪಳಾದ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿ ಅವನಲ್ಲಿ ಶರಣಾಗತಿಯನ್ನು ಹೊಂದುವುದು ಸರ್ವರೀತಿಯಿಂದಲೂ ಶ್ರೇಯಸ್ಕರ ಎಂಬ ಮಾತನ್ನು ಬಾರಿ ಬಾರಿಗೂ ಹೇಳುತ್ತಾಳೆ. ಆದರೆ ಅಧರ್ಮಿಯಾದ ರಾವಣನು ಶ್ರೀರಾಮನೊಂದಿಗೆ ಯುದ್ಧ ಮಾಡಿ ಅವನ ಬಾಣದಿಂದ ಪ್ರಹರಿಸಲ್ಪಟ್ಟು ಹತನಾಗುತ್ತಾನೆ. ಆಗ ತನ್ನ ಮಾತನ್ನು ನಿರ್ಲಕ್ಷಿಸಿ ರಾಮನೊಂದಿಗೆ ಯುದ್ಧ ಮಾಡಿ ಪ್ರಾಣವನ್ನು ತೊರೆದ ಪತಿಯನ್ನು ಕುರಿತು ದುಃಖತಪ್ತಳಾಗಿ ಅವಳು ಆಡುವ ಮಾತುಗಳಿಂದ ಶ್ರೀರಾಮನ ಬಗ್ಗೆ ಅವಳಿಗಿದ್ದ ಅರಿವು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ಶ್ರೀರಾಮನನ್ನು ಕುರಿತು ಅವಳಾಡುವ ಕೆಲ ಮಾತುಗಳು ರಾಮಾಯಣದಲ್ಲಿ ಹೀಗೆ ಉಲ್ಲೇಖವಾಗಿದೆ- ಶ್ರೀರಾಮನು ಮಹಾಯೋಗಿಯು. ಸನಾತನನಾದ ಪರಮಾತ್ಮನು. ಅವನಿಗೆ ಆದಿ, ಮಧ್ಯ ಅಂತ್ಯಗಳಾವುವೂ ಇಲ್ಲ. ಅವನು ಮಹತೋ ಮಹೀಯನು. ಅಜ್ಞಾನದಿಂದ ಆಚೆ ಇರುವವನು. ಸಮಸ್ತರನ್ನೂ ಧರಿಸಿರುವ ಪರಮೇಶ್ವರನು.ಕೈಗಳಲ್ಲಿ ಶಂಖ ಚಕ್ರ ಗದೆಗಳನ್ನು ಹಿಡಿದಿರುವವನು. ನಿತ್ಯವೂ ಮಹಾಲಕ್ಷ್ಮಿಯೊಡನೆ ವಿಹರಿಸುವವನು. ಸಮಸ್ತಲೋಕಗಳಿಗೂ ಅಧೀಶ್ವರನಾಗಿರುವವನು. ಸತ್ಯ ಪರಾಕ್ರಮಿಯಾದ ಭಗವಾನ್ ಮಹಾವಿಷ್ಣುವೇ ಲೋಕಗಳ ಹಿತಾರ್ಥವಾಗಿ ಸಾಕ್ಷಾತ್ತಾಗಿ ಮನುಷ್ಯ ರೂಪವನ್ನು ಧರಿಸಿ ವಾನರರೂಪಿಗಳಾಗಿರುವ ದೇವತೆಗಳಿಂದ ಪರಿವೃತನಾಗಿ ನಿನ್ನನ್ನು ಸಂಹರಿಸಿದ್ದಾನೆ. ಎಂಬುದಾಗಿ ಮೃತನಾದ ಪತಿಯ ಮುಂದೆ ಶ್ರೀರಾಮನನ್ನು ಸ್ತುತಿಸುತ್ತಾಳೆ. ಪತಿಯ ವಿಯೋಗವಾದಾಗಲೂ ಭಗವಂತನ ಸ್ವರೂಪವನ್ನು ಅರಿತು, ಈ ರೀತಿಯಾಗಿ ಭಾವಿಸಿ ಸ್ತುತಿಸುವುದಕ್ಕೆ ಜ್ಞಾನಿಗಳಿಂದ ಅಥವಾ ಭಕ್ತ ಶ್ರೇಷ್ಠರಿಂದ ಮಾತ್ರ ಸಾಧ್ಯ. ಅಂತಹವರ ಸಾಲಿಗೆ ಮಂಡೋದರಿಯೂ ಸೇರುತ್ತಾಳೆ. ಹಾಗಾಗಿಯೇ ಮಂಡೋದರಿಯು ಪೂಜ್ಯಳು ಮತ್ತು ಪ್ರಾತಃ ಸ್ಮರಣೀಯಳು.

