ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 58 ಯಾವುದನ್ನು ನಿಗ್ರಹಿಸುವುದರಿಂದ ಜನರು ಶೋಕವನ್ನು ಪಡುವುದಿಲ್ಲ ?
ಉತ್ತರ - ಮನೋನಿಗ್ರಹದಿಂದ
"ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂಬ ಮಾತು ಮನುಷ್ಯನ ಸುಖದುಃಖಗಳಿಗೆ ಮನಸ್ಸು ಯಾವ ರೀತಿ ಕಾರಣವಾಗುತ್ತದೆ ಎಂಬುದನ್ನು ಹೇಳುತ್ತದೆ. ಈ ಮನಸ್ಸು ಮನುಷ್ಯನ ಜೀವನದಲ್ಲಿ ಅವಿಭಾಜ್ಯವಾದ ಅಂಗವಾಗಿದೆ. ಮನಸ್ಸಿನಿಂದಲೇ ಮಾನವನಾಗಿರುವುದು. ಆದರೆ ಮನಸ್ಸನ್ನು ನಿಗ್ರಹ ಮಾಡುವ ಅಗತ್ಯವೇನು? ನಿಗ್ರಹ ಮಾಡದಿದ್ದರೆ ಯಾವ ದುಷ್ಪರಿಣಾಮ ಉಂಟಾಗುತ್ತದೆ? ಮನಸ್ಸನ್ನು ನಿಗ್ರಹಿಸುವುದು ಹೇಗೆ? ಮತ್ತು ಅದರ ನಿಗ್ರಹದಿಂದ ಶೋಕವು ಹೇಗೆ ನಿಯಂತ್ರಣಗೊಳ್ಳುತ್ತದೆ? ಎಂಬ ಆಶಯ ಯಕ್ಷನ ಪ್ರಶ್ನೆಯಲ್ಲಿ ಅಡಕವಾಗಿದೆ.
ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ ಎಂದು ಎರಡು ಮುಖಗಳಲ್ಲಿ ಮನಸ್ಸು ಸಂಚರಿಸುತ್ತದೆ. ಬಾಹ್ಯವಾದ ಇಂದ್ರಿಯಗಳ ಮೂಲಕ ಮನಸ್ಸು ಹೊರ ಮುಖವಾಗಿ ಹರಿದರೆ ಅದು ಪ್ರವೃತ್ತಿಮಾರ್ಗ. ಇಂದ್ರಿಯಗಳನ್ನು ಬಿಟ್ಟು ಅಂತರ್ಮುಖವಾದರೆ ಅದು ನಿವೃತ್ತಿಮಾರ್ಗ. ಮನಸ್ಸು ಯಾವಾಗ ಪ್ರವೃತ್ತಿಮಾರ್ಗದಲ್ಲಿ ಸಂಚರಿಸುತ್ತದೆಯೋ ಆಗ ಶೋಕಕ್ಕೆ ಆಸ್ಪದ, ನಿವೃತ್ತಿಮಾರ್ಗದಲ್ಲಿ ಸಂಚರಿಸುವಾಗ ಶೋಕಮೋಹಗಳಿಗೆ ಆಸ್ಪದವಿರುವುದಿಲ್ಲ. ಅದಕ್ಕೆ ಕಾರಣವಿಷ್ಟೆ - ಶಬ್ದ-ಸ್ಪರ್ಶ-ರೂಪ-ರಸ-ಗಂಧ ಎಂಬ ಸೂಕ್ಷ್ಮವಾದ ವಿಷಯಗಳಿಂದ ಆಕಾಶ-ವಾಯು-ಅಗ್ನಿ-ನೀರು-ಪೃಥಿವೀ ಎಂಬ ಐದು ಭೂತಗಳ ಸೃಷ್ಟಿಯಾಗುತ್ತದೆ. ಕಿವಿ-ಚರ್ಮ-ಕಣ್ಣು-ನಾಲಗೆ-ಮೂಗು ಈ ಐದು ಇಂದ್ರಿಯಗಳಿಂದ ಶಬ್ದಾದಿ ವಿಷಯಗಳು ಮತ್ತು ಪೃಥಿವ್ಯಾದಿ ಪಂಚಭೂತಗಳು ಅನುಭವಕ್ಕೆ ಗೋಚರವಾಗುತ್ತವೆ. ಈ ಪ್ರಪಂಚವು ಇಂತಹ ಐದು ಭೂತಗಳಿಂದಲೇ ಸೃಷ್ಟಿಯಾಗಿದೆ. ಇಲ್ಲಿ ಯಾವುದೇ ಪದಾರ್ಥವಾಗಿರಬಹುದು ಅದರಲ್ಲಿ ಈ ಭೂತಗಳ ಅಂಶವೆಂಬುದು ಇದ್ದೇ ಇರುತ್ತದೆ. ಇಂತಹ ಪ್ರಪಂಚದಲ್ಲಿ ಮನುಷ್ಯನೂ ಒಂದು ಬಗೆಯ ಸೃಷ್ಟಿಯೇ ಆಗಿದ್ದಾನೆ. ಈತನೂ ತನ್ನ ಮನಸ್ಸಿನಿಂದ ಈ ಪಾಂಚಭೌತಿಕವಾದ ಪ್ರಂಪಚವನ್ನು ಅನುಭವಿಸುತ್ತಾನೆ. ಇಲ್ಲಿರುವ ವಸ್ತುಗಳೇ ಮನಸ್ಸಿನಿಂದ ಅನುಭವಿಸುವ ಸುಖ ದುಃಖಗಳಿಗೆ ಕಾರಣ ಎಂಬುದಾಗಿ ಭಾವಿಸಿದ್ದಾನೆ. ಯಾವುದು ಸುಖಕ್ಕೆ ಕಾರಣವೋ ಅದೇ ದುಖಃಖಕ್ಕೆ ಕಾರಣವೆಂಬುದನ್ನು ಅಲ್ಲಗಳಿಯುವಂತಿಲ್ಲ. ಆದರೆ ನಾವು ಬಾಹ್ಯವಾದ ದ್ರವ್ಯಸಂಗ್ರಹದಿಂದ ಮಾತ್ರವೇ ಸುಖ ಸಿಗುತ್ತದೆ ಎಂಬ ಭ್ರಮೆಯಲ್ಲಿ ಜೀವಿಸುತ್ತಿದ್ದೇವೆ. ಇದೇ ಶೋಕಕ್ಕೂ ಕಾರಣವೆಂಬ ಪ್ರಮೆ ನಮಗೆ ಬರುವುದೇ ಇಲ್ಲ.
