ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 60 ಯಾವುದನ್ನು ಬಿಟ್ಟರೆ ಮನುಷ್ಯನು ಶೋಕಿಸುವುದಿಲ್ಲ ?
ಉತ್ತರ - ಕ್ರೋಧ
ಇಲ್ಲಿ ಯಕ್ಷನು ಕೇಳುವ ಈ ಪ್ರಶ್ನೆಯಲ್ಲಿ - ಕ್ರೋಧವನ್ನು ಬಿಡುವುದರಿಂದ ಶೋಕ ಹೇಗೆ ದೂರಾಗುತ್ತದೆ? ಮತ್ತು ಕ್ರೋಧ ಅಥವಾ ಕೋಪ ಹೇಗೆ ಶೋಕಕ್ಕೆ ಕಾರಣವಾಗುತ್ತದೆ? ಎನ್ನುವ ಎರಡು ಅಂಶವನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಕ್ರೋಧ ಎಂದರೆ ಸಿಟ್ಟು ಅಥವಾ ಕೋಪ. ಕೋಪವು ಇಟ್ಟುಕೊಳ್ಳಬೇಕಾದದ್ದೋ ಅಥವಾ ಬಿಟ್ಟುಕೊಡಬೇಕಾದದ್ದೋ ಅನ್ನುವಂತಹ ಎರಡು ವಿಷಯವೂ ಕೂಡ ಇದಕ್ಕೆ ಇದೆ. ಸಕಾಲದಲ್ಲಿ ಬರುವಂತಹ ಕ್ರೋಧವು ಅನುಕೂಲವನ್ನು ಉಂಟು ಮಾಡಬಹುದು. ಅದೇ ಅಕಾಲದಲ್ಲಿ ಬರುವಂತಹ ಕ್ರೋಧವು ಪ್ರತಿಕೂಲವನ್ನು ಉಂಟು ಮಾಡಬಹುದು. ಸಿಟ್ಟು ಕೆಟ್ಟದ್ದನ್ನು ನೋಡಿದಾಗ ಬರುವಂತಹದ್ದು ಸಹಜ. ಅಲ್ಲ ಸಲ್ಲದ ವಿಷಯವನ್ನು ಕಂಡಾಗ ಕೇಳಿದಾಗ ಬರುವಂತಹ ಕೋಪವೂ ಸಹಜವೇ. ಯಾವುದೇ ವಸ್ತುವೂ ಅದು ಎಲ್ಲಿ ಹುಟ್ಟಿದೆ? ಆ ಹುಟ್ಟಿಗೆ ಕಾರಣವಾದ ಅಂಶಗಳು ಯಾವುವು? ಎಂಬುದರ ಮೇಲೆ ಆ ವಸ್ತುವಿನ ಗುಣ ದೋಷಗಳು ನಿರ್ಣಯವಾಗುತ್ತವೆ. ಭಗವದ್ಗೀತೆಯಲ್ಲಿ ಕ್ರೋಧ ಎಂಬ ಗುಣವು ರಜೋಗುಣದಿಂದ ಹುಟ್ಟುತ್ತದೆ ಎಂಬುದನ್ನು ಹೇಳಿದ್ದಾನೆ ಶ್ರೀಕೃಷ್ಣ. ಕೆಲವೊಮ್ಮೆ ಸತ್ತ್ವಗುಣದಿಂದಲೂ ಕೋಪವು ಬರುವುದು ಉಂಟು. ಅಂತ ಗುಣವು ಪೂಜ್ಯವಾದುದು. ಯಾವುದು ರಜೋಗುಣದಿಂದ ಹುಟ್ಟುತ್ತದೆಯೋ ಅದು ತ್ಯಾಜ್ಯವಾದದ್ದು ಎಂಬುದು ನಿಶ್ಚಯವಾದ ವಿಷಯ. ಅಂದರೆ ರಜೋಗುಣದಿಂದ ಉದ್ಭವವಾಗುವ ಗುಣವಿದೆಯೋ ಅದು