ಮಂಡೋದರಿಯ ಮನೋನಿಗ್ರಹ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ನಮ್ಮ ಸುತ್ತಲೂ ನಮ್ಮ ಮನಸ್ಸಿಗೆ ಅನುಕೂಲವಾದ ವಾತಾವರಣವಿದ್ದಾಗ ನಮ್ಮ ಅಂತರಂಗದ ಹಾಗೂ ಬಾಹ್ಯವಾದ ಸಾಧನೆಗೆ ನಮ್ಮನ್ನು ತೊಡಗಿಸಿಕೊಳ್ಳಲು ಸುಲಭವಾಗುತ್ತದೆ. ಅದೇ ಸಂಪೂರ್ಣವಾಗಿ ವಿರುದ್ಧವಾದ ವಾತಾವರಣವಿದ್ದರೆ ಆ ಸಾಧನೆಗಳಿಂದ ವಿಮುಖರಾಗುವ ಸಂಭವವೇ ಅಧಿಕವಾಗಿರುತ್ತದೆ.ಮಂಡೋದರಿಯು ತಮೋಗುಣ ಪೂರಿತರಾದ ರಾಕ್ಷಸರ ನಡುವೆ ಇದ್ದರೂ ಸಾತ್ವಿಕಳಾಗಿ ಬಾಳಿದವಳು. ಆ ಸಾತ್ವಿಕತೆಯನ್ನು ಉಳಿಸಿಕೊಳ್ಳಲು ನಿತ್ಯವೂ ಭಗವತ್ ಚಿಂತನೆ ಹಾಗೂ ಆರಾಧನೆಗಳ ಮೂಲಕ ಪರಿಶ್ರಮ ಪಡಲೇಬೇಕಾಗುತ್ತದೆ.ಅತ್ಯಂತ ದುಷ್ಟನಾಗಿ, ಸದಾ ಭಗವದ್ ವಿರೋಧಿ ಕಾರ್ಯಗಳನ್ನೇ ಮಾಡುವಂತಹ ಪತಿಯನ್ನು ಪಡೆದರೂ, ಆ ಪತಿಯಲ್ಲಿಯೇ ಎಲ್ಲೆಡೆಯಲ್ಲಿಯೂ ಬೆಳಗುವ ಪರಮಾತ್ಮನನ್ನು ಕಂಡು ಆರಾಧಿಸಿ ಮಹಾಪತಿವ್ರತೆ ಎನಿಸಿಕೊಳ್ಳುತ್ತಾಳೆ. ಉತ್ತಮ ಗುಣವಂತನಾದ ಪತಿಯ ಸೇವೆಯನ್ನು ಸಕಲ ರೀತಿಯಿಂದಲೂ ಮಾಡಿ ಪಾತಿವ್ರತ್ಯವನ್ನು ಸಂಪಾದಿಸಿಕೊಳ್ಳುವುದಕ್ಕಿಂತ, ದುಷ್ಟಗುಣಗಳಿಂದ ಕೂಡಿದ ಪತಿಯನ್ನು ಪಡೆದಾಗ ಪಾತಿವ್ರತ್ಯವನ್ನು ಸಂಪಾದಿಸಿಕೊಳ್ಳುವುದು ಅತ್ಯಂತ ಕಷ್ಟಸಾಧ್ಯ. ಆದರೆ ಮಂಡೋದರಿಯು ಅದನ್ನು ಸಾಧಿಸಿದ್ದಳು.

ಸ್ತ್ರೀಯರಿಗೆ ಪಾತಿವ್ರತ್ಯಕ್ಕಿಂತ ಮಿಗಿಲಾದ ತಪಸ್ಸು ಇನ್ನೊಂದಿಲ್ಲ ಎಂಬುದನ್ನು ಶಾಸ್ತ್ರಗಳು ಕೊಂಡಾಡುತ್ತವೆ. ಏಕೆಂದರೆ ಪಂಚಾಗ್ನಿ ಮುಂತಾದ ಮಹಾತಪಸ್ಸುಗಳಿಂದ ಸಾಧಿಸಬಹುದಾದ ಮನೋನಿಗ್ರಹವನ್ನು, ಪಾತಿವ್ರತ್ಯದಿಂದ ಸ್ತ್ರೀಯರು ಸಂಸಾರದಲ್ಲಿದ್ದುಕೊಂಡೇ ಸಾಧಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಅಂತಹ ತಪಸ್ಸನ್ನು ಅವಳು ಸಾಧಿಸಿದ್ದರಿಂದ ಶ್ರೀರಾಮನ ಗುಣಗಳನ್ನು, ಅವನ ಸ್ವರೂಪವನ್ನು ಅವಳಿಂದ ಅರಿಯಲು ಸಾಧ್ಯವಾಯಿತು. ಅಂತಹ ಮಂಡೋದರಿಯ ಸ್ಮರಣೆಯಿಂದ ನಮ್ಮ ಪಾಪಗಳೂ ದೂರವಾಗುತ್ತವೆ. ಅವಳಂತೆಯೇ ಮನೋನಿಗ್ರಹವನ್ನು ಸಾಧಿಸಿ ಜೀವನವನ್ನು ಭಗವನ್ಮಯವನ್ನಾಗಿ ಮಾಡಿಕೊಳ್ಳುವುದಕ್ಕೆ ಮಂಡೋದರಿಯ ಸ್ಮರಣೆ ಅತ್ಯಂತ ಸಹಕಾರಿ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 7/10/2023 ರಂದು ಪ್ರಕಟವಾಗಿದೆ.