ನದಿಯನ್ನು ದಾಟಲಿ ದೋಣಿಯನ್ನು ಬಳಸಿಕೊಳ್ಳುತ್ತೇವೆ. ಆದರೆ ದೋಣಿ ಬೇಕೇಬೇಕು. ಯಾವಾಗ ನದಿಯ ಇನ್ನೊಂದು ಪಾರಕ್ಕೆ ತಲುಪಿರುತ್ತೇವೋ ಆಗಲೂ ದೋಣಿಯಲ್ಲೆ ಕುಳಿತು 'ನಮ್ಮನ್ನು ದಾಟಿಸಿದ ದೋಣಿಯನ್ನು ಬಿಡುವುದೆಂತು' ಎಂದು ಕುಳಿತರೆ ನದಿಯನ್ನು ದಾಟಲು ಸಾಧ್ಯವೇ? ಅಂತೆಯೇ ಈ ಪ್ರಪಂಚದಲ್ಲಿ ಇರುವ ವಸ್ತುವನ್ನು ಮನಸ್ಸಿನ ನಿವೃತ್ತಿಮಾರ್ಗಕ್ಕೆ ಅನುಕೂಲವಾಗುವಂತೆ ಬಳಸಿಕೊಳ್ಳಬೇಕು. ಅಲ್ಲೇ ಕುಳಿತರೆ ಶೋಕವನ್ನೇ ಅನುಭವಿಸಬೇಕಲ್ಲವೇ? ಸಿಕ್ಕಿದ ದಡವನ್ನೂ ಬಿಟ್ಟಂತಾಗುವುದಲ್ಲವೇ? ಶ್ರೀರಂಗಮಹಾಗುರುಗಳು ಮುಕುಂದಮಾಲಾದ 'ಜಿಹ್ವೇ ಕೀರ್ತಯ' ಎಂಬ ಶ್ಲೋಕಕ್ಕೆ ವಿವರಣೆಯನ್ನು ಕೊಡುತ್ತಾ ಹೀಗೆ ಹೇಳುತ್ತಿದ್ದರು. "ಜೀವಕ್ಕೆ ಸ್ಥಿರವಾದ ನೆಲೆಯೆಂದರೆ ಭಗವಂತನೇ. ಇಂದ್ರಿಯದ ಕಡೆ ಅಂಟಿರುವ ಜೀವವನ್ನು ಮೆಲ್ಲಗೆ ಭಗವಂತನ ಕಡೆ ತಿರುಗಿಸಲು ಬೇಕಾದ ವಿಷಯಗಳನ್ನೂ ಭಗವಂತನಲ್ಲಿ ತೋರಿಸಿದರು. ಹೀಗೆ ಇಂದ್ರಿಯಾವಲಂಬನವನ್ನು ಅವುಗಳ ಆಕರ್ಷಣೆಯಿಂದ ಮೆಲ್ಲಗೆ ತಪ್ಪಿಸಿ, ಆತ್ಮಾವಲಂಬಿಯಾದ ಜೀವನವನ್ನುಂಟುಮಾಡಲು ಇಂದ್ರಿಯಗಳಲ್ಲಿ ಮೆಲ್ಲಗೆ ಆತ್ಮಭಾವವನ್ನು ತುಂಬಿದರು" ಎಂದು. ಇಂತಹ ಭಾವವನ್ನು ಇಂದ್ರಿಯಗಳಿಗೆ ತುಂಬಿದಾಗ ಮನಸ್ಸೂ ಕೂಡ ಆತ್ಮಭಾವದಲ್ಲಿ ನೆಲೆನಿಂತು ಶೋಕ ಮೋಹಗಳು ದೂರವಾಗುವುವು.
ಸೂಚನೆ : 15/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.