Tuesday, October 10, 2023

ಅಷ್ಟಾಕ್ಷರೀ​ - 45 ಚಂಚಲಂ ಹಿ ಮನಃ ಕೃಷ್ಣ! (Astakshara Darshana 45 VCancalam Hi Manah Krishna!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)ನಮಗೆ ಗೊತ್ತಿಲ್ಲದಿರುವ ವಿಷಯವನ್ನು ಯಾರಾದರೂ ತಿಳಿಸಿಕೊಟ್ಟರೆ, "ಉಪಕಾರವಾಯಿತು, ಕೃತಜ್ಞತೆಗಳು" ಎನ್ನುತ್ತೇವೆ. ತಿಳಿದಿರುವುದನ್ನೇ ತಿಳಿಸುವುದಾದರೆ ಪ್ರಯೋಜನವೇನು?


ಚಿಕ್ಕವನಾಗಿದ್ದಾಗಲೇ ನನಗೊಂದು ಪ್ರಶ್ನೆ ಬಂದಿತ್ತು. ಸತ್ಯವನ್ನು ಹೇಳಬೇಕು, ಕಳ್ಳತನವನ್ನು ಮಾಡಬಾರದು - ಮುಂತಾದ ಮಾತುಗಳು ಉಂಟಷ್ಟೆ? ಇವೆಲ್ಲಾ ನಮ್ಮ ಸಾಧಾರಣ ಅರಿವಿಗೇ (ಕಾಮನ್ ಸೆನ್ಸ್ ಎಂಬುದಕ್ಕೇ) ಗೋಚರವಾಗುವಂತಹವು. ಹೀಗೆ: ಯಾರಾದರೂ ಸುಳ್ಳನ್ನು ಪದೇ ಪದೇ ಹೇಳುತ್ತಿದ್ದರೆ ಬರಬರುತ್ತಾ ಅದು ಗೊತ್ತಾಗಿಹೋಗಿ ಜನರು ಅವರನ್ನು ನಂಬುವುದು ಕಡಿಮೆಯಾಗುತ್ತದೆ. "ಹುಷಾರು, ಆತ ಸುಳ್ಳುಬುರುಕ" - ಎಂದು ಜನ ಆಡಿಕೊಳ್ಳುವುದೋ ಒಬ್ಬರಿಗೊಬ್ಬರು ಎಚ್ಚರಕೊಡುವುದೋ ಆರಂಭವಾಗುತ್ತದೆ. ಹಾಗೆಯೇ "ಈತ ಕದಿಯುತ್ತಾನೆ" ಎಂಬುದಾಗಿ ಮಾತು ಹರಡಿದರಂತೂ ಸದಾ ಸಂಶಯದಿಂದಲೇ ನೋಡುವವರು ಹೆಚ್ಚಾಗುತ್ತಾರೆ. ಹೀಗಾಗಿ, ಜನರು ತನ್ನನ್ನು ನಂಬರು, ನೆಚ್ಚರು - ಎಂಬುದೇ ಸಾಕಷ್ಟು ಮಾನಸಿಕ ಬಾಧೆಕೊಡುವುದು; ಲೋಕವ್ಯವಹಾರವೂ ದುಸ್ತರವೇ ಆಗಲಾರಂಭಿಸುವುದು. ಅಲ್ಲದೆ, ನಂಬುಗೆಗೆ ಅಪಾತ್ರರಾದರೆ ಸಮಯಕ್ಕಾರು ಸಹಾಯಮಾಡಿಯಾರು?


ಹೀಗೆ, ವ್ಯಾವಹಾರಿಕವಾದ ಚಿಂತನೆಯಿಂದಲೇ ಗೊತ್ತಾಗುವ ಈ ವಿಷಯವನ್ನು ನಾವೇನು ಉಪನಿಷತ್ತಿನಿಂದಲೋ ಧರ್ಮಶಾಸ್ತ್ರಗಳಿಂದಲೋ ತಿಳಿಯಬೇಕೆ? ಅವೇನಿದ್ದರೂ ನಮಗೆ ಪೂರ್ವ-ವಿದಿತವಲ್ಲದ (ಮೊದಲೇ ಗೊತ್ತಾಗಿಲ್ಲದ) ವಿಷಯವನ್ನು ತಿಳಿಸಿಕೊಡುವುದಾದರೆ ಸರಿ. ಈ ಸಣ್ಣಪುಟ್ಟವಿಷಯಗಳಿಗೆಲ್ಲಾ ದೇವರು-ಧರ್ಮ - ಇವುಗಳನ್ನು ತರುವ ಆವಶ್ಯಕತೆಯದರೂ ಏನು? – ಎಂಬುದೇ ಆ ಪ್ರಶ್ನೆ.


