Sunday, October 15, 2023

ವ್ಯಾಸ ವೀಕ್ಷಿತ - 57 ಪಾಂಡವರಿಗಾದ ಊಟೋಪಚಾರಗಳು (Vyaasa Vikshita - 57 Pandavarigada Utopacharagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
ಪ್ರತಿಕ್ರಿಯಿಸಿರಿ (lekhana@ayvm.in)



ದ್ರುಪದನ ಕಡೆಯಿಂದ ಬಂದವನೊಬ್ಬನು ಪಾಂಡವರೆಲ್ಲರನ್ನೂ ಭೋಜನಕ್ಕಾಗಿ ಆಹ್ವಾನಿಸಿ, ಅದಕ್ಕಾಗಿ ಅವರನ್ನೊಯ್ಯಲು ರಥಗಳು ಸಿದ್ಧವಾಗಿರುವುದನ್ನೂ ತಿಳಿಸಿದನಷ್ಟೆ. ಆ ಮೊದಲೇ ಬಂದಿದ್ದ ಪುರೋಹಿತನನ್ನು ಕಳುಹಿಸಿಕೊಟ್ಟು, ಆನಂತರ ಆತನ ಸೂಚನೆಯಂತೆ ಆ ದೊಡ್ಡ ದೊಡ್ಡ ರಥಗಳನ್ನು ಹತ್ತಿ ಹೊರಟರು, ಪಾಂಡವರು. ಒಂದು ರಥದಲ್ಲಿ ಕುಂತಿಯೂ ದ್ರೌಪದಿಯೂ ಕುಳಿತುಕೊಂಡರು; ಉಳಿದವರು ಮತ್ತೊಂದರಲ್ಲಿ.

ಯುಧಿಷ್ಠಿರನು  ಆಡಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದ ದ್ರುಪದಮಹಾರಾಜನು, ಇವರುಗಳಿಗಾಗಿ ಅನೇಕಪದಾರ್ಥಗಳನ್ನು ಹೊಂದಿಸಿಟ್ಟಿದ್ದನು:  ಹಣ್ಣು-ಹೂಮಾಲೆಗಳು, ಕವಚ-ಕತ್ತಿ-ಗುರಾಣಿಗಳು, ರತ್ನಗಂಬಳಿ-ಆಸನಗಳು; ಕೃಷಿಕಾರ್ಯಕ್ಕೆ ಉಪಯೋಗಕ್ಕೆ ಬರುವ ಹಸು-ಹಗ್ಗ-ಬೀಜಗಳು ಮುಂತಾದುವು; ಹಾಗೆಯೇ ಬೇರೆ ಶಿಲ್ಪಗಳಲ್ಲಿ (ಕೈಗಾರಿಕೆಗಳ) ಬಳಕೆಗೆ ಬರುವ ವಸ್ತುಗಳು; ಹಾಗೂ ಕ್ರೀಡನಕಗಳು (ಎಂದರೆ ಆಟಗಳಿಗೆ ಬೇಕಾಗುವ ವಸ್ತುಗಳು) – ಎಲ್ಲವೂ ಇದ್ದವು.

ಅಷ್ಟರಲ್ಲೇ ಕೃಷ್ಣೆಯನ್ನು ಕರೆದುಕೊಂಡು ಬಂದ ಕುಂತಿಯು ದ್ರುಪದನ ಅಂತಃಪುರವನ್ನು ಪ್ರವೇಶಿಸಿದಳು. ಅಲ್ಲಿದ್ದ ಉದಾರಮನಸ್ಸಿನ ನಾರಿಯರು, ಕುಂತಿಯನ್ನು ಆದರಿಸಿದರು. ದ್ರುಪದನೂ, ಆತನ ಸಚಿವರೂ, ಪುತ್ರ-ಮಿತ್ರರೂ, ಭೃತ್ಯರೂ (ಎಂದರೆ ಸೇವಕರೂ) ಆ ಪಾಂಡವರನ್ನು ಕಂಡು ಬಹಳವೇ ಸಂತೋಷಪಟ್ಟರು: ಅಜಿನವನ್ನೇ ಉತ್ತರೀಯವನ್ನಾಗಿ ಹೊಂದಿದ್ದ ಆ ಪಾಂಡವರ ಸಿಂಹದಂತಿರುವ ನಡೆಯೇನು! ಎತ್ತಿನ ಕಣ್ಣುಗಳಂತೆ ಇದ್ದ ಅವರ ವಿಶಾಲವಾದ ನೇತ್ರಗಳೇನು! ತುಂಬಿಕೊಂಡಿದ್ದ ಹೆಗಲುಗಳೇನು! ಸರ್ಪರಾಜನಂತೆ ನೀಳವಾದ ಬಾಹುಗಳೇನು! ಕಂಡವರಿಗೆಲ್ಲಾ ಅತೀವ ಹರ್ಷವೇ ಆಯಿತು.