ಮುಂದೆ ಶೋಕಕ್ಕೆ ಕಾರಣವಾಗುತ್ತದೆ ಎಂದರ್ಥ. ಅದೇ ರೀತಿಯಾಗಿ ಸತ್ತ್ವಗುಣದಿಂದ ಹುಟ್ಟುವಂತಹ ಯಾವ ಕ್ರೋಧವಿದೆಯೋ ಅದು ಅನುಕೂಲಕ್ಕೆ ಕಾರಣ ಎಂದು. ನಾವು ರಾಮಾಯಣದಲ್ಲಿ ಒಂದು ಉದಾಹರಣೆಯನ್ನು ನೋಡಬಹುದು. ರಾಮನು ಕ್ರೋಧವನ್ನು ಆವಾಹಿಸಿಕೊಂಡ ಎಂಬುದಾಗಿ. ಅಂದರೆ ಸಮುದ್ರರಾಜನ ದರ್ಪವನ್ನು - ಅಹಂಕಾರವನ್ನು ಅಡಗಿಸುವುದಕೋಸ್ಕರ ಅಲ್ಲಿ ರಾಮನು ಕ್ರೋಧವನ್ನು ಬರಸೆಳೆದ. ಹಾಗಾಗಿ ಅಲ್ಲಿ ಕ್ರೋಧ ಎಂಬುದು ಅನುಕೂಲವಾಗುವ ಗುಣವಾಯಿತೇ ಹೊರತು ಅದರಿಂದ ಪ್ರತಿಕೂಲವಾಗಲಿಲ್ಲ. ಆದರೆ ಬೇರೆ ಯಾವುದೇ ಸಂದರ್ಭದಲ್ಲಿ ಈ ಕ್ರೋಧವು ರಜೋಗುಣದಿಂದ ಹುಟ್ಟಿದಾಗ ಅದು ಪ್ರತಿಕೂಲವಾಗುತ್ತದೆ ಎಂದರ್ಥ.
ಒಂದು ಮಗುವು ತನಗೆ ಯಾವುದಾದರೂ ಒಂದು ವಸ್ತು ಬೇಕೇ ಬೇಕು ಎಂದಾಗ ಅದಕ್ಕೆ ಹಠ ಹಿಡಿಯುತ್ತದೆ. ಅದು ಸಿಗದೇ ಇರುವಾಗ ಸಿಟ್ಟು ಕೂಡ ಬರುತ್ತದೆ. ಮಗುವಿನ ಅತಿಯಾದ ಬೇಕು ಎಂಬುದು ಸಿಗದಿದ್ದಾಗ ಸಿಟ್ಟಾಯಿತು. ಸಿಟ್ಟು ಮಾಡಿಕೊಂಡು ಆ ವಸ್ತು ಸಿಗದೇ ಇದ್ದಾಗ ಶೋಕ ಅಥವಾ ದುಃಖ ಉಂಟಾಯಿತು. ಅಂದರೆ ಇಲ್ಲಿ ಸಿಟ್ಟು ಯಾಕೆ ಬಂತು ಎಂದು ಕೇಳಿದರೆ ಅದಕ್ಕೆ ಮೂಲ ಅತಿಯಾದ ಆಸೆ. ಹಾಗಾಗಿ ಆ ಆಸೆಯನ್ನು ಈಡೇರಿಸಲು ಆಗದಿರುವಾಗ ಶೋಕವು ಸಹಜವಾಗಿ ಬರುತ್ತದೆ. ಅಂದರೆ ಬೇಕಾಗಿರುವಂತಹ ವಸ್ತು ಸಿಗದೇ ಇದ್ದಾಗ ಸಹಜವಾದ ಶೋಕ ಕೂಡ ಅಲ್ಲಿ ಬರುವಂತಹದ್ದು. ಇಂತಹ ಸಂದರ್ಭದಲ್ಲಿ ಬರುವ ಸಿಟ್ಟು ನಮಗೆ ಅನುಕೂಲ ಅಲ್ಲ. ಆ ಸಿಟ್ಟು ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಅಂತಹ ಸಿಟ್ಟನ್ನು ಬಿಡಬೇಕು ಎಂಬುದು ಇದರ ತಾತ್ಪರ್ಯವಾಗಿದೆ.