ಆದರೂ "ಸತ್ಯಂ ವದ" ಎಂದು ಒಂದು ಉಪನಿಷತ್ತು (ತೈತ್ತಿರೀಯ) ಹೇಳುತ್ತದೆ; ಮತ್ತೊಬ್ಬರ ಸೊತ್ತಿಗಾಗಿ ಹಂಬಲಿಸಬೇಡ ಎಂದು ಮತ್ತೊಂದು (ಈಶಾವಾಸ್ಯ) ಹೇಳುತ್ತದೆ - ಅಲ್ಲವೇ? ಏತಕ್ಕಾಗಿ?


ಇದಕ್ಕೆ ಉತ್ತರ ಕೊಡುವ ಮುನ್ನ ಮತ್ತೂ ಒಂದು ಪ್ರಶ್ನೆಯನ್ನು ಕೇಳಿಕೊಂಡುಬಿಡೋಣ. ಅದು ಮನಸ್ಸಿಗೆ ಸಂಬಂಧಿಸಿದುದು. (ಕದಿಯಬೇಡ ಎಂದದ್ದು ಕಾಯದ ಸಮಾಚಾರ; ಸುಳ್ಳಾಡಬೇಡ ಎಂದದ್ದು ಮಾತಿನ ಸಮಾಚಾರ.) ಹೀಗಾಗಿ ಕಾಯ-ವಾಕ್-ಮನಸ್ಸುಗಳ ಆಚಾರವನ್ನು ಕುರಿತು ಇಲ್ಲಿ ವಿವೇಚಿಸುವುದಾಗಿದೆ.


"ಮನಸ್ಸು ಚಂಚಲ" - ಎಂಬುದು ಯಾರಿಗೆ ಗೊತ್ತಿಲ್ಲ? ಎಳೇಮಕ್ಕಳನ್ನು ನೋಡಿದರೂ ಗೊತ್ತಾಗುವಂತಹುದೇ ಅದು. ವಯಸ್ಸಾದವರೂ, "ನನ್ನ ಮನಸ್ಸು ನಿಶ್ಚಲವಾದದ್ದು"- ಎಂದು ಎದೆತಟ್ಟಿ ಹೇಳಿಕೊಳ್ಳಲಾರರು. ಹಾಗಿರಬೇಕಾದರೆ ಇದೇನೋ ದೊಡ್ಡ ವಿಷಯವೆಂಬಂತೆ ಅರ್ಜುನನು ಕೃಷ್ಣನ ಬಳಿ ಹೇಳಿಕೊಳ್ಳುವ ಮಾತೇ "ಚಂಚಲಂ ಹಿ ಮನಃ ಕೃಷ್ಣ!".


ಅರ್ಥವಾಗದವರಿಗೊಂದು ಉಪಮಾನವನ್ನೂ ಕೊಟ್ಟು ಹೇಳುವುದುಂಟು. ಇಲ್ಲಿ ಕೃಷ್ಣನಿಗೇ ಅರ್ಜುನನು  ಹೋಲಿಕೆಯೊಂದನ್ನಿತ್ತು ಹೇಳುತ್ತಿದ್ದಾನೆ - "ಗಾಳಿಯನ್ನು ಹೇಗೆ ಹಿಡಿದಿಡಲಾಗದೋ ಹಾಗೆ ಅದು" – ಎಂದು!


ಅದಕ್ಕೆ ಕೃಷ್ಣನೂ, "ನಿಸ್ಸಂಶಯವಾಗಿಯೂ ಮನಸ್ಸು ದುರ್ನಿಗ್ರಹ (ನಿಗ್ರಹಿಸಲು ಮಹಾಕಷ್ಟವಾದದ್ದು) – ಎಂದುತ್ತರಿಸುತ್ತಾನೆ! ಎಲ್ಲರಿಗೂ ಗೊತ್ತಿರುವುದನ್ನೇ ಇಲ್ಲಿಯೂ ಹೇಳುತ್ತಿದೆಯಲ್ಲವೇ? ಇದೇನೋ ಹೊಸದೆಂಬಂತೆ ಭಗವಂತನ ಮುಂದೆ ಹೇಳಬೇಕೇ? ಆತನಾದರೂ ಇದೇನೋ ಗಹನಸತ್ಯವೆಂಬಂತೆ ಮತ್ತೆ ಒತ್ತಿ ಹೇಳಬೇಕೇ?!


ಸಾಧಾರಣರಿಗೂ ಗೊತ್ತಾಗುವ ವಿಷಯವನ್ನು ಶಾಸ್ತ್ರವೂ ಹೇಳುತ್ತದೆಂದರೆ, ಅಲ್ಲೇನೋ ವಿಶೇಷವಿರಲೇಬೇಕು. ಅದಿದು: ಸತ್ಯ-ಅಸ್ತೇಯಗಳು ಪುಣ್ಯವರ್ಧಕಗಳೆಂದು ಧರ್ಮಶಾಸ್ತ್ರಗಳು ಸೂಚಿಸುತ್ತವೆ. (ಅಸತ್ಯ-ಕಳ್ಳತನಗಳು ಪಾಪಗಳು; ಪಾಪಗಳು ಆಧ್ಯಾತ್ಮಿಕ-ಪ್ರಗತಿಗೆ ಬಾಧಕವೇ). ಯೋಗಶಾಸ್ತ್ರವು ಮತ್ತೊಂದಂಶವನ್ನು ತಿಳಿಸಿಕೊಡುತ್ತದೆ: ಸತ್ಯವನ್ನೇ ನುಡಿಯುತ್ತಿದ್ದರೆ, ಅಂತಹವನು ನುಡಿಯುವುದೇ ಸತ್ಯವಾಗುತ್ತದೆ(ವಾಕ್-ಸಿದ್ಧಿ)! ಕಳ್ಳತನಕ್ಕೆಂದೂ ಕೈಹಾಕದವನತ್ತ ಸಿರಿಯೇ ಆಗಮಿಸುತ್ತದೆ!