ಇನ್ನು ಆ ವೀರರಾದ ಪಾಂಡವರೂ ಅಷ್ಟೆ. ಪಾದಪೀಠವುಳ್ಳ ಶ್ರೇಷ್ಠವಾದ ಆ ಆಸನಗಳಲ್ಲಿ ಹೋಗಿ ಕುಳಿತುಕೊಂಡರು. ಅನುಕ್ರಮವಾಗಿ ಕುಳಿತರು - ಎಂದರೆ ಜ್ಯೇಷ್ಠಾನುಪೂರ್ವವಾಗಿ (ಮೊದಲು ಹಿರಿಯರು, ಆಮೇಲೆ ಕಿರಿಯರು ಎಂಬ ಕ್ರಮದಲ್ಲಿ) ಕುಳಿತರು. ಅವರು ಕುಳಿತುಕೊಳ್ಳುವಾಗ ಕಿಂಚಿತ್ತೂ ಶಂಕೆಯಿರಲಿಲ್ಲ (ಇದು ತಮಗೋ, ಇನ್ನಾರೋ ಹಿರಿಯರಿಗೋ - ಎನ್ನುವ ಆಕುಲತೆಯಿರಲಿಲ್ಲ); ಹಾಗೆಯೇ ವಿಸ್ಮಯವೂ ಇರಲಿಲ್ಲ (ಆಹಾ ಇದೆಲ್ಲ ಅದೆಷ್ಟು ಉತ್ತಮವಾಗಿದೆ, ಅದ್ಭುತವಾಗಿದೆ, ಎಂಥ ರಾಜೋಪಚಾರ! - ಎಂಬ ಬಗೆಯ ಪ್ರತಿಕ್ರಿಯೆಯೂ ಇರಲಿಲ್ಲ).

ಅವರು ಕುಳಿತುಕೊಳ್ಳುತ್ತಿದ್ದಂತೆಯೇ ಅಲ್ಲಿಗೆ ಬಂದರು, ಸುಸ್ವಚ್ಛವೇಷಧಾರಿಗಳಾಗಿದ್ದ ದಾಸ-ದಾಸಿಯರೂ ಬಡಿಸುವವರೂ. ಚಿನ್ನ-ಬೆಳ್ಳಿಗಳ ಪಾತ್ರೆಗಳಲ್ಲಿ ಸಾಧಾರಣವೂ ವಿಶೇಷವೂ ಆದ ರಾಜೋಚಿತ ಭೋಜನಸಾಮಗ್ರಿಗಳನ್ನು (ಭಕ್ಷ್ಯಗಳು, ಭೋಜ್ಯಗಳು ಮುಂತಾದುವನ್ನು) ತಂದು ತಂದು ಬಡಿಸಿದರು. ತಮತಮಗೆ ಅಪೇಕ್ಷಿತವಾದಷ್ಟನ್ನು ಆ ಪುರುಷವೀರರು ಭುಜಿಸಿದರು (ತಿಂದರು); ಸುತೃಪ್ತರಾದರು.

ಭೋಜನ ಮುಗಿಯುತ್ತಲೇ ಅವರು ನಡೆದುದು ದ್ರುಪದನು ಅಲ್ಲಿ ಜೋಡಿಸಿದ್ದ ನಾನಾವಸ್ತುಗಳತ್ತ; ಅಲ್ಲೂ ಅವರು ಮಿಕ್ಕೆಲ್ಲವನ್ನೂ, ಎಂದರೆ ಭೋಗದ ವಸ್ತುಗಳೆಲ್ಲವನ್ನೂ, ಬಿಟ್ಟು ಸಾಂಗ್ರಾಮಿಕಗಳತ್ತ ಸಾಗಿದರು. (ಸಂಗ್ರಾಮಕ್ಕೆ ಬೇಕಾಗುವಂತಹವು ಸಾಂಗ್ರಾಮಿಕಗಳು: ಕತ್ತಿ-ಗುರಾಣಿ-ಗದೆ-ಬಿಲ್ಲು ಮುಂತಾದವು). ದ್ರುಪದನೂ ಆತನ ಪುತ್ರನೂ, ಆತನ ಮುಖ್ಯಮಂತ್ರಿಗಳು -ಎಲ್ಲರೂ ಇದನ್ನು ಗಮನಿಸಿಕೊಂಡರು. "ಇವರೆಲ್ಲರೂ ಕುಂತೀಪುತ್ರರಾದ ರಾಜಕುಮಾರರೇ" ಎಂಬುದನ್ನು (ಮನಸ್ಸಿನಲ್ಲೇ) ತೀರ್ಮಾನಿಸಿಕೊಂಡವರಾಗಿ ಹರ್ಷದಿಂದ ತುಂಬಿಹೋದರು.

ಆ ಬಳಿಕ ಮಹಾದ್ಯುತಿಯುಳ್ಳವನಾದ (ದ್ಯುತಿಯೆಂದರೆ ಕಾಂತಿ) ದ್ರುಪದನು ತೇಜಶ್ಶಾಲಿಯದ ಯುಧಿಷ್ಠಿರನಲ್ಲಿಗೆ ಹೋಗಿ, ಬ್ರಾಹ್ಮಣರನ್ನು ಮಾತನಾಡಿಸುವ ಪರಿ ಏನುಂಟೋ ಅದೇ ಪರಿಯಲ್ಲಿ ಸಂಬೋಧಿಸಿ, ಯಾವುದೇ ದೈನ್ಯ-ಸಂಕೋಚಗಳಿಲ್ಲದೆ ಪ್ರಶ್ನಿಸಿದನು.

ಸೂಚನೆ : 
15/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.