ಐಂದ್ರಿಯಿಕ-ಭೋಗಗಳು ಸುಖಕ್ಕೆ ಕಾರಣವಾಗುವಂತೆ ದುಃಖಕ್ಕೂ ಕಾರಣವಾಗಬಲ್ಲವು; ಭೋಗ-ರುಚಿಯು ತೀವ್ರವಾದಷ್ಟೂ ಉತ್ಕಟವಾದ ದುಃಖಕ್ಕೇ ಅವು ಕಾರಣವಾಗತಕ್ಕವು - ಎಂಬ ಯೋಗಶಾಸ್ತ್ರದ ಎಚ್ಚರವು ಭೋಗಗಳ ಬಗೆಗಿನ ರಾಗವನ್ನು ಕಡಿಮೆಮಾಡುವುದು.


ಮನಸ್ಸಿನ ನಡೆಯನ್ನು ಕುರಿತಾಗಿ ಮುಖ್ಯವಾದ ತತ್ತ್ವವೊಂದನ್ನು ಯೋಗಿಪುಂಗವರಾದ ಶ್ರೀರಂಗಮಹಾಗುರುಗಳು ಪ್ರಶ್ನೆಯೊಂದರ ಮೂಲಕ ಸೂಚಿಸಿದ್ದರು: "ಹರಿಯುವುದೇ ಮನಸ್ಸಿನ ಸ್ವಭಾವವಾಗುವುದಾದರೆ, ಅದರ ಬಹಿರ್ಮುಖವಾದ ನಡೆಯನ್ನು ತಡೆದಲ್ಲಿ, ಒಳಮುಖವಾಗಿ ಅದೇಕೆ ಹರಿಯದು? (ಹರಿದೇ ಹರಿಯುತ್ತದೆ)" ಎಂದು. ಅಭ್ಯಾಸದಿಂದ ಅನುಭವ-ಗೋಚರವಾಗುವ ವಿಷಯವಿದು. ರಾಗಗಳು ಕಡಿಮೆಯಾಗುತ್ತಾ ಮನಸ್ಸು ಅಂತರ್ಮುಖವಾಗಿ ಹರಿದು ನೆಲೆಗಾಣುವುದೇ ಧ್ಯಾನ-ಸಮಾಧಿಗಳ ಸಿದ್ಧಿಗೆ ಪ್ರಧಾನ-ಸಾಧನ. ಅಭ್ಯಾಸ-ವೈರಾಗ್ಯಗಳಿಂದಲೇ ಚಿತ್ತವೃತ್ತಿ-ನಿರೋಧ.


ಹೀಗಾಗಿ, "ಬಹಿರ್ಮುಖತೆ-ಚಾಂಚಲ್ಯಗಳೆಂಬುದು ಚಿತ್ತಕ್ಕೆ ಸಹಜವಾದದ್ದು" – ಎಂಬುದು ಸರ್ವಜನ-ಅನುಭವ-ಗಮ್ಯವು ಹೇಗೋ, ಹಾಗೆಯೇ, "ಅಂತರ್ಮುಖತೆ-ನೈಶ್ಚಲ್ಯಗಳೆಂಬುದೂ ಚಿತ್ತಕ್ಕೆ ಅಷ್ಟೇ ಸಹಜವಾದದ್ದು" - ಎಂಬುದು ಯೋಗಿಜನ-ಅನುಭವ-ಗಮ್ಯವಾದದ್ದು. ಯುಕ್ತ-ಮಾರ್ಗದರ್ಶನವಿದ್ದಲ್ಲಿ ಯಾರು ಬೇಕಾದರೂ ಯೋಗಿಗಳಾಗಬಹುದಷ್ಟೆ?


ಹೀಗೆ ಸಾಧಾರಣ-ತರ್ಕಕ್ಕೆ ಗೋಚರವಾಗತಕ್ಕ ವಿಷಯಗಳನ್ನೂ ಶಾಸ್ತ್ರಗಳು ಹೇಳುತ್ತವೆಂದರೆ, ಅವುಗಳಲ್ಲಿರಬಹುದಾದ ಆಳವಾದ ಅನೂಹ್ಯ-ತತ್ತ್ವಗಳನ್ನೂ ಅವು ಮನವರಿಕೆ ಮಾಡಿಕೊಡುತ್ತವೆಂದೇ!


ಸೂಚನೆ: 08/